ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಲ್ಲಿ ದೊಡ್ಡಪ್ಪ ಈ ಚಿಕ್ಕಪ್ಪಯ್ಯ

Last Updated 21 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಛಲವು ರಾಮನೋಳು ಬೇಡೆ|
ಲಲನೆ ದಯೆಯಿಂದ ನೋಡೆ

ಕುಲೀನಾಂಗನೆಯು ನೀನಾಗಿ|
ಈ ಕೀಳಾಲೋಚನೆಯ ಬಿಡೆ|

ಮೊಲೆಹಾಲುಣಿಸಿದ ಸುತಗೆ|
ಹಾಲಾಹಲವನ್ನ ಕೊಡುವಿಯಾ ನೀನು?

ರಾಮಾಯಣ ನಾಟಕದ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಕೈಕೇಯಿ ಅದನ್ನು ತಪ್ಪಿಸುತ್ತಾಳೆ. ಆಗ ದಶರಥ ಬಹಳ ನೊಂದುಕೊಂಡು ದೈನ್ಯದಿಂದ ಕೈಕೇಯಿಯಲ್ಲಿ ಬೇಡಿಕೊಳ್ಳುವ ಪ್ರಸಂಗದ ರಂಗಗೀತೆ ಇದು. ರಂಗಗೀತೆಗಳೊಂದಿಗೆ ನವರಸಗಳನ್ನು ಬೆರೆಸಿದ ಅಭಿನಯ ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸದೇ ಇರದು. ಈ ರೀತಿಯಾಗಿ ರಂಗಪರದೆ ತೆರೆದರೆ ಸಾಕು ಪಾತ್ರಧಾರಿಗಳು ತಮ್ಮನ್ನು ತಾವೇ ಮರೆತು ಪಾತ್ರಗಳಲ್ಲಿ ತಲ್ಲೀನರಾಗುತ್ತಿದ್ದ ನಾಟಕಗಳು ಇನ್ನೂ ಇವೆ.

ಪ್ರಸ್ತುತ ಆಧುನಿಕ ಮಾಧ್ಯಮಗಳ ಭರಾಟೆಯ ನಡುವೆಯೂ ರಂಗಭೂಮಿ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಕಾಲಕ್ಕೆ ತಕ್ಕಂತೆ ನಾಟಕದಲ್ಲಿ ಹೊಸ ಹೊಸ ಪ್ರಯೋಗಗಳು ಮೂಡಿಬರುತ್ತಿರುವುದು ಒಂದೆಡೆಯಾದರೆ, ಈ ಕಲಾಪ್ರಕಾರವು ತೆರೆಮರೆಗೆ ಸರಿಯದಂತೆ ಕಲಾಸಕ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮತ್ತೊಂದೆಡೆ. ಹೀಗಾಗಿಯೇ ಚಲನಚಿತ್ರ ಹಾಗೂ ದೂರದರ್ಶನದಂತಹ ಮನರಂಜನಾತ್ಮಕ ದೃಶ್ಯಮಾಧ್ಯಮಗಳ ಹೊಡೆತವನ್ನು ಸಹಿಸಿಕೊಂಡೂ ರಂಗಕಲೆ ಇನ್ನೂ ಜನರ ನಡುವೆ ಪ್ರಚಲಿತದಲ್ಲಿದೆ.

ತುಮಕೂರು ಜಿಲ್ಲೆಗೆ ರಂಗಭೂಮಿಯಲ್ಲಿ ಹಿಂದಿನಿಂದಲೂ ತನ್ನದೇ ಹೆಸರಿದೆ. ಕಲೆಯನ್ನು ಆರಾಧಿಸುವ ಕಲಾವಿದರ ಕ್ರಿಯಾಶೀಲ ಅಭಿವ್ಯಕ್ತಿಯ ಫಲವಾಗಿ ನಿರಂತರವಾಗಿ ತನ್ನದೇ ಮಹತ್ವವನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿನ ವೃತ್ತಿ ರಂಗಭೂಮಿಯ ಇತಿಹಾಸಕ್ಕೆ ಸಾವಿರಾರು ಕಲಾವಿದರ ಕೊಡುಗೆಯಿದೆ. ಎರಡು ಶತಮಾನಕ್ಕೂ ಹಳೆಯ ನಂಟುಳ್ಳ ಈ ಕ್ಷೇತ್ರ ಇಂದಿಗೂ ಅದೇ ಹಾದಿಯಲ್ಲಿ ಸಕ್ರಿಯವಾಗಿದೆ.

ಮೈಸೂರು ಅರಸರ ಕಾಲದಿಂದಲೂ ಅದರ ಕೃಪಾಪೋಷಿತವಾಗಿ ಸಾಗಿಬಂದ ತುಮಕೂರು ಜಿಲ್ಲೆಯ ರಂಗಪ್ರಯೋಗಗಳು ‘ಶ್ರೀ ಚಾಮುಂಡೇಶ್ವರಿ ನಾಟಕ ಸಭಾ’ದಿಂದ ‘ಗುಬ್ಬಿ ವೀರಣ್ಣ ನಾಟಕ ಕಂಪನಿ’ಯವರೆಗೆ ಹಲವು ಕಾಲಘಟ್ಟಗಳಲ್ಲಿ ಬೆಳೆದು ಬಂದಿರುವುದನ್ನು ಗಮನಿಸಬಹುದು. ಸಂಗೀತ, ಸಾಹಿತ್ಯ, ಕಲೆಗಳ ತವರೂರು ಎಂದು ಕರೆಸಿಕೊಂಡ ಕಲ್ಪತರು ನಾಡು ಸಾಂಸ್ಕೃತಿಕವಾಗಿ ಸಕ್ರಿಯವಾಗಿರುವುದನ್ನು ಇಂದಿಗೂ ಗಮನಿಸಬಹುದು.

ಜಿಲ್ಲೆಯ ಪ್ರಮುಖ ರಂಗಭೂಮಿ ಕಲಾವಿದರೆನಿಸಿಕೊಳ್ಳುವ ಗುಬ್ಬಿ ವೀರಣ್ಣ, ನರಸಿಂಹರಾಜು, ಸಿ.ಬಿ.ಮಲ್ಲಪ್ಪ, ಪಂಚಲಿಂಗಯ್ಯ, ಬಿ.ಕೆ.ಈಶ್ವರಪ್ಪ, ಶಕ್ತಿಪ್ರಸಾದ್, ಮಂಜುಳ ಇವರೆಲ್ಲರೂ ಈ ಕ್ಷೇತ್ರದಲ್ಲಿ ಗಣನೀಯವಾದ ತಮ್ಮ ಕಲಾರಾಧನೆಯ ಮೂಲಕ ಇಂದಿಗೂ ಜೀವಂತವಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಇಂಥವರ ಸಾಲಿಗೆ ಸೇರಿದ ಮತ್ತೊಬ್ಬ ರಂಗ ಕಲಾವಿದರೆಂದರೆ ಚಿಕ್ಕಪ್ಪಯ್ಯನವರು.

ಸಾಮಾನ್ಯ ಕುಟುಂಬದ ಹಟ್ಟಿಯಲ್ಲಿ ಹುಟ್ಟಿ ಕುರಿ ಕಾಯ್ದು ಬಡತನದಲ್ಲಿಯೇ ಓದಿ ತುಮಕೂರು, ಮಧುಗಿರಿಯಲ್ಲಿ ತಮ್ಮ ಪ್ರಾಥಮಿಕ-ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ಇವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಪಡೆದು ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ತಮ್ಮ ಪಾಡನ್ನೆ ಹಾಡಾಗಿಸಿಕೊಂಡು ವೃತ್ತಿಯಲ್ಲಿ ಹೆಸರು ಮಾಡಿ ಪ್ರವೃತ್ತಿಯಲ್ಲಿ ಕಲಾವಿದನಾಗಿ ಬೆಳೆದದ್ದು ಸಾಮಾನ್ಯವಾದ ಸಂಗತಿಯಲ್ಲ. ತುಂಬು ಕುಟುಂಬದಲ್ಲಿ ಬೆಳೆದ ಇವರ ಕಲಾಸಿರಿ ಬಾಲ್ಯದಲ್ಲಿ ಚಿಗುರೊಡೆಯಿತು. ಬಾಲ್ಯದಲ್ಲಿ ಕುರಿ ಸಾಕುವ ಕಾಯಕದಲ್ಲಿ ತೊಡಗಿಕೊಂಡ ಇವರು ತಮ್ಮ ಓರಗೆಯ ಬಾಲಕರೆಲ್ಲರನ್ನು ಒಟ್ಟುಗೂಡಿಸಿ ಒಂದು ನಾಟಕ ತಂಡವನ್ನು ಕಟ್ಟಿಕೊಂಡು ಸಿಂಗರಾವುತನಹಳ್ಳಿ ಈರಣ್ಣನವರ ಮೆಚ್ಚುಗೆಗೆ ಪಾತ್ರರಾದರು.

ಅಕ್ಷರ ಸಂಸ್ಕೃತಿಯ ಅವಕಾಶಗಳೇ ಕಡಿಮೆ ಇದ್ದ ಕಾಲದಲ್ಲಿ ಅಕ್ಷರ ದಕ್ಕಿಸಿಕೊಳ್ಳಬೇಕೆಂಬ ಛಲದಿಂದ ಕಾಳಜಿ ಹೊಂದಿ ಗುರುಕುಲದ ಕಲ್ಪನೆಗೆ ಯೋಚಿಸಿದ ರೀತಿಯೇ ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತಿಗೆ ಪುಷ್ಟಿ ಕೊಡುತ್ತದೆ. ಚಿಕ್ಕಪ್ಪಯ್ಯನವರ ಆಸಕ್ತಿ, ಕಲಿಕೆಯಲ್ಲಿನ ಶ್ರದ್ಧೆ, ಕಲೆಯ ಗೀಳನ್ನು ಕಂಡ ಮಾಸ್ತರರಾದ ಸಿಂಗರಾವುತನಹಳ್ಳಿ ಈರಣ್ಣನವರು ಅವರ ತಾಯಿಯ ಮನವೊಲಿಸಿ ನೇರವಾಗಿ ಮೂರನೇ ತರಗತಿಗೆ ಸೇರಿಸಿದರು. ಅವರಲ್ಲಿದ್ದ ಕಲೆಯ ಗೀಳು, ಆಸಕ್ತಿ ಬಾಲ್ಯದಿಂದಲೇ ಸ್ಫುಟಗೊಂಡು ಊರಿನಲ್ಲಿ ಯಕ್ಷಗಾನ ನಾಟಕದ ತಾಲೀಮು ಮಾಡುವ ಸ್ಥಳಕ್ಕೆ ಹೋಗುತ್ತಾ ಕಲೆಯ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿಕೊಂಡರು.

ಬಾಲ್ಯದಿಂದಲೇ ಏಕಪಾತ್ರಾಭಿನಯ, ಸಂಗೀತ, ನಾಟಕಗಳನ್ನು ಮೈಗೂಡಿಸಿಕೊಂಡು ಮುಂದೆ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದರು. ತಾವು ಸೇವೆ ಸಲ್ಲಿಸಿದ ಅನೇಕ ಕ್ಷೇತ್ರಗಳಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ಜೀವ ತುಂಬಿದರು. ರಾಜಾ ಸತ್ಯವ್ರತ, ಕುರುಕ್ಷೇತ್ರ, ಕೌಂಡಲೀಕನ ವಧೆ ಮುಂತಾದ ನಾಟಕಗಳಲ್ಲಿ ಶಕುನಿ, ವಿಧುರ, ಕರ್ಣ, ದುರ್ಯೋಧನ ಪಾತ್ರಗಳಿಗೆ ಜೀವತುಂಬಿ ಅಭಿನಯಿಸುವ ಇವರು ಕಾರ್ಯ ನಿರ್ವಹಿಸಿದ ಸ್ಥಳಗಳಲ್ಲಿ ಉತ್ತಮ ಸಂಘಟಕರಾಗಿಯೂ ಹೆಸರಾದರು. ಡ್ರಾಮಾ ಸೀನರಿಗಳು, ವೇಷಭೂಷಣಗಳಿಗೆ ರೂಪುನೀಡುವ ಮೂಲಕ ನಾಟಕ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲರಾಗಿರುವ ಇವರ ವ್ಯಕ್ತಿತ್ವ ಯುವಕರಿಗೆ ಆದರ್ಶವಾದುದು.

ಚಿಕ್ಕಪ್ಪಯ್ಯನವರು ರಂಗಶಾಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆಯದೆ ತಮ್ಮ ಸ್ವಪ್ರತಿಭೆ-ಪರಿಶ್ರಮದಿಂದಲೇ ಮಹತ್ತರವಾದ ಸಾಧನೆ ಮಾಡಿದ ಸರದಾರ. ಇವರು ವೃತ್ತಿ ನಿಮಿತ್ತ ಯಾವ ಊರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ ಅಲ್ಲೊಂದು ನಾಟಕ ತಂಡ ಸಿದ್ಧವಿರುತ್ತಿತ್ತು ಎಂತಲೇ ಲೆಕ್ಕ.

ಚಿಕ್ಕಪ್ಪಯ್ಯನವರು ರಂಗಭೂಮಿಗೆ ಬರುವುದಕ್ಕೆ ಮುಖ್ಯ ಪ್ರೇರಣೆ ಇವರು ಹುಟ್ಟಿದ ಹಳ್ಳಿಯ ಸಾಂಸ್ಕೃತಿಕ ವಾತಾವರಣ. ಸುಮ್ಮನೆ ಕೆಲಸಕ್ಕೆ ಬಾರದ ಮಾತುಗಳನ್ನಾಡುತ್ತಾ ಕಾಲ ಕಳೆಯುವ ಬದಲು ಸಮಯ ಸಿಕ್ಕಾಗಲೆಲ್ಲಾ ರಾಮಾಯಣ, ಮಹಾಭಾರತ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿನ ಪಾತ್ರಗಳ ಬಗ್ಗೆ ವಿಮರ್ಶೆ ಮಾಡಿಕೊಳ್ಳುತ್ತಾ ಬೆಳೆದವರ ಊರದು. ಕಲಾವಿದನಲ್ಲಿ ಅಡಗಿಕೊಂಡಿರುವ ಸುಪ್ತವಾದ ಪ್ರತಿಭೆ ವಯಸ್ಸನ್ನು, ಜಾತಿಯನ್ನು, ವರ್ಗವನ್ನು, ಲಿಂಗವನ್ನು ಹಾಗೂ ಧರ್ಮವನ್ನು ಮೀರಿದ್ದು ಎಂದು ನಂಬಿದವರು ಅವರು.

ಕಷ್ಟದ ದಿನಗಳನ್ನು ಎದುರಿಸಿ ರಂಗಭೂಮಿಗೆ ಹೊಸ ಆಯಾಮ ನೀಡಿದ ಚಿಕ್ಕಪ್ಪಯ್ಯನವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬಿ ತಮ್ಮ ಅದ್ಭುತ ನಟನೆಯ ಮೂಲಕ ಕಲಾಭಿಮಾನಿಗಳ, ಕಲಾರಸಿಕರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ‘ಸುವರ್ಣ ಕಲಾರತ್ನ’, ‘ರಂಗ ಕೌಸ್ತುಭ’ ಮತ್ತು ‘ರಂಗ ಸಿಂಧೂರ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT