‍ಪ್ರವಾಸದ ಹುಮ್ಮಸ್ಸು ಪ್ರಾಣಕ್ಕೆ ಆಪತ್ತು

7

‍ಪ್ರವಾಸದ ಹುಮ್ಮಸ್ಸು ಪ್ರಾಣಕ್ಕೆ ಆಪತ್ತು

Published:
Updated:
Deccan Herald

ಗೋವಾ ಕಡಲ ತೀರದಲಿ ತೇಲಾಡಬೇಕು ಎನ್ನುವ ಕನಸು ಹಳೆಯದು. ಇದು ನನಸಾಗುವ ಸುಸಮಯ ಕೂಡಿ ಬಂದಿತ್ತು. 2014 ರ ಏಪ್ರಿಲ್‌ ತಿಂಗಳಲ್ಲಿ ಗೋವೆಯ ಕಡಲ ತೀರಕ್ಕೆ ಹೋಗಿ ನಿಂತದ್ದು ನಾನು ಒಬ್ಬನೆ. ಅದೊಂದು ಅಪರೂಪದ ಲೋಕ. ಹತ್ತಾರು ದೇಶದ, ನೂರಾರು ಭಾಷೆಯ ಸಾವಿರಾರು ಜನರು ಮೀನಿನಂತೆ ತೇಲಾಡುತಿರಲು ನಾನು ಹೇಗೆ ಮೂಕಪ್ರೇಕ್ಷಕನಂತೆ ನಿಲ್ಲಲು ಸಾಧ್ಯ?

ಒಂದೊಂದೇ ಹೆಜ್ಜೆಯನ್ನು ಇಡುತ್ತ ಸಮುದ್ರಕ್ಕೆ ಇಳಿಯತೊಡಗಿದೆ. ಕಾಯ್ದ ಕಬ್ಬಿಣವ ತಣ್ಣನೆಯ ನೀರಿನಲ್ಲಿ ಇಳಿಬಿಟ್ಟಾಗ ಚುರುಗುಡುವಂತೆ ಮೈ ಜುಮ್ಮೆನ್ನ ಹತ್ತಿತು. ಸಮುದ್ರದ ಮಧ್ಯದಲ್ಲಿ ನಿಂತು ಯಾರು ನನ್ನನ್ನು ಕರೆಯುತ್ತಿದ್ದರೋ ಗೊತ್ತಿಲ್ಲ. ನಾನು ನಿಧಾನವಾಗಿ ನೀರಿನಲ್ಲಿ ಇಳಿಯುತ್ತಲೇ ಇದ್ದೆ. ತೆರೆಗಳು ಬಾ, ಬರಬೇಡ ಎಂಬಂತೆ ಅತ್ತಿತ್ತ ನೂಕುತ್ತಲೇ ಇದ್ದವು. ನೀರು ಕತ್ತಿನ ಸಮ ಬಂದಾಗಿತ್ತು. ಹೆಜ್ಜೆಗಳು ನೀರಲ್ಲಿ ತೇಲಹತ್ತಿದವು. ರಾಕ್ಷಸ ಸ್ವರೂಪಿ ಅಲೆ ಎಲ್ಲಿಂದ ಬಂತೊ ನಾ ಕಾಣೆ. ಕಣ್ಣು ಮಿಟುಕಿಸುವುದರೊಳಗಾಗಿ ಸಮುದ್ರದಲ್ಲಿ ಸುಮಾರು 30 ಮೀಟರ್ ಒಳಗಡೆ ಹೋಗಿದ್ದೆ. ತೀರದ ಮರಳು ಮುಟ್ಟುವ ಸ್ಪರ್ಧೆ ಎಂಬಂತೆ ಈಜಾಡಲು ಆರಂಭಿಸಿದೆ.  ಮಳೆರಾಯ ಮತ್ತು ಜವರಾಯನ ದರ್ಶನ ಒಮ್ಮೆಲೇ ಆಯಿತು. ಒಂದು ಕ್ಷಣದಲ್ಲಿ ಈ ಏಕಾಂಗಿ ಪ್ರವಾಸ ಮತ್ತು ಈ ಸಾಹಸ ಬೇಕಿತ್ತಾ ಅನ್ನಿಸಿತು. ಜಲಸಮಾಧಿ ನಾನಾದೆ ಎಂದುಕೊಂಡೆ.

ಸಮುದ್ರಕ್ಕೆ ಕೋಪ ಎಲ್ಲಿಂದ ಬಂತೊ ಏನೋ, ನನ್ನನ್ನು ಎಳೆದೊಯ್ದ ಶತ್ರುವಿನಂತೆ ತೀರದ ಮರಳಿನ ಮೇಲೆ ಮಲಗಿಸಿ ಬದುಕಿಕೊಹೋಗು ಎಂದು ಹೇಳಿ ಹೋಗಿತ್ತು. ಎಚ್ಚರವಾದ ಮೇಲೆ ಕಣ್ಣುತೆರೆದು ನೋಡಿದರೆ ನಾನು ಗೋವಾದ ಸರ್ಕಾರಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದೆ. ಸುತ್ತಲೂ ಸ್ನೇಹಿತರು ಬಂದು ಕುಳಿತಿದ್ದರು.

ಅಶೋಕ ರಾ ಅಂಬಾಜಿ, ಸುಟ್ಟಟ್ಟಿ, ಅಥಣಿ, ಬೆಳಗಾವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !