ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ದೃಶ್ಯರೂಪಕ ಶಿಲ್ಪಿ

Last Updated 4 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಪ್ರತಿಷ್ಠೆ, ಜನಪ್ರಿಯತೆ ಪಡೆದವರಾಗಿದ್ದರೂ ಯಾವುದೇ ಆಡಂಬರಗಳಿಗೆ ಮಾರುಹೋಗದೆ ಕಲೆಯ ಮೌಲ್ಯ, ಘನತೆಯನ್ನು ಹೆಚ್ಚಿಸಿದವರು ಸತೀಶ್‌ ಗುಜ್ರಾಲ್‌

ಕಲೆಯ ಪ್ರತಿಯೊಂದು ತಲೆಮಾರು ತನ್ನ ಸಮುದಾಯದ ಮುಂದಿನ ತಲೆಮಾರಿಗೆ ತನ್ನ ಕಾಲದ ಶೈಲಿಯ ಅಭಿವ್ಯಕ್ತಿ ಕಾರಣಕ್ಕೆ ಪ್ರೇರಣೆ ನೀಡುತ್ತಲೇ ಬಂದಿದೆ. ಆಧುನಿಕ ಕಾಲದ ಕಲಾಭಿವ್ಯಕ್ತಿಯ ಪ್ರಕಾರಗಳು, ಆವಿಷ್ಕಾರಗಳು, ಪ್ರತೀಕಗಳು ಮತ್ತು ಚಿಂತನೆಗಳು ಹೊಸಕಾಲದ ಯುವ ಮನಸ್ಸುಗಳನ್ನು ಕೆಣಕುವ, ಪ್ರಭಾವಿಸುವ ಮತ್ತು ಅನುಸರಿಸುವ ಕೆಲಸವನ್ನು ಬಹಳ ಪರಿಣಾಮಕಾರಿಯಾಗಿ ಮಾಡಿವೆ. ನವ್ಯದ ಪರಂಪರೆಯ ಹಿರಿಯ ಕಲಾವಿದರ ಜನಪ್ರಿಯತೆ, ಆಕರ್ಷಕ ಅಭಿವ್ಯಕ್ತಿ ಕ್ರಮಗಳು ಕೆಲವರನ್ನು ಸೆಳೆದರೆ; ಇನ್ನೂ ಕೆಲವರಿಗೆ ಕಲಾವಿದರ ಜೀವನ ಮೌಲ್ಯ, ಕಲಾ ಪ್ರಯೋಗ, ತಾತ್ವಿಕ ನಿಲುವು ಮತ್ತು ಬದ್ಧತೆ ಇತ್ಯಾದಿ ಗುಣಗಳ ಕಾರಣಕ್ಕೆ ಅನುಸರಣೆಗೆ ಕಾರಣವಾಗುತ್ತವೆ.

ಈ ನೆಲದ ಜನಪದ ಸಂಸ್ಕೃತಿ, ತಾತ್ವಿಕ ಮೌಲ್ಯಗಳನ್ನು ದೃಶ್ಯಕ್ಕೆ ಸಮೀಕರಿಸಿ, ತಮ್ಮ ಸ್ವಾನುಭವಾದ ಹೊಸ ಆವಿಷ್ಕಾರಗಳ ಮೂಲಕ ಅನನ್ಯ ಕಲಾಕೃತಿಗಳನ್ನು ನೀಡಿದ ನೂರಾರು ಕಲಾವಿದರು ತಮ್ಮಪಾಡಿಗೆ ತಾವು ನಿಶ್ಯಬ್ದದಲ್ಲಿ ಲೀನವಾಗಿದ್ದಾರೆ. ಜಿ.ಆರ್. ಸಂತೋಷ್, ಗಾಯ್ತೊಂಡೆ, ಸ್ವಾಮಿನಾಥನ್, ರಾಮಕುಮಾರ್, ಸುಬ್ರಹ್ಮಣ್ಯಂ, ಗಣೇಶ್ ಫೈನ್, ಫಣಿಕ್ಕರ್ ಇತ್ಯಾದಿ ಏಕಾಂತ ಕಲಾವಿದರ ಗುಂಪು ಸದ್ದಿಲ್ಲದೆ ತಮ್ಮ ಕಲಾ ಧ್ಯಾನದಲ್ಲಿ ತೊಡಗಿಕೊಂಡಿದ್ದವರು. ಇಂತಹ ಸಾತ್ವಿಕರ ಸಾಲಿನಲ್ಲಿ ಕಲಾವಿದ ಸತೀಶ್ ಗುಜ್ರಾಲ್ ಕೂಡ ಪ್ರಮುಖರು.

ಬಾಲಪ್ರತಿಭೆಯನ್ನು ನಂಬದ, ಎಲ್ಲರಂತೆ ಸಹಜ ಬಾಲ್ಯವನ್ನು ಅನುಭವಿಸಿದ ಸತೀಶ್ ತಮ್ಮ ಎಂಟನೇ ವಯಸ್ಸಿನಲ್ಲಿ ಅಪಘಾತವಾಗಿ ವಾಕ್ ಮತ್ತು ಶ್ರವಣ ಅಂಗವಿಕಲತೆಯನ್ನು ಅನುಭವಿಸಿದವರು. ಆಘಾತದಿಂದ ತಮ್ಮ ವಾಕ್, ಶ್ರವಣ ಸಾಮರ್ಥ್ಯ ಕಳೆದುಕೊಂಡಿದ್ದರೂ 68 ವರ್ಷಗಳ ಕಾಲ ತಮ್ಮ ದೈಹಿಕ ಸಮಸ್ಯೆಯನ್ನು ಮೀರಿ ಕಲಾಸಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. 1998ರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಅವರು ಈ ಸಮಸ್ಯೆಯಿಂದ ವಿಮುಕ್ತಿ ಪಡೆದರು.

ಸತೀಶ್ ಗುಜ್ರಾಲ್‌ ಮೆಕ್ಸಿಕೋದ ಜನಪ್ರಿಯ ಮತ್ತು ಜಗಪ್ರಸಿದ್ದ ಕಲಾವಿದೆ ‘ಪ್ರೀದ ಕಾರ್ಲೋ’ಳ ಸಂಗಾತಿಯಾಗಿದ್ದ ದಿಯಾಗೋ ರೆವೆರ ಅವರ ಜೊತೆಗೆ ಅಪ್ರೆಂಟಿಸ್ ಆಗಿ ಕೆಲಸ ಮಾಡಿದವರು. ಭಾರತದ ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಸಹೋದರರಾದ ಸತೀಶ್‌, ದೇಶದ ಅತ್ಯುತ್ತಮ ಸೃಜನಶೀಲ ಕಲಾವಿದರಾಗಿ ಮ್ಯೂರಲ್‌–ಭಿತ್ತಿರೂಹುಗಳು, ಪೈಂಟಿಂಗ್, ರೇಖಾಚಿತ್ರಗಳು ಮುಂತಾಗಿ ಅನೇಕ ಪ್ರಕಾರಗಳಲ್ಲಿ ಪ್ರಯೋಗಾತ್ಮಕವಾಗಿ ಕಲಾರಚನೆ ಮಾಡಿದರು. ಅವರ ಕೃತಿಗಳಲ್ಲಿ ಜನಪದೀಯ ಪ್ರತಿಮೆಗಳು, ರೂಪಕಗಳಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. ಅವರ ಕೃತಿಗಳು ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯಕಲಾ ಸಂಸ್ಥೆಗಳಲ್ಲಿ, ಗ್ಯಾಲರಿಗಳಲ್ಲಿ ಸಂಗ್ರಹಗೊಂಡಿವೆ. ಅವರ ಅನನ್ಯ ಕಲಾಸೇವೆಗೆ ಅನೇಕ ಗೌರವಗಳು ಸಂದಿವೆ. ಭಾರತ ಸರ್ಕಾರ 1999ರಲ್ಲಿ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿದೆ.

ಸ್ವಾತಂತ್ರ್ಯೋತ್ತರದ ಸಂದರ್ಭದಲ್ಲಿ ವಿದೇಶದ ಕಲಾಶಿಕ್ಷಣದ ಪ್ರಭಾವ ಭಾರತೀಯ ಕಲೆಯ, ಅದರಲ್ಲೂ ಆಧುನಿಕ ಕಲೆಯ ಕ್ರಿಯಾಶೀಲತೆಯನ್ನು ಹೆಚ್ಚಿಸಿದ್ದು ಸುಳ್ಳಲ್ಲ. ಪ್ರಚಲಿತ ವಿದ್ಯಮಾನ, ಚಲಾವಣೆಯಲ್ಲಿರುವ ವಸ್ತು, ವಿಷಯಗಳ ಸಾಮಾಜಿಕ ಸಂದೇಶಗಳನ್ನು ಬಿಂಬಿಸುವ ಲೋಕಾಂತ ಕಲಾವಿದರು ಒಂದು ಗುಂಪಾದರೆ; ಗಾಢ ಸೃಜನಶೀಲ ಅನುಭವಗಳ, ಜೀವನಾನುಭವದ ಅಂತರಾವಲೋಕನಕ್ಕೆ ತೆರೆದುಕೊಂಡ ದರ್ಶನ ತತ್ವದ ಕಲಾವಿದರದ್ದು ಇನ್ನೊಂದು ಗುಂಪು.

ಇಂತಹ ಯಾವ ಗುಂಪಿಗೂ ಸೇರದೆ ನಿರಂತರ ಪ್ರಯೋಗಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಸತೀಶ್‌ ಗುಜ್ರಾಲ್ ಅವರು ತಮ್ಮ ಕೃತಿಗಳಲ್ಲಿ ಜನಪದೀಯ ನೆಲೆಯನ್ನು ಪ್ರಧಾನವಾಗಿ ಬಳಸಿ ಭಾರತದ ಅಧುನಿಕ ಕಲೆಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಕಲಾಕೃತಿಗಳಲ್ಲಿ ಅವಕಾಶವನ್ನು- space ವಸ್ತು-content ಅನ್ನು ಸಮರ್ಥವಾಗಿ ಸಂಯೋಜಿಸುವ ಕೆಲವೇ ವಿರಳ ಕಲಾವಿದರಲ್ಲಿ ಸತೀಶ್ ಗುಜ್ರಾಲ್ ಅವರಿಗೆ ಪ್ರಾಮುಖ್ಯತೆ ಇತ್ತು. ಪೈಂಟರ್, ಮ್ಯೂರಲಿಸ್ಟ್, ಶಿಲ್ಪಿ ಮತ್ತು ವಾಸ್ತುಶಿಲ್ಪಿಯಾಗಿ ಅನೇಕ ಮಹತ್ವದ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ. ತಮ್ಮ ಕಲಾಕೃತಿಗಳಲ್ಲಿ ವಸ್ತು, ರೂಪ, ಆಕಾರ ಮತ್ತು ಶೈಲಿಗಳಲ್ಲಿ ಹೊಸ ನಿರೂಪಣಾ ಸಾಮರ್ಥ್ಯ ಬಳಸುವಲ್ಲಿ ನಿರಂತರ ಪ್ರಯೋಗಶೀಲತೆಯೇ ಅವರ ಕೃತಿಯ ಅನನ್ಯತೆಗೆ ಸಾಕ್ಷಿಯಾಗಿದ್ದವು. ಮ್ಯೂರಲ್ ಮಾಧ್ಯಮದಲ್ಲಿ ಅವರ ಪ್ರಾಯೋಗಿಕತೆ, ವಿನ್ಯಾಸ, ರೂಪಕಗಳ ಪರಿಪೂರ್ಣತೆ ಅವರ ವೃತ್ತಿಪರತೆಯನ್ನು ಬಿಂಬಿಸುತ್ತಿದ್ದವು. 1972ರಲ್ಲಿ ರಚಿಸಿದ ಬೃಹತ್ತಾದ ಮ್ಯೂರಲ್- ಬಿತ್ತಿರೂಹು ಮತ್ತು ಸುಪ್ರೀಂ ಕೋರ್ಟ್‌ನ ಸಂಕೀರ್ಣದಲ್ಲಿ ರಚಿಸಿದ ಮ್ಯೂರಲ್ ಕೃತಿಗಳು ಇದಕ್ಕೆ ಉತ್ತಮ ಉದಾಹರಣೆ.

ಕೃತಿ ರಚನೆಯ ಪ್ರಕ್ರಿಯೆಯಲ್ಲಿಯೇ ಹೆಚ್ಚು ಸಮಯ ಕಳೆದು, ಬಹಳ ಸಂಯಮದಲ್ಲಿ ಕೃತಿಗಳನ್ನು ರಚಿಸುತ್ತಿದ್ದ ಅವರು ತಮ್ಮ ಕೃತಿಗಳ ಪ್ರದರ್ಶನಕ್ಕೆ ಎಂದೂ ಹಾತೊರೆದವರಲ್ಲ. 80ರ ದಶಕದಲ್ಲಿ ಬೆಂಗಳೂರಿನಲ್ಲಿ ಮೊಟ್ಟಮೊದಲು ಅವರು ತಮ್ಮ ಮ್ಯೂರಲ್‌ ಕಲಾಕೃತಿಗಳ ಏಕವ್ಯಕ್ತಿ ಕಲಾಪ್ರದರ್ಶನ ನಡೆಸಿದ್ದರು. ಅದು ನಾನು ನೋಡಿದ ಮೊದಲ ಆಧುನಿಕ ಮ್ಯೂರಲ್ ಕಲಾಕೃತಿಗಳು. ಅಲ್ಲಿಂದಲೇ ನನ್ನ ಮ್ಯೂರಲ್ ಕೃತಿಗಳ ರಚನೆಗೆ ಕುತೂಹಲ, ಆಸಕ್ತಿ ಮೂಡಿದ್ದು. ಅಲ್ಲಿಂದ 90ರ ದಶಕದಲ್ಲಿ ಅವರ 22x7 ಅಡಿಯ ಮಹತ್ತಾದ ಸಿರಮಿಕ್ ಕಲಾಕೃತಿ ಪೀಕಾಕ್ ಹೋಟೆಲ್‌ನ ಸಂಗ್ರಹದಲ್ಲಿತ್ತು. ಅದರ ಜಾಗದಲ್ಲಿ ನನ್ನ ಮ್ಯೂರಲ್ ಕಲಾಕೃತಿ ರಚಿಸುವ ಅವಕಾಶವೊಂದು ದೊರಕಿತ್ತು.

ಸತೀಶ್ ಗುಜ್ರಾಲ್ ಅವರಂತಹ ದೊಡ್ಡ ಕಲಾವಿದರ ಕೃತಿಯ ಸ್ಥಳದಲ್ಲೇ ನನ್ನ ಕೃತಿ ಸ್ಥಾಪನೆಯಾದದ್ದು ನನಗಂತೂ ವಿಪರೀತ ಅಭಿಮಾನ ಹುಟ್ಟಿಸಿದ ಸಂಗತಿ. ನನ್ನ ಇನ್ನೊಂದು ಭಾಗ್ಯವೆಂದರೆ 90ರ ದಶಕದಲ್ಲೇ ನನ್ನದೊಂದು ಮ್ಯೂರಲ್ ಕಲಾಕೃತಿಯನ್ನು ದೆಹಲಿಯ ಆಧುನಿಕ ಗ್ಯಾಲರಿಯಲ್ಲಿ ಶಾಶ್ವತ ಸಂಗ್ರಹಕ್ಕಾಗಿ ಸತೀಶ್ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ಸ್ವತಃ ಕೊಂಡೊಯ್ದಿದ್ದರು.

ಪ್ರತಿಷ್ಠೆ, ಜನಪ್ರಿಯತೆ ಪಡೆದವರಾಗಿದ್ದರೂ ಯಾವುದೇ ಆಡಂಬರಗಳಿಗೆ ಮಾರುಹೋಗದೆ ಕಲೆಯ ಮೌಲ್ಯ, ಘನತೆಯನ್ನು ಹೆಚ್ಚಿಸಿದವರು ಗುಜ್ರಾಲ್‌. ನನ್ನ ಮ್ಯೂರಲ್ ಕಲಾಕೃತಿಗಳ ಪ್ರಯೋಗಕ್ಕೆ ಮತ್ತು ಕಲಾಜೀವನಕ್ಕೆ ಪ್ರೇರಣಾಶಕ್ತಿಯಾಗಿದ್ದರು. 95 ವರ್ಷಗಳ ಸಾರ್ಥಕ ತುಂಬು ಜೀವನ ನಡೆಸಿ ವಿರಮಿಸಿದ ಹಿರಿಯ ಜೀವಕ್ಕೆ ನಮನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT