ಸಂಸ್ಕೃತಿಯ ಕಲಾವಂತಿಕೆ

7

ಸಂಸ್ಕೃತಿಯ ಕಲಾವಂತಿಕೆ

Published:
Updated:

ಸಂಸ್ಕೃತಿ – ಈ ಶಬ್ದವನ್ನು ಪದೇ ಪದೇ ಕೇಳುತ್ತಿರುತ್ತೇವೆ. ‘ಚೆನ್ನಾಗಿ ಮಾಡಲ್ಪಟ್ಟದ್ದು’ ಎಂಬುದು ಈ ಪದದ ಅರ್ಥ. ಇದು ಶಾಬ್ದಿಕವಾದ ಅರ್ಥವಾಯಿತೆನ್ನಿ! ಆದರೆ ಸಂಸ್ಕೃತಿ ಎಂದರೇನು – ಎಂದು ಅದರ ಲಕ್ಷಣಾರ್ಥವನ್ನು ಕೇಳಿದರೆ ಉತ್ತರಿಸುವುದು ಕಷ್ಟವಾಗುತ್ತದೆ. ಏಕೆಂದರೆ ಅದಕ್ಕೆ ಅಷ್ಟು ವಿಶಾಲವಾದ ಅರ್ಥಪರಂಪರೆ ಇದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅದನ್ನು ಕಂಡಿದ್ದಾರೆ. ‘ಸಂಸ್ಕೃತಿ’ ಎನ್ನುವುದು ನಮ್ಮ ದೇಶದ ಪದವಾದರೂ, ಅದು ಎತ್ತಿಹಿಡಿಯುವ ತಾತ್ತ್ವಿಕತೆ ಮಾತ್ರ ವಿಶ್ವದ ಎಲ್ಲ ದೇಶಗಳಲ್ಲೂ ಜನರಲ್ಲೂ ಕಾಣಬಹುದಾಗಿದೆ. 

ಸಂಸ್ಕೃತಿಯನ್ನು ಕೆಲವರು ಜೀವನ ವಿಧಾನವಾಗಿ ಕಂಡರೆ, ಮತ್ತೆ ಕೆಲವರು ಕಲೆಗಳ ಅನುಸಂಧಾನವನ್ನಾಗಿ ಕಾಣುತ್ತಾರೆ; ಇನ್ನು ಕೆಲವರು ಜನಾಂಗಗಳ ಆಚಾರ–ವಿಚಾರಗಳಲ್ಲಿ ಸಂಸ್ಕೃತಿಯನ್ನು ಕಂಡರೆ, ಮತ್ತೆ ಕೆಲವರು ವ್ಯಕ್ತಿಯ ಅಂತರಂಗದ ಭಾವನೆಗಳಲ್ಲಿ ಅದನ್ನು ಕಾಣುತ್ತಾರೆ. ‘ಸಂಸ್ಕೃತಿ’ಗೆ ಇಷ್ಟೆಲ್ಲ ಆಯಾಮಗಳಿರುವುದಂತೂ ದಿಟ. ಹೀಗಾಗಿ ನಾವು ಯಾವ ನೆಲೆಯಿಂದ ಅದನ್ನು ವಿಶ್ಲೇಷಿಸಲು ಹೊರಡುತ್ತೇವೆ ಎಂಬುದು ಮುಖ್ಯ. 

ಸಂಸ್ಕೃತಿಯನ್ನು ಕುರಿತಂತೆ ಕನ್ನಡದಲ್ಲಿ ಪ್ರಕಟವಾಗಿರುವ ಮುಖ್ಯ ಕೃತಿಗಳಲ್ಲಿ ಒಂದು ಡಿವಿಜಿ ಅವರ ‘ಸಂಸ್ಕೃತಿ’. ಇದರ ಜೊತೆಗೆ ದೇವುಡು ಅವರ ‘ಕರ್ನಾಟಕ ಸಂಸ್ಕೃತಿ’ ಮತ್ತು ಎಚ್‌. ತಿಪ್ಪೇರುದ್ರಸ್ವಾಮಿ ಅವರ ‘ಕರ್ಣಾಟಕ ಸಂಸ್ಕೃತಿ ಸಮೀಕ್ಷೆ’ ಕೂಡ ಉಲ್ಲೇಖಾರ್ಹ. ಇದಲ್ಲದೆ 1954ರಲ್ಲಿ ಮೈಸೂರು ಸಂಸ್ಥಾನದ ‘ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ’ಯಿಂದ ‘ಸಂಸ್ಕೃತಿ’ ಎಂಬ ಕೃತಿ ಪ್ರಕಟವಾಗಿತ್ತು. ಅದರಲ್ಲಿ ದೇವುಡು ನರಸಿಂಹಶಾಸ್ತ್ರೀ, ಶಿವಕುಮಾರಸ್ವಾಮೀಜಿ, ಬಿ. ಶಿವಮೂರ್ತಿಶಾಸ್ತ್ರಿ, ಎ. ಎನ್‌. ಮೂರ್ತಿರಾವ್‌, ಸಿ. ಕೆ. ವೆಂಕಟರಾಮಯ್ಯ ಮತ್ತು ಕೆ. ಪಿ. ರಾಮನಾಥಯ್ಯ ಅವರ ಪ್ರಬಂಧಗಳ ಜೊತೆಗೆ ಅ.ನ.ಕೃಷ್ಣರಾಯರ ಪ್ರಬಂಧವೂ ಸೇರಿದೆ. ‘ಸಂಸ್ಕೃತಿ ಮತ್ತು ಲಲಿತಕಲೆಗಳು’ ಎಂಬ ಹೆಸರಿನ ಈ ಪ್ರಬಂಧದ ಆರಂಭದಲ್ಲಿ ಸಂಸ್ಕೃತಿಯ ವ್ಯಾಪಕತೆಯನ್ನು ಕುರಿತಂತೆ ಹೇಳಿರುವ ಮಾತುಗಳು ಉಲ್ಲೇಖಾರ್ಹ:

‘ಉಪನಿಷತ್ತಿನ ಋಷಿಗಳು, ಗ್ರೀಕ್‌ ತತ್ತ್ವಜ್ಞಾನಿಗಳು, ಜರ್ಮನ್‌ ದಾರ್ಶನಿಕರು ‘‘ಸಂಸ್ಕೃತಿ’’ ಶಬ್ದವನ್ನು ಬೇರೆ ಬೇರೆ ಹೆಸರುಗಳಿಂದ ಕರೆದಿದ್ದರೂ, ಅದಕ್ಕೆ ಕೊಟ್ಟಿರುವ ಅರ್ಥವಿವರಣೆಯಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ. ‘‘ಸಂಸ್ಕೃತಿ’’ – ‘‘ಆತ್ಮಜ್ಞಾನ’’ ಎರಡು ಶಬ್ದಗಳಿಗೆ ಅವರು ಸಮಾನಾರ್ಥ ಕೊಟ್ಟಿದ್ದಾರೆಂದರೂ ತಪ್ಪಾಗುವುದಿಲ್ಲ. ಉಪನಿಷತ್ತಿನ ‘‘ಅಹಂ ಬ್ರಹ್ಮಾಸ್ಮಿ’’ – ‘‘ಸರ್ವಂ ಖಲ್ವಿದಂ ಬ್ರಹ್ಮಾ’’ ಮಹಾವಾಕ್ಯಗಳೂ, ಗ್ರೀಕರ ‘‘ನಿನ್ನನ್ನು ನೀನರಿತುಕೋ’’ (Know Thyself), ಸೂಫಿಗಳ ‘‘ಅನಲ್‌ ಹಕ್‌’’ ಸಂದೇಶವೂ ಜರ್ಮನ್‌ ದಾರ್ಶನಿಕ ನೋವಾಲಿಸನ ಉಪದೇಶವೂ ಒಂದೇ ಗುರಿಯನ್ನು ನಿರ್ದೇಶಿಸುತ್ತಿವೆ. ಚೇತನಗಳ ಮೇಲೆ ಪೂರ್ಣಾಧಿಕಾರ ಹಾಗೂ ಅಂತರಾತ್ಮನ ಸ್ವರೂಪಜ್ಞಾನಗಳಿದ್ದರೆ ಮಾನವ ತನ್ನನ್ನು ತಾನರಿಯಲು ಸಾಧ್ಯ; ತನ್ನನ್ನೇ ತಾನು ಅರಿಯಲಾಗದವನು ಇತರರನ್ನು ಅರಿಯಲಾರ ಎಂದು ನೋವಾಲಿಸ್‌ ಸಮರ್ಥಿಸುತ್ತಾನೆ.

‘ತನ್ನಲ್ಲಿಯೇ ಹುದುಗಿರುವ ಈಶ್ವರ ಚೈತನ್ಯವನ್ನೂ ಅದರ ವಿಶ್ವತೋಮುಖ ವ್ಯಾಪ್ತಿಯನ್ನೂ ಮಾನವ ಅರ್ಥಮಾಡಿಕೊಂಡು, ಆ ಚೈತನ್ಯ ಪ್ರಸರಣದಲ್ಲಿ ನಿರತನಾಗುವುದೇ ಸಂಸ್ಕೃತಿ.’

ಸಂಸ್ಕೃತಿಯ ಪರಿಕಲ್ಪನೆ ಎಲ್ಲೆಲ್ಲೂ ಹರಡಿರುವಂಥದ್ದೇ ಹೌದು ಎನ್ನುವುದನ್ನು ಸ್ಥಾಪಿಸುತ್ತಲೇ ಅನಕೃ ಅವರು, ಅದರ ಲಕ್ಷಣವನ್ನೂ ನಿರ್ದೇಶಿಸಿದ್ದಾರೆ. ‘ಎಲ್ಲರಲ್ಲೂ ಇರುವ ಚೈತನ್ಯವನ್ನು ಕಂಡುಕೊಂಡು ಅದರ ಅನುಸಂಧಾನದಲ್ಲಿ ತೊಡಗುವುದೇ ಸಂಸ್ಕೃತಿ’ ಎಂದಿದ್ದಾರೆ ಅವರು. ಈ ಚೈತನ್ಯ ಎನ್ನುವುದು ಆತ್ಮಜ್ಞಾನ – ಎಂದರೆ ‘ನಮ್ಮನ್ನು ನಾವು ಅರಿಯುವುದು.’ ಇದು ಹೇಗೆ ಸಾಧ್ಯವಾಗುತ್ತದೆ? ಈ ಪ್ರಕ್ರಿಯೆಯಲ್ಲಿ ನಮಗೆ ನೆರವಾಗುವ ಸಾಧನಗಳು ಏನು? ಈ ಪ್ರಶ್ನೆಗಳಿಗೆ ಉತ್ತರದಂತಿವೆ, ಅವರ ಮುಂದಿನ ಈ ಮಾತುಗಳು:

‘ಧರ್ಮ, ಸಾಹಿತ್ಯ, ಲಲಿತಕಲೆ, ಜೀವನಕಲೆಯ ಮೂಲಕ ಮಾನವನ ಆತ್ಮಜ್ಞಾನ ಅಭಿವ್ಯಕ್ತವಾಗುತ್ತದೆ. ಯಾವುದೋ ದೈವಿಕಶಕ್ತಿ ಅವುಗಳ ಪ್ರತಿಭಾಪ್ರಕಾಶನಕ್ಕೆ ನೆರವಾಗಿದೆಯೆಂದು ನಾವು ನಂಬುತ್ತೇವೆ. ಹೋಮರ್‌, ವಾಲ್ಮೀಕಿ, ಗಯಟೆ ಇವರ ಕಾವ್ಯಗಳನ್ನು ಓದುವಾಗ, ಬುದ್ಧ, ಯೇಸು, ಶಂಕರ ಇವರ ಧಾರ್ಮಿಕ ವಿಚಾರಗಳನ್ನರಿಯುವಾಗ, ಸಿಸ್ಟಿಸ್‌ ಚ್ಯಾಪಲ್‌, ಮೆಡಿಚಿ ಅರಮನೆ, ಅಜಂತಾಗಳಲ್ಲಿರುವ ಕಲಾಕೃತಿಗಳನ್ನು ನೋಡುವಾಗ, ಪುರಂದರದಾಸ, ಬಿಠೋವನ್‌, ತ್ಯಾಗರಾಜರ ಕೃತಿಗಳನ್ನು ಕೇಳುವಾಗ ಗಾಂಧೀಜಿಯವರ ಅನ್ಯಾದೃಶ ಜೀವನ ನೋಡುವಾಗ ಕೌತುಕಗೊಂಡು ನಾವು ಅವ್ಯಕ್ತವಾದ ಒಂದು ವಿಚಿತ್ರ ಅನುಭವ ಪಡೆಯುತ್ತೇವೆ. ಈ ಅನುಭವದಿಂದ ‘‘ಭ್ರಾಂತಿ ಕಳೆದು, ಸಂದೇಹ ನಿವೃತ್ತಿಯಾಗಿ, ಸ್ಮೃತಿ ಲಭಿಸುತ್ತದೆ.’’ ಶಾಂತಸ್ಥಿತಿಗೆ ಬಂದ ಮನಸ್ಸು ಅವ್ಯಕ್ತ ಆನಂದಾನುಭವ ಪಡೆಯುತ್ತದೆ.

’ಮನಸ್ಸಿಗೆ ಶಾಂತಸ್ಥಿತಿಯನ್ನು ತಂದೊದಗಿಸಿ ರಸಾನುಭವದ ಮೂಲಕ ‘‘ದಿವ್ಯ ಸತ್ಯದರ್ಶನ’’ ಮಾಡಿಸುವುದೇ ಭಾರತೀಯ ಲಲಿತಕಲೆಗಳ ಗುರಿ. ಮಾನವನ ಆಧ್ಯಾತ್ಮಿಕ ಜೀವನದಲ್ಲಿ ರಸಗಳ ಆವಶ್ಯಕತೆಯನ್ನು ಗ್ರಹಿಸಿದ ಉಪನಿಷತ್ತು ಅವುಗಳಿಗೆ ದೇವತ್ವದ ಸ್ಥಾನವನ್ನೂ ಕೊಟ್ಟಿದೆ – ರಸೋ ವೈ ಸಃ’.

‘ಭಾರತೀಯ ಜೀವನದ ಎಲ್ಲ ಆವಿಷ್ಕಾರಗಳಲ್ಲಿಯೂ ಅಧ್ಯಾತ್ಮ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಲಲಿತಕಲೆಗಳು ಈ ನಿಯಮದಿಂದ ದೂರವಾಗಿಲ್ಲ. ಭಾರತೀಯ ಶಿಲ್ಪ, ವಾಸ್ತುಶಿಲ್ಪ, ಸಂಗೀತ, ಚಿತ್ರಕಲೆ, ಭಾರತೀಯ ಆಧ್ಯಾತ್ಮಿಕ ಜೀವನದ ಹೊರಮುಖಗಳಾಗಿವೆಯೆಂದು ನಾವು ನಿಸ್ಸಂಕೋಚವಾಗಿ ಹೇಳಬಹುದು.’

ನಮ್ಮಲ್ಲಿರುವ ಚೈತನ್ಯವನ್ನು ನಮಗೆ ಪುನರ್‌ ದರ್ಶನ ಮಾಡಿಸುವುದೇ ಭಾರತೀಯ ಕಲೆಗಳ ಗುರಿ ಎನ್ನುವ ಮಾತನ್ನು ನಾವಿಲ್ಲಿ ಗಮನಿಸಬೇಕು. ಹೀಗಾಗಿ ಕಲಾನುಸಂಧಾನ ಬೇರೆ ಅಲ್ಲ, ಸಂಸ್ಕೃತಿಯ ಅನುಸಂಧಾನ ಬೇರೆ ಅಲ್ಲ ಎನ್ನುವುದು ತಿಳಿಯುತ್ತದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !