ಬುಧವಾರ, ಡಿಸೆಂಬರ್ 1, 2021
21 °C

ಆರೋಗ್ಯ, ರಂಗಪರಿಚಾರಿಕೆಯ ತೊಟ್ಟವಾಡಿ

ಗುಡಿಹಳ್ಳಿ ನಾಗರಾಜ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಹತ್ತಾರು ಕಲಾವಿದರ ಜೀವ ಉಳಿಸಲು ಶ್ರಮಿಸಿದ, ನೂರಾರು ಕಲಾವಿದರಿಗೆ ಉಚಿತ ಚಿಕಿತ್ಸೆ ಕೊಡಿಸಿದ ತೊಟ್ಟವಾಡಿ ನಂಜುಂಡಸ್ವಾಮಿ ದೈಹಿಕವಾಗಿ ಇಲ್ಲವಾದರೂ, ಕಲಾವಿದರ ಮನಸ್ಸಿನಲ್ಲಿ ಸದಾ ನೆನಪಾಗಿ ಉಳಿಯುತ್ತಾರೆ. ಅವರ ಜೀವನ ಆರೋಗ್ಯ ಕ್ಷೇತ್ರ, ರಂಗಭೂಮಿ ಎರಡಕ್ಕೂ ಮುಡಿಪಾಗಿತ್ತು.

ತೊಟ್ಟವಾಡಿ ನಂಜುಂಡಸ್ವಾಮಿ ಕಡುಬಡತನದ ಕುಟುಂಬದಲ್ಲಿ ಜನಿಸಿ, ‘ಸಿ’ ದರ್ಜೆಯ ನೌಕರನಾಗಿ- ಕನ್ನಡದ ಬಹುದೊಡ್ಡ ರಂಗಪರಿಚಾರಕನಾಗಿ ಬೆಳೆದದ್ದು ಒಂದು ದಂತಕಥೆಯಾಗಿ ಕಾಣಿಸುತ್ತದೆ. ರಂಗಚೇತನ ತಂಡ ಕಟ್ಟಿ ಕನ್ನಡದ ಕೆಲವು ಮಹತ್ವದ ಸಣ್ಣಕಥೆಗಳನ್ನು ನಾಟಕವಾಗಿಸಿದರು. ‘ಹುಚ್ಚಾಸ್ಪತ್ರೆಯಲ್ಲಿ ಒಬ್ಬ ವೈದ್ಯ’, ‘ಜಾತಿಯೆಂಬ ಮಾಯೆಯೊಳು..’, ‘ಮುಳ್ಳುಬೇಲಿಗಳ ನಡುವೆ’, ‘ಬಯಲುಗಣ್ಣು’, ‘ಸ್ಮಶಾನಕಬ್ಬು’, ‘ಮಾದಾರ ಚನ್ನಯ್ಯ’ ಮುಂತಾದ ನಾಟಕಗಳನ್ನು ರಚಿಸಿದರು. ರಾಜ್ಯದ ಹಲವೆಡೆ ರಂಗಯಾತ್ರೆಗಳನ್ನು ಆಯೋಜಿಸಿದರು.

ಇದು ರಂಗದ ಒಂದು ಮುಖವಾದರೆ ರಾಜ್ಯದ ನೂರಾರು ಸಾಹಿತಿ, ಕಲಾವಿದರಿಗೆಗೆ ತಾವು ಕೆಲಸ ಮಾಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸಿದ್ದು ಅವರ ಮಾನವೀಯತೆಯ ಮತ್ತೊಂದು ಮುಖ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕು ತೊಟ್ಟವಾಡಿಯಲ್ಲಿ ಮಾರಯ್ಯ- ಚನ್ನಬಸವಮ್ಮ ದಂಪತಿಗೆ 1951ರಲ್ಲಿ ಜನಿಸಿದ ನಂಜುಂಡಸ್ವಾಮಿ ಹದಿಹರೆಯದಲ್ಲೇ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಹೋಟೆಲ್‌ಗಳಲ್ಲಿ ಸಪ್ಲೈಯರ್, ಗಿಡಗಳಿಗೆ ನೀರು ಹಾಕುವ ದಿನಗೂಲಿಯಾಗಿ ಕೆಲಸ ಮಾಡುತ್ತ, ಎಸ್ಸೆಸ್ಸೆಲ್ಸಿ ಪೂರೈಸಿ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕ್ಕದೊಂದು ಕೆಲಸ ಗಿಟ್ಟಿಸಿದರು. ಅವರ ಜೀವನದ ಬಹುದೊಡ್ಡ ತಿರುವು ಇದು. ಆಸ್ಪತ್ರೆಯಲ್ಲಿ ಹಾಡು, ಭಾಷಣ, ಜಾನಪದ ತರಬೇತಿಗಳನ್ನು ಆಯೋಜಿಸುತ್ತಿದ್ದ ತೊಟ್ಟವಾಡಿ, ಆಸ್ಪತ್ರೆ ಹೊರಗೆ ಅನಕೃ, ಮ.ರಾಮಮೂರ್ತಿ ನೇತೃತ್ವದಲ್ಲಿ ಕನ್ನಡ ಚಳವಳಿಯಲ್ಲಿ ಭಾಗವಹಿಸುತ್ತಿದ್ದರು. ಆಗಲೇ ನಾಟಕ ಅವರನ್ನು ಬಹುವಾಗಿ ಆಕರ್ಷಿಸಿತು. ರಚನೆ, ಸಂಘಟನೆ, ಆಯೋಜನೆಯ ಹಾದಿಯಲ್ಲಿ ಮತ್ತೆರಡು ರಂಗತಂಡ ಕಟ್ಟಿ ರಾಜ್ಯ ಸುತ್ತಿದರು.

ತುಳು ಭಾಷೆಯ ಮಹತ್ವದ ಸಾಹಿತಿ ಡಿ.ಕೆ.ಚೌಟ, ಪ್ರಖ್ಯಾತ ಹೃದಯರೋಗ ತಜ್ಞ ಡಾ.ಸಿ.ಎನ್.ಮಂಜುನಾಥ ಅವರ ಬೆಂಬಲ ನಂಜುಂಡಸ್ವಾಮಿ ರಂಗವಲಯಕ್ಕೆ ಮತ್ತಷ್ಟು ಚೇತನ ನೀಡಿತು. ನಿಂತಲ್ಲಿ ನಿಲ್ಲಲಾರದ, ಕೂತಲ್ಲಿ ಕೂಡಲಾರದ ತೊಟ್ಟವಾಡಿ, ‘ಪಚ್ಚೆತೆನೆ’, ‘ದರ್ಬೆ’, ‘ಸಾಧಕರು’, ‘ಹವಳ‘ ಮುಂತಾದ ಗ್ರಂಥಗಳನ್ನು ಸಂಪಾದಿಸಿದರು. ನಾಡಚೇತನ, ನಾಡರತ್ನ, ರಂಗಚೇತನ ಪ್ರಶಸ್ತಿ ಸ್ಥಾಪಿಸಿ ರಂಗದ ಹಲವು ತೆರೆಮರೆಯ ಪ್ರತಿಭಾಂತರನ್ನು ಗೌರವಿಸಿದರು.

ನಂಜುಂಡಸ್ವಾಮಿ ಅವರ ರಂಗಪರಿಚಾರಿಕೆಗೆ ಕರ್ನಾಟಕ ನಾಟಕ ಅಕಾಡೆಮಿ, ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಕೇಂದ್ರ ಸರ್ಕಾರದ ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು