ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದುಡದ ಪತ್ರ, ಮಸುಕಾಗದ ಅಕ್ಷರ

Last Updated 13 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಹಾಯ್ ಕೆಕೆ...

ಒಂದು ಕ್ಷಣವೂ ಪರಸ್ಪರ ಮುಖ ನೋಡದೇ, ಫೋನ್‌ನಲ್ಲಿ ಒಮ್ಮೆ ಕೂಡ ಹೆಲೋ ಹೇಳದೇ, ಭೇಟಿಯಾಗುವ ಸಂದರ್ಭ ಸ್ವಲ್ಪವೂ ಸಿಗದೇ, ನೀನಿದ್ದ ಊರಿಗೆ ನಾ ಬರಲಾಗದೇ-ನಾನಿದ್ದ ಊರಿಗೆ ನೀ ಕಾಲಿಡಲಾಗದೇ, ನೀನು ಹೀಗಿರುವೆಯೆಂದು ನಾನು ನಿರೀಕ್ಷೆಗಳ ಮೂಟೆ ಕಟ್ಟಿಕೊಳ್ಳುತ್ತ-ನಾನು ಹೀಗಿರುವೆ ಎಂದು ನೀನು ಕುತೂಹಲ ಮೂಡಿಸಿಕೊಳ್ಳುತ್ತ... ಹೀಗೆ ಸರಿಯಾಗಿ 22 ವರ್ಷಗಳು ಕಳೆದುಬಿಟ್ಟವು.

ಬಿಳಿ ಕಾಗದದ ಮೇಲಿನ ಅಕ್ಷರಗಳಿಂದ ಬೆಸೆದ ನಮ್ಮಿಬ್ಬರ ಸಂಬಂಧಕ್ಕೆ ಈಗಲೂ ಈ ಕ್ಷಣಕ್ಕೂ ಹೆಸರಿಡಲು, ಸ್ಪಷ್ಟ ಚೌಕಟ್ಟು ಹಾಕಲು ಆಗುತ್ತಿಲ್ಲ. ಸುದೀರ್ಘ ಹೇಳಬೇಕೆನ್ನಿಸಿದಾಗ 4 ರಿಂದ 5 ಪುಟಗಳ ಪತ್ರ, ಸ್ವಲ್ಪವೇ ಹಂಚಿಕೊಳ್ಳಬೇಕು ಅನ್ನಿಸಿದಾಗ ಇನ್‌ಲ್ಯಾಂಡ್‌ ಲೆಟರ್, ತುರ್ತಾಗಿ ಹೇಳಲು ಪುಟ್ಟ ಪೋಸ್ಟ್ ಕಾರ್ಡ್‌. ಮನಸ್ಸಿಗೆ ಖುಷಿಯಾದಾಗ-ವಿಶ್ ಮಾಡಬೇಕು ಅನ್ನಿಸಿದಾಗ ಗ್ರೀಟಿಂಗ್ ಕಾರ್ಡ್‌ಗಳಂತೂ ಕಾಯಂ ಇರುತ್ತಿದ್ದವು. ನಮ್ಮ ನಡುವಿನ ಭಾವ ಲಹರಿಗೆ ಇವೆಲ್ಲವೂ ನೀರೆರೆದವು.

ನೀ ಬರೆದ ಮೊದಲ ಮತ್ತು ಕಟ್ಟಕಡೆಯ ಪತ್ರ ಈಗಲೂ ನನ್ನ ಬಳಿ ಸುಭದ್ರವಾಗಿದೆ. 2007ರಲ್ಲಿ ಬಾಂಧವ್ಯ ಗಟ್ಟಿಯಾಗಿ, ಇಬ್ಬರೂ ಭೇಟಿಯಾಗಲು ನಿರ್ಧರಿಸಿದೆವು. ಆದರೆ ದೇವರ ನಾಡಿನಿಂದ ನೀ, ಉದ್ಯಾನನಗರಿಯಿಂದ ನನಗೆ ಬರಲು ಸಾಧ್ಯವಾಗಲೇ ಇಲ್ಲ. ಮುಖತಃ ಭೇಟಿ ಆಗದೇ ಭಾವಚಿತ್ರಗಳನ್ನು ಹಂಚಿಕೊಳ್ಳುವುದು ಬೇಡವೆಂದು ಒಪ್ಪಂದ ಮಾಡಿಕೊಂಡಿದ್ದ ಕಾರಣ ಅದಕ್ಕೆ ಬದ್ಧರಾಗಿ ಉಳಿದೆವು. ನಾ ನಿನ್ನ ಭಾವಚಿತ್ರ ಕೇಳಲಿಲ್ಲ. ನನ್ನದೂ ಕಳುಹಿಸಲಿಲ್ಲ.

ಹುಬ್ಬಳ್ಳಿಯ ಎಸ್.ಕೆ.ಆರ್ಟ್ಸ್‌ ಕಾಲೇಜಿನಲ್ಲಿ ಓದುತ್ತಿದ್ದ ನಾನು ಅಲ್ಲಿನ ನೃಪತುಂಗ ಬೆಟ್ಟ, ಉಣಕಲ್ ರೈಲ್ವೆ ಸ್ಟೇಷನ್, ಗಾಜಿನ ಮನೆ ಮುಂತಾದವುಗಳ ಕತೆ ಹೇಳಿದರೆ, ನೀನು ಕೇರಳದ ಹಸಿರು ಸೊಬಗು, ಕೆರೆ ಮತ್ತು ಮೊಲ ಸಾಕಾಣಿಕೆ ಕತೆ ಹೇಳುತ್ತಿದ್ದೆ. 10 ವರ್ಷ ಆಗುವುದರೊಳಗೆ ಇಬ್ಬರೂ ಸಂಸ್ಥೆಗಳಲ್ಲಿ ಉದ್ಯೋಗ ಪಡೆದೆವು. ವಾರಕ್ಕೆ ಕನಿಷ್ಠ ಒಂದು ಅಥವಾ ಎರಡು ಪತ್ರ ಬರೆಯುತ್ತಿದ್ದ ನಮಗೆ ತಿಂಗಳಿಗೊಂದು ಪತ್ರ ಬರೆಯಲು ಕೂಡ ಕಷ್ಟ ಅನ್ನಿಸತೊಡಗಿತು. ಮನೆಗೆ ಲ್ಯಾಂಡ್‌ಲೈನ್‌, ಕೈಗೆ ಮೊಬೈಲ್ ಬಂತು. ಆದರೆ ಪತ್ರದೊಳಗಿನ ಭಾವತೀವ್ರತೆ ಮಾತುಗಳಲ್ಲಿ ದಕ್ಕಲೇ ಇಲ್ಲ.

ಇರಲಿ, ಈಗಷ್ಟೇ ಮನೆ ಸ್ವಚ್ಛಗೊಳಿಸಲು ಪುರಾತನ ಟ್ರಂಕ್ ಹೊರತೆಗೆದು ದೂಳು ಜಾಡಿಸುವಾಗ, ನಿನ್ನ ರಾಶಿಯಷ್ಟು ಪತ್ರಗಳು ಸಿಕ್ಕವು. ಬದುಕಿನ ಜಂಜಾಟದಲ್ಲಿ ಎಲ್ಲವೂ ಕಳೆದುಹೋದವು ಎಂದು ನಿರಾಸೆಗೊಂಡಿದ್ದ ನನಗೆ ಆ ಪತ್ರಗಳೇ ಮತ್ತೆ ಜೀವ ತುಂಬಿದವು. ನೀನು ನಂಬುತ್ತಿಯೋ, ಬಿಡ್ತಿಯೋ...ಈಗಲೂ ಒಂದು ಪತ್ರವೂ ಮುದುಡಿಲ್ಲ, ಒಂದು ಅಕ್ಷರವೂ ಮಸುಕಾಗಿಲ್ಲ. ನಿನ್ನೆ-ಮೊನ್ನೆಯದಷ್ಟೇ ಪತ್ರ ಎಂಬಂತೆ ತಾಜಾ ಸ್ಪರ್ಶವಿದೆ.

ಮತ್ತೇನೂ ಮಾಡಲಿ, ಎಲ್ಲಾ ಪತ್ರಗಳನ್ನು ಒಂದು ಕೆಂಪು ಬ್ಯಾಗ್‌ನಲ್ಲಿ ಕೂಡಿಟ್ಟೆ. ಎಲ್ಲಾ ಸ್ವಚ್ಛತಾ ಅಭಿಯಾನ ಮುಗಿಸಿಕೊಂಡು ಓದಿದರಾಯಿತು ಎಂದು ಮನಸ್ಸಿನಲ್ಲಿ ಹೇಳಿಕೊಂಡೆ.

ಸೈಕಲ್ ಬೆಲ್ ರಿಂಗ್ ಆದ ಕೂಡಲೇ ಪೋಸ್ಟ್‌ ಮ್ಯಾನ್‌ಗೆ ಹುಡುಕುತ್ತ ಮನೆಯಿಂದ ಹೊರಬಂದಿದ್ದು, ‘ದಿಲ್ ಸೇ’ ಚಿತ್ರದ ಯೇ ಅಜನಬಿ ತೂ ಭೀ..ಗೀತೆ ಗುಣುಗುಣಿಸುತ್ತ ಪತ್ರ ಬರೆದದ್ದು, ತೂಕದ ಗ್ರೀಟಿಂಗ್ ಕಾರ್ಡ್‌ಗೆ ತಕ್ಕುದಾದ ಮೌಲ್ಯದ ಸ್ಟಾಂಪು ಅಂಟಿಸದೆ ನೀನು ದಂಡ ಪಾವತಿಸುವಂತೆ ಮಾಡಿದ್ದು, ವಾರಪೂರ್ತಿ ಪತ್ರ ಬಾರದಿದ್ದಾಗ ಕೋಪದಿಂದ WHERE ARE YOU ಎಂದು ದಪ್ಪ ಅಕ್ಷರಗಳ ಒಂದೇ ಸಾಲನ್ನು ಬರೆದು ಪೋಸ್ಟ್ ಮಾಡಿದ್ದು, ಪೆದ್ದುಪೆದ್ದಾಗಿ ಏನೇನೋ ಬರೆದಿದ್ದು, ಜಗಳವಾಡಿದ್ದು-ಬುದ್ಧಿವಾದ ಹೇಳಿದ್ದು ಒಂದಾ...ಎರಡಾ.. ಎಲ್ಲವನ್ನೂ ಈಗ ಒಂದೊಂದಾಗಿ ಓದುತ್ತಿದ್ದರೆ, ಅದುಮಿಟ್ಟ ನಗು ತಡೆಯಲು ಆಗುತ್ತಿಲ್ಲ. ನಿಜಕ್ಕೂ ನಾವೇನಾ ಈ ಪತ್ರಗಳು ಬರೆದಿದ್ದು?

ಫೇಸ್‌ಬುಕ್‌, ವಾಟ್ಸ್ಆಪ್, ಟ್ವಿಟರ್, ಇನ್ಸ್ಟಾಗ್ರಾಮ್, ಟೆಲಿಗ್ರಾಮ್....ಈಗ ಎಂಥದ್ದೆಲ್ಲವೂ ಇವೆ. ಕೂತ-ನಿಂತ ಜಾಗದಲ್ಲೇ ವಿಡಿಯೋ ಕಾಲ್ ಮಾಡಬಹುದು. ನಮ್ಮಿಬ್ಬರ ನಡುವೆ ಮಾತ್ರ ಇರುತ್ತಿದ್ದ ಮಾತುಕತೆ ಈಗ ಇಡೀ ಜಗತ್ತಿಗೆ ಜಾಹೀರು ಮಾಡಬಹುದು. 22 ವರ್ಷಗಳ ನಮ್ಮ ಸಂಬಂಧ ‘ಫೆವಿಕಾಲ್‌‘ ಗಿಂತ ಸ್ಟ್ರಾಂಗ್ ಎಂದು ಗಟ್ಟಿಯಾಗಿ ಸಾರಿ ಸಾರಿ ಹೇಳಬಹುದು.

ಯಾರಾದರೂ ಈ ಪರಿ ಪತ್ರಗಳನ್ನು ಇಟ್ಟುಕೊಂಡಿದ್ದಾರಾ ಎಂದು ಚಾಲೆಂಜ್ ಎಸೆಯಬಹುದು. ಲೈಕ್ಸ್, ಕಾಮೆಂಟ್ಸ್, ಶೇರ್‌ಗಾಗಿ ಮನಸ್ಸಿಗೆ ತೋಚಿದ್ದೆಲ್ಲವೂ ಬರೆಯಬಹುದು. ಆದರೆ, ಯಾಕೋ ಇದ್ಯಾವುದರಲ್ಲೂ ನನಗೆ ಮನಸ್ಸಿಲ್ಲ. ಪತ್ರಗಳಲ್ಲಿ ಸಿಕ್ಕ ಹಿತ, ದೊರೆತ ಪ್ರೀತಿ, ವ್ಯಕ್ತವಾದ ಕಾಳಜಿ, ಮಿಳಿತವಾದ ಖುಷಿ ಇದ್ಯಾವುದಲ್ಲೂ ಸಿಗಲಿಲ್ಲ. ಬರೀ ಪತ್ರಗಳ ಮೂಲಕ ಭಾವನೆಗಳನ್ನು ಹಂಚಿಕೊಂಡರಾ? ಅದ್ಹೇಗೆ ಸಾಧ್ಯವಾಯಿತು ಎಂದು ಯಾರಾದರೂ ಅಚ್ಚರಿಪಟ್ಟರೆ, ಅವರಿಗೆ ಈ ಪತ್ರಗಳೇ ಸಾಕ್ಷಿ.

ನಮ್ಮಿಬ್ಬರ ಪರಿಚಯವಾಗಲು ಮತ್ತು ಎರಡು ದಶಕಗಳ ನಂತರವೂ ಬೆಸುಗೆ ಕಾಯ್ದುಕೊಂಡು ಹೋಗಲು ಕಾರಣವಾದ ಆ ಇಂಗ್ಲಿಷ್ ಪತ್ರಿಕೆಗೊಂದು ಥ್ಯಾಂಕ್ಸ್ ಹೇಳಲೇಬೇಕು. 1996ರಲ್ಲಿ ಪತ್ರಿಕೆಯ ಪುಟದಲ್ಲಿ ಪತ್ರಮಿತ್ರರ ಸಾಲಿನಲ್ಲಿ ನನ್ನ ಹೆಸರು-ವಿಳಾಸ ಪ್ರಕಟ ಆಗಿರದಿದ್ದರೆ ಮತ್ತು ನೀನು ಪತ್ರ ಬರೆಯದೇ ಇದ್ದಿದರೆ, ನಾನು ಈಗ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.

ಅಂದ ಹಾಗೆ, ನೀನು ನಿನ್ನ-ನಾನು ನನ್ನ ಕೆಲಸದಲ್ಲಿ ಬಿಜಿ. ಈಗ ಮಾತನಾಡುವಷ್ಟು ಸಮಯ-ತಾಳ್ಮೆ ಇಬ್ಬರಿಗೂ ಇಲ್ಲ. ರಾಶಿಗಟ್ಟಲೇ ಪತ್ರ ಸಿಕ್ಕಿದ್ದಕ್ಕೆ ಮತ್ತು ವಾರದ ರಜೆ ಇದ್ದಿದ್ದಕ್ಕೆ ಇಷ್ಟೆಲ್ಲ ಬರೆದೆ.

ಆಗಿನ ಕಾಲೇಜು ಹುಡುಗನಂತೆಯೇ ಈಗ ಈ ಪತ್ರವನ್ನು ಕವರ್‌ನಲ್ಲಿ ಹಾಕಿಕೊಂಡು, ಪೋಸ್ಟ್ ಆಫೀಸ್‌ನಲ್ಲಿ ಸ್ಟಾಂಪ್ ಖರೀದಿಸಿ, ಅದನ್ನು ಕವರ್‌ಗೆ ಅಂಟಿಸಿ, ಕೆಂಪು ಅಂಚೆ ಡಬ್ಬಿಯಲ್ಲಿ ಹಾಕಿ ಬರುವೆ. ಈ ಪತ್ರ ಸಿಕ್ಕ ಕೂಡಲೇ ನೀ ಪತ್ರ ಬರೀ..

ಬರೆಯುವೆ ತಾನೇ?

ಟೇಕ್ ಕೇರ್..

ಇಂತಿ ನಿನ್ನ...
ಆರ್‌ಆರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT