ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಮ್ ಆ್ಯಂಡ್ ಜೆರಿ

Last Updated 25 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಟಾಮ್‌ ಆ್ಯಂಡ್‌ ಜೆರಿ ಎನ್ನುವ ಎರಡು ಹೆಸರು ದೇಶ– ಕಾಲ– ಭಾಷೆಗಳನ್ನು ಮೀರಿ ಬೆಳೆದ ಕಥೆ ಕೌತುಕದ್ದೇ ಹೌದು. ಈ ಹೆಸರು ಕೇಳಿದಾಗ ಹೆಚ್ಚಿನವರಿಗೆ ತಮ್ಮ ಬಾಲ್ಯ ನೆನಪಾಗದೇ ಇರದು. ಒಂದು ತುಂಟ ಇಲಿ ಮತ್ತು ಅಷ್ಟೇ ಬಿರುಸು ಸ್ವಭಾವದ ಬೆಕ್ಕು ಒಂದನ್ನೊಂದು ಕಿಚಾಯಿಸುವ, ಪೀಡಿಸುವ, ಗೋಳು ಹೊಯ್ದುಕೊಳ್ಳುವ ಮೂವೀ ಚಿತ್ರಣಗಳು ಮನೋಭಿತ್ತಿಯಲ್ಲಿ ಹರಿದು ನಮಗರಿವಿಲ್ಲದಂತೆಯೇ ಕಿರುನಗುವೊಂದು ಜಾರಿ ಬೀಳುತ್ತದೆ.

ಆದರೆ, ಜನರು ಸಾಮಾನ್ಯವಾಗಿ ಕಾರ್ಟೂನ್‌ಗಳನ್ನು ಇಷ್ಟಪಟ್ಟು ನೆನಪಿಟ್ಟುಕೊಂಡರೂ ಅವುಗಳ ಸೃಷ್ಟಿಕರ್ತರು, ನಿರ್ಮಾತೃರನ್ನು ನೆನಪಿಟ್ಟುಕೊಳ್ಳುವುದು ಬಹಳ ಕಡಿಮೆ. ಇವರು ಯಾವುದಾದರೂ ಪ್ರಮುಖ ಪ್ರಶಸ್ತಿಗಳನ್ನು ಪಡೆದಾಗಲೋ ಅಥವಾ ತೀರಿಕೊಂಡಾಗಲೋ ನೆನಪಾಗಿ ಅವರಿಗೊಂದು ನುಡಿನಮನ ಸಲ್ಲಿಸುತ್ತಾರೆ. ಏಪ್ರಿಲ್ 16ರಂದು ಪ್ರಾಗ್‌ನಲ್ಲಿ ತನ್ನ 95ನೇ ವಯಸ್ಸಿನಲ್ಲಿ ತೀರಿಕೊಂಡ ಟಾಮ್ ಆ್ಯಂಡ್ ಜೆರಿಯ ಡೈರಕ್ಟರ್ ಆಗಿದ್ದ ಜೀನ್ ಡೀಚ್‌ರಿಗೆ ಪ್ರಪಂಚದೆಲ್ಲೆಡೆ ಈಗ ನುಡಿನಮನ ಸಲ್ಲಿಸಲಾಗುತ್ತಿದೆ. ವಾಸ್ತವದಲ್ಲಿ, ಟಾಮ್ ಆ್ಯಂಡ್ ಜೆರಿಯ ಪ್ರಾರಂಭಿಕ ಡೈರಕ್ಟರ್‌ಗಳು ವಿಲಿಯಂ ಹನಾ ಮತ್ತು ಜೋಸೆಫ್ ಬಾರ್ಬರಾ ಜೋಡಿ. ಇವರ ನಂತರ 1961-62ರ ನಡುವೆ ಜೀನ್ ಡೀಚ್, ಟಾಮ್ ಆ್ಯಂಡ್ ಜೆರಿಯ ಡೈರಕ್ಟರ್ ಆಗಿ ಅವುಗಳನ್ನು ರೂಪಿಸಿದ್ದರು.

1924ರ ಆಗಸ್ಟ್ 8ರಂದು ಅಮೆರಿಕದಲ್ಲಿ ಜನಿಸಿದ ಜೀನ್ ಡೀಚ್ 1959ರ ನಂತರ ಕೊನೆಯವರೆಗೂ ತಮ್ಮ ಬದುಕನ್ನು ಕಳೆದದ್ದು ಕಮ್ಯನಿಸ್ಟ್ ದೇಶ ಜೆಕೊಸ್ಲಾವೇಕಿಯಾದಲ್ಲಿ. ಹಲವು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದ ಅವರು, 1961ರಲ್ಲಿ ತಮ್ಮ ಕಿರು ಕಾರ್ಟೂನ್ ಚಿತ್ರಕ್ಕೆ ಅದನ್ನು ಪಡೆಯುವಲ್ಲಿ ಯಶಸ್ವಿಯಾದರು. ಇವರ ಹೆಂಡತಿ, ಮಕ್ಕಳೂ ಇವರಂತೆಯೇ ಇಲ್‌ಸ್ಲೇಟರ್, ಅನಿಮೇಟರ್, ಲೇಖಕರಾಗಿದ್ದಾರೆ.

24 ಗಂಟೆಯ ಟಿ.ವಿ, ಇಂಟರ್‌ನೆಟ್, ಯೂಟ್ಯೂಬ್, ನೆಟ್‌ಫ್ಲಿಕ್ಸ್ ಗಳಿಲ್ಲದ ಆ ಕಾಲದಲ್ಲಿ ಟಾಮ್ ಮತ್ತು ಜೆರಿ ವಯಸ್ಸಿನ ಅಂತರವಿಲ್ಲದೆ, ಭಾಷೆಯ ಅಡೆತಡೆಯಿಲ್ಲದೆ, ಲಿಂಗ ತಾರತಮ್ಯವಿಲ್ಲದೆ ಮುದಗೊಳಿಸುತ್ತಿದ್ದ ರೀತಿ ಅಪ್ಯಾಯಮಾನವಾದುದು. ಮನೆಯಲ್ಲಾಗಲೀ, ಸಿನಿಮಾ ಹಾಲ್‌ನಲ್ಲಾಗಲೀ ಇವರಿಬ್ಬರು ಒಬ್ಬರೊನ್ನೊಬ್ಬರು ಮೀರಿಸಲು ನಡೆಸುವ ಪಟ್ಟು, ಪೇಚಾಟ, ಪರದಾಟ, ಚೇಷ್ಟೆ, ಕುಚೇಷ್ಟೆಗಳನ್ನು ನೋಡುತ್ತ ನರನಾಡಿಗಲೆಲ್ಲ ಸಡಿಲವಾಗುವಂತೆ ನಗಾಡುವುದೇ ಅವಿಸ್ಮರಣೀಯ ಅನುಭವವಾಗಿತ್ತು. ಆಧುನಿಕ ತಂತ್ರಜ್ಞಾನದ ಅಬ್ಬರವಿಲ್ಲದೆ ಸರಳ ಸುಂದರ ನೇರ ಅನಿಮೇಷನ್‌ನಿಂದಾಗಿಯೇ ಟಾಮ್ ಆ್ಯಂಡ್ ಜೆರಿ ಸಿರೀಸ್‌ಗಳು ಈಗಲೂ ಆಕರ್ಷಣೆ ಉಳಿಸಿಕೊಂಡಿವೆ. ಪರಸ್ಪರ ಕಿತ್ತಾಡುವ ಮಕ್ಕಳು, ಸ್ನೇಹಿತರು, ನೆರೆಹೊರೆಯವರು ಭಾಷೆ, ಸಂಸ್ಕೃತಿ, ಧರ್ಮಗಳನ್ನು ಮೀರಿ ಎಲ್ಲೆಡೆ ಕಾಣಸಿಗುತ್ತಾರೆ. ನಮ್ಮಲ್ಲಿ ಇಂತಹವರನ್ನು ‘ಪರಸ್ಪರ ಕಚ್ಚಾಡುವ ನಾಯಿ– ಬೆಕ್ಕು’ಗಳೆಂದು ಹಂಗಿಸಿದರೆ ಇಂಗ್ಲಿಷ್‌ನಲ್ಲಿ ‘ಕ್ಯಾಟ್ ಆಂಡ್ ಮೌಸ್ ಫೈಟ್’ ಎಂದು ಗೇಲಿ ಮಾಡಲಾಗುತ್ತದೆ. ಇದನ್ನು ಆಧಾರವಾಗಿ ಇರಿಸಿಕೊಂಡೇ ಟಾಮ್ ಆ್ಯಂಡ್ ಜೆರಿ ಕಾರ್ಟೂನ್ ಪಾತ್ರಗಳು ಸೃಷ್ಟಿಯಾದವು. 1940ರಲ್ಲಿ ಸೃಷ್ಟಿಯಾದಾಗ ಟಾಮ್‍ನ ಮೂಲ ಹೆಸರು ಜಾಸ್ಪರ್, ಜೆರಿಯ ಮೂಲ ಹೆಸರು ಜಿಂಕ್ಸ್ ಎಂದಿತ್ತು. ಹೆಸರೇ ಸೂಚಿಸುವಂತೆ ಟಾಮ್ ಗಂಡು ಬೆಕ್ಕು. ಜೆರಿಯ ಲಿಂಗದ ಬಗ್ಗೆ ವಾದ–ವಿವಾದವಿದ್ದರೂ ಅದನ್ನು ಹೆಣ್ಣೆಂದು ಭಾವಿಸಲಾಗಿದೆ. ವಾಸ್ತವದಲ್ಲಿರುವುದನ್ನು ಇನ್ನೂ ಹಿಗ್ಗಿಸಿ ತೋರಿಸುವ ‘ಅತಿಶಯೋಕ್ತಿ’ಯೇ ಕಾರ್ಟೂನ್ ಕಲೆಯ ಮೂಲ ಸೂತ್ರ. ಅಂದರೆ, ತುಸು ದಪ್ಪವಿದ್ದರೆ ತೀರಾ ದಪ್ಪವಾಗಿ ತೋರಿಸುವುದು, ತುಸು ತೆಳ್ಳಗಿದ್ದರೆ ತೀರಾ ತೆಳ್ಳಗಾಗಿ ತೊರಿಸುವುದು, ಮೂಗು ತುಸು ಉದ್ದವಾಗಿದ್ದರೆ ಎಳೆದು ಇನ್ನಷ್ಟು ಉದ್ದವಾಗಿಸಿ ತೋರಿಸುವುದು, ತುಸು ಕಪ್ಪಗಾಗಿದ್ದರೆ ಇದ್ದಿಲಿನಷ್ಟು ಕರ‍್ರಗಾಗಿಸುವುದು ಕಾರ್ಟೂನ್ ಕಲೆಯ ಜೀವಾಳ. ಹಾಗೆಯೇ ಪರಸ್ಪರ ವಿರೋಧಾತ್ಮಕ ಆಗಿರುವುದನ್ನು ನೇರವಾಗಿ ಮುಖಾಮುಖಿ (ಕಾಂಟ್ರಾಸ್ಟ್) ಮಾಡುವುದೂ ಇನ್ನೊಂದು ಮುಖ್ಯವಾದ ಅಂಶ. ಡೇವಿಡ್ ಎದುರು ಗಾಲಿಯತ್, ಕಪ್ಪಿನೆದುರು ಬಿಳಿ, ಅತಿ ದುಃಖದೆದುರು ಅತಿ ಸಂತೋಷ ಹೀಗೆ. ಇದೇ ತತ್ವದ ಆಧಾರದಡಿ ಟಾಮ್ ಮತ್ತು ಜೆರಿಯಲ್ಲಿ ಜಗಳ, ಹೊಡೆದಾಟವನ್ನು ಅತಿಶಯವಾಗಿ ತೋರಿಸಲಾಗುತ್ತದೆ. ಟಾಮ್, ಜೆರಿಯಲ್ಲಿ ತೋರಿಸುವ ಬಾಯಿಗೆ ಬಾಂಬ್ ಪಟಾಕಿ ತುರುಕಿಸಿ ಉಡಾಯಿಸುವುದು, ದೇಹವನ್ನು ಎರಡಾಗಿ ಸೀಳುವುದು, ಭಾರವಾದ ವಸ್ತುವಿನ ಅಡಿ ಸಿಕ್ಕಿ ಅಪ್ಪಚ್ಚಿಯಾಗಿ ಕಾಗದದಂತಾಗುವುದು, ಬಾಲವನ್ನು ಚಿಕ್ಕಚಿಕ್ಕ ಹೋಳುಗಳಾಗಿ ತುಂಡರಿಸುವುದು, ದವಡೆಗೆ ಬಾರಿಸಿದ ಹೊಡೆತಕ್ಕ ಇಡೀ ಹಲ್ಲು ಸೆಟ್ಟು ಕಳಚಿ ಬೀಳುವುದು ಮೊದಲಾದ ದೃಶ್ಯಗಳು ಮಕ್ಕಳಲ್ಲಿ ಕ್ರೌರ್ಯ, ಹಿಂಸಾತ್ಮಕ ನಡವಳಿಕೆಗಳು ಹುಟ್ಟಲು ಪ್ರೇರೇಪಿಸಬಹುದು ಎಂದು ಆಗಾಗ್ಗೆ ಮಾನಸಿಕ ತಜ್ಞರು ಆಕ್ಷೇಪಣೆ ಎತ್ತುತ್ತಾರೆ. ಈ ಕಾರ್ಟೂನ್ ಸಿರೀಸ್‌ಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಆಫ್ರಿಕ ಮೂಲದ ಮನೆಯಾಳಿನ ಭಾಷಾ ಉಚ್ಛಾರಣೆ ಕರಿಯರನ್ನು ಹಂಗಿಸುವ ರೀತಿಯಲ್ಲಿರುವುದು ಜನಾಂಗೀಯ ಪೂರ್ವಗ್ರಹವನ್ನು ತೋರಿಸುತ್ತದೆ ಎಂದೂ ಆಕ್ಷೇಪಿಸಲಾಗುತ್ತದೆ. ಇಷ್ಟೆಲ್ಲ ಕ್ರೌರ್ಯದ ಚಿತ್ರಣವಿದ್ದರೂ ಎಲ್ಲೂ ರಕ್ತದೋಕುಳಿಯ ದೃಶ್ಯವಿರುವುದಿಲ್ಲ. ಜೊತೆಗೆ ಎಷ್ಟೇ ಕ್ರೂರವಾಗಿ ವರ್ತಿಸಿದರೂ ಅದನ್ನು ತಿನ್ನುವ ಅಥವಾ ನುಂಗಲು ಪ್ರಯತ್ನಿಸುವ ದೃಶ್ಯವಿಲ್ಲ. ಎಷ್ಟೇ ಕಚ್ಚಾಡಿದರೂ ಕೊನೆಯಲ್ಲಿ ಸ್ನೇಹಿತರಾಗುತ್ತಾರೆ. ಬಲಿಷ್ಠ ಟಾಮ್ ಎಷ್ಟೇ ಬಲಪ್ರಯೋಗ ಮಾಡಿದರೂ ದುರ್ಬಲ ಜೆರಿಯೇ ಯಾವತ್ತೂ ಗೆಲ್ಲುತ್ತಾನೆ. ಕಷ್ಟಕಾಲದಲ್ಲಿ ವೈರತ್ವ ಮರೆತು ಒಬ್ಬರಿಗೊಬ್ಬರು ನೆರವಾಗುತ್ತಾರೆ. ಮಗುವೊಂದನ್ನು ರಕ್ಷಿಸಲು ಪರಸ್ಪರ ಕೈ ಜೋಡಿಸುತ್ತಾರೆ. ಇವೇ ಮೊದಲಾದ ಸಜ್ಜನಿಕೆಯ ಅಂಶಗಳು ಹಿಂಸೆ, ಕ್ರೌರ್ಯ, ಜನಾಂಗೀಯ ಪೂರ್ವಗ್ರಹವನ್ನು ಗೌಣವಾಗಿಸಿ ಟಾಮ್ ಮತ್ತು ಜೆರಿಯನ್ನು ನಮ್ಮದೇ ಮನೆಯ ಸದಸ್ಯರೆಂಬಂತೆ ಹತ್ತಿರವಾಗಿಸುತ್ತವೆ.

ಈ ಬೆಕ್ಕು, ಇಲಿಯ ಕಚ್ಚಾಟವನ್ನು ನೋಡಿ ಆನಂದಿಸುತ್ತಲೇ ಇವುಗಳ ನಿರ್ಮಾತೃರಿಗೆ ವಿದಾಯ ಹೇಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT