ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ನಪ್ಪ ಹಾಸ್ಟೆಲ್‌ಗೆ ಅಮೃತಮಹೋತ್ಸವ

Last Updated 26 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಸಾವಿರಾರು ವಿದ್ಯಾರ್ಥಿಗಳಿಗೆ ನಗರದಲ್ಲಿ ಆಶ್ರಯ ನೀಡಿ, ಭವಿಷ್ಯ ರೂಪಿಸಿಕೊಳ್ಳಲು ನೆರವು ನೀಡುತ್ತಿರುವ ಸಾಕಷ್ಟು ಸಂಸ್ಥೆಗಳಿವೆ. ಅಂತಹವುಗಳ ಪೈಕಿ ಎಸ್‌.ಆರ್.ಎನ್‌.ಜಿ ಸಂಪನ್ನಪ್ಪ ಧರ್ಮಸಂಸ್ಥೆಯು ಒಂದು.

77 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಾ ಬಂದಿರುವ ಈ ಸಂಸ್ಥೆ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ.ನಗರದ ಮಾರುಕಟ್ಟೆ ಬಳಿಯ ಶಾರದಾ ಟಾಕೀಶ್ ಬಳಿಯ ಎಸ್‌.ಆರ್.ಎನ್‌.ಜಿ. ಸಂಪನ್ನಪ್ಪ ಧರ್ಮಸಂಸ್ಥೆ ವಿದ್ಯಾರ್ಥಿನಿಲಯದಲ್ಲಿ ಇದೇ 30ರಂದು ಅಮೃತಮಹೋತ್ಸವ ಕಾರ್ಯಕ್ರಮ ನಡೆಯಲಿದೆ.

ಸಂಪನ್ನಪ್ಪ ಬಗ್ಗೆ ಒಂದಿಷ್ಟು...

ವ್ಯಾಪಾರಸ್ಥ ಕುಟುಂಬದಿಂದ ಬಂದವರು ಸಂಪನ್ನಪ್ಪ.ನಗರ್ತ ಸಮುದಾಯಕ್ಕೆ ಸೇರಿದ ಅವರು ಹೊಸಕೋಟೆಯ ಅನುಗೊಂಡನ ಹೋಬಳಿಯ ಅರೇಹಳ್ಳಿಯ ಸಿದ್ದಗಂಗಮ್ಮಎಂಬುವವರನ್ನು ವಿವಾಹವಾದರು. ಮಕ್ಕಳಿಲ್ಲದ ಅವರು ಪತ್ನಿಯ ಕುಟುಂಬಸ್ಥರ ಪೈಕಿ ಯಾರನ್ನಾದರೂ ದತ್ತು ಪಡೆದು ಸಾಕುವ ಇಚ್ಛೆ ಹೊಂದಿದ್ದರು. ದತ್ತು ಪಡೆಯುವುದರ ಬದಲು ವಿದ್ಯಾರ್ಥಿನಿಲಯ ಸ್ಥಾಪಿಸಿ ಗ್ರಾಮೀಣ ಭಾಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಕುಟುಂಬಸ್ಥರು ನೀಡಿದ್ದ ಸಲಹೆ ಮೇರೆಗೆ ಅವರು 1941ರಲ್ಲಿ ಈ ವಿದ್ಯಾರ್ಥಿನಿಲಯ ಸ್ಥಾಪಿಸಿದರು.

ಸಂಪನ್ನಪ್ಪ ಅವರು ಹೆಚ್ಚಾಗಿ ಓದಿರಲಿಲ್ಲ. ವ್ಯಾಪಾರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅವರು ತಕ್ಕಮಟ್ಟಿಗೆ ಆರ್ಥಿಕವಾಗಿ ಪ್ರಬಲರಾಗಿದ್ದರು. ಎಸ್‌.ಆರ್.ಎನ್.ಜಿ ಸಂಪನ್ನಪ್ಪ ಧರ್ಮಸಂಸ್ಥೆ ಸ್ಥಾಪಿಸಿದ ಅವರು ತನ್ನ ಆಸ್ತಿಯನ್ನೆಲ್ಲ ಆ ಸಂಸ್ಥೆಯ ಹೆಸರಿಗೆ ವಿಲ್ (ಮರಣಶಾಸನ) ಬರೆದರು. ಜಾತ್ಯತೀತ ಮನೋಭಾವ ಹೊಂದಿದ್ದ ಅವರು ಎಲ್ಲ ಜಾತಿಯವರನ್ನು ಸಮಾನ ದೃಷ್ಟಿಯಿಂದ ಕಾಣುತ್ತಿದ್ದರು.

1941ರ ಸಮಯದಲ್ಲಿ ಬೆಂಗಳೂರಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದ ಬಹುತೇಕರು ಸರಿಯಾದ ಆಶ್ರಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ, ಎಲ್ಲ ಜಾತಿಯ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ನೀಡಬೇಕು ಹಾಗೂ ಅವರ ನಡವಳಿಕೆ ಸರಿ ಇಲ್ಲದಿದ್ದರೆ ಅಥವಾ ಅನುತ್ತೀರ್ಣರಾದವರನ್ನು ಹೊರಗೆ ಹಾಕಬಹುದು ಎಂದು ಅವರು ಆಗಲೇ ವಿಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಅದರಂತೆ ಧರ್ಮಸಂಸ್ಥೆಯು ಕಟ್ಟುನಿಟ್ಟಾಗಿ ವಿದ್ಯಾರ್ಥಿನಿಲಯವನ್ನು ಮುನ್ನಡೆಸಿಕೊಂಡು ಬಂದಿದೆ.

ಸರ್ಕಾರದಿಂದ ಅನುದಾನ ಪಡೆದಿಲ್ಲ: ವಿದ್ಯಾರ್ಥಿನಿಲಯ ಪ್ರಾರಂಭದಿಂದ ಇದುವರೆಗೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಅನುದಾನ ನೀಡುವಂತೆ ಕೋರಿ ಸಂಸ್ಥೆ ಯಾವುದೇ ರೀತಿಯ ಮನವಿಯನ್ನು ಸಲ್ಲಿಸಿಲ್ಲ. ಧರ್ಮಸಂಸ್ಥೆಯ ವಾಣಿಜ್ಯ ಸಂಕೀರ್ಣದಿಂದ ಬರುವ ಬಾಡಿಗೆಯಿಂದಲೇ ವಿದ್ಯಾರ್ಥಿನಿಲಯ ಹಾಗೂ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಧರ್ಮಸಂಸ್ಥೆಯ ಸಂಚಾಲಕ ರು.ಬಸಪ್ಪ.

ವಿದ್ಯಾರ್ಥಿನಿಲಯದ ಪಕ್ಕದಲ್ಲೇ ಸುಣ್ಣಕಲ್ಲು ಪೇಟೆ ಇದೆ. ಅದರ ಮುಖ್ಯರಸ್ತೆಗೆ ಎಸ್‌.ಆರ್‌.ಎನ್‌.ಜಿ. ಸಂಪನ್ನಪ್ಪ ಅವರ ಹೆಸರಿಡಲು ಸುಮಾರು 12 ವರ್ಷಗಳ ಹಿಂದೆ ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಆ ಸಂಬಂಧ ಬಿಬಿಎಂಪಿ ಒಪ್ಪಿಗೆ ನೀಡಿ ರೆಸ್ಯೂಲೇಷನ್‌ ಸಹ ಹೊರಡಿಸಿತ್ತು. ಆದರೆ, ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈಗಲಾದರೂ ಆ ರಸ್ತೆಗೆ ಸಂಪನ್ನಪ್ಪ ಹೆಸರಿಟ್ಟು ಅವರ ಸಮಾಜಸೇವೆಗೆ ಗೌರವ ಸಲ್ಲಿಸಬೇಕು ಎಂಬುದು ಅವರ ಮನವಿ.

ಗಿರಿನಗರದಲ್ಲಿ ವಿದ್ಯಾರ್ಥಿನಿಲಯ: ಇಷ್ಟು ದಿನ ಪದವಿ ಹಂತದ ಯುವಕರಿಗಷ್ಟೇ ಉಚಿತವಾಗಿ ಆಶ್ರಯ ನೀಡುತ್ತಿದ್ದ ಧರ್ಮಸಂಸ್ಥೆಯು ಈಗ ಯುವತಿಯರಿಗೂ ಇಂತಹದ್ದೇ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ, ಗಿರಿನಗರದಲ್ಲಿ 8 ಸಾವಿರ ಚದರ ಅಡಿಯುಳ್ಳ ಕಟ್ಟಡ ಸಮೇತ ನಿವೇಶನವನ್ನು ಸಂಸ್ಥೆ ಖರೀದಿಸಿದೆ. ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಈ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ಎನ್ನುತ್ತಾರೆ ಧರ್ಮದರ್ಶಿಡಾ.ಜಿ.ಕೆ.ನಾರಾಯಣರೆಡ್ಡಿ.

ವಿದ್ಯಾರ್ಥಿನಿಲಯದ ಸೌಲಭ್ಯಗಳು

ವಿದ್ಯಾರ್ಥಿನಿಲಯ ಸುಸಜ್ಜಿತವಾಗಿದ್ದು, ನಗರದ ಉತ್ತಮ ಹಾಸ್ಟೆಲ್‌ಗಳಲ್ಲೊಂದಾಗಿದೆ. ಪ್ರತಿ ವಿದ್ಯಾರ್ಥಿಗೆ ಹಾಸಿಗೆ, ಓದಲು ಅನುಕೂಲವಾಗುವಂತೆ ಕುರ್ಚಿಗಳು, ಡೈನಿಂಗ್ ಟೇಬಲ್‌, ಗ್ರಂಥಾಲಯ, ವ್ಯಾಯಾಮ ಶಾಲೆ, ಒಳಾಂಗಣ ಕ್ರೀಡಾ ಪರಿಕರಗಳು, ಸೋಲಾರ್ ವಾಟರ್ ಹೀಟರ್‌, ಉತ್ತಮ ಅಡುಗೆ ಕೋಣೆ, ವೈಫೈ ವ್ಯವಸ್ಥೆ, ಕಂಪ್ಯೂಟರ್ ಕೊಠಡಿಯನ್ನು ಹೊಂದಿದೆ.

ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲಾಗುತ್ತದೆ. ರಾತ್ರಿ ವೇಳೆ ಮುದ್ದೆ ಊಟ ಹಾಗೂ ಚಪಾತಿ ಊಟವನ್ನು ದಿನಬಿಟ್ಟು ದಿನ ನೀಡಲಾಗುತ್ತದೆ. ಸದ್ಯ 90 ವಿದ್ಯಾರ್ಥಿಗಳು ಈ ವಿದ್ಯಾರ್ಥಿನಿಲಯದ 17 ಸುಸಜ್ಜಿತ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದಾರೆ. ವಿದ್ಯಾರ್ಥಿನಿಲಯ ಪ್ರವೇಶಕ್ಕೆ ವರ್ಷಕ್ಕೊಮ್ಮೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಶೇಕಡಾ 55ಕ್ಕಿಂತ ಹೆಚ್ಚು ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ಪದವಿ ಹಂತದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಧರ್ಮಸಂಸ್ಥೆಯ ಸದಸ್ಯರು ಅವರನ್ನು ಸಂದರ್ಶನ ಮಾಡಿ, ಅವರ ಪೂರ್ವಪರ ವಿಚಾರಿಸಿ ಪ್ರವೇಶ ನೀಡಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿಯಾದ ಎ.ಬಿ.ಶಿವ ಸುಬ್ರಹ್ಮಣ್ಯ ಮಾಹಿತಿ ನೀಡಿದರು.

ಟ್ರಸ್ಟಿಗಳ ವಿವರ

ಧರ್ಮಸಂಸ್ಥೆಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಜಿ.ಕೆ.ನಾರಾಯಣರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾರೆ. 91ರ ಇಳಿವಯಸ್ಸಿನಲ್ಲೂ ಅವರು, ಧರ್ಮಸಂಸ್ಥೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಾರ್ಟೆಡ್ ಅಕೌಂಟೆಂಟ್ ಆದ ಎ.ಬಿ.ಶಿವಸುಬ್ರಹ್ಮಣ್ಯ ವ್ಯವಸ್ಥಾಪಕ ಧರ್ಮದರ್ಶಿಯಾಗಿದ್ದಾರೆ. ಪ್ರೊ.ಎನ್.ಮುನಿರುದ್ರಪ್ಪ, ಮಹಾದೇವಾಚಾರಿ, ಡಿ.ಎಲ್.ಸುರೇಶ್ ಬಾಬು ಧರ್ಮದರ್ಶಿಗಳಾಗಿ ಹಾಗೂ ಚೇತನ ಎನ್. ಪುಟ್ಟರುದ್ರ ಮುಖ್ಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT