ಜಾತಿ, ಬಣ್ಣವನ್ನು ಮೀರುವ ವರ ಬೇಕು

7
maduve, gulmohar

ಜಾತಿ, ಬಣ್ಣವನ್ನು ಮೀರುವ ವರ ಬೇಕು

Published:
Updated:

ಎರಡೂ ಕುಟುಂಬದವರು ಪರಸ್ಪರ ನೋಡಿ ಒಪ್ಪಿಗೆ ಸೂಚಿಸಿದರೆ ಮದುವೆ ಮುಗಿದು ಹೋಗುತ್ತದೆ ಎಂದು ನಾನು ತಿಳಿದುಕೊಂಡಿದ್ದೆ. ಆದರೆ ನನ್ನ ವಿಚಾರದಲ್ಲಿ ವಿಧಿ ಬೇರೆಯೆ ಆಟವಾಡುತ್ತಿದೆ. ಸರ್ಕಾರಿ ಉದ್ಯೋಗ ಸಿಕ್ಕಿದ ನಂತರ ಮನೆಯವರು ವರನ ಹುಡುಕಾಟದಲ್ಲಿ ತೊಡಗಿದರು. ಮನೆಗೆ ಬಂದ ವರನ ಕಡೆಯವರೆಲ್ಲಾ ಹೇಳುವ ಮಾತು ಒಂದೇ ‘ಅವಳು ಕಪ್ಪು, ಕುಳ್ಳಗಿದ್ದಾಳೆ’.

ನಾನು ಮದುವೆ ಆಗಲೇಬಾರದೆಂದು ನಿರ್ಧರಿಸಿದೆ. ಮೊನ್ನೆ ಇದ್ದಕಿದ್ದಂತೆ ಒಂದು ಹುಡುಗ ಕರೆ ಮಾಡಿ ನೇರವಾಗಿ ವಿಷಯಕ್ಕೆ ಬಂದ. ‘ಹೇಗೋ ನಿಮ್ಮ ನಂಬರನ್ನು ಗಳಿಸಿಕೊಂಡಿದೇನೆ. ನನ್ನ ಕಲ್ಪನೆಯ ಹುಡುಗಿ ನೀನೇ, ಜಾತಿಯೂ ಒಂದೇ. ಹಾಗಾಗಿ ಯಾವ ತೊಂದರೆಯೂ ಇಲ್ಲ. ಮದುವೆ ಆಗ್ತೀನಿ’ ಎಂದಾಗ ಆಶ್ಚರ್ಯ ಮತ್ತು ಆತಂಕ. ‘ನೋಡಿ ನನ್ನ ಬಗ್ಗೆ, ನನ್ನ ಬಣ್ಣದ ಬಗ್ಗೆ ನಿಮ್ಮ ಮನೆಯ ಸದಸ್ಯರಿಗೆ ತಿಳಿಸಿ. ಒಪ್ಪಿದರೆ ಮನೆಗೆ ಬನ್ನಿ’ ಎಂದು ಹೇಳಿದೆ.

ಅದಕ್ಕವನು ‘ನಾನು ಬಣ್ಣದ ಕಲ್ಪನೆಯನ್ನು ಮೀರಿದವನು, ನನ್ನ ಪ್ರಕಾರ ಮದುವೆ ಅಂದರೆ ಬಣ್ಣ ಅಲ್ಲ. ಎರಡು ಮನಸ್ಸುಗಳ ಮಿಲನ’ ಎಂದಾಗ ನನ್ನ ಕನಸಿನ ಮದುವೆ ಮತ್ತೆ ಚಿಗುರೊಡೆಯಿತು. ವರನ ಮನೆಯಿಂದ ಹದಿನೈದು ಮಂದಿ ನನ್ನನ್ನು ‘ನೋಡಲು’ ಬಂದರು. ನನ್ನ ಮುಖ ನೋಡಿದ ತಕ್ಷಣ ಅವರ ಮುಖಗಳು ಸಪ್ಪಗಾದವು. ಆದರೆ ಆತಂಕಗೊಳ್ಳದೆ ಆ ಹುಡುಗನ ಭರವಸೆಗಳೇ ಖುಷಿಯಿಂದ ಓಡಾಡುವಂತೆ ಮಾಡಿದವು. 

ಆದರೆ ಆಗಿದ್ದೇ ಬೇರೆ. ‘ನೌಕರಿಯ ಆಸೆಗೆ ಬಿದ್ದು ಎಂತಹ ಹುಡುಗನಿಗೆ ಎಂತಹ ಹುಡುಗೀನ ಕಟ್ಟಿದ್ದಾರೆ ನೋಡು ಎಂದು ಜನ ನಾಳೆ ಆಡಿಕೊಳ್ಳುತ್ತಾರೆ, ಈ ಹುಡುಗಿ ನಮ್ಮ ಮನೆಗೆ ಒಪ್ಪುವುದಿಲ್ಲ’ ಎಂದು ಹೇಳಿಬಿಟ್ಟರು! ಹಾಗಾಗಿ, ನನ್ನ ಬಣ್ಣವನ್ನು ಒಪ್ಪಿಕೊಂಡು, ಜಾತಿಯನ್ನು ಮೀರಿ ಮದುವೆಯಾಗುವ ಮಾನವೀಯ ಗುಣಗಳ ಹುಡುಗನನ್ನು ಮದುವೆಯಾಗಬೇಕು ಎಂದು ನಾನು ತೀರ್ಮಾನಿಸಿದ್ದೇನೆ.

ರಾಧಾದೇವಿ, ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !