ಶಿಕಾರಿಪುರದ ಶಿಲ್ಪೋದ್ಯಾನ!

7

ಶಿಕಾರಿಪುರದ ಶಿಲ್ಪೋದ್ಯಾನ!

Published:
Updated:
Deccan Herald

ಆ ಉದ್ಯಾನದಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಮಹಿಳೆಯರು ಕೂರಿಗೆಗೆ ಬೀಜ ಹಾಕುತ್ತಿದ್ದಾರೆ. ಇನ್ನೊಂದೆಡೆ ರೈತರ ಗುಂಪೊಂದು ಹೋರಾಟಕ್ಕೆ ಅಣಿಯಾಗುತ್ತಿದೆ. ಒಂದು ತುದಿಯಲ್ಲಿ ಕಲಾತಂಡದವರು ಅರ್ಧ ವೃತ್ತಾಕಾರದಲ್ಲಿ ನಿಂತು ಹಲಗೆ ಹೊಡೆಯುತ್ತಾ ನೃತ್ಯ ಮಾಡುತ್ತಿದ್ದಾರೆ. ಮತ್ತೊಂದು ತುದಿಯಲ್ಲಿ ಬಾಲಕ ಕುರಿ ಕಾಯುತ್ತಾ ಸಂಭ್ರಮದಲ್ಲಿದ್ದಾನೆ. ತಾಯಿ ಮಗನ ಸಂಭ್ರಮವನ್ನು ಖುಷಿಯಿಂದ ವೀಕ್ಷಿಸುತ್ತಿದ್ದಾಳೆ..

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯ ಪಕ್ಕದ ಉದ್ಯಾನ ಪ್ರವೇಶಿಸುತ್ತಿದ್ದಂತೆ, ಇಂಥ ವೈವಿಧ್ಯಮಯ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಹತ್ತಿರಕ್ಕೆ ಹೋಗಿ ನೋಡಿದಾಗಲೇ ಆ ದೃಶ್ಯಗಳಲ್ಲಿರುವುದು ವ್ಯಕ್ತಿಗಳಲ್ಲ, ಅವರ ಪ್ರತಿಕೃತಿಗಳು ಎಂದು ತಿಳಿಯುತ್ತದೆ. ಅಷ್ಟು ಸುಂದರವಾಗಿ ಉದ್ಯಾನದಲ್ಲಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಶಿಕಾರಿಪುರದಿಂದ 16 ಕಿ.ಮೀ ದೂರವಿದೆ ಅಂಜಾನಪುರ ಜಲಾಶಯ. ಇದರ ಪಕ್ಕದಲ್ಲಿ ಸುಮಾರು ಆರು ಎಕರೆ ವಿಸ್ತೀರ್ಣದಲ್ಲಿ ಈ ಉದ್ಯಾನವಿದೆ. ಇದನ್ನು ಜಲಸಂಪನ್ಮೂಲ ಇಲಾಖೆಯ ನೀರಾವರಿ ನಿಗಮ ₹6 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಿದೆ.

2013ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಉದ್ಯಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆದಿತ್ತು. ಐದು ವರ್ಷಗಳ ನಂತರ ಕಾಮಗಾರಿ ಪೂರ್ಣಗೊಂಡಿದೆ.


ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವ ದೃಶ್ಯ ನೆನಪಿಸುವ ಕಲಾಕೃತಿ

ಶಿಗ್ಗಾಂವ್‌ ಸಮೀಪದ ಗೋಟಗೋಡಿಯ ಉತ್ಸವ್‌ ರಾಕ್‌ ಗಾರ್ಡನ್‌ ಮಾದರಿಯ ಕಲಾಕೃತಿಗಳು ಇಲ್ಲಿವೆ. ಅಲ್ಲಿನ ಕಲಾವಿದರ (ಹರ್ಷ ಮತ್ತು ತಂಡ) ಗುಂಪು ಇಲ್ಲೂ ಕಲಾಕೃತಿಗಳನ್ನು ನಿರ್ಮಿಸಿದೆ.

ಸ್ವಾತಂತ್ರ್ಯ ಹೋರಾಟದ ನೆನಪು: ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಊರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಇಡೀ ಗ್ರಾಮವೇ ಭಾಗವಹಿಸಿತ್ತು. ಈಸೂರು ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ನೆನಪಿಸುವ ಕಲಾಕೃತಿಗಳು ಉದ್ಯಾನದಲ್ಲಿವೆ. ಈಸೂರು ಗ್ರಾಮದಲ್ಲಿ ಜನರು ಬ್ರಿಟಿಷರ ವಿರುದ್ಧ ನಡೆಸಿದ ಚಳವಳಿ ಹಾಗೂ ಆ ವೇಳೆ ಹೋರಾಟಗಾರರನ್ನು ಗಲ್ಲಿಗೇರಿಸುವಂಥ ಘಟನೆ ವಿವರಿಸುವ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ.


ಡೊಳ್ಳು ಕುಣಿತದ ಕಲಾಕೃತಿ.

ಕೃಷಿ ಬದುಕನ್ನು ಪ್ರಧಾನವಾಗಿ ಬಿಂಬಿಸುವ ಶಿಲ್ಪಗಳು ಇಲ್ಲಿ ಅನಾವರಣಗೊಂಡಿವೆ. ರೈತರು ಕುಟುಂಬ ಸಹಿತ ಬೇಸಾಯ ಮಾಡುವುದು, ಭತ್ತ ನಾಟಿ ಮಾಡುವಂತಹ ಕಲಾಕೃತಿಗಳು ಜಿಲ್ಲೆಯ ಕೃಷಿ ಚಟುವಟಿಕೆಗಳನ್ನು ಪರಿಚಯಿಸುತ್ತದೆ. ಡೊಳ್ಳು ಕುಣಿತ, ಜಗ್ಗಲಿಗೆ ಕುಣಿತ, ಕೋಲಾಟ, ಮಂಗಳವಾದ್ಯ, ಭಜನೆಯಂತಹ ದೇಶಿಯ ಕಲೆಗಳನ್ನು ಪ್ರತಿಬಿಂಬಿಸುವ ಶಿಲ್ಪಗಳಂತೂ ಅಚ್ಚರಿ ಮೂಡಿಸುವಂತಿವೆ. ಬಾಲಕ ಕುರಿ ಕಾಯುವ ದೃಶ್ಯ, ಹಿರಿಯರು ದನ ಮೇಯಿಸುವುದು, ಎಮ್ಮೆ ಮೇಲೆ ಬಾಲಕ ಕುಳಿತ ಕಲಾಕೃತಿಗಳನ್ನು ಉದ್ಯಾನಕ್ಕೆ ಭೇಟಿಕೊಟ್ಟವರು ಒಮ್ಮೆ ಮುಟ್ಟಿ ನೋಡಿ ಪರೀಕ್ಷಿಸುತ್ತಾರೆ.

ಶಿಲ್ಪಗಳ ಜತೆಗೆ ಉದ್ಯಾನದ ನಡುವೆ ಸಂಗೀತ ಕಾರಂಜಿ ಇದೆ. ಮಕ್ಕಳಿಗೆ ಆಟವಾಡಲು ಬೇಕಾದ ಪರಿಕರಗಳಿವೆ. ಉದ್ಯಾನ ಸುತ್ತಾಡಿ ಸುಸ್ತಾದರೆ ದಣಿವಾರಿಸಿಕೊಳ್ಳಲು ಆಸನಗಳಿವೆ.


ಜಗ್ಗಲಿಗೆ ಕುಣಿತದ ಕಲಾಕೃತಿ.


ಬಾಲಕ ಕುರಿ ಕಾಯುವ ಕಲಾಕೃತಿ


ರೈತ ಕುಟುಂಬ ಕೃಷಿ ಚಟುವಟಿಕೆ ನಡೆಸುವ ದೃಶ್ಯ.


ಅಂಜನಾಪುರ ಜಲಾಶಯ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !