ಬೊಂಬೆಗಳಲ್ಲಿ ಬೆಂಗಳೂರು ಟು ಮೈಸೂರು ಅನಾವರಣ

7

ಬೊಂಬೆಗಳಲ್ಲಿ ಬೆಂಗಳೂರು ಟು ಮೈಸೂರು ಅನಾವರಣ

Published:
Updated:
Deccan Herald

ನಾಡಹಬ್ಬ ದಸರಾ ಶಕ್ತಿದೇವತೆಯ ಆರಾಧನೆ, ಜಂಬೂ ಸವಾರಿಗಷ್ಟೇ ಸೀಮಿತವಲ್ಲ. ನಾಡಿನಾದ್ಯಂತ ಬೊಂಬೆ ಹಬ್ಬವೆಂದೂ ಇದು ಪ್ರಸಿದ್ಧಿ ಪಡೆದಿದೆ. ‘ನವರಾತ್ರಿ’ ಹಬ್ಬದಲ್ಲಿ ಬೊಂಬೆ ಪ್ರಿಯರು ಒಂಬತ್ತು ದಿನವೂ ತಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ, ಸಂಸ್ಥೆಗಳಲ್ಲಿ ಬೊಂಬೆಗಳನ್ನಿಟ್ಟು ಪೂಜಿಸಿ, ಆರಾಧಿಸಿ, ಸಂಭ್ರಮಿಸುತ್ತಾರೆ.

ದಸರಾದಲ್ಲಿ ಚನ್ನಪಟ್ಟಣದ ಬೊಂಬೆಗಳದ್ದೇ ಪ್ರಧಾನ ಪಾತ್ರ. ಅದರ ಜತೆಗೆ ವಿವಿಧೆಡೆಯಿಂದ ಸಂಗ್ರಹಿಸಿದ ಬೊಂಬೆಗಳಿಗೂ ಸ್ಥಾನ ಇರುತ್ತದೆ. ದೇವಾನುದೇವತೆಗಳೊಂದಿಗೆ ಪೌರಾಣಿಕ, ಐತಿಹಾಸಿಕ ಮಹಾಪುರುಷರು ಬೊಂಬೆಗಳಾಗಿ ಅಲ್ಲಿ ಮೇಳೈಸುತ್ತಾರೆ. ಮಕ್ಕಳ ಅಚ್ಚುಮೆಚ್ಚಿನ ಆಟಿಕೆಗಳಾದ ಬೊಂಬೆಗಳನ್ನು ಮನೆಗಳಲ್ಲಿ ಅಲಂಕರಿಸಿ ಪೂಜಿಸುವುದರಲ್ಲಿಯೇ ಹಲವರ ಖುಷಿ ಅಡಗಿದೆ.

ಇದೇ ರೀತಿ 13 ವರ್ಷಗಳಿಂದ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಬೊಂಬೆಗಳನ್ನಿಟ್ಟು ಆರಾಧಿಸುವ ರಾಜರಾಜೇಶ್ವರಿ ನಗರದ ಪಿರಮಿಡ್‌ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ನ ನಿವಾಸಿ ರಮ್ಯಾ ವಿನಯ್‌ ಅವರು, ಈ ಬಾರಿ ವಿಷಯವನ್ನಾಧರಿಸಿ (ಥೀಮ್‌) ಬೊಂಬೆಗಳನ್ನು ಜೋಡಿಸಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಅವರು, ಮೈಸೂರಿನ ದಸರಾ ಹಬ್ಬ, ಅದರ ಸಂಸ್ಕೃತಿ ಹಾಗೂ ಬೆಂಗಳೂರು–ಮೈಸೂರು ಹೆದ್ದಾರಿ ಮಾರ್ಗದಲ್ಲಿ ಬರುವ ಭೌಗೋಳಿಕ ಮತ್ತು ಧಾರ್ಮಿಕ ಮಹತ್ವವನ್ನು ಬೊಂಬೆಗಳ ಮೂಲಕವೇ ಅನಾವರಣ ಮಾಡಿದ್ದಾರೆ.

ನಾಡಹಬ್ಬ ದಸರಾ ನೋಡಲು ಬೆಂಗಳೂರಿನಿಂದ ಸಹಸ್ರಾರು ಮಂದಿ ರಸ್ತೆ ಮತ್ತು ರೈಲು ಮಾರ್ಗಗಳಲ್ಲಿ ಮೈಸೂರಿಗೆ ಹೋಗುತ್ತಾರೆ. ಈ ಮಾರ್ಗದಲ್ಲಿ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಪ್ರಖ್ಯಾತಿಯ ಪರಿಚಯವನ್ನು ಅವರು ಬೊಂಬೆಗಳ ಮೂಲಕವೇ ಮಾಡಿಕೊಟ್ಟಿದ್ದಾರೆ.

ತಟ್ಟೆ ಇಡ್ಲಿಯಿಂದ ಆರಂಭ: ಬೆಂಗಳೂರಿನಿಂದ ಕೆಂಗೇರಿ, ಕುಂಬಳಗೋಡು ಮೂಲಕ ಹೊರಡುವ ಜನರಿಗೆ ಮೊದಲು ಸಿಗುವುದು ಬಿಡದಿ. ಅದು ತಟ್ಟೆ ಇಡ್ಲಿಗೆ ಪ್ರಸಿದ್ಧಿ. ತಮ್ಮದೇ ಸ್ವಂತ ವಾಹನದಲ್ಲಿ ಈ ರಸ್ತೆಯಲ್ಲಿ ಹೋಗುವ ಬಹುತೇಕರು ಇಲ್ಲಿನ ತಟ್ಟೆ ಇಡ್ಲಿ ಸವಿಯದೆ ಮುಂದಕ್ಕೆ ಹೋಗುವುದು ವಿರಳ. ಹಾಗಾಗಿ ಬಿಡದಿಯಲ್ಲಿ ಬೆಂಗಳೂರು–ಮೈಸೂರು ರಸ್ತೆ ಬದಿಯಲ್ಲಿಯೇ 30ಕ್ಕೂ ಹೆಚ್ಚು ತಟ್ಟೆ ಇಡ್ಲಿ ಹೋಟೆಲ್‌ಗಳಿವೆ. ರಮ್ಯಾ ಅವರು ತಮ್ಮ ಬೊಂಬೆಗಳ ಸೆಟ್‌ನಲ್ಲಿ ಬಿಡದಿ ತಟ್ಟೆ ಇಡ್ಲಿಗೂ ಅವಕಾಶ ನೀಡಿದ್ದಾರೆ.

ಬಿಡದಿಯಿಂದ ಮುಂದೆ ಸಾಗುತ್ತಿದ್ದಂತೆ ದೊರೆಯುವುದು ರಾಮನಗರ. ಅದು ‘ರೇಷ್ಮೆನಾಡು’ ಎಂದೇ ಪ್ರಸಿದ್ಧಿ. ರೇಷ್ಮೆ ವಸ್ತ್ರಗಳನ್ನುಟ್ಟಿರುವ ಬೊಂಬೆಗಳು ಈ ನಗರವನ್ನು ಪ್ರತಿನಿಧಿಸುತ್ತವೆ. ಹಾಗೇ ಸ್ವಲ್ಪ ಮುಂದೆ ಸಾಗಿದರೆ ಬರುವುದೇ ಚನ್ನಪಟ್ಟಣ. ‘ಬೊಂಬೆಗಳ ನಾಡು’ ಎಂದೇ ವಿಶ್ವಖ್ಯಾತಿಯಾಗಿರುವ ಈ ಪಟ್ಟಣದಲ್ಲಿ ನೂರಾರು ವರ್ಷಗಳಿಂದ ಬೊಂಬೆ ಉದ್ಯಮವನ್ನೇ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಈ ಪಟ್ಟಣದ ಮೂಲಕ ಹೋಗುವವರು ತಮಗೆ, ಮಕ್ಕಳಿಗೆ, ಸ್ನೇಹಿತರಿಗೆ, ಪರಿಚಿತರಿಗೆ ಬೊಂಬೆಗಳನ್ನು ಸಾಮಾನ್ಯವಾಗಿ ಖರೀದಿಸುತ್ತಾರೆ. ಈ ಪಟ್ಟಣ ಮತ್ತು ಬೊಂಬೆಗಳಿಗೂ ರಮ್ಯಾ ಅವರ ಬೊಂಬೆಯಲಂಕಾರದಲ್ಲಿ ಆದ್ಯತೆ ಸಿಕ್ಕಿದೆ.

ಚನ್ನಪಟ್ಟಣದ ನಂತರ ದೊರೆಯುವ ಪಟ್ಟಣ ಮದ್ದೂರು. ಇಲ್ಲಿನ ‘ಮದ್ದೂರು ವಡೆ’ ಯಾರಿಗೆ ಗೊತ್ತಿಲ್ಲ. ಅದರಲ್ಲೂ ಮದ್ದೂರು ಟಿಫಾನಿಸ್‌ನಲ್ಲಿ ಮಾಡುವ ವಡೆ ನೆನೆದರೆ ಸಾಕು ಬಾಯಲ್ಲಿ ನೀರೂರುತ್ತದೆ. ಮದ್ದೂರು ವಡೆ, ಮದ್ದೂರು ಟಿಫಾನಿಸ್‌ನ ಪರಿಚಯವನ್ನು ಬೊಂಬೆಗಳ ಮೂಲಕ ಇಲ್ಲಿ ಮಾಡಿಕೊಡಲಾಗಿದೆ.

ಹಾಗೇ ಮುಂದುವರಿದಂತೆ ಬರುವ ನಗರವೇ ಮಂಡ್ಯ. ‘ಸಕ್ಕರೆ ನಾಡು’ ಎಂದೇ ಪ್ರಸಿದ್ಧಿ. ಇಲ್ಲಿನ ಕಬ್ಬು ಮತ್ತು ರೈತಾಪಿ ಜನರ ಬದುಕು ಕಟ್ಟಿಕೊಡುವ ಪ್ರಯತ್ನವನ್ನು ರಮ್ಯಾ ಅವರು ಬೊಂಬೆಗಳ ಮೂಲಕ ಮಾಡಿದ್ದಾರೆ. ಹಾಗೇ ಮುಂದೆ ಸಾಗಿದರೆ ದೊರೆಯುವುದು ಶ್ರೀರಂಗನ ಸನ್ನಿಧಿಯಾದ ಶ್ರೀರಂಗಪಟ್ಟಣ. ಸರ್ಪದ ಮೇಲೆ ಮಲಗಿರುವ ಶ್ರೀರಂಗನ ಬೊಂಬೆ ಮತ್ತು ರಂಗನಾಥ ದೇವಾಲಯವನ್ನು ಇಲ್ಲಿ ಬೊಂಬೆಗಳ ಮೂಲಕ ಪ್ರತಿಷ್ಠಾಪಿಸಲಾಗಿದೆ.

ಮೈಸೂರು ಪ್ರವೇಶ: ಇಷ್ಟೆಲ್ಲ ಊರುಗಳನ್ನು ದಾಟಿದ ಬಳಿಕ ಬರುವುದೇ ಮೈಸೂರು. ಅಲ್ಲಿ ಒಂಬತ್ತು ದಿನವೂ ವಿಶೇಷವಾಗಿ ದಸರಾ ಆಚರಿಸಲಾಗುತ್ತದೆ. ಚಾಮುಂಡೇಶ್ವರಿ ದೇವಿಯ ಆರಾಧಾನೆ, ಜಂಬೂ ಸವಾರಿ, ವಿವಿಧ ಜಿಲ್ಲೆಗಳ ಮಹತ್ವ ಸಾರುವ ಮೆರವಣಿಗೆ, ಅರಮನೆಯಲ್ಲಿ ನಡೆಯುವ ಮಹಾರಾಜರ ದರ್ಬಾರು ಇತ್ಯಾದಿ ಜನರನ್ನು ಆಕರ್ಷಣೆಯ ಕೇಂದ್ರ ಬಿಂದು. ಅವುಗಳು ಬಿಂಬವಾಗುವಂತಹ ಬೊಂಬೆಗಳ ಸೆಟ್‌ ಅನ್ನೂ ಜೋಡಿಸುವ ಮೂಲಕ ರಮ್ಯಾ ಅವರು ಅರ್ಥಪೂರ್ಣವಾಗಿ ಈ ಬಾರಿ ಬೊಂಬೆ ಹಬ್ಬ ಆಚರಿಸಿದ್ದಾರೆ.

ಆಟ–ಪಾಠಕ್ಕೂ ಒತ್ತು: ಈ ಬೊಂಬೆಗಳ ಜತೆಗೆ ಜತೆಗೆ ಮಕ್ಕಳನ್ನು ಸೆಳೆಯುವ ಕ್ರಿಕೆಟ್‌ ಸೆಟ್‌, ಚದುರಂಗದ ಆಟ, ಅಳಗುಳಿ ಮನೆ, ಕೇರಂ ಬೋರ್ಡ್‌ ಆಟ (ಒಳಾಂಗಣ ಆಟ) ಆಡುತ್ತಿರುವ ಬೊಂಬೆಗಳು, ನವಗ್ರಹ ಸೆಟ್‌, ಜ್ಯೋತಿರ್ಲಿಂಗ ಸೆಟ್‌, ಶಾಲಾ ಕೊಠಡಿಯಲ್ಲಿ ಕಲಿಕೆಯಲ್ಲಿರುವ ಮಕ್ಕಳ ಬೊಂಬೆ ಸೆಟ್‌ಗಳೂ ಇಲ್ಲಿ ಸ್ಥಾನ ಪಡೆದಿವೆ. ಅದರ ಜತೆಗೆ ಶ್ರೀಕೃಷ್ಣ ಹುಟ್ಟಿನಿಂದ
ವಿಶ್ವರೂಪ ದರ್ಶನ ನೀಡುವವರೆಗಿನ ಸೆಟ್‌ಗಳು, ಮದುವೆ ಸೆಟ್‌, ಗೌರಿ ಬಾಗಿನ ಸೆಟ್‌ ಸೇರಿದಂತೆ ಹಲವು ಬೊಂಬೆಗಳು ಇಲ್ಲಿ ಅನಾವರಣಗೊಳಿಸಲಾಗಿದೆ.

ಬೊಂಬೆ ಖರೀದಿ ಹವ್ಯಾಸ
‘ಬೊಂಬೆ ಎಂದರೆ ಮಕ್ಕಳಿಗೆ ಪಂಚಪ್ರಾಣ. ನನ್ನೂರು ಮೈಸೂರು. ಬಾಲ್ಯ ಕಳೆದದ್ದು ಮುಂಬೈನಲ್ಲಿ. ಅಲ್ಲಿ ಅಮ್ಮ ನಮ್ಮ ಮನೆಯಲ್ಲಿ ಕೂರಿಸುತ್ತಿದ್ದ ಬೊಂಬೆಗಳಿಂದ ನಾನು ಪ್ರಭಾವಿತಳಾಗಿದ್ದೆನೆ. ಅಂತೆಯೇ ಮದುವೆಯಾದ ನಂತರವೂ ನಾನು ಇದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ನನ್ನ ಕುಟುಂಬದವರು ಎಲ್ಲಿಗೇ ಹೋದರು ಅಲ್ಲಿನ ಪ್ರಸಿದ್ಧ ಬೊಂಬೆಗಳನ್ನು ತಂದು ನನಗೆ ಕೊಡುತ್ತಾರೆ. ನಾನೂ ಕೂಡ ಎಲ್ಲಿಗಾದರೂ ಹೋದರೆ ಅಲ್ಲಿನ ವಿಶೇಷ ಬೊಂಬೆಗಳನ್ನು ಖರೀದಿಸುತ್ತೇನೆ. ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಲು ಬೊಂಬೆ ಹಬ್ಬ ಒಂದು ನೆಪವಷ್ಟೆ’ ಎನ್ನುತ್ತಾರೆ ಎನ್ನುತ್ತಾರೆ ರಮ್ಯಾ ವಿನಯ್‌.

‘ಇದೇ ಮೊದಲ ಬಾರಿಗೆ ವಿಷಯವನ್ನಾಧರಿಸಿ ಬೊಂಬೆಗಳನ್ನು ಜೋಡಿಸಿದ್ದೇನೆ. ಮಕ್ಕಳಿಗೆ ಬೆಂಗಳೂರು– ಮೈಸೂರು ಮಾರ್ಗದ ವಿಶೇಷತೆಗಳನ್ನು ಪರಿಚಯಿಸುವುದ್ದು ಇದರ ಉದ್ದೇಶ. ಪತಿ ವಿನಯ್‌, ಅತ್ತಿಗೆ ಉಷಾ ಜಯರಾಂ ಅವರ ಸಂಪೂರ್ಣ ಸಹಕಾರದಿಂದ ಬೊಂಬೆಗಳನ್ನು ಇಷ್ಟು ಚೆನ್ನಾಗಿ ಜೋಡಿಸಲು, ಅಲಂಕರಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.


ಬೆಂಗಳೂರಿನಿಂದ ಮೈಸೂರು ರಸ್ತೆಯ ನಡುವೆ ಇರುವ ಪ್ರಮುಖ ಸ್ಥಳಗಳ ಅನಾವರಣ

 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !