ಫ್ಯಾಕ್ಟರಿಯಲ್ಲಿ ಹೀಗಿರುತ್ತೆ ‘ಚಿನ್ನ’..!

ಬುಧವಾರ, ಏಪ್ರಿಲ್ 24, 2019
27 °C

ಫ್ಯಾಕ್ಟರಿಯಲ್ಲಿ ಹೀಗಿರುತ್ತೆ ‘ಚಿನ್ನ’..!

Published:
Updated:
Prajavani

ಚಿನ್ನಾಭರಣ ಮಾರುಕಟ್ಟೆಯ ವಹಿವಾಟು ದೇಶದ ಆರ್ಥಿಕತೆಯನ್ನು ನಿರ್ಣಯಿಸುವ ಮಟ್ಟಕ್ಕೆ ಬೆಳೆದಿದೆ. ದೊಡ್ಡ ಉದ್ಯಮಿಗಳು ಚಿನ್ನದ ವ್ಯಾಪಾರಕ್ಕಿಳಿದಿದ್ದಾರೆ. ಆಭರಣಗಳ ನೂರಾರು ಬ್ರ್ಯಾಂಡ್‌ಗಳು ಮಾರುಕಟ್ಟೆ ಸೃಷ್ಟಿಸಿಕೊಂಡಿವೆ. ತಂತ್ರಜ್ಞಾನ ಬಳಕೆ, ವಿನ್ಯಾಸಗಳು‌, ವೇಸ್ಟೇಜ್‌– ಮೇಕಿಂಗ್‌ ದರದಲ್ಲಿ ಚೌಕಾಸಿಗಿಳಿವ ಮಳಿಗೆಗಳು.. ಚಿನ್ನದ ಕೆಲಸಗಾರರಿಗೆ ಕೈತುಂಬ ಕೆಲಸ. 

ಪುಟ್ಟ ಜಾಗದಲ್ಲಿ ನೆಲಕ್ಕೆ ಕುಳಿತು ಚಿನ್ನದ ಕೆಲಸ, ಸಾಂಪ್ರದಾಯಕ ಆಭರಣಗಳ ತಯಾರು ಮಾಡುವ ಅಕ್ಕಸಾಲಿಗರ ಪರಂಪರೆ ಬದಲಾಗಿದೆ. ಈಗ ಅದೊಂದು ಹಣವಿದ್ದ ಯಾರು ಬೇಕಾದ್ರೂ ಮಾಡಬಹುದಾದ ಉದ್ಯಮ.

ಯುವಕರು ಚಿನ್ನದ ಕುಲಕಸುಬಿನಿಂದ ವಿಮುಖರಾಗುತ್ತಿರುವ ಸರಿ ಹೊತ್ತಿನಲ್ಲಿ ಚಿನ್ನದ ಮಳಿಗೆಗಳಿಂದ ಬೇಡಿಕೆ ಹೆಚ್ಚಿದೆ. ಈಗ ಚಿನ್ನದ ಕೆಲಸಗಾರರಿಗೆ ಚಿನ್ನದಷ್ಟೇ ಬೇಡಿಕೆ. ಇಂಥ ಕುಶಲ ಕರ್ಮಿಗಳನ್ನು ಇಟ್ಟುಕೊಂಡು ಬೃಹತ್‌ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ. ಅಂಥದ್ದೊಂದು ಪ್ರಮುಖ ಬ್ರ್ಯಾಂಡ್‌ ತನಿಷ್ಕ್‌.

ಟಾಟಾ ಸಮೂಹದ ಟೈಟಾನ್‌ ಕಂಪೆನಿ ತಮಿಳುನಾಡಿನ ಹೊಸೂರಿನಲ್ಲಿ ಚಿನ್ನ ಮತ್ತು ವಜ್ರದ ಆಭರಣ ತಯಾರಿಕೆಯ ಬೃಹತ್‌ ಫ್ಯಾಕ್ಟರಿ ಹೊಂದಿದೆ. 9.95 ಎಕರೆ ವಿಸ್ತೀರ್ಣದಲ್ಲಿ ಈ ಘಟಕವಿದೆ. 7.54 ಎಕರೆಯಲ್ಲಿ ಕಟ್ಟಡಗಳಿವೆ. 450 ಸಿಬ್ಬಂದಿ, 400 ಕುಶಲಕರ್ಮಿಗಳಿದ್ದಾರೆ. ಅಲ್ಲಿ ಹಳೆಯ ಚಿನ್ನದ ಶುದ್ಧೀಕರಣ, ತಮ್ಮದೇ ವಿನ್ಯಾಸದ ಆಭರಣ, ನಾಣ್ಯ, ಪದಕ, ಸ್ಮರಣಿಕೆಗಳನ್ನೂ ತಯಾರಿಸುತ್ತಿದೆ. ದೆಹಲಿಯ ಹುಮಾಯೂನ್‌ ಗುಮ್ಮಟಕ್ಕೆ 80 ಕೆಜಿ ತೂಕದ ಚಿನ್ನದ ಕಳಸವನ್ನು ತನಿಷ್ಕ್‌ ತಯಾರಿಸಿ ಕೊಟ್ಟಿದೆ. ಸರ್ಕಾರದ ಪದಕಗಳು, ಬೇರೆ ದೇಶಗಳ ವಿಶ್ವವಿದ್ಯಾಲಯಗಳು ಪದಕಗಳನ್ನು ತನಿಷ್ಕ್‌ನಿಂದ ವಿನ್ಯಾಸ ಮಾಡಿಸಿಕೊಂಡಿವೆ. ಇನ್ಫೊಸಿಸ್‌ ಫೌಂಡೇಷನ್ ವಿಜ್ಞಾನಿಗಳಿಗೆ ಪ್ರತಿ ವರ್ಷ ನೀಡುವ ವಾರ್ಷಿಕ ವಿಜ್ಞಾನ ಪದಕ, ಒಲಿಂಪಿಕ್‌ ಕ್ರೀಡಾಕೂಟದ ಪದಕಗಳೂ ಇಲ್ಲಿ ತಯಾರಾಗಿವೆ. ಜಗತ್ತಿನಲ್ಲಿ ಚಿನ್ನದಿಂದ ಏನೆಲ್ಲ ತಯಾರಿಸಬಹುದೋ ಅವೆಲ್ಲವನ್ನೂ ತನಿಷ್ಕ್‌ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ. 

ಇಲ್ಲಿ ಅಪಾರ ಪ್ರಮಾಣದ ಹಳೆಯ ಚಿನ್ನವನ್ನು ಶುದ್ಧೀಕರಣ ಮಾಡಲಾಗುತ್ತದೆ. ತನಿಷ್ಕ್‌ ಆಭರಣಗಳಲ್ಲದೆ ಎಕ್ಸ್‌ಚೇಂಜ್‌ ಆಫರ್ ನಲ್ಲಿ ಪಡೆದ ಬೇರೆ ಬ್ರ್ಯಾಂಡ್‌ನ ಚಿನ್ನಾಭರಣಗಳನ್ನೂ ಕರಗಿಸಿ ಪರಿಶುದ್ಧ ಚಿನ್ನವನ್ನು ಉತ್ಪಾದಿಸಲಾಗುತ್ತದೆ. ನಾಲ್ಕು ಹಂತಗಳಲ್ಲಿ ಈ ಕ್ರಿಯೆ ನಡೆಯುತ್ತದೆ. ಆಭರಣ ರೂಪದಲ್ಲಿರುವ ಹಳೆಯ ಚಿನ್ನವನ್ನು ಪುಡಿ ಮಾಡಿದಾಗ ಮರಳಿನ ಬಣ್ಣದ ಧಾನ್ಯದ ರೂಪ ಪಡೆಯುತ್ತದೆ. ಅದನ್ನು ಕರಗಿಸಿ ದ್ರವ ರೂಪಕ್ಕೆ ತರಲಾಗುತ್ತದೆ. ಅದು ಗಟ್ಟಿಯಾಗುವ ಹಂತದಲ್ಲಿ ಕಪ್ಪು ಮಣ್ಣಿನ ರೂಪದಲ್ಲಿರುತ್ತದೆ. ನಂತರದ ಹಂತದಲ್ಲಿ ಅಪ್ಪಟ ಚಿನ್ನದ ಪುಟಾಣಿ ಗೋಲಿಗಳ ರೂಪ ಪಡೆಯುತ್ತದೆ.  

‘ಫೋರ್ 9 ಗೋಲ್ಡ್‌’ ಪರಿಶುದ್ಧತೆ

ತನಿಷ್ಕ್‌ನಲ್ಲಿ ಜಾಗತಿಕ ಗುಣಮಟ್ಟದ ಶುದ್ದೀಕರಿಸುವ ವ್ಯವಸ್ಥೆ ಇದೆ. ವರ್ಷದಲ್ಲಿ 19 ಟನ್‌ ಹಳೆಯ ಚಿನ್ನವನ್ನು ಶುದ್ದೀಕರಿಸಲಾಗುತ್ತದೆ. ಈ ಪ್ರಕ್ರಿಯೆಗೆ ಅತ್ಯಾಧುನಿಕ ಯಂತ್ರೋಪಕರಣಗಳಿವೆ. ಶೇ 99.99  ಎಂದರೆ ಚಿನ್ನದ ಶುದ್ಧತೆಯ ಅತ್ಯುನ್ನತ ಮಟ್ಟ. ಅದನ್ನು ‘ಫೋರ್ 9 ಗೋಲ್ಡ್‌’ ಎಂದು ಕರೆಯಲಾಗುತ್ತದೆ. ತನಿಷ್ಕ್‌ನ ಚಿನ್ನ ಈ ಗುಣಮಟ್ಟದ್ದು.

ಶುದ್ಧ ಚಿನ್ನದಲ್ಲಿ ಆಭರಣ ತಯಾರಿಸಲಾಗದು. ಅದಕ್ಕೆ ತಾಮ್ರ ಮತ್ತು ಬೆಳ್ಳಿ ಸೇರಿಸಬೇಕು. ಆಭರಣ ಚಿನ್ನವನ್ನು ಮಾರುಕಟ್ಟೆಯಿಂದ ಖರೀದಿಸಲಾಗುತ್ತದೆ. ತನಿಷ್ಕ್‌ನಲ್ಲಿ ತಾಮ್ರ ಮತ್ತು ಬೆಳ್ಳಿ ಮಿಶ್ರ ಮಾಡುವ ಯಂತ್ರವಿದೆ. ಈ ಯಂತ್ರ ದೇಶದ ಏಕೈಕ ಯಂತ್ರ ಎಂದು ಅಲ್ಲಿನ ಅಧಿಕಾರಿ ಹೇಳುತ್ತಾರೆ. ದೇಶದಲ್ಲಿ ಚಿನ್ನದ ವಾಚುಗಳನ್ನು ಪರಿಚಯಿಸಿದ್ದು ಇದೇ ಟೈಟಾನ್‌. ಆಗ ಬಳಕೆಗೆ ತಂದ ಈ ಯಂತ್ರ ಈಗ ಆಭರಣ ಚಿನ್ನ ತಯಾರಿಗೂ ಬಳಸಲಾಗುತ್ತಿದೆ. ಹೀಗಾಗಿ ತನಿಷ್ಕ್ ಚಿನ್ನದ ಪರಿಶುದ್ಧತೆಯ ಬಗ್ಗೆ ಶೇ 100 ಖಾತರಿ ನೀಡುತ್ತೇವೆ ಎನ್ನುತ್ತಾರೆ ಕಾರ್ಖಾನೆಯ ಜನರಲ್ ಮ್ಯಾನೇಜರ್‌ ರಾಜೇಂದ್ರನ್‌ ಜಿ.  

ದೂಳಿನ ಕಣವೂ ಹೊರಹೋಗದು

ಆ ಘಟಕದ ಒಳಗಿಂದ ಒಂದು ದೂಳಿನ ಕಣವೂ ಹೊರ ಹೋಗದಂಥ ವ್ಯವಸ್ಥೆ ಇದೆ. ಚಿನ್ನ ಶುದ್ದೀಕರಣ ಮಾಡುವ ಬೃಹತ್‌ ಘಟಕಗಳಲ್ಲಿ ಕೆಲಸ ಮಾಡುವ ಕೆಮಿಕಲ್‌ ಎಂಜಿನಿಯರ್ಸ್‌, ಆಭರಣ ತಯಾರಕರು ಸೇರಿದಂತೆ 800 ಸಿಬ್ಬಂದಿ ಪ್ರತಿದಿನ ಧರಿಸುವ ಬಿಳಿಕೋಟು, ಚಪ್ಪಲಿ, ಕಾಲೊರಸುಗಳನ್ನು ನೀರಿನಲ್ಲಿ ಅದ್ದಿ ಅದರಲ್ಲಿರುವ ಚಿನ್ನದ ದೂಳಿನ ಕಣಗಳನ್ನು ಸಂಗ್ರಹಿಸಲಾಗುತ್ತದೆ. ಕೈ ತೊಳೆದ ನೀರೂ ಹಾಗೆಯೇ ಹೊರ ಹೋಗುವುದಿಲ್ಲ. ಅದನ್ನು ಸಂಗ್ರಹಿಸಿ ವಿವಿಧ ಹಂತಗಳಲ್ಲಿ ಚಿನ್ನದ ಅಂಶವನ್ನು ಬೇರ್ಪಡಿಸಲಾಗುತ್ತದೆ. ನೀರು, ಬಟ್ಟೆ, ಡೋರ್‌ ಮ್ಯಾಟ್‌, ಸ್ಟಿಕ್ಕಿ ಮ್ಯಾಟ್‌ ಸೇರಿದಂತೆ ಕನಿಷ್ಠ 100 ಮೂಲಗಳಿಂದ ಚಿನ್ನದ ಕಣಗಳನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ಕೇಜಿಗಟ್ಟಲೆ ಚಿನ್ನ ಸಂಗ್ರಹವಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ. ಕಾರ್ಮಿಕರ ಮೇಲೆ ನಿಗಾ ಇಡಲು 350 ಸಿಸಿಟಿವಿ ಕ್ಯಾಮೆರಾಗಳಿವೆ. 

ಬದುಕು ಬದಲಾದ ಬಗೆ

ಪಶ್ಚಿಮ ಬಂಗಾಳ, ರಾಜಸ್ತಾನ, ಮಧ್ಯಪ್ರದೇಶ ಮುಂತಾದ ಉತ್ತರ ಭಾರತದ ಚಿನ್ನದ ಕುಶಲಕರ್ಮಿಗಳನ್ನು ಕರೆತಂದು ಅವರಿಗೆ ವಸತಿ, ಪಿಎಫ್‌, ಇಎಸ್‌ಐ ಸಹಿತ ಉತ್ತಮ ವೇತನ ನೀಡಲಾಗುತ್ತಿದೆ. ಚಿಕ್ಕದೊಂದು ಗುಡಿಸಲಿನಂಥ ಜಾಗದಲ್ಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದ ಕುಶಲಕರ್ಮಿಗಳು ಈಗ ಉತ್ತಮ ವ್ಯವಸ್ಥೆಯಡಿ, ಗೌರವಯುವ ಜೀವನ ನಡೆಸುತ್ತಿದ್ದಾರೆ. ಈಗ ಯುವಕರು ಕುಲ ಕಸುಬಿನ ಕಡೆ ಆಕರ್ಷಿತರಾಗುತ್ತಿದ್ದಾರೆ. ನಮ್ಮಲ್ಲಿ 400 ಕುಶಲಕರ್ಮಿಗಳಿದ್ದಾರೆ. ಪರಂಪರಾಗತವಾಗಿ ನೆಲದ ಮೇಲೆ ಕುಳಿತೇ ಕುಸುರಿ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳನ್ನು ಕುರ್ಚಿಯ ಮೇಲೆ ಕೂರುವಂತೆ ಮಾಡುವುದೇ ದೊಡ್ಡ ಸವಾಲಾಗಿತ್ತು ಎಂದು ತನಿಷ್ಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜಯ್‌ ರೆನವಾಡ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 30

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !