ನರಭಕ್ಷಕನ ಸುತ್ತ; ಮುಗಿಯದ ವೃತ್ತ

ಗುರುವಾರ , ಮಾರ್ಚ್ 21, 2019
30 °C

ನರಭಕ್ಷಕನ ಸುತ್ತ; ಮುಗಿಯದ ವೃತ್ತ

Published:
Updated:

2013ರ ವರ್ಷಾಂತ್ಯಕ್ಕೆ ಐದು ದಿನಗಳಷ್ಟೇ ಬಾಕಿಯಿತ್ತು. ಅಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಮದ್ದೂರು ಕಾಲೊನಿ ಮೌನಕ್ಕೆ ಜಾರಿತ್ತು. ಈ ಸೋಲಿಗರ ಹಾಡಿಯ ದನಗಾಹಿ ಜವರಯ್ಯ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ವಾಹನಗಳು ಹಾಡಿಯತ್ತ ದಾಂಗುಡಿ ಇಟ್ಟಿದ್ದವು. ಒಂದೆಡೆ ಸಂತ್ರಸ್ತ ಕುಟುಂಬದ ಸದಸ್ಯರ ಆಕ್ರಂದನ. ಮತ್ತೊಂದೆಡೆ ಕಾಡಂಚಿನ ಗ್ರಾಮಸ್ಥರ ಆಕ್ರೋಶ. ಹುಲಿಗೆ ‘ನರಭಕ್ಷಕ’ನ ಪಟ್ಟ ನಿರಾಯಾಸವಾಗಿ ಲಭಿಸಿತ್ತು.

ಅರಣ್ಯದ ಗಡಿ ಇರುವುದು ಹಾಡಿಗೆ ಒಂದು ಕಿ.ಮೀ. ದೂರದಲ್ಲಿಯೇ. ಅದಾಗಲೇ, ಹುಲಿಯ ಸೆರೆಗೆ ಇಲಾಖೆಯ ಸಿಬ್ಬಂದಿ ಕಸರತ್ತಿನಲ್ಲಿ ಮುಳುಗಿದ್ದರು. ಮೈಸೂರಿನಿಂದ ಕಬ್ಬಿಣದ ಪಂಜರ ಹೊತ್ತ ಲಾರಿ ಅಧಿಕಾರಿಗಳ ಆಜ್ಞೆಗಾಗಿ ರಸ್ತೆಬದಿ ಕಾದುನಿಂತಿತ್ತು. ಫೋಟೊಗ್ರಾಫರ್‌ ಜೊತೆಗೆ ಹುಲಿ ದಾಳಿ ನಡೆಸಿದ ಸ್ಥಳದತ್ತ ಹೊರಟೆ. ಗಿರಿಜನರು ಕಾಡಿಗೆ ತೆರಳಲು ಬಳಸುವ ಆ ಕಾಲುದಾರಿ ಇಕ್ಕಟ್ಟಾಗಿರಲಿಲ್ಲ. ಅಲ್ಲಿ ಹುಲಿಯ ಹೆಜ್ಜೆಗುರುತು ಇರಲಿಲ್ಲ. ಅದು ಮನದಲ್ಲಿ ಕೊಂಚ ಧೈರ್ಯ ತರಿಸಿತ್ತು. ಮುಂದೆ ಕಾಡು ಹೆಚ್ಚು ದಟ್ಟವಾಗುತ್ತಾ ದಾರಿ ಕಿರಿದಾಗತೊಡಗಿತು.

ಆನೆಕಂದಕ ದಾಟಿ ಕಾಡಿನೊಳಕ್ಕೆ ಮೆಲ್ಲನೆ ಹೆಜ್ಜೆಇಟ್ಟೆವು. ರಣಬಿಸಿಲು ಮೂಡಿಸಿದ್ದ ನೆರಳು, ಬೆಳಕಿನಾಟಗಳೆಲ್ಲ ಹುಲಿಯ ಪಟ್ಟೆಗಳಂತೆ ಭಾಸವಾಗತೊಡಗಿತು. ಜವರಯ್ಯನ ಮೇಲೆ ದಾಳಿ ನಡೆಸಿದ ಹುಲಿ ನಮ್ಮನ್ನೇ ಗಮನಿಸುತ್ತಿರುವ ಅನುಭವವಾಗತೊಡಗಿತು. ಭಯದಿಂದ ದಿಕ್ಕೆಟ್ಟಿದ್ದ ಸುಪ್ತಪ್ರಜ್ಞೆಗೆ ಎಲ್ಲೆಂದರಲ್ಲಿ ವ್ಯಾಘ್ರ ಕಾಣತೊಡಗಿತು. ಅನತಿ ದೂರದಲ್ಲಿದ್ದ ಮುತ್ತುಗದ ಮರದ ಕೆಳಗಡೆ ರಕ್ತಸಿಕ್ತ ಅಂಗಿ, ಪಂಚೆ ಬಿದ್ದಿತ್ತು. ಹುಲಿಯ ದಾಳಿಯನ್ನು ಪುಷ್ಟೀಕರಿಸಲು ನಮಗೆ ಬಹಳ ಸಮಯ ಹಿಡಿಯಲಿಲ್ಲ.

ಮರುದಿನ ಇಲಾಖೆಯ ಬೋನಿಗೆ ಹುಲಿ ಬಿದ್ದಿತ್ತು. ಅದು ದೈಹಿಕವಾಗಿ ಸಂಪೂರ್ಣ ಕುಗ್ಗಿತ್ತು. ತನ್ನ ಬಂಧನವನ್ನು ಪ್ರತಿಭಟಿಸಲು ಅದಕ್ಕೆ ಹೆಚ್ಚಿನ ತ್ರಾಣವಿರಲಿಲ್ಲ. ಒಂದೆರಡು ದಿನಗಳಲ್ಲಿ ಅದು ಬಂಧನದಲ್ಲಿಯೇ ಸಾವನ್ನಪ್ಪಿತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯಲ್ಲಿ ಜವರಯ್ಯನ ಮಾಂಸದ ತುಂಡುಗಳು ಇರಲಿಲ್ಲ. ಹಾಗಾದರೆ, ಈ ಹುಲಿ ಆತನನ್ನು ಬೇಟೆಯಾಗಿದ್ದಕ್ಕೆ ಕಾರಣವೇನು?

ಮರಣೋತ್ತರ ಪರೀಕ್ಷೆಯ ವರದಿ ಮತ್ತಷ್ಟು ವಿವರಗಳನ್ನು ಹೊರಹಾಕಿತು. ಕಾರಣಾಂತರಗಳಿಂದ ಅದರ ಬಾಯಿ ಸಂಪೂರ್ಣ ಹುಣ್ಣಾಗಿತ್ತು. ಅದು ಎಷ್ಟು ತೀವ್ರವಾಗಿದ್ದು ಎಂದರೆ ಏನನ್ನೂ ತಿನ್ನಲಾಗದ ಪರಿಸ್ಥಿತಿಯಲ್ಲಿತ್ತು. ಹದಿನೈದು ಇಪ್ಪತ್ತು ದಿನಗಳಿಂದ ಅದು ಏನನ್ನೂ ತಿಂದಿರಲಿಲ್ಲ. ದೈಹಿಕವಾಗಿ ಕೃಶಗೊಂಡಿದ್ದರಿಂದ ಮೊಲದಂತಹ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡುವ ಪರಿಸ್ಥಿತಿಯಲ್ಲಿ ಅದು ಇರಲಿಲ್ಲ. ಮನುಷ್ಯನನ್ನು ಸೇರಿದಂತೆ ಬದುಕನ್ನು ಜೀವಿಗಳು ಸುಲಭವಾಗಿ ತ್ಯಜಿಸಲು ಸಾಧ್ಯವಿಲ್ಲವೇನೋ? ಆ ಹುಲಿಯು ಸಹ ಹಸಿವು ನೀಗಿಸಿಕೊಂಡು ಬದುಕುವ ಪ್ರಯತ್ನದಲ್ಲಿ ಜವರಯ್ಯನನ್ನು ಬೇಟೆಯಾಡಿತ್ತು.

ಮಾಂಸಖಂಡಗಳನ್ನು ಹರಿದಿದ್ದರೂ ಏನನ್ನೂ ಭಕ್ಷಿಸಲು ಸಾಧ್ಯವಾಗಿರಲಿಲ್ಲ. ಇದು ತೀರಾ ಆಕಸ್ಮಿಕ ಘಟನೆ. ಬಹುಶಃ ಅಂದು ಜವರಯ್ಯ ಅದರ ದಾಳಿಗೆ ತುತ್ತಾಗದಿದ್ದರೆ ಇನ್ನೆರಡು ದಿನಗಳಲ್ಲಿ ಅದಾಗಿಯೇ ಅಸುನೀಗುತ್ತಿತ್ತು ಎನ್ನುವುದನ್ನು ವೈದ್ಯರ ವರದಿ ಸಾರಿತ್ತು.  

ಹುಲಿಗಳು ನರಭಕ್ಷಕಗಳೇ?

ಕಾಡಿನ ನಿತ್ಯದ ವ್ಯವಹಾರಗಳನ್ನು, ವಹಿವಾಟುಗಳನ್ನು ಗಮನಿಸಿದಾಗ ಮನುಷ್ಯ ಕಾಡಿನಲ್ಲಿ ಪರಕೀಯ ವಸ್ತು. ಯಾವ ಜೀವಿಗಳಿಗೂ ಆತ ಬೇಡದ ಪ್ರಾಣಿ. ಕಾನನದಲ್ಲಿ ಅವನ ವಾಸ್ತವ್ಯವೇ ಬಹುಶಃ ಅವುಗಳ ಬದುಕಿಗೆ ಕಿರಿಕಿರಿ ಉಂಟುಮಾಡಬಹುದು. 

ಕಾಡಿನಲ್ಲಿ ಮನುಷ್ಯನ ವಾಸ್ತವವನ್ನು ಗಮನಿಸಿದಾಗ ಹುಲಿಗಳು ಸಹ ಸಾಮಾನ್ಯವಾಗಿ ದೂರ ಸರಿಯುತ್ತವೆ. ಏಕೆಂದರೆ ಮನುಷ್ಯ ಅವುಗಳ ಆಹಾರದ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಒಂದು ಪಕ್ಷ ಮಾನವನನ್ನು ಆಹಾರವಾಗಿ ಹುಲಿಗಳು ಪರಿಗಣಿಸಿದ್ದರೆ ಕಾಲಾಂತರದಿಂದ ಕಾಡಿನಲ್ಲಿಯೇ ಜೀವಿಸುತ್ತ ಬಂದಿರುವ ಆದಿವಾಸಿಗಳಾಗಲಿ, ಬುಡಕಟ್ಟು ಜನರಾಗಲಿ ಇಂದಿಗೆ ಕಣ್ಮರೆಯಾಗಬೇಕಿತ್ತು ಎಂಬುದು ತೀರ ಸರಳವಾದ ತರ್ಕ. 

ಹಾಗಾದರೆ ಸ್ವಾತಂತ್ರ್ಯಪೂರ್ವದಲ್ಲಿ ದಾಖಲಾದ ನರಭಕ್ಷಕ ಹುಲಿಗಳ ಕಥೆಗಳೆಲ್ಲಾ ಕಾಲ್ಪನಿಕವೇ? ಹಿಮಾಲಯ ಪರ್ವತದ ಚಂಪಾವತ್‌ ಅರಣ್ಯದಲ್ಲಿ ಹೆಣ್ಣುಹುಲಿ 436 ಜನರನ್ನು ಕೊಂದ ಜೆಮ್‌ ಕಾರ್ಬೆಟ್‌ ಕಥೆ ಸುಳ್ಳೇ? ಚರಿತ್ರೆಯಲ್ಲಿ ದಾಖಲಾದ ಅನೇಕ ಘಟನೆಗಳೆಲ್ಲಾ ಈ ಮಾದರಿವೇ?

ಈ ಎಲ್ಲ ಪ್ರಶ್ನೆಗಳು ಎದುರಾಗುವುದು ಸಹಜ. ಅದಕ್ಕಾಗಿ ನಾವು ಈ ಎಲ್ಲ ಘಟನೆಗಳ ಲಭ್ಯವಿರುವ ಮಾಹಿತಿ ಆಧರಿಸಿ, ನಿಖರವಾದ ತನಿಖೆಗೆ ಒಳಪಡಿಸಬೇಕು. 

ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸಲು ಆರಂಭಿಸಿದ ಬಳಿಕ ಅವರಿಗೆ ಮನರಂಜನೆಗಾಗಿ ಕ್ಲಬ್‌ಗಳಾಗಲಿ ಅಥವಾ ಕ್ರೀಡೆಗಳಾಗಲಿ ಇರಲಿಲ್ಲ. ಆದರೆ, ಬೇಟೆಯಾಡುವುದು ಅವರ ಸಂಸ್ಕೃತಿಯಲ್ಲಿ ಕ್ರೀಡೆಯ ಭಾಗವಾಗಿತ್ತು. ಅವರ ಈ ಕ್ರೀಡೆಗೆ ಭಾರತ ದೊಡ್ಡ ಮೈದಾನವಾಯಿತು. ವಿಸ್ತಾರವಾದ ಕಾಡು ಮತ್ತು ಕಾಡುಪ್ರಾಣಿಗಳಿಗೆ ಕೊರತೆ ಇರಲಿಲ್ಲ. ರಜಾದಿನಗಳನ್ನು ಕಳೆಯಲು, ಆಗಮಿಸಿದ ಅತಿಥಿಗಳಿಗೆ ಮನರಂಜನೆ ಒದಗಿಸಲು ಬೇಟೆಯೇ ಅವರಿಗೆ ನಿತ್ಯದ ಕಸುಬು ಆಯಿತು. ಈ ಪ್ರಯತ್ನದಲ್ಲಿ ಅವರ ಗುಂಡೇಟುಗಳಿಂದ ಸತ್ತ ಅನೇಕ ಹುಲಿಗಳ ಜೊತೆಗೆ ಹಲವು ಗಾಯಗೊಂಡು ಕಾಡಿನಲ್ಲಿ ಕಣ್ಮರೆಯಾಗಿದ್ದು ನಿಜ.

ಅವರ ಗುಂಡೇಟುಗಳಿಂದ ಗಾಯಗೊಂಡ ಹುಲಿ, ಚಿರತೆಗಳಿಗೇನು ಕೊರತೆ ಇರಲಿಲ್ಲ. ಇವುಗಳಲ್ಲಿ ಬಹುತೇಕ ಪ್ರಾಣಿಗಳು ತೀವ್ರಪೆಟ್ಟು ತಿಂದು ಕಾಡಿನ ಯಾವುದೋ ಮೂಲೆಯಲ್ಲಿ ಅಸುನೀಗಿದವು. ಆದರೆ, ಅಲ್ಪಸ್ವಲ್ಪ ಗಾಯಗಳಿಂದ ಊನುಗೊಂಡು ಬದುಕಿದ ಪ್ರಾಣಿಗಳು, ಬದುಕುಳಿಯುವ ಕೊನೆಯ ಪ್ರಯತ್ನದಲ್ಲಿ ಮನುಷ್ಯನನ್ನು ಬೇಟೆಯಾಡಿದ್ದು ನಿಜ. ಕಾರಣ, ಅವುಗಳಿಗೆ ಕನಿಷ್ಠ ಮೊಲಗಳನ್ನೂ ಬೆನ್ನಟ್ಟಿ ಕೆಡವುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರ ಪರಿಣಾಮ. ಜೀವ ಅಷ್ಟು ಸುಲಭವಾಗಿ ದೇಹ ತ್ಯಜಿಸಲು ಒಪ್ಪುವುದಿಲ್ಲ. ಜೀವಿಸುವಂತೆ ಪ್ರೇರೇಪಿಸುತ್ತಲೇ ಇರುತ್ತದೆ. ಅದಕ್ಕಾಗಿ ಯಾವ ಪ್ರಯತ್ನಕ್ಕಾದರೂ ಹಿಂಜರಿಯುವುದಿಲ್ಲ. 

ಇದರ ಜೊತೆಗೆ ಬ್ರಿಟಿಷರು ಭಾರತಕ್ಕೆ ಬಂದೂಕು ಸಂಸ್ಕೃತಿಯನ್ನು ಪರಿಚಯಿಸಿದರು. ರಾಜಮಹಾರಾಜರು ಮತ್ತು ಉಳ್ಳವರಿಗೆ ಕೋವಿ ಹಿಡಿದು ಕಾಡಿನಲ್ಲಿ ಅಡಗಿ ಕುಳಿತು ಹುಲಿಗಳನ್ನು ಕೊಲ್ಲುವುದು ಸಮಾಜದಲ್ಲಿ ಸಾಧನೆಯ ಪ್ರತಿಷ್ಠೆಯ ವಿಷಯವಾಗಿ ಕಂಡಿತು. ಈ ಕಣಕ್ಕೆ ಇಳಿದೆ ಎಲ್ಲರೂ ಗುರಿಕಾರರಾಗಿರಲಿಲ್ಲ. ಅವರ ಹಾರಿಸಿದ ಗುಂಡುಗಳು ಗುರಿ ತಲುಪಲಿಲ್ಲ. ಬದಲಾಗಿ ಪ್ರಾಣಿಗಳ ಯಾವುದೋ ಅಂಗಾಂಗಗಳನ್ನು ಘಾಸಿಗೊಳಿಸಿದವು. ಈ ಎಲ್ಲಾ ಕಾರಣದಿಂದ ಬೇಟೆಯ ಸಾಮರ್ಥ್ಯ ಕಳೆದುಕೊಂಡ ಕೆಲವು ಹುಲಿಗಳು, ಚಿರತೆಗಳು ಮನುಷ್ಯನ ಮೇಲೆ ಎರಗಿದ್ದು ದಿಟ.

ನಂತರ ಕಾರ್ಬೆಟ್‌ ಮತ್ತು ಕೆನತ್‌ ಆ್ಯಂಡರ್‌ಸನ್ ಬರೆದ ಬರಹಗಳಲ್ಲಿ ಆ ಹುಲಿಗಳು ನರಭಕ್ಷಕನ ವೇಷತೊಟ್ಟವು. ಅವುಗಳನ್ನು ಕೊಂದವರು, ಕಥೆಯನ್ನು ನಿರೂಪಿಸಿದರು ನಾಯಕರಾಗಿ ವಿಜೃಂಭಿಸಿದರು. ಆದರೆ, ಗುಂಡೇಟು ತಿಂದು ಸತ್ತ ಹುಲಿಗಳಿಗೆ ತಾವೇಕೆ ನರಭಕ್ಷಕಗಳಾದೆವು? ಎಂದು ಅವರ ಕಥನದಲ್ಲಿ ಹೇಳಲು ಅವಕಾಶವೇ ಇರಲಿಲ್ಲ. ಇದೆಲ್ಲಾ ಚರಿತ್ರೆಯ ಪೂರ್ವ ಘಟನೆಗಳೆಂದು ತೀರ್ಮಾನಿಸಿದರೂ ಇಂದೇಕೆ ಹುಲಿಗಳು ಅಲ್ಲೊಮ್ಮೆ, ಇಲ್ಲೊಮ್ಮೆ ಮನುಷ್ಯನ ಮೇಲೆ ಎರಗುತ್ತಿವೆ? 

ನರಭಕ್ಷಕ ಆಗುವುದು ಯಾವಾಗ?

ಭಾರತದಲ್ಲಿ ಹುಲಿಗೆ ಇರುವಷ್ಟು ಜನಪ್ರಿಯತೆ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ. ಎಪ್ಪತ್ತೇಳು ಮಲೆಯ ಒಡೆಯ ಮಹದೇಶ್ವರನಿಗೆ ಹುಲಿಯೇ ವಾಹನ. ಬ್ರಿಟಿಷರ ವಿರುದ್ಧದ ಯುದ್ಧಗಳಲ್ಲಿ ಜಯಗಳಿಸಿದ ಟಿಪ್ಪು ಸುಲ್ತಾನನಿಗೂ ‘ಮೈಸೂರು ಹುಲಿ’ ಎಂದು ಹೆಸರು ಬಂತು. 
ಬೆಂಕಿಪೊಟ್ಟಣದಿಂದ ಹಿಡಿದು ಬಿಯರ್‌ವರೆಗೂ, ಐಸ್‌ಕ್ರೀಮ್‌ನಿಂದ ಹಿಡಿದು ವಾರ್ನಿಸ್‌ ಬಣ್ಣದವರೆಗೂ, ಆಹಾರ ಪದಾರ್ಥಗಳ ಮಾರಾಟಕ್ಕೂ ಹುಲಿಯೇ ಶಕ್ತಿಯುತ ವ್ಯಾಪಾರದ ಸಂಕೇತ. 

ಪ್ರಸ್ತುತ ಮನುಷ್ಯ ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದಾನೆ. ಹುಲಿಗಳ ನೆಲೆಯ ಮೇಲೂ ಪ್ರಭುತ್ವ ಸ್ಥಾಪಿಸಿರುವುದು ದಿಟ. ಆದರೆ, ಅವನಲ್ಲಿ ಅವುಗಳ ಬಗೆಗಿನ ಸಾಂಸ್ಕೃತಿಕ ಆಕರ್ಷಣೆಗೆ ಮಾತ್ರ ಮುಪ್ಪಾಗಿಲ್ಲ. ತನಗಿಂತ ಬಲಶಾಲಿಯಾದ ಪ್ರಾಣಿಗಳ ಬಗ್ಗೆ ಆದಿಕಾಲದಿಂದಲೂ ಮಾನವನಿಗೆ ಅಪರಿಮಿತ ಭಯ. ಇದೇ ಹುಲಿಗಳಿಗೆ ಸುಲಭವಾಗಿ ನರಭಕ್ಷಕನ ಪಟ್ಟ ಕಟ್ಟಲು ಮೂಲಕಾರಣ.

ಕಾಡಿನಲ್ಲಿ ಹುಲಿಗಳ ಜೀವಿತಾವಧಿ 12ರಿಂದ 15 ವರ್ಷ. ಅವು ಎಷ್ಟೇ ಕೌಶಲವಿದ್ದರೂ ಬೇಟೆ ವೇಳೆ ಗಾಯಗೊಳ್ಳುತ್ತವೆ. ಅವುಗಳಿಗೆ ಆ ನೋವು ಸಹಿಸಿಕೊಳ್ಳುವ ಶಕ್ತಿ ಇರುವುದು ಎರಡು ವಾರಗಳು ಮಾತ್ರ. ಈ ಅವಧಿ ದಾಟಿದರೆ ಕ್ರಮೇಣವಾಗಿ ದೈಹಿಕವಾಗಿ ಕೃಶವಾಗುತ್ತವೆ. ಇನ್ನೊಂದೆಡೆ ವಯೋಸಹಜವಾಗಿ ಅವುಗಳ ಹಲ್ಲುಗಳು ಸವೆಯುವುದು ಉಂಟು. ಆಗ ಸುಲಭವಾಗಿ ಬೇಟೆ ದಕ್ಕುವುದಿಲ್ಲ. ಆ ವೇಳೆ ಬದುಕುಳಿಯುವ ತಂತ್ರವಾಗಿ ಮನುಷ್ಯದ ಮೇಲೆ ಎರಗುತ್ತವೆ.

ಮರಿಗಳ ರಕ್ಷಣೆಗೆ ತಾಯಿ ಹುಲಿ ಹೆಚ್ಚು ಒತ್ತು ಕೊಡುತ್ತದೆ. ಕಾಡಂಚಿನ ಜನರು ಉರುವಲು, ಕಟ್ಟಡದ ಸಾಮಗ್ರಿಗಳಿಗಾಗಿ ಕಾಡಿಗೆ ತೆರಳುವುದು ಸಹಜ. ಈ ವೇಳೆ ಮರಿಗಳ ಹತ್ತಿರ ಸುಳಿದರೆ ದಾಳಿ ಮಾಡುವುದು ನಿಶ್ಚಿತ.

ಹುಲಿಯು ಬಲಿಪ್ರಾಣಿಯನ್ನು ಬೇಟೆಯಾಡಿದ ತಕ್ಷಣ ಇತರೇ ಮಾಂಸಾಹಾರಿ ಪ್ರಾಣಿಗಳಿಗೆ ಸಿಗದಂತೆ ಅದನ್ನು ಬಚ್ಚಿಡುತ್ತದೆ. ಮೂರ್ನಾಕ್ಕು ದಿನಗಳ ಕಾಲ ಆ ಸ್ಥಳದಲ್ಲಿಯೇ ಇದ್ದು ಉಳಿದ ಆಹಾರವನ್ನು ಭಕ್ಷಿಸುತ್ತದೆ. ಕಾಡಂಚಿನಲ್ಲಿರುವ ಕೆಲವು ಜನರು ಹುಲಿ ಕೊಂದ ಪ್ರಾಣಿಯ ಮಾಂಸ ಕದಿಯುವಲ್ಲಿ ಸಿದ್ಧಹಸ್ತರು. ಅದು ಬೇಟೆಯಾಡಿದ ಸುಳಿವರಿತು ಅದರ ಊಟ ಕದಿಯುಲು ಹೋದಾಗ ದಾಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಬಹಳಷ್ಟು ದಾಳಿ ಪ್ರಕರಣಗಳಲ್ಲಿ ಈ ಅಂಶ ಬೆಳಕಿಗೆ ಬರುವುದೇ ಇಲ್ಲ. 

ಹುಲಿ ಮತ್ತು ಮಾನವನ ನಡುವಿನ ಸಂಘರ್ಷದ ಹಿಂದೆ ರೆಸಾರ್ಟ್‌ ಹಾವಳಿಯೂ ಕಾರಣವಾಗಿದೆ. ಬಂಡೀಪುರ, ನಾಗರಹೊಳೆಯ ಸುತ್ತಮುತ್ತ ರೆಸಾರ್ಟ್‌ ಹಾವಳಿ ಮಿತಿಮೀರಿದೆ. ಇನ್ನೊಂದೆಡೆ ಪರಿಸರ ಪ‍್ರವಾಸೋದ್ಯಮದ ಹೆಸರಿನಡಿ ಅಂಗಡಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಗೂಡಂಗಡಿಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಇಲ್ಲಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಆಹಾರ ಪದಾರ್ಥ ಎಸೆಯುತ್ತಾರೆ. ಈ ಅಳಿದುಳಿದ ಪದಾರ್ಥ ಕಾಡುಹಂದಿಗಳಿಗೆ ಸುಲಭದ ಆಹಾರ.

ಹುಲಿಗಳು ಬಲಿಪ್ರಾಣಿಗಳ ಚಲನವಲನಗಳನ್ನು ಚೆನ್ನಾಗಿ ಪತ್ತೆಹಚ್ಚುವುದು ಕತ್ತಲೆಯಲ್ಲಿಯೇ. ಕಾಡಿನಲ್ಲಿ ಅವು ಮುಸ್ಸಂಜೆಯಿಂದ ಬೆಳಕು ಹರಿಯುವವರೆಗೂ ಓಡಾಡುತ್ತವೆ. ಕಾಡುಹಂದಿಗಳು ಜನಸಂಚಾರ ದಟ್ಟಣೆ ಕಡಿಮೆಯಾದಾಗ ರಾತ್ರಿವೇಳೆ ಸಂಚಾರ ಆರಂಭಿಸುತ್ತವೆ. ಎಲ್ಲ ಅರಣ್ಯದ ವ್ಯಾಪ್ತಿಯಲ್ಲೂ ಸಾಮಾನ್ಯವಾಗಿ ಹುಲಿಗಳು ಕಾಡುಹಂದಿ, ಕೋತಿ, ಮುಳ್ಳುಹಂದಿಗಳನ್ನು ಹುಡುಕಿ ಬೇಟೆಯಾಡುತ್ತವೆ. ಅವುಗಳ ಬೇಟೆ ವೇಳೆ ಆಕಸ್ಮಿಕವಾಗಿ ಮನುಷ್ಯ ಎದುರಾದಾಗ ಅದರ ದಾಳಿಗೆ ಸಿಲುಕುತ್ತಾನೆ. ಆಗ ನರಭಕ್ಷಕನ ಸುದ್ದಿ ಗಾಢವಾಗಿ ಹಬ್ಬುತ್ತದೆ.

ಕಾಡಂಚಿನಲ್ಲಿಯೇ ದಾಳಿ ಪ್ರಕರಣಗಳು ಹೆಚ್ಚಾಗಿ ಸಂಭವಿಸುವುದು ಸರ್ವೇಸಾಮಾನ್ಯ. ಜನರು ಈ ಪ್ರದೇಶದಲ್ಲಿಯೇ ದನ, ಕುರಿ, ಮೇಕೆಗಳನ್ನು ಮೇಯಿಸುತ್ತಾರೆ. ಜಾನುವಾರುಗಳ ಗುಂಪಿನ ಮೇಲೆ ಅವು ದಾಳಿ ಮಾಡುವುದಿಲ್ಲ. ಒಂಟಿ ಇರುವ ಸಾಕುಪ್ರಾಣಿ ಮೇಲೆ ದಾಳಿ ಮಾಡುತ್ತವೆ. ಆ ವೇಳೆ ಅವುಗಳ ಮಾಲೀಕರು ಅದರ ಬಾಯಿಯಿಂದ ಸಾಕುಪ್ರಾಣಿ ಬಿಡಿಸಿಕೊಳ್ಳಲು ಹೋದಾಗ ದಾಳಿಗೆ ತುತ್ತಾಗುತ್ತಾರೆ. 

ಕಾಡಿನಲ್ಲಿ ಹುಲಿಗಳಿಗೆ ಇರುವ ಒತ್ತಡವೇನು? ಮೆಕ್ಸಿಕೊದಿಂದ ಬಂದ ಲಂಟಾನಾ ಕಮಾರಾ ಕಳೆಸಸ್ಯ ಕಾಡನ್ನು ಆವರಿಸಿ ಅವುಗಳ ಆಹಾರ ಮೂಲಕ್ಕೆ ಧಕ್ಕೆ ಒಡ್ಡಿದೆಯೇ? ಗುಣಮಟ್ಟ ಕಳೆದುಕೊಳ್ಳುತ್ತಿರುವ ಅರಣ್ಯದಲ್ಲಿ ಬಲಿಪ್ರಾಣಿಗಳ ಸಂಖ್ಯೆ ಇಳಿಮುಖವಾಗುತ್ತಿದೆಯೇ? ವೃದ್ಧಿಸಿದ ಹುಲಿಗಳ ಸಂಖ್ಯೆ ಪೋಷಿಸಲು ಆ ಕಾಡಿಗೆ ಸಾಧ್ಯವಾಗುತ್ತಿಲ್ಲವೇ? ಈ ಪ್ರಶ್ನೆಗಳನ್ನು ಗಂಭೀರವಾಗಿ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !