ಟ್ರೈಬಲ್ ಕಥೆ, ಶಶಿ ಮಾತು

7

ಟ್ರೈಬಲ್ ಕಥೆ, ಶಶಿ ಮಾತು

Published:
Updated:

ಕಾಂಗ್ರೆಸ್‌ನ ಸ್ಟೈಲಿಷ್ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಶಶಿ ತರೂರ್‌ ಅವರು ಶೆರಟನ್‌ ಗ್ರ್ಯಾಂಡ್‌ ಹೋಟೆಲ್‌ನ ಆರ್ಟ್‌ ಕೆಫೆಯಲ್ಲಿ ಕೂತು ಹರಟಿದರು. ಕಲೆ, ಸಂಸ್ಕೃತಿ ನಡುವೆ ಆಗಾಗ ರಾಜಕೀಯದ ಮಾತುಗಳನ್ನೂ ತೂರಿಸಿದರು.

ಬಲಭಾಗದಲ್ಲಿ ಇಳಿಬೀಳುವ ಕೂದಲನ್ನು ಆಗಾಗ ಸರಿಸುತ್ತಲೇ ಮಾತಿಗಿಳಿದ ಅವರು, ಬುಡಕಟ್ಟು ಕಲೆ ಹಾಗೂ ಭಾರತದ ಸಂಸ್ಕೃತಿಗೆ ಬೇರೆ ಯಾವುದೂ ಸರಿಸಾಟಿಯಿಲ್ಲ ಎಂದು ಅಭಿಪ್ರಾಯಪಟ್ಟರು. 

ರಾಜಕಾರಣಿಗಳಿಗೆ ಸಾಮಾಜಿಕ ಜಾಲತಾಣಗಳು ಎಷ್ಟು ಮುಖ್ಯ? ಎಂಬ ಪ್ರಶ್ನೆ ಅವರನ್ನು ತೂರಿಬಂದಾಗ, ಒಮ್ಮೆ ಸಭಾಂಗಣದಲ್ಲಿ ನೆರೆದಿರುವವರಿಗೆಲ್ಲಾ ಕೇಳುವಷ್ಟು ಜೋರಾಗಿ ನಕ್ಕು, ಉತ್ತರ ನೀಡಲು ಆರಂಭಿಸಿದರು. 

‘ಇದು ಅತಿಮುಖ್ಯವಾದ ಪ್ರಶ್ನೆ ಹಾಗೂ ಸಮಂಜಸವಾದದ್ದು. ನಾವೆಲ್ಲರೂ ಜಿ–ಮೇಲ್‌, ಯಾಹೂವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೇವೆಯೋ ಹಾಗೆಯೇ ಟ್ವಿಟರ್‌ ಅನ್ನು ಕೂಡ ಪರಿಗಣಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಾಂಗ್ರೆಸ್ ಅಷ್ಟು ಸಕ್ರಿಯವಾಗಿರಲಿಲ್ಲ. ಆದರೆ ಬಿಜೆಪಿ ನಮ್ಮನ್ನು ಹಿಂದುಳಿಸಿ ಜಾಲತಾಣಗಳಿಂದ ಬೇರೆಯದೇ ಆದ ಜನಬೆಂಬಲ ಗಳಿಸಿತು. ಆಗ ಕಾಂಗ್ರೆಸ್‌ ಕೂಡ ಎಚ್ಚೆತ್ತುಕೊಳ್ಳಬೇಕಾಯಿತು’ ಎಂದರು. 

‘ಮಾಧ್ಯಮಗಳು ಪ್ರಬಲವಾಗಿರುವುದರಿಂದ ಚೆನ್ನೈ, ಮುಂಬೈ, ಕೇರಳದಲ್ಲಿ ನಾವು ಮಾತನಾಡಿದರೂ ಅದು ದೆಹಲಿಯ ರಾಜಕಾರಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ. ಇದೆಲ್ಲಾ ನಿಮ್ಮಿಂದಲೇ ಸಾಧ್ಯವಾಗಿದೆ’ ಎಂದು ನೆರೆದಿರುವವರನ್ನು ನಗಿಸಿದರು. 

ಮಧ್ಯಪ್ರದೇಶ, ರಾಜಸ್ತಾನ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳದ ಬುಡಕಟ್ಟು ಕಲಾವಿದರು ರಚಿಸಿದ ಕಲಾಕೃತಿಗಳು ಗೋಡೆಯನ್ನು ಬಿಗಿಯಾಗಿ ಹಿಡಿದುಕೊಂಡಂತೆ ಕಾಣಿಸಿದವು. 

ಅವುಗಳಲ್ಲಿ ಇದ್ದ ನೈಜತೆಯನ್ನು ನೋಡಿ ಶಶಿ ತರೂರ್‌ ಆಶ್ಚರ್ಯ ವ್ಯಕ್ತಪಡಿಸಿದರು. ನಗರದ ಜಂಜಡಗಳನ್ನು ದೂರ ಇಟ್ಟು ಎಲ್ಲೋ ಕಾಡಿನೊಳಕ್ಕೆ ಮನೆಮಾಡಿಕೊಂಡಿರುವ ನೆಮ್ಮದಿಯ ರೇಖೆಗಳು ಆ ಚಿತ್ರಗಳಲ್ಲಿ ಎದ್ದು ಕಾಣಿಸಿದವು. ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವ ಕಲಾಕೃತಿಗಳು ಹೆಚ್ಚು ಗಮನಸೆಳೆದವು.

ಕಲಾವಿದರಾದ ವೆಂಕಟ ರಮಣ್‌ ಸಿಂಗ್‌, ಕಲ್ಯಾಣ್‌ ಜೋಷಿ, ಸಂಜಯ್‌ ಚಿತಾರಾ, ಅನಿಲ್‌, ಅಮೃತಾ ದಾಸ್‌, ಶೈಲೇಶ್‌ ಪಂಡಿತ್‌, ಗೀತಾ ಬರಿಯಾ ಈ ಕಲಾಕೃತಿಗಳಿಗೆ ಕುಂಚದ ಸ್ಪರ್ಶ ನೀಡಿದ್ದಾರೆ. 

ತರೂರ್‌ ಉವಾಚ

* ರಾಜಕೀಯದಲ್ಲಿ ಎಲ್ಲವೂ ಮಿಥ್ಯ, ಸತ್ಯ ಎನ್ನುವುದು ಕಡಿಮೆಯೇ

* ಹೈದರಾಬಾದ್ ನಗರದ ಹೆಸರನ್ನು ಬದಲಾಯಿಸುವ ಯೋಚನೆ ಸರಿಯಲ್ಲ

* ಆರ್‌ಎಸ್‌ಎಸ್‌ ಚಿಂತನೆಗಳಿಂದ ಮೋದಿ, ಹೊರಬಂದಿಲ್ಲ

* ನೋಟು ರದ್ಧತಿ ಸರಿಯಾದ ಕ್ರಮ ಅಲ್ಲ

* ನನ್ನ ಪುಸ್ತಕದಲ್ಲಿ ಕೇವಲ ಬಿಜೆಪಿಯನ್ನು ಗುರಿಯಾಗಿಸಿಲ್ಲ. ಕಾಂಗ್ರೆಸ್‌ ಕುರಿತೂ ಸಾಕಷ್ಟು ವಿಚಾರಗಳಿವೆ.

* ಈಗ ಮೋದಿ ಅಜೆಂಡಾಗಳೆಲ್ಲಾ ಚುನಾವಣೆಯನ್ನೇ ಕೇಂದ್ರೀಕರಿಸಿವೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !