ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಮಾರುಗಳ ಶಿಲ್ಪಿ ಕುಟುಂಬ

ಮೂರು ತಲೆಮಾರುಗಳ ಕಲಾ ಕುಟುಂಬ
Last Updated 30 ಜೂನ್ 2020, 3:51 IST
ಅಕ್ಷರ ಗಾತ್ರ

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಮಾನಪ್ಪ ಸುತಾರವರಿಗೆ 75 ವರ್ಷ. ಆದರೆ, ಈಗಲೂ ಅವರು ಒಂದು ಕೈಯಲ್ಲಿ ಸುತ್ತಿಗೆ, ಮತ್ತೊಂದು ಕೈಯಲ್ಲಿ ಉಳಿ ಹಿಡಿದುಕೊಂಡು ಸುಂದರ ಕಲಾಕೃತಿಗಳನ್ನೂ ಕೆತ್ತುತ್ತಲೇ ಇರುತ್ತಾರೆ. ಐದಾರು ದಶಕಗಳ ಅವರ ಕಲಾಸೇವೆಯಲ್ಲಿ ಸಾವಿರಾರು ಶಿಲ್ಪಗಳು ಅರಳಿವೆ.

ಸುತಾರ ಅವರ ಕುಟುಂಬ ಸುಮಾರು 1857 ರಿಂದ ಈ ಶಿಲ್ಪ ಕಲಾವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದೆ. ಈ ಕುಟುಂಬದ ಕಲಾವಿದರು ದೇವರ ಮೂರ್ತಿಗಳ ತಯಾರಿಕೆಯಲ್ಲಿ ಸಿದ್ಧಹಸ್ತರು. ಮಾನಪ್ಪ ಅವರೂ ಐದಾರು ದಶಕಗಳಿಂದ ಇಂಥದ್ದೇ ವೈವಿಧ್ಯಮಯ ಶಿಲ್ಪಗಳನ್ನು ತಯಾರಿಸಿಕೊಂಡು ಬಂದಿದ್ದಾರೆ.

ಮಾನಪ್ಪ ಅವರು ಏಳನೇ ತರಗತಿಗೆ ಓದನ್ನು ಮೊಟಕುಗೊಳಿಸಿ, ತಂದೆಯವರೊಂದಿಗೆ ಶಿಲ್ಪಕಲಾ ವೃತ್ತಿಯನ್ನೇ ಮುಂದುವರಿಸಿದರು. ನಂತರ, ತಮ್ಮ ಮಕ್ಕಳನ್ನೂ ಇದೇ ಕಲಾ ಕೈಂಕರ್ಯಕ್ಕೆ ಅಣಿಗೊಳಿಸಿದ್ದಾರೆ. ಸಾಂಪ್ರದಾಯಿಕ ಶಿಲ್ಪ ತಯಾರಿಕೆಯಲ್ಲಿ ತಜ್ಞರಾಗಿರುವ ಇವರು, ಆ ಜ್ಞಾನವನ್ನು ಮುಂದಿನ ತಲೆಮಾರಿಗೂ ಧಾರೆ ಎರೆದಿದ್ದಾರೆ.

ಕರಿ ಮೋಡಿಕಲ್ಲಿನ ವಿಗ್ರಹ

ಮಾನಪ್ಪ ಅವರು, ಹೆಚ್ಚಾಗಿ ಕರಿ ಮೋಡಿ ಕಲ್ಲಿನಿಂದ ವಿಗ್ರಹಗಳನ್ನು ತಯಾರಿಸುತ್ತಾರೆ. ಈ ಕಲ್ಲಿನಲ್ಲಿ ತಯಾರಿಸುವ ವಿಗ್ರಹಗಳಿಗೆ ಬಲು ಬೇಡಿಕೆ ಇದೆ.ಮೈಸೂರು ಭಾಗದಿಂದ(ಹೆಗ್ಗಡದೇವನಕೋಟೆ) ಕಲ್ಲುಗಳನ್ನು ತರಿಸಿಕೊಳ್ಳುತ್ತಾರೆ. ಮೊದಲು ಬಾಗಲಕೋಟೆ, ಕಾಗಲಗುಮ್ಮ ಕಡೆಯಿಂದ ತರಿಸುತ್ತಿದ್ದರಂತೆ. ಈಗ ತಾಂತ್ರಿಕ ಕಾರಣಗಳಿಂದ, ಅಲ್ಲಿಂದ ಕಲ್ಲು ತರಿಸುತ್ತಿಲ್ಲ.

ಒಂದೊಂದು ಕಲ್ಲಿನ ಮೂರ್ತಿ ಕೆತ್ತನೆಗೆ ನಾಲ್ಕು ತಿಂಗಳು ಬೇಕಾಗುತ್ತದೆ. ಕೆಲವೊಂದು ಮೂರ್ತಿಗಳನ್ನು ಒಂದು ವರ್ಷದ ಕಾಲಾವಧಿಯಲ್ಲಿ ಕೆತ್ತಿದ ಉದಾಹರಣೆಯೂ ಇದೆಯಂತೆ.

ಅಪ್ಪನ ಕುಸುರಿ ಕೆಲಸಕ್ಕೆ ಹಿರಿಯ ಮಗ ಶಶಿಧರ್ ಜತೆಯಾಗಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೊಮಾ ಪೂರೈಸಿರುವ ಅವರು, ಈ ಹಿಂದೆ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿದ್ದರು. ಆ ಕೆಲಸ ಬಿಟ್ಟು ಊರಿಗೆ ಬಂದು ತಂದೆಯೊಂದಿಗೆ ಶಿಲ್ಪಗಳನ್ನು ಕೆತ್ತುವ ಕೆಲಸಕ್ಕೆ ಕೈಜೋಡಿಸಿದ್ದಾರೆ. ಇವರೊಂದಿಗೆ ಇನ್ನಿಬ್ಬರು ಪುತ್ರರಾದ ಚಂದ್ರಶೇಖರ್ ಮತ್ತು ಪ್ರಮೋದ್, ಅಳಿಯ ನಾರಾಯಣ ಅವರು ಕೆತ್ತನೆ ಕೆಲಸದಲ್ಲಿ ಜತೆಯಾಗುತ್ತಾರೆ. ಒಟ್ಟಾರೆ, ಇಡೀ ಕುಟುಂಬವೇ ಶಿಲ್ಪಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತದೆ.

ಆಧುನಿಕ ತಂತ್ರಜ್ಞಾನ

ಆರಂಭದಲ್ಲಿ ಉಳಿ–ಸುತ್ತಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ಮಾನಪ್ಪ ಅವರಿಗೆ, ಮಕ್ಕಳು ಜತೆಯಾದ ಮೇಲೆ ಯಂತ್ರಗಳನ್ನು ಬಳಸಲು ಆರಂಭಿಸಿದ್ದಾರೆ. ಇವರು ಕಲ್ಲಿನಲ್ಲಿ ಕೆತ್ತಿರುವ ಇಪ್ಪತ್ತು ಅಡಿಯ ಬೃಹತ್‌ ಮೂರ್ತಿಯೊಂದನ್ನು ಕಂಡು ಕೆಲವರು ‘ಇದೇನು ಕಂಚಿನ ಶಿಲ್ಪವೇ’ ಎಂದು ಕೇಳಿದ್ದರಂತೆ. ಇದು ಮಾನಪ್ಪ ಕುಟುಂಬದ ಶಿಲ್ಪಕಲೆಯ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ.

ಮಾನಪ್ಪ ಕುಟುಂಬ ತಯಾರಿಸಿದ ಶಿಲ್ಪಗಳು ರಾಜ್ಯದ ಬಳ್ಳಾರಿ, ಹೂವಿನ ಹಡಗಲಿ, ಕೊಪ್ಪಳ, ಗಂಗಾವತಿ, ಹಾವೇರಿ, ಸಿಂಧನೂರು, ಬೆಂಗಳೂರು, ಕಲಬುರ್ಗಿ ಜಿಲ್ಲೆಗಳ ಹಲವು ದೇಗುಲಗಳಲ್ಲಿ ಪತ್ರಿಷ್ಠಾನಗೊಂಡಿವೆ. ಈಗಲೂ ಶಿಲ್ಪಗಳ ತಯಾರಿಕೆಗಾಗಿ ಗೋವಾ, ಮಹಾರಾಷ್ಟ್ರ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಂದ ಬೇಡಿಕೆ ಇದೆ. ‘ಈಗ ಲಾಕ್‌ಡೌನ್ ಅವಧಿಯಲ್ಲೂ ಫೋನ್‌ ಮೂಲಕ ಆರ್ಡರ್‌ಗಳು ಬರ್ತಿವೆ. ಆದರೆ, ಕಚ್ಚಾ ವಸ್ತುಗಳು ಸಿಗುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಮಾನಪ್ಪ ಅವರ ಪುತ್ರ ಶಶಿಧರ್ .‌

ಅಭಿರುಚಿಗೆ ತಕ್ಕಂತೆ ಶಿಲ್ಪಗಳು

ಗ್ರಾಹಕರ ಬೇಡಿಕೆ, ಅಭಿರುಚಿಗೆ ತಕ್ಕಂತೆ ಶಿಲ್ಪಗಳನ್ನು ತಯಾರಿಸಿಕೊಡುವ ಮಾನಪ್ಪ, ಪ್ರತಿ ವರ್ಷ ಗಣೇಶ ಚೌತಿಯಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಿಕೊಡುತ್ತಾರೆ. ಶಿಲ್ಪಕಲೆಯ ಜತೆಗೆ ಪೇಂಟಿಂಗ್‌ನಲ್ಲೂ ಪರಿಣತಿ ಪಡೆದಿರುವ ಈ ಕುಟುಂಬ, ಕಟ್ಟಿಗೆಯಲ್ಲಿ ತಯಾರಿಸುವ ದ್ಯಾಮವ್ವನ ಮೂರ್ತಿ ಹಾಗೂ ಗೊಂಬೆಗಳಿಗೆ ಆಕರ್ಷಕವಾಗಿ ಪೇಂಟಿಂಗ್ ಮಾಡುತ್ತಾರೆ.
ಇತ್ತೀಚೆಗೆ ಮಾನಪ್ಪ ಅವರ ಮನೆಯ ಅಂಗಳದಲ್ಲಿ ಹೊಸ ತಲೆಮಾರಿನ ಶಿಲ್ಪಗಳೂ ತಯಾರಾಗುತ್ತಿವೆ. ಅದರಲ್ಲಿ ಹಲವು ರಾಜಕೀಯ ನೇತಾರರು, ವೀರಯೋಧರ ಮೂರ್ತಿಗಳೂ ಸೇರಿವೆ.‌‌

ಶಿಲ್ಪಕಲೆಯಲ್ಲಿ ಇಷ್ಟೆಲ್ಲ ಸೇವೆ ಸಲ್ಲಿಸಿರುವ ಮಾನಪ್ಪ ಅವರನ್ನು ಸ್ಥಳೀಯವಾಗಿ ಹಲವಾರು ಯುವಕ ಮಂಡಳಗಳು ಗೌರವಿಸಿವೆ. ಆದರೆ, ರಾಜ್ಯಮಟ್ಟದಲ್ಲಿ ಇವರನ್ನು ಗುರುತಿಸುವ ಕೆಲಸವಾಗಿಲ್ಲ. ಇದೇ ನೋವಿನ ಸಂಗತಿ ಎನ್ನುತ್ತಾರೆ ಸ್ಥಳೀಯರು. ಶಿಲ್ಪಿಯ ಸಂಪರ್ಕಕ್ಕೆ: 9482180816 (ಶಶಿಧರ)

****

ಸರ್ಕಾರ ನೆರವು ನೀಡಿದರೆ, ಈ ಶಿಲ್ಪ ಕೆತ್ತನೆಯ ಕೌಶಲ ಕೇಂದ್ರ ತೆರೆದು, ಆಸಕ್ತರಿಗೆ ತರಬೇತಿ ನೀಡಲು ಸಿದ್ಧರಿದ್ದೇವೆ. ಈ ಕಲೆ ಉಳಿಯಬೇಕು, ಮುಂದಿನ ಪೀಳಿಗೆಗೂ ತಿಳಿಸಬೇಕು. ಇನ್ನಷ್ಟು ಮಂದಿಗೆ ಉದ್ಯೋಗ ಸಿಗುವಂತಾಗಬೇಕು ಎಂಬುದು ನಮ್ಮ ಕುಟುಂಬದ ಬಯಕೆ

– ಶಶಿಧರ ಸುತಾರ

(ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT