ಉತ್ಸವಕ್ಕೆ ಗಂಡಿ ಸೀರೆ ಉಟ್ಟು ಬನ್ನಿ!

7

ಉತ್ಸವಕ್ಕೆ ಗಂಡಿ ಸೀರೆ ಉಟ್ಟು ಬನ್ನಿ!

Published:
Updated:
Prajavani

‘ಸಂಕೇತಿ ಉತ್ಸವ’ಕ್ಕೆ ಬೆಂಗಳೂರು ಸಜ್ಜುಗೊಳ್ಳುತ್ತಿದೆ. ಏನಿದು ಸಂಕೇತಿ ಉತ್ಸವ? ಇದೇ 5 ಮತ್ತು 6 ರಂದು ಶಂಕರಪುರಂ ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪಕ್ಕೆ ಹೋದರೆ ಸಂಕೇತಿ ಉತ್ಸವವನ್ನು ಕಣ್ತುಂಬಿಕೊಳ್ಳಬಹುದು. ಅಷ್ಟೇ ಅಲ್ಲ, ಒತ್ತು ಶ್ಯಾವಿಗೆ, ಖಾರ ಕಡುಬು ಮುಂತಾದ ಬಗೆ ಬಗೆಯ ತಿಂಡಿ ತಿಂದು ಹೊಟ್ಟೆಯನ್ನೂ ತುಂಬಿಕೊಳ್ಳಬಹುದು.

ಎರಡು ದಿನಗಳ ಈ ಉತ್ಸವದ ಇನ್ನೊಂದು ವಿಶೇಷವೆಂದರೆ ಗಂಡಿ ಸೀರೆಯೊಂದಿಗೆ ಮಹಿಳೆಯರು ಕಾಣಿಸಿಕೊಳ್ಳಲಿದ್ದಾರೆ. ಸಂಕೇತಿ ಸಮುದಾಯದವರ ಪ್ರಮುಖ ಆಹಾರ ವೈವಿಧ್ಯವಾದ ಚೋಮಾಯಿ (ಒತ್ತು ಶ್ಯಾವಿಗೆ) ಮತ್ತು ಕೊಳಕಟ್ಟೆ (ಖಾರದ ಕಡುಬು) ಹಾಲುಬಾಯಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ. 

ಬೆಂಗಳೂರು ಸಂಕೇತಿ ಮಹಿಳಾ ಸಮಾಜ ಟ್ರಸ್ಟ್ ಸಂಕೇತಿ ಉತ್ಸವವನ್ನು ಆಯೋಜಿಸುತ್ತಿದೆ. ಆದರೆ, ಈ ಉತ್ಸವದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು. ಸಂಕೇತಿಗಳ ಅಡುಗೆ, ಉಡುಗೆ, ಸಂಸ್ಕೃತಿ, ಸಂಸ್ಕಾರಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ. ಉತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

‘ಕೇರಳ ಮತ್ತು ತಮಿಳುನಾಡು ಗಡಿಯ ಶಂಕೋಟೆ ಮೂಲದವರು  ಸಂಕೇತಿಗಳು. ರಾಜ್ಯದ ಎಲ್ಲೆಡೆ ಇವರು ನೆಲೆಸಿದ್ದಾರೆ. ರುಚಿಕಟ್ಟಾಗಿ ಅಡುಗೆ ಮಾಡುವುದರಲ್ಲಿ ಸಿದ್ಧ ಹಸ್ತರು. ಚೋಮಾಯಿ, ಕೊಳಕಟ್ಟೆಯಷ್ಟೇ ಅಲ್ಲ, ಇನ್ನೂ ಅನೇಕ ಬಗೆಯ ತಿಂಡಿಗಳ ವೈವಿಧ್ಯವನ್ನು ಈ ಸಂಕೇತಿಗಳಲ್ಲಿ ಕಾಣಲು ಸಾಧ್ಯ. ಸಹಜವಾಗಿಯೇ ಉತ್ಸವದಲ್ಲಿ ಇದೆಲ್ಲವೂ ಇರಲಿದೆ’ ಎನ್ನುತ್ತಾರೆ ಮಹಿಳಾ ಸಂಘದ ಮ್ಯಾನೇಜಿಂಗ್ ಟ್ರಸ್ಟಿ ಆರ್.ಕೆ.ಗೀತಾಮಣಿ.

ಗಂಡಿ ಸೀರೆಯ ನಾರಿ...

ಗಂಡಿ ಸೀರೆ ಉಟ್ಟುಕೊಂಡ ಸಂಕೇತಿ ಮಹಿಳೆಯರನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಮಹಿಳೆಯ ದೇಹ ಸುತ್ತಿಕೊಂಡ ಸೀರೆ ಯಾವ ಕಾರಣಕ್ಕೂ ಬಿಚ್ಚಿ ಹೋಗಬಾರದು ಎಂಬ ನೆಲೆಯಲ್ಲಿ ಗಂಡಿ ಸೀರೆ ಉಡುವ ಸಂಪ್ರದಾಯ ಬೆಳೆದು ಬಂದಿದೆ. ಗಂಡಿ ಸೀರೆ ಉಡುವುದಕ್ಕೆ ಕನಿಷ್ಠ 9 ಗಜ ಉದ್ದದ ಸೀರೆ ಬೇಕು. ಈಗಿನ 6 ಗಜ ಉದ್ದದ ಸೀರೆಯಲ್ಲಿ ಗಂಡಿ ಸೀರೆ ಉಡಲು ಸಾಧ್ಯವಿಲ್ಲ. 7 ಅಥವಾ 8 ಗಜ ಸೀರೆಯಲ್ಲಿ ಗಂಡಿ ಸೀರೆ ಉಡಬಹುದಾದರೂ, ಮುಕ್ತವಾಗಿ ನಡೆದಾಡಲು ಕಷ್ಟವಾಗಬಹುದು. ಆದರೆ 9 ಗಜ ಸೀರೆಯಿಂದ ಗಂಡಿ ಸೀರೆ ಉಟ್ಟುಕೊಂಡರೆ ಓಡಲು ಸಹಿತ ಸಾಧ್ಯ. ಈ ಬಾರಿ ಕನಿಷ್ಠ ಉದ್ಘಾಟನಾ ಸಮಾರಂಭದವರೆಗಾದರೂ ಗಂಡಿ ಸೀರೆಯಲ್ಲಿ ಕಾಣಿಸಿಕೊಳ್ಳಲು ಹಲವು ಸಂಕೇತಿ ಮಹಿಳೆಯರು ಸಜ್ಜಾಗಿದ್ದಾರೆ
ಎನ್ನುತ್ತಾರೆ ಅವರು.

ಸಂಕೇತಿ ಉತ್ಸವದಲ್ಲಿ  ಹೌಸಿ ಹೌಸಿ, ಲಕ್ಕಿ ಡ್ರಾ ಮುಂತಾದ ಸ್ಪರ್ಧೆಗಳು ಇರಲಿವೆ. ಬೆಳಿಗ್ಗೆ ಆರಂಭವಾಗುವ ಹೌಸಿ ಹೌಸಿ ಆಟ ರಾತ್ರಿ 8ರವರೆಗೂ ಮುಂದುವರಿಯುತ್ತದೆ. ಉತ್ಸವದಲ್ಲಿ ಕರಕುಶಲ ವಸ್ತುಗಳು, ಸೀರೆಗಳು, ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳು, ಸ್ಪರ್ಧಾತ್ಮಕ ಆಟಗಳು, ಅನೇಕ ಅಗತ್ಯ ವಸ್ತುಗಳ ಮಾರಾಟ ವ್ಯವಸ್ಥೆಯೂ ಇದೆ. ಜತೆಗೆ ಸಂಕ್ರಾಂತಿಗಾಗಿ ಎಳ್ಳು-ಸಕ್ಕರೆ ಅಚ್ಚುಗಳು, ಪೂಜಾ ಸಾಮಗ್ರಿಗಳೂ ಸಿಗಲಿವೆ. 

ಲೇಖಕಿ ಮತ್ತು ವೈದ್ಯೆ ಡಾ.ಆಶಾ ಬೆನಕಪ್ಪ, 5ರಂದು ಬೆಳಿಗ್ಗೆ 9-30ಕ್ಕೆ ಗಂಟೆಗೆ ಸಂಕೇತಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರಜಿನಿ ಗೋಪಾಲಕೃಷ್ಣ, ಖ್ಯಾತ ಹಿನ್ನೆಲೆ ಗಾಯಕಿ ಇಂದು ನಾಗರಾಜ್ ಭಾಗವಹಿಸುವರು.

ಹೆಚ್ಚಿನ ಮಾಹಿತಿಗೆ: 9741227497 

ಆರೋಗ್ಯ ನಿಧಿಗೆ ದೇಣಿಗೆ

ಪ್ರತಿ ಎರಡು ವರ್ಷಕ್ಕೊಮ್ಮೆ ಸಂಕೇತಿ ಉತ್ಸವ ನಡೆಸುತ್ತೇವೆ. ಮುಖ್ಯವಾಗಿ ಸಂಕ್ರಾಂತಿ ಹಬ್ಬಕ್ಕೆ ಬೇಕಾಗುವ ಎಳ್ಳು ಬೆಲ್ಲ, ಸಕ್ಕರೆಯಚ್ಚು ಮುಂತಾದ ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸಿ ಮಳಿಗೆಗಳಲ್ಲಿ ಮಾರಲಿದ್ದಾರೆ. ಈ ವರ್ಷ 100 ಮಳಿಗೆ ಇದೆ. ಎಲ್ಲಾ ಜಾತಿಯವರಿಗೂ ಮಳಿಗೆ ತೆರೆಯಲು ಅವಕಾಶ ನೀಡಿದ್ದೇವೆ. ಮೂವರು ಬಡ ವ್ಯಾಪಾರಿಗಳಿಗೆ ಉಚಿತ ಮಳಿಗೆ ನೀಡಿದ್ದೇವೆ. ಇಲ್ಲಿ ಬರುವ ಹಣವನ್ನು ನಮ್ಮ ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತೇವೆ. ಈ ವರ್ಷ ಮೆಡಿಕಲ್‌ ಫಂಡ್‌ಗೆ ಬಳಸಲಿದ್ದೇವೆ ಎಂದು ಗೀತಾಮಣಿ ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !