ಮಾಡೆಲಿಂಗ್ ಲೋಕದ ಪಾರಿಜಾತ ಸಿಂಧುಜಾ

7

ಮಾಡೆಲಿಂಗ್ ಲೋಕದ ಪಾರಿಜಾತ ಸಿಂಧುಜಾ

Published:
Updated:
Deccan Herald

ಮಾಡೆಲಿಂಗ್ ಲೋಕದ ಮೂಲಕ ಸಿನಿಲೋಕಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿರುವವರು ಮುದ್ದುಮುಖದ ಚೆಲುವೆ ಸಿಂಧುಜಾ ರಾಜ್. ಯುಟ್ಯೂಬ್‌ನಲ್ಲಿ ‘ವರ್ಜಿನ್ ಬಾಯ್ಸ್’ ವೆಬ್ ಸರಣಿಯ ಮೂಲಕ ಜನಪ್ರಿಯತೆ ಗಳಿಸಿರುವ ಸಿಂಧೂ ಆಕಸ್ಮಿಕವಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟವರು.

ಬಿಸಿಎ ಓದುತ್ತಿರುವಾಗ ಕಾಲೇಜಿನಲ್ಲಿ ನಡೆದ ಫ್ಯಾಷನ್ ಷೋನಲ್ಲಿ ರ‍್ಯಾಂಪ್ ವಾಕ್ ಮಾಡಿದ ಸಿಂಧೂಗೆ ಸ್ನೇಹಿತರು ಮಾಡೆಲಿಂಗ್ ಮಾಡಲು ಸೂಚಿಸಿದರಂತೆ. ಅದಕ್ಕೆ ತಕ್ಕಂತೆ ಅವಕಾಶವೂ ಅವರನ್ನು ಹುಡುಕಿಕೊಂಡು ಬಂದಾಗ ಸಿಂಧೂ ’ಮಿಸ್ ಬೆಂಗಳೂರು’ ಆಗಿ ಆಯ್ಕೆಯಾದರು. ಅಲ್ಲಿಂದ ಹಿಂತಿರುಗಿ ನೋಡದ ಅವರು ಸತತವಾಗಿ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡರು.

ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಬೆಸ್ಟ್ ಆ್ಯಟಿಟ್ಯೂಡ್ ಆಗಿ ಆಯ್ಕೆಯಾದ ಸಿಂಧೂ ಕೆಲ ಕಾಲ ಇ–ಕಾಮರ್ಸ್‌ನ ಜಾಹೀರಾತುಗಳಿಗೂ ರೂಪದರ್ಶಿಯಾಗಿದ್ದಾರೆ. ಫ್ಲಿಪ್‌ಕಾರ್ಟ್, ಅಮೆಜಾನ್‌ನ ಹಲವು ಫೋಟೊಶೂಟ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ರೂಪದರ್ಶಿಯಾಗಲು ಯಾವುದೇ ಸಂಸ್ಥೆಗಳಲ್ಲಿ ನಿಯಮಿತವಾಗಿ ತರಬೇತಿ ಪಡೆಯದೇ ಇದ್ದರೂ ವಿಡಿಯೊ ನೋಡಿ ಬೆಕ್ಕಿನ ಹೆಜ್ಜೆ ಹಾಕುವುದನ್ನು ಕರಗತಗೊಳಿಸಿಕೊಂಡಿದ್ದಾರೆ.

ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ ದಿನಗಳಲ್ಲಿ ಮನೆಯಲ್ಲಿ ಅಷ್ಟಾಗಿ ಒತ್ತಾಸೆ ದೊರೆಯಲಿಲ್ಲ. ಈ ಕ್ಷೇತ್ರದಲ್ಲಿ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದ ಮೇಲೆ ಮನೆಯವರಿಗೂ ನನ್ನ ಪ್ರತಿಭೆಯ ಬಗ್ಗೆ ವಿಶ್ವಾಸ ಮೂಡಿತು. ಈಗ ಅಪ್ಪ–ಅಮ್ಮ ಕೂಡಾ ನನ್ನಿಷ್ಟದ ಕ್ಷೇತ್ರದಲ್ಲಿ ಬೆಳಗುವುದನ್ನು ಬೆಂಬಲಿಸುತ್ತಾರೆ ಎಂದು ನಗೆ ಚೆಲ್ಲುತ್ತಾರೆ ಸಿಂಧೂ.

ಗಣಿ ಬಿ.ಕಾಂ ಪಾಸ್, ನಾಣಿ ಎನ್ನುವ ಕಿರುಚಿತ್ರಗಳಲ್ಲಿ ನಟಿಸಿರುವ ಸಿಂಧೂಗೆ ಈಗಾಗಲೇ ಬೆಳ್ಳಿತೆರೆಯಿಂದ ಹಲವು ಅವಕಾಶಗಳು ಬಂದಿದೆಯಾದರೂ, ಅಳೆದು ತೂಗಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಬೇಕಲ್ಲ, ಅದಕ್ಕಾಗಿ ತುಸು ಕಾಲಾವಕಾಶ ಕೇಳಿದ್ದೇನೆ ಎನ್ನುವ ಜಾಣನುಡಿಗಳನ್ನಾಡುತ್ತಾರೆ ಅವರು. ಸದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡವೊಂದರ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿರುವ ಸಿಂಧೂ ಕೈಯಲ್ಲಿ ಹಿಂದಿ ಮತ್ತು ಪಂಜಾಬಿ ಭಾಷೆಯ ಆಲ್ಪಂ ಸಾಂಗ್‌ಗಳ ಅವಕಾಶವೂ ಇದೆ.

ರಾಜಾಜಿನಗರದ ಈ ಬೆಡಗಿ ಸಿಂಧೂ ಮೈಕಟ್ಟು ಕಾಪಾಡಿಕೊಳ್ಳಲು ನಿತ್ಯವೂ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಒಂದೂವರೆ ತಾಸು ವಾಕಿಂಗ್ ಮಾಡುವ ಅವರು, ಆಗಾಗ್ಗೆ ಯೋಗ ಮತ್ತು ಧ್ಯಾನದ ಮೊರೆ ಹೋಗುತ್ತಾರಂತೆ. ವ್ಯಾಯಾಮ, ಧ್ಯಾನ ದೇಹವನ್ನಷ್ಟೇ ಅಲ್ಲ ಮನಸ್ಸನ್ನೂ ಪ್ರಫುಲ್ಲಗೊಳಿಸುತ್ತದೆ. ಹಾಗಾಗಿ, ಜಿಮ್‌ನಲ್ಲಿ ಕಠಿಣ ವ್ಯಾಯಾಮ ಮಾಡುತ್ತೇನೆ ಎನ್ನುತ್ತಾರೆ ಅವರು.

ಕಡಿಮೆ ಎಣ್ಣೆ ಇರುವ ಚಪಾತಿಗೆ ಅದ್ಯತೆ ನೀಡುವ ಸಿಂಧೂಗೆ ಒಣಹಣ್ಣುಗಳೆಂದರೆ ಬಲು ಇಷ್ಟವಂತೆ. ರವೆ ಇಡ್ಲಿ, ಅನ್ನ–ಸಾರು, ತರಕಾರಿ ಸಲಾಡ್ ಸಿಂಧೂವಿನ ಊಟದ ಮೆನುವಿನಲ್ಲಿ ಕಾಯಂ ಸ್ಥಾನ. ಅಪರೂಪಕ್ಕೊಮ್ಮೆ ಮಾಂಸಾಹಾರ ಸೇವಿಸುವ ಅವರು, ಚರ್ಮದ ಆರೋಗ್ಯಕ್ಕಾಗಿ ಲೋಳೆಸರದ ಮೊರೆ ಹೋಗುತ್ತಾರಂತೆ.

ದೊಡ್ಡತಾರೆಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಸಿಂಧೂಗೆ ತಡವಾಗಿಯಾದರೂ ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಆ ಆಸೆ ಶೀಘ್ರದಲ್ಲೇ ನೆರವೇರುವ ಭರವಸೆಯನ್ನೂ ವ್ಯಕ್ತಪಡಿಸುತ್ತಾರೆ ಸಿಂಧೂ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !