ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗುತ್ತಿದೆ ಕೌಶಲಪೂರ್ಣ ದೊಂಬರಾಟ

Last Updated 13 ಮಾರ್ಚ್ 2021, 14:45 IST
ಅಕ್ಷರ ಗಾತ್ರ

ಬೀದರ್‌: ಅಲೆಮಾರಿಗಳಾಗಿ ತಮ್ಮ ದೈಹಿಕ ಕಸರತ್ತು ಹಾಗೂ ಶ್ರಮದಾಯಕ ಕಲೆ ಪ್ರಸ್ತುತ ಪಡಿಸುವ ಜನಾಂಗವೇ ದೊಂಬರು. ಅವರು ಸರ್ಕಸ್ ರೀತಿಯ ಆಟ ಪ್ರದರ್ಶಿಸುವ ಮೂಲಕ ತಮ್ಮ ಜೀವನ ಸಾಗಿಸುತ್ತಾರೆ. ಅವರನ್ನು ದೊಂಬರಾಟದವರು ಎಂದು ಕರೆಯಲಾಗುತ್ತದೆ.

ಊರಿಂದೂರಿಗೆ ತಮ್ಮ ಸರಂಜಾಮುಗಳನ್ನು ಕುದುರೆ ಅಥವಾ ಕತ್ತೆಗಳ ಮೇಲೆ ಹೇರಿಕೊಂಡು ತಮ್ಮೊಂದಿಗೆ ಕುರಿ, ಕೋಳಿಗಳನ್ನೂ ಒಯ್ಯುತ್ತಾರೆ. ಅಲೆಮಾರಿ ಜನಾಂಗದವರಾದ ಅವರು ಆಯಾ ಊರಿನ ಗುಡಿಯಲ್ಲಿಯೋ ಅಥವಾ ತಾತ್ಕಾಲಿಕ ಡೇರೆಯನ್ನು ನಿರ್ಮಿಸಿಕೊಂಡು, ಬಯಲಲ್ಲೇ ವಾಸಿಸುತ್ತಾರೆ. ತಮ್ಮ ಕಲೆಗೆ ಪ್ರೋತ್ಸಾಹ ಸಿಗುವವರೆಗೆ ಅಲ್ಲಿದ್ದು ನಂತರ ಮುಂದಿನೂರಿಗೆ ಪಯಣಿಸುತ್ತಾರೆ.

ಜನಸಂದಣಿ ಸೇರುವ ಸ್ಥಳದಲ್ಲಿ ತಮ್ಮ ಕೌಶಲಪೂರ್ಣ ಕಲೆಯನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಕಾಣಿಕೆಯನ್ನು ಪಡೆದು ಅವರನ್ನು ವಿನಮೃತೆಯಿಂದ ನಮಸ್ಕರಿಸಿ ಹಣಕೊಟ್ಟವರ ಹೆಸರನ್ನು ಹೇಳುತ್ತಾ, ವರ್ಣಿಸುತ್ತಾರೆ.

ಒಂದು ಊರಿಗೆ ಹೋದಾಗ ಅಲ್ಲಿನ ಪ್ರಮುಖರ ಅಪ್ಪಣೆ ಪಡೆದು ಊರಿನ ಪ್ರಮುಖ ಬೀದಿಗಳಲ್ಲಿ, ಸಂತೆಯಲ್ಲಿ, ಜಾತ್ರೆಯಲ್ಲಿ, ತಮ್ಮ ಆಟವನ್ನು ಪ್ರದರ್ಶಿಸುತ್ತಾರೆ. ದೊಂಬರ ಸ್ತ್ರೀಯು ಕಚ್ಚೆ ಸೀರೆಯನ್ನು ಧರಿಸಿ ಡೋಲನ್ನು ಭಾರಿಸುತ್ತಾಳೆ. ದೊಂಬರು ತಾವು ಹೋದ ಊರಿನ ಮುಖಂಡರನ್ನು ಹೊಗಳುತ್ತ, ಶಿಳ್ಳೆ ಹೊಡೆಯುತ್ತ ವಿಭಿನ್ನವಾಗಿ ಶಬ್ದ ಮಾಡುತ್ತ ಜನರನ್ನು ಸೇರಿಸುವ ಕಸರತ್ತು ಮಾಡುತ್ತಾರೆ.

ವಿದೂಷಕನ ರೀತಿಯಲ್ಲಿ, ಕೆಲವೊಮ್ಮೆ ಹನುಮಂತನ ವೇಷ ಧರಿಸಿ, ಕೆಲವೊಮ್ಮೆ ವಿಲಕ್ಷಣ ಶೈಲಿಯ ಬಣ್ಣಗಳನ್ನು ಮುಖಕ್ಕೆ ಬಳಿದುಕೊಳ್ಳುತ್ತಾರೆ. ಸರ್ಕಸ್‍ಗಳಲ್ಲಿಯ ಜೋಕರ್ ಶೈಲಿಯ ಹಾವಭಾವದೊಂದಿಗೆ ನೋಡುಗರನ್ನು ಆಕರ್ಷಿಸಲು ಹಲವಾರು ಕಸರತ್ತುಗಳನ್ನು ಮಾಡುತ್ತಾರೆ. ಅಸಾಧ್ಯವಾದ ವ್ಯಾಯಾಮ ರೀತಿಯ ಸವಾಲೆನಿಸುವ ಕಲೆಯಲ್ಲಿ ನಿಷ್ಠಾತರಾಗಿರುತ್ತಾರೆ. ತಮ್ಮ ಹೊಟ್ಟೆ ಪಾಡಿಗಾಗಿ ವೈವಿಧ್ಯಮಯ ಪ್ರದರ್ಶನಗಳನ್ನು ನೀಡುತ್ತಾರೆ.

ಕೆಲವೊಮ್ಮೆ ಅಪಾಯಕಾರಿ ಕಲೆಗಳನ್ನು ಪ್ರದರ್ಶಿಸುವಲ್ಲಿಯು ಹಿಂಜರಿಯುವುದಿಲ್ಲ. ಕಠಿಣ ವ್ಯಾಯಾಮದಂತಹ ವೈವಿಧ್ಯಮಯ ದೈಹಿಕ ಕಸರತ್ತನ್ನು ನಿರ್ಭಯವಾಗಿ ಮಾಡುತ್ತ ನೋಡುಗರನ್ನು ರಂಜಿಸುವ ಕಲೆ ಕರಗತ ಮಾಡಿಕೊಂಡಿರುತ್ತಾರೆ. ಇಡೀ ಕುಟುಂಬವು ಆ ಆಟ ಅಥವಾ ಕಲೆಯಲ್ಲಿ ತೊಡಗಿಸಿಕೊಳ್ಳುತ್ತದೆ. ತಂತಿಯ ಮೇಲೆ ನಡೆಯುವುದು, ಬಂಡಿಯ ಚಕ್ರಗಳನ್ನು ಎತ್ತುವುದು, ಎದೆಯ ಮೇಲೆ ಹೇರಿಕೊಳ್ಳುವುದು, ಹಲ್ಲಿನಿಂದ ತುಂಬಿದ ನೀರಿನ ಕೊಡವನ್ನು ಎತ್ತುವುದು, ಚಿಕ್ಕ ಕಬ್ಬಿಣದ ವೃತ್ತಾಕಾರದ ರಿಂಗಿನೊಳಗೆ ಒಬ್ಬರು ಅಥವಾ ಇಬ್ಬರು ಪ್ರವೇಶಿಸಿ ಹೊರಗೆ ಬರುವಂತಹದ್ದು ಹೀಗೆ ವಿವಿಧ ಶೈಲಿಯ ಆಟಗಳನ್ನು, ಕುಣಿತಗಳನ್ನು ಪ್ರದರ್ಶಿಸಿಸುತ್ತಾರೆ.

ಆಟದ ಕೊನೆಗೆ ದೊಂಬರ ಹೆಣ್ಣುಮಗಳೊಬ್ಬಳು ಪ್ರೇಕ್ಷಕರಿಂದ ಹಣವನ್ನು, ಕಾಣಿಕೆಯನ್ನು ಸಂಗ್ರಹಿಸುತ್ತಾಳೆ. ಡೊಂಬರು ಕೆಲವೊಮ್ಮೆ ತಮ್ಮೊಂದಿಗೆ ಪಳಗಿಸಿದ ಮಂಗ, ಕುರಿ, ಕೋಳಿಗಳನ್ನು ಒಯ್ಯುವರು. ದೊಂಬರಾಟ ಮುಗಿದ ನಂತರ ಅದೇ ಓಣಿಯಲ್ಲಿ ಅಥವಾ ಓಣಿಯಲ್ಲಿ ಮಹಿಳೆಯರು ಮನೆ ಮನೆಗೆ ತಿರುಗಿ ಭಿಕ್ಷೆ ಸ್ವೀಕರಿಸುವುದುಂಟು. ಇತ್ತೀಚಿನ ದಿನಗಳಲ್ಲಿ ಸಂಚಾರಿಯಾದ ದೊಂಬರು ತಮ್ಮ ಕಲೆಯಿಂದ, ಕುಲಕಸುಬಿನಿಂದ ದೂರ ಸರಿಯುತ್ತಾ ಆಧುನಿಕ ಜೀವನಕ್ಕೆ ಹೊಂದಿಕೊಂಡು ಬದುಕುತ್ತಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT