ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧಾನ ಪೀಠಿಕೆ: ಒಬ್ಬರೇ ಐದು ಪಾತ್ರಗಳನ್ನು ನಿರ್ವಹಿಸುವ ವರ್ಚುವಲ್ ತಾಳಮದ್ದಳೆ

Last Updated 12 ಜುಲೈ 2021, 12:35 IST
ಅಕ್ಷರ ಗಾತ್ರ

ಬೆಂಗಳೂರು: ಹೆಗ್ಗೋಡಿನ ನೀನಾಸಮ್ ಸಂಸ್ಥೆಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮದ ಅಂಗವಾಗಿ 'ಆರ್ಟಿಕಲ್ಚರ್ ಉತ್ಸಾಹಿಗಳು' ಅರ್ಪಿಸುತ್ತಿರುವ ವರ್ಚುವಲ್ ಏಕವ್ಯಕ್ತಿ ತಾಳಮದ್ದಳೆ ಜು. 16ರಂದು ರಾತ್ರಿ 8 ಗಂಟೆಗೆ ಬಿತ್ತರಗೊಳ್ಳಲಿದೆ.

ಕೃಷ್ಣ ಸಂಧಾನ ಪ್ರಸಂಗ ಕೃತಿ ಆಧರಿಸಿ 'ಸಂಧಾನ ಪೀಠಿಕೆ' ವರ್ಚುವಲ್ ಏಕವ್ಯಕ್ತಿ ತಾಳ ಮದ್ದಳೆ ಸಿದ್ಧವಾಗಿದೆ. ಪದವಿ ಕಾಲೇಜುಗಳಲ್ಲಿ ಭೌತಶಾಸ್ತ್ರ ಉಪನ್ಯಾಸಕ ವೃತ್ತಿ ನಿರ್ವಹಿಸುವ ಕಲಾವಿದ ಭಾರ್ಗವ ಹೆಗ್ಗೋಡು ಅವರು ಯಕ್ಷಗಾನ, ಸಂಗೀತ ಮತ್ತು ರಂಗಭೂಮಿಯ ಹಿರಿಯ ಕಲಾವಿದ ಕೆ.ಎನ್.ನಾಗರಾಜ ಮತ್ತು ವಿನೋದಾ ದಂಪತಿಯ ಪುತ್ರರು. ನೀನಾಸಮ್ ಪ್ರದರ್ಶನಗಳಲ್ಲಿ ಸಂಗೀತಗಾರರಾಗಿ, ವಿವಿಧ ಯಕ್ಷಗಾನದ ಮೇಳಗಳಲ್ಲಿ ಹಿಮ್ಮೇಳ ಕಲಾವಿದರಾಗಿ ಭರವಸೆ ಮೂಡಿಸಿದ್ದಾರೆ.

ವರ್ಚುವಲ್ ತಾಳಮದ್ದಳೆಯ 5 ವಿಭಾಗಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಭಾಗವತಿಕೆ, ಮದ್ದಳೆ ವಾದನ ಹಾಗೂ ದ್ರೌಪದಿ, ಶ್ರೀಕೃಷ್ಣ ಮತ್ತು ಭೀಮ ಪಾತ್ರ ಆರ್ಥಗಾರಿಕೆ - ಹೀಗೆ 5 ಕಾರ್ಯಗಳನ್ನು ಭಾರ್ಗವ ಹೆಗ್ಗೋಡು ಒಬ್ಬರೇ ನಿರ್ವಹಿಸಿದ್ದಾರೆ.

ಈ ತಾಳಮದ್ದಳೆಯನ್ನು ಚಿತ್ರೀಕರಿಸಿದವರು ಈಶಾನ್ಯ ಶರ್ಮಾ, ಎಚ್.ಎಸ್.ದರ್ಶನ್. ಶರಾವತಿ ಹಿನ್ನೀರಿನಲ್ಲಿರುವ ನಂದಿಗೋಡಿನ ಎನ್.ಸಿ.ಗಂಗಾಧರ ಅವರ ಹಕ್ಕಲುಮನೆ ಹೆರಿಟೇಜ್ ಹೋಮ್ಸ್‌ನಲ್ಲಿ 5 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು.

ಮೊದಲ ದಿನ ಭಾಗವತಿಕೆಯ ಚಿತ್ರೀಕರಣ. ನಂತರ ಅದನ್ನು ಲ್ಯಾಪ್‌ಟಾಪ್‌ನಲ್ಲಿ ಆನ್ ಮಾಡಿಕೊಂಡು ಮದ್ದಳೆ ವಾದನದ ಚಿತ್ರೀಕರಣ. ಬಳಿಕ, ಒಂದೊಂದಾಗಿ ದ್ರೌಪದಿ, ಶ್ರೀಕೃಷ್ಣ ಹಾಗೂ ಭೀಮ ಪಾತ್ರಗಳ ಅರ್ಥಗಾರಿಕೆಯನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು. ಕೌಂಡಿನ್ಯ ಶರ್ಮಾ ಶೀರ್ಷಿಕೆ ವಿನ್ಯಾಸ ಮಾಡಿದ್ದಾರೆ. ಬಟನ್ ಸ್ಟುಡಿಯೋಸ್ ಸಂಕಲನ ಸಹಾಯ ಒದಗಿಸಿದ್ದಾರೆ.

ಗೌರಿ ಕಾಕಡೆ, ವಾಸುದೇವ ರಂಗಭಟ್ಟ, ಸರ್ವೇಶ್ವರ ಹೆಗಡೆ, ಉಮಾಮಹೇಶ್ವರ ಮುಂತಾದವರು ಸಾಂದರ್ಭಿಕ ಸಹಕಾರ ನೀಡಿದ್ದಾರೆ. ಭೀಮನಕೋಣೆಯ ರಾಘವೇಂದ್ರ ಭಟ್ಟ ಮತ್ತು ಸ್ವರಾಂಜಲಿ ಸಂಸ್ಥೆಯವರು ಧ್ವನಿವರ್ಧಕ ಸೌಲಭ್ಯ ನೀಡಿದ್ದಾರೆ. ಧ್ವನಿಗ್ರಹಣ, ಸಂಕಲನ, ತಾಂತ್ರಿಕ ನಿರ್ದೇಶನವನ್ನು ಎಚ್.ಎಸ್. ದರ್ಶನ್ ಮಾಡಿದ್ದಾರೆ.

ನಂದ ನಂದನ ಸಖನೇ, ಶ್ರೀವನಿಯತೆಯರಸನೆ, ಜೀವಾಜೀವರ ನಿಲಿಸಿದಗೆ ಸೇರಿದಂತೆ ದೇವಿದಾಸ ವಿರಚಿತ ಪ್ರಸಂಗದ 20ಕ್ಕೂ ಹೆಚ್ಚು ಪದ್ಯಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ಪದ್ಯಗಳನ್ನು ಭಾರ್ಗವ ಅವರೇ ಭಾಗವತಿಕೆ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಚೆಂಡೆ ವಾದನ ಚಿತ್ರೀಕರಣವಾಗಿದ್ದರೂ ಬಳಕೆ ಆಗಿಲ್ಲ.

ಪ್ರಯೋಗದಲ್ಲಿ ಚೆಂಡೆ ವಾದನದ ಚಿತ್ರೀಕರಣ ಮಾಡಲಾಗಿತ್ತು. ಆದರೆ ಉಳಿದ ಪ್ರಸ್ತುತಿಯ ಜತೆ ಚೆಂಡೆ ವಾದನ ಹೊಂದಾಣಿಕೆ ಆಗದ ಕಾರಣ ಅದನ್ನು ಕೈಬಿಡಲಾಗಿದೆ. ಚೆಂಡೆ ವಾದನವನ್ನೂ ಸೇರಿಸಿದ್ದರೆ ಭಾರ್ಗವ ಅವರು ಒಟ್ಟೂ 6 ಕಾರ್ಯಗಳನ್ನು ನಿರ್ವಹಿಸದಂತೆ ಆಗುತ್ತಿತ್ತು.

ಭಾರ್ಗವ ಹೆಗ್ಗೋಡು ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ವರ್ಚುವಲ್ ಏಕವ್ಯಕ್ತಿ ತಾಳಮದ್ದಳೆ, ಹೊಸ ತಲೆಮಾರಿನ ಕಲಾಸಕ್ತಿ ಮತ್ತು ತಂತ್ರಜ್ಞಾನದ ಸಮ್ಮಿಶ್ರಣದಿಂದ ಕಲಾಕ್ಷೇತ್ರದ ಪ್ರಯೋಗ ಪರಂಪರೆಯ ಆಧುನಿಕ ಯತ್ನವಾಗಿದೆ. ಒಟ್ಟಂದದಲ್ಲಿ ಪರಿಣಾಮ ಮತ್ತು ಮಾಧ್ಯಮದ ಸಫಲತೆ ನಿಟ್ಟಿನಲ್ಲಿ ಕುತೂಹಲ ಮೂಡಿಸಿದೆ. ಯೂಟ್ಯೂಬ್‌ನಲ್ಲಿ ವರ್ಚುವಲ್ ತಾಳಮದ್ದಳೆಯ ಪ್ರೋಮೋ ಬಿಡುಗಡೆಯಾಗಿದ್ದು, ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಸಂಗೀತದ ರೆಕಾರ್ಡಿಂಗ್‌ಗೆ ಲಯವನ್ನು ಒದಗಿಸುವ ಮೆಟ್ರೋನೊಮ್ ಆ್ಯಪ್ ಬಳಸಲಾಗಿದೆ. ಯಕ್ಷಗಾನದ ಲಯದ ಪರಿಕಲ್ಪನೆ ಸಂಗೀತದ ಲಯಕ್ಕಿಂತಲೂ ಬೇರೆಯಾಗಿದೆ. ಓಘದ ಸಮಸ್ಯೆ ಆಗದಂತೆ ಯಕ್ಷಗಾನದಲ್ಲಿ ನಿಧಾನ ಲಯದಲ್ಲಿಯೂ ಸ್ವಲ್ಪ ಲಯ ಓಡಬೇಕು. ಹಾಗಾಗಿ ಮೆಟ್ರೋನೊಮ್ ಬಳಕೆ ಯಕ್ಷಗಾನದ ರೂಢಿಗೆ ಸ್ವಲ್ಪ ಕಿರಿಕಿರಿಯಾಗುತ್ತಿತ್ತು. ನಾಟಕದ ಹಾಡುಗಳಿಗೆ ಸಂಗೀತ ರೆಕಾರ್ಡ್ ಮಾಡುವಾಗ ಮೆಟ್ರೋನೊಮ್ ಬಳಕೆ ನನಗೆ ಸಮಸ್ಯೆ ಆಗುವುದಿಲ್ಲ. 3 ಪಾತ್ರಗಳ ಅರ್ಥ ಹೇಳುವ ಸಂದರ್ಭ ಎದುರು ಪಾತ್ರದ ಸ್ಪಂದನೆ ಇಲ್ಲದ ಕಾರಣ ಭಾವತಲ್ಲೀನತೆ ಕಾಪಾಡಿಕೊಳ್ಳುವುದು ಸ್ವಲ್ಪ ಸವಾಲಾಗಿತ್ತು ಎನ್ನುತ್ತಾರೆ ಭಾರ್ಗವ ಹೆಗ್ಗೋಡು.

ಮತ್ತೊಬ್ಬರ ಯತ್ನದಿಂದ ಗಟ್ಟಿಯಾದ ಯೋಚನೆ
ಕೆ.ದಿವಾಕರ ಹೆಗಡೆ ಏಕವ್ಯಕ್ತಿ ತಾಳಮದ್ದಳೆ ನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಅವರ ಪ್ರದರ್ಶನದಲ್ಲಿ ಹಿಮ್ಮೇಳದ ಹೊಣೆ ನಿರ್ವಹಿಸಿದ್ದೇನೆ. ಬಹಳ ದಿನಗಳಿಂದ ವರ್ಚುವಲ್ ತಾಳಮದ್ದಳೆ ಮಾಡಬೇಕು ಎಂಬ ಆಸೆ ಇತ್ತು. ಸಂಚಿ ಫೌಂಡೇಶನ್ ಅವರು ನೀನಾಸಮ್‌ನಲ್ಲಿ ಡಾ.ಗಣೇಶ್ ಮೇಷ್ಟ್ರ ನಟನೆಯಲ್ಲಿ "ಬಹುಮುಖಿ " ಎನ್ನುವ ನಾಟಕವನ್ನು ಇದೇ ತಂತ್ರಜ್ಞಾನದಲ್ಲಿ ಮಾಡಿಸಿದ್ದಾರೆ. ಯೌಟ್ಯೂಬ್‌ನಲ್ಲಿ ಅದು ಲಭ್ಯ ಇದೆ. ಆ ನಾಟಕದಲ್ಲಿ ಡಾ. ಗಣೇಶ್ 3 ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದ್ದಾರೆ. ಈಚೆಗೆ ಯಕ್ಷಗಾನದ ಚೆಂಡೆ ವಾದಕ ಹೆಗ್ಗಾರು ಪ್ರಸನ್ನ ಚಂಡೆ ಜುಗಲ್ಬಂದಿ ಚಿತ್ರೀಕರಿಸಿದ್ದಾರೆ. ಈ ಎಲ್ಲಾ ಯತ್ನಗಳ ಪ್ರಭಾವದಿಂದ ನನ್ನ ನಿಶ್ಚಯ ಗಟ್ಟಿ ಆಯ್ತು. ಎಲ್ಲರ ಬೆಂಬಲದಿಂದ ಇದು ಸಾಧ್ಯವಾಗಿದೆ. ಕಲಾಸಕ್ತರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಸಹಜವಾಗಿದೆ.
ಭಾರ್ಗವ ಹೆಗ್ಗೋಡು.

ಪ್ರಯೋಗ ಪರಂಪರೆಯಲ್ಲಿ ಶ್ರೀಕೃಷ್ಣ ಸಂಧಾನ
ಶ್ರೀಕೃಷ್ಣ ಸಂಧಾನ ಯಕ್ಷಗಾನದ ಪ್ರಸಿದ್ಧ ಪ್ರಸಂಗ. ಪ್ರದರ್ಶನ ಪರಂಪರೆಗೆ ಸುಮಾರು 100 ವರ್ಷಗಳ ಇತಿಹಾಸವಿದೆ. 1800ರ ಸುಮಾರಿಗೆ ಕವಿ ದೇವೀದಾಸನು ಕೃಷ್ಣಸಂಧಾನ ಪ್ರಸಂಗ ರಚಿಸಿದ್ದಾನೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.

ರಂಗಸ್ಥಳ ಪ್ರಸ್ತುತಿ ಹಾಗೂ ತಾಳಮದ್ದಳೆಯಲ್ಲಿ ಸಾಕಷ್ಟು ಪ್ರದರ್ಶನ ಹಾಗೂ ಪ್ರಯೋಗಗಳಿಗೆ ಈ ಪ್ರಸಂಗ ಅವಕಾಶ ಕಲ್ಪಿಸಿದೆ. ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರು ಕೃಷ್ಣ ಸಂಧಾನ ಪ್ರಸಂಗ ಪ್ರಯೋಗ ಕುರಿತು ಸಂಶೋಧನಾ ಕೃತಿ ಪ್ರಕಟಿಸಿದ್ದಾರೆ. ಕೃಷ್ಣ ಸಂಧಾನದ ರಂಗಪ್ರದರ್ಶನ ಮತ್ತು ತಾಳಮದ್ದಳೆ ಸಂಬಂಧವಾಗಿ ನೆನಪಾಗುವ ಹಲವು ಸುಪ್ರಸಿದ್ಧ ಕಲಾವಿದರಿದ್ದಾರೆ. ಅಸಂಖ್ಯ ಪ್ರದರ್ಶನಗಳ ನಡುವೆಯೂ ಕೃಷ್ಣ ಸಂಧಾನ ಹೊಸ ಸಾಧ್ಯತೆಗಳ ಹೇರಳ ಅವಕಾಶವನ್ನು ಇಟ್ಟುಕೊಂಡಿದೆ. ನಿತ್ಯನೂತನ ಕಲಾಕಾಣಿಕೆಯಾಗಿ ಸಲ್ಲುತ್ತಿದೆ. ಕೃಷ್ಣ ಸಂಧಾನದ ವರ್ಚುವಲ್ ಏಕವ್ಯಕ್ತಿ ತಾಳಮದ್ದಳೆ ಪ್ರಾಯಶಃ ಮೊತ್ತ ಮೊದಲ ಯತ್ನ ಇದಾಗಿದ್ದು, ಕೃಷ್ಣಸಂಧಾನ ಪ್ರಯೋಗ ಪರಂಪರೆಗೆ ಆಧುನಿಕ ಕಾಲದ ಕೊಡುಗೆ ದಾಖಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT