ಗುರುವಾರ , ನವೆಂಬರ್ 14, 2019
22 °C
Foot Soldier of the Constitution

ಸಂದರ್ಶನ: ನಮ್ಮ ಸಮಾಜ ಕೋಮುವಾದಿ ಅಲ್ಲ– ತೀಸ್ತಾ ಸಿತಲ್ವಾಡ್

Published:
Updated:
Prajavani

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸಿತಲ್ವಾಡ್ ಬರೆದ ‘Foot Soldier of the Constitution’ ಪುಸ್ತಕ ಕನ್ನಡಕ್ಕೆ ಅನುವಾದವಾಗಿ ‘ಸಂವಿಧಾನದ ಕಾಲಾಳು’ ಎನ್ನುವ ಹೆಸರಿನಲ್ಲಿ ಪ್ರಕಟವಾಗಿದೆ. ಇದು ತೀಸ್ತಾ ಅವರ ಆತ್ಮಕಥೆಯಲ್ಲ. ಆದರೆ, ಇದು ಆತ್ಮಕಥೆ ಒಳಗೊಳ್ಳಬಹುದಾದ ಅಂಶಗಳನ್ನೂ ಹೊಂದಿರುವ ಹೋರಾಟದ ಕಥೆ.

ಕಳೆದ ಭಾನುವಾರ ಇದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ತೀಸ್ತಾ ಜೊತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಮೊದಲ ಪ್ರಶ್ನೆ, ಈ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಬರೆಯಬೇಕು ಎಂದು ಅನಿಸಿದ್ದು ಏಕೆ?

ಈ ಪುಸ್ತಕ ಬರೆಯಬೇಕು ಎಂಬ ತೀರ್ಮಾನವನ್ನು ನಾನೊಬ್ಬಳೇ ಕೈಗೊಳ್ಳಲಿಲ್ಲ. ನನ್ನ ಪುಸ್ತಕವನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಯವರು (ಲೆಫ್ಟ್‌ವರ್ಡ್‌) ಮನವಿ ಮಾಡಿಕೊಂಡಿದ್ದರು. ಕೋಮುವಾದ ಹಾಗೂ ಫ್ಯಾಸಿಸಂ ವಿರೋಧಿ ಹೋರಾಟದಲ್ಲಿ ಕೂಡ ಭಾಗಿ ಆಗಿರುವ ಅವರು ನಾನು ನಡೆದುಬಂದ ರಾಜಕೀಯ ಹಾದಿಯನ್ನು, ಕಾಲಘಟ್ಟವನ್ನು ದಾಖಲಿಸುವುದು ಬಹುಮುಖ್ಯ ಎಂದು ಹೇಳಿದರು. ಪುಸ್ತಕ ಬರೆಯಲು ಬಹುದೊಡ್ಡ ಒತ್ತಾಸೆಯಾಗಿದ್ದು ಪ್ರಭುತ್ವವು ನನ್ನನ್ನು ಏಕಾಂಗಿಯಾಗಿಸಿ, ನಿಂದೆಗೆ ಗುರಿ ಮಾಡಿದ್ದು.

ಈ ಪುಸ್ತಕ ಕನ್ನಡ ಸೇರಿದಂತೆ ಇತರ ಭಾಷೆಗಳಿಗೆ ಅನುವಾದ ಆಗುತ್ತಿರುವ ಕಾರಣ?

ಇದು ಇಂಗ್ಲಿಷೇತರ ಭಾಷೆಗೆ ಅನುವಾದ ಆಗುತ್ತಿರುವುದು ಇದೇ ಮೊದಲಲ್ಲ. ಮರಾಠಿ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದ ಆಗಿದೆ. ಇಂಗ್ಲಿಷ್‌ ಆವೃತ್ತಿಯಲ್ಲಿ ಇರುವ ಹೋರಾಟದ ಕಥೆಯು ಬೇರೆ ಭಾಷೆಗಳಿಗೂ ಅನುವಾದ ಆಗಬೇಕು, ಆ ಭಾಷೆಯ ಓದುಗರು ಕೂಡ ಈ ಕಥೆಯನ್ನು ತಿಳಿದುಕೊಳ್ಳಬೇಕು ಎಂದು ಬೇರೆ ಬೇರೆ ಪ್ರಕಾಶಕರು ಭಾವಿಸಿದರು. ಹಾಗಾಗಿ ಇದು ಕನ್ನಡದಲ್ಲಿ ಬಂದಿದೆ.

ಈ ಪುಸ್ತಕ ಬೇರೆ ಬೇರೆ ಭಾಷೆಗಳಿಗೆ ಅನುವಾದ ಆಗಬೇಕು ಎಂದು ಲೇಖಕಿಯಾಗಿ ನನಗೆ ಖಂಡಿತ ಅನಿಸಿತ್ತು. ತಮ್ಮ ವೃತ್ತಿಯನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಬಯಸುವ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು ಈ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಎಂದು ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಕೋಮುವಾದವನ್ನು ಎದುರಿಸುವ ಅಂತರ್ಗತ ಶಕ್ತಿಯನ್ನು ಭಾರತೀಯ ಸಮಾಜ ಕಳೆದುಕೊಂಡಿದೆ ಎಂದು ಅನಿಸಿದೆಯಾ? ಸಾಮಾಜಿಕ ಕಾರ್ಯಕರ್ತೆಯಾಗಿ ನೀವು ಕಂಡುಕೊಂಡಿದ್ದೇನು?

ಪ್ರಭುತ್ವ, ಸಮಾಜ ಹಾಗೂ ವೈಯಕ್ತಿಕ ಹಂತದಲ್ಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಯುವ ಪತ್ರಕರ್ತರಿಗೆ ಮಾಧ್ಯಮಗಳ ಇತಿಹಾಸದ ಬಗ್ಗೆಯಾಗಲಿ, ಸಮಾಜದ ಇತಿಹಾಸದ ಬಗ್ಗೆಯಾಗಲಿ ಪಾಠ ಇಲ್ಲ. ಭಾರತೀಯ ಪತ್ರಿಕಾರಂಗ ಹೇಗೆ ಹುಟ್ಟಿತು ಎಂಬುದರ ಕಲ್ಪನೆಯೇ ಇಲ್ಲದೆ ಅವರು ಪತ್ರಿಕಾ ವೃತ್ತಿ ಪ್ರವೇಶಿಸುತ್ತಿದ್ದಾರೆ. ನಮ್ಮ ಸ್ವಾತಂತ್ರ್ಯ ಚಳವಳಿಯ, ವಸಾಹತುಶಾಹಿ ವಿರೋಧಿ ಚಳವಳಿಯ ನಾಯಕರೇ ನಮ್ಮ ದೇಶದ ಪತ್ರಿಕಾವೃತ್ತಿಯನ್ನೂ ಮುನ್ನಡೆಸಿದ್ದರು. ಡಾ. ಅಂಬೇಡ್ಕರ್, ಮೌಲಾನಾ ಆಜಾದ್‌, ಗಾಂಧೀಜಿ ಇವರೆಲ್ಲ ಜನನಾಯಕರೂ ಆಗಿದ್ದರು, ಜನರನ್ನು ಮುನ್ನಡೆಸಲು ಪತ್ರಿಕಾರಂಗವನ್ನೂ ಬೆಳೆಸಿದರು. ಈ ಪ್ರಕ್ರಿಯೆಯಲ್ಲಿ ಸಾಮೂಹಿಕ ರಾಜಕೀಯ ಪ್ರಜ್ಞೆಯೊಂದು ಸೃಷ್ಟಿಯಾಯಿತು. ಈ ಪ್ರಜ್ಞೆಯೇ ನಮಗೆ ನಮ್ಮ ಸಂವಿಧಾನವನ್ನು ಕೊಟ್ಟಿತು. ನಾವು ನಮ್ಮ ಸಂವಿಧಾನವನ್ನು ಹೊರಗಿನಿಂದ ಆಮದು ಮಾಡಿಕೊಂಡಿದ್ದೇನೂ ಅಲ್ಲ.

ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿದ್ದ ಪ್ರಜ್ಞೆಯು ರಾಜಕೀಯ ನಾಯಕತ್ವದಲ್ಲಿ, ಪ್ರಭುತ್ವದಲ್ಲಿ ಕೆಲವು ದಶಕಗಳವರೆಗೆ ಇತ್ತು. ಆದರೆ, ಬಾಬರಿ ಮಸೀದಿ ಧ್ವಂಸದ ನಂತರ ತಲೆಮಾರಿಗೆ ಈ ಪ್ರಜ್ಞೆಯ ಲಾಭ ಸಿಗಲಿಲ್ಲ.

ಆರ್‌ಎಸ್‌ಎಸ್‌ ಮತ್ತು ಅದರ ರಾಜಕೀಯ ವಿಭಾಗ ಬಿಜೆಪಿಯ ಬಲವರ್ಧನೆಯು ಬಹುಸಂಖ್ಯಾತವಾದವು ಚುನಾವಣಾ ಪ್ರಜಾತಂತ್ರದಲ್ಲಿ ನೆಲೆ ಕಂಡುಕೊಂಡಿರುವುದನ್ನು ಹೇಳುತ್ತದೆ. ಈ ಶಕ್ತಿಗಳ ಬೆಳವಣಿಗೆ ಸಹಜವಾಗಿಲ್ಲ. ಬಹುಸಂಖ್ಯಾತರ ಕೋಮುವಾದವು ಅಪಾಯಕಾರಿ. ಬಹುಸಂಖ್ಯಾತರ ಕೋಮುವಾದಕ್ಕೆ ಯಾವಾಗಲೂ ಇಂಬು ಕೊಡುವುದು ಅಲ್ಪಸಂಖ್ಯಾತರ ಕೋಮುವಾದ.

ಇದಕ್ಕೆ ದೇಶ ವಿಭಜನೆಯ ಇತಿಹಾಸ, 1857 ರಿಂದ 1947ರವರೆಗಿನ ಇತಿಹಾಸ ಸಾಕ್ಷಿ. 1905ರಲ್ಲಿ ಬ್ರಿಟಿಷರು ಬಂಗಾಳವನ್ನು ವಿಭಜಿಸಲು ಯತ್ನಿಸಿದಾಗ ಹಿಂದೂಗಳು ಮತ್ತು ಮುಸ್ಲಿಮರು ಅದನ್ನು ವಿರೋಧಿಸಿ ರಸ್ತೆಗಿಳಿದರು. ಆದರೆ, 1940ರ ನಂತರದಲ್ಲಿ ಮುಸ್ಲಿಂ ಲೀಗ್ ಪಕ್ಷವು ಮುಸ್ಲಿಂ ರಾಷ್ಟ್ರವನ್ನು, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರವನ್ನು ಬಯಸುತ್ತಿದ್ದವು. ಈ ಸಮಾಜವನ್ನು ಕೋಮುವಾದದ ತೆಕ್ಕೆಗೆ ಸರಿಸಿದ್ದಕ್ಕೆ ಮುಸ್ಲಿಂ ಲೀಗ್, ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್‌ ಹೊಣೆ. ಕೋಮುವಾದಿ ಶಕ್ತಿಗಳು ಸಮಾಜದಲ್ಲಿ ಇರುವ ಪ್ರತಿಗಾಮಿ ಶಕ್ತಿಯನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿವೆ. ನಮ್ಮ ಸಮಾಜ ಅದಾಗಿಯೇ ಕೋಮುವಾದಿ ಅಲ್ಲ. ಮತಧರ್ಮಗಳು ರಾಜಕೀಯ ಶಕ್ತಿಗೆ ಹತ್ತಿರವಾದಾಗ ‘ಬಹುಸಂಖ್ಯಾತವಾದ’ವನ್ನು ಪ್ರತಿಪಾದಿಸಲು ಆರಂಭಿಸುತ್ತವೆ.

ನಾವು ಆ ರಾಜಕೀಯ ಶಕ್ತಿಗಳಿಗೆ ಹೇಗೆ ಸುಲಭದ ತುತ್ತಾದೆವು?

ದಕ್ಷಿಣದ ಯಾವ ರಾಜ್ಯದಲ್ಲೂ, ಕರ್ನಾಟಕ ಹೊರತುಪಡಿಸಿದರೆ, ಬಿಜೆಪಿಯ ಪ್ರಭಾವ ದೊಡ್ಡದಾಗಿ ಇಲ್ಲ. ಇಲ್ಲಿ ದ್ರಾವಿಡ ಪರಂಪರೆ ಗಟ್ಟಿಯಾಗಿದೆ. ಜಾತಿ ವಿರೋಧಿ ಚಳವಳಿ ಕೂಡ ಪ್ರಬಲವಾಗಿದೆ. ಪ್ರತಿಗಾಮಿ ಹಾಗೂ ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ದನಿ ಇಲ್ಲಿದೆ. ಭಾರತದ ಸಮಾಜ ಸಂಪೂರ್ಣವಾಗಿ ಕೋಮುವಾದದ ತೆಕ್ಕೆಗೆ ಸೇರಿಕೊಂಡಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಕೋಮುವಾದೀಕರಣಕ್ಕೆ ಮಾನ್ಯತೆ ತಂದುಕೊಡಲಾಗಿದೆ. ಇದನ್ನು ಹಿಂದೆ ಅಡ್ವಾಣಿ ಮಾಡಿದರು, ಈಗ ಮೋದಿ ಮಾಡುತ್ತಿದ್ದಾರೆ. ಇಂದು ಮುಸ್ಲಿಂ ದ್ವೇಷ ಒಂದು ಫ್ಯಾಷನ್ ಆಗಿದೆ.

ದೇಶದ 30ರಿಂದ 35ರಷ್ಟು ಜನ ಮಾತ್ರ ಕೋಮುವಾದಿಗಳು. ದೇಶದ ಬಹುದೊಡ್ಡ ಜನವರ್ಗ ಕೋಮುವಾದಿ ಅಲ್ಲ ಎಂದು ಇಂದಿಗೂ ನಾನು ನಂಬಿದ್ದೇನೆ.

ಕೋಮುವಾದವನ್ನು ಸೋಲಿಸುವಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳು ಸೋತಿವೆಯೇ?

ಒಂದು ಹಂತದಮಟ್ಟಿಗೆ, ಅವು ಸೋತಿವೆ ಎನ್ನಬೇಕಾಗುತ್ತದೆ. ಹಾಗಾಗಿಯೇ, ನಾವು ಸಾಂವಿಧಾನಿಕ ಮೌಲ್ಯಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ. ಮಹಾತ್ಮ ಗಾಂಧೀಜಿಯನ್ನು ಗೋಡ್ಸೆ ಕೊಂದ ನಂತರ ಸರ್ದಾರ್ ಪಟೇಲರು ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದರು. ಅವರು ಆಗ ಒಂದು ಪತ್ರ ಬರೆದು, ಗಾಂಧೀಜಿ ಕೊಲೆಯಾದ ನಂತರ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಸಿಹಿ ಹಂಚಿದ್ದು ಕಂಡುಬಂದಿದೆ ಎಂದರು. ಆರ್‌ಎಸ್‌ಎಸ್‌ನ ಸದಸ್ಯರು ಅಧಿಕಾರಶಾಹಿಯಲ್ಲಿ ಇರಬಾರದು ಎಂಬ ತೀರ್ಮಾನಕ್ಕೆ ಆ ಹೊತ್ತಿನಲ್ಲಿ ಸರ್ಕಾರ ಬಂತು.

ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ನಿಲುವನ್ನು ಅತಿಯಾಗಿ ದುರ್ಬಲಗೊಳಿಸಲಾಗಿದೆ. ಮಧ್ಯಪ್ರದೇಶ ಸರ್ಕಾರವು ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಇದನ್ನು ಹದಿನೈದು ವರ್ಷಗಳ ಹಿಂದೆಯೇ ಮಾಡಿತು. ಆರ್‌ಎಸ್‌ಎಸ್‌ಗೆ ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲ. ದ್ವೇಷದ ನೆಲೆಯಲ್ಲೇ ಅವರು ತಮ್ಮ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಸಮಾಜದಲ್ಲಿ ಕೋಮುವಾದ ಕಡಿಮೆ ಮಾಡಲು ಹೆಚ್ಚು ಯಾರನ್ನು ಆಶ್ರಯಿಸಬೇಕು? ಸಾಮಾಜಿಕ ಕಾರ್ಯಕರ್ತರನ್ನೋ ಅಥವಾ ಸಾಂವಿಧಾನಿಕ ಸಂಸ್ಥೆಗಳನ್ನೋ? ಲೇಖಕರ ಹೊಣೆ ಏನು?

ಇದಕ್ಕೆ ಎರಡೂ ಕಡೆಯಿಂದ ನೆರವು ಬೇಕು. ಪ್ರಭುತ್ವವು ತನ್ನ ಪ್ರಜಾತಾಂತ್ರಿಕ ಗಣರಾಜ್ಯದ ಸ್ವರೂಪಕ್ಕೆ ಮರಳಬೇಕು. ಜೊತೆಯಲ್ಲೇ, ಸಾಂಸ್ಕೃತಿಕ ವಿನಿಮಯ ನಡೆಯಬೇಕು. ಪಠ್ಯಪುಸ್ತಕಗಳಲ್ಲಿ ನಿಜವಾದ ಇತಿಹಾಸ ಬರಬೇಕು.

ಲೇಖಕರಿಗೆ, ಅಭಿಪ್ರಾಯ ರೂಪಿಸುವವರಿಗೆ, ರಂಗಭೂಮಿಯವರಿಗೆ ಕೋಮುವಾದ ಅಥವಾ ಜಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಿರಾಕರಿಸಲು ಅವಕಾಶ ಇಲ್ಲ ಎಂದು ಭಾವಿಸಿದ್ದೇನೆ. ಒಂದು ವೇಳೆ ಅವರು ಅಂತಹ ಪ್ರಶ್ನೆಗಳನ್ನು ನಿರಾಕರಿಸುತ್ತಿದ್ದಾರೆ ಎಂದಾದರೆ, ಅವರು ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎನ್ನಬೇಕಾಗುತ್ತದೆ.

ಪ್ರತಿಕ್ರಿಯಿಸಿ (+)