ಸಮಯ ಹೊಂದಿಸಿದರೆ ಒತ್ತಡ ಮಾಯ!

7

ಸಮಯ ಹೊಂದಿಸಿದರೆ ಒತ್ತಡ ಮಾಯ!

Published:
Updated:
Prajavani

ನಮ್ಮ ಮನಸ್ಸಿಗೆ ವಿರುದ್ಧವಾದ ಕೆಲಸಗಳನ್ನು ಮಾಡಿದಾಗ ನಮಗೇ ಅರಿವಾಗದಂತೆ ಒತ್ತಡ ಕಾಡುತ್ತದೆ. ನನ್ನ ಕ್ಷೇತ್ರದಲ್ಲಿ ಒತ್ತಡ ಶುರುವಾಗುವುದು ನಾನು ಮಾಡುವ ಕೆಲಸ ನನಗೆ ಇಷ್ಟವಾಗದಿದ್ದಾಗ. ಜೊತೆಗೆ ಮಾಡುವ ಕೆಲಸಕ್ಕೆ ಸಮಯದ ಅಭಾವ ಕಾಡಿದಾಗ. ಒಂದೇ ಕೆಲಸದಲ್ಲಿ ತೊಡಗಿರುವ ಎರಡು ಮನಸ್ಸುಗಳ ನಡುವೆ ಹೊಂದಾಣಿಕೆಯಾಗದಿದ್ದಾಗಲೂ ಒತ್ತಡ ಆರಂಭವಾಗುತ್ತದೆ. ನಮಗೆ ಕೆಲಸ ಹೇಳುವವರ ಸ್ವಭಾವ ಇಷ್ಟವಾಗದೇ ಇದ್ದಾಗ ಅವರು ಹೇಳುವ ಕೆಲಸ ನಮ್ಮಲ್ಲಿ ಒತ್ತಡವನ್ನು ಹೇರುತ್ತದೆ. ಸಾಮಾನ್ಯವಾಗಿ ಎಲ್ಲಾ ಕ್ಷೇತ್ರದಲ್ಲೂ ಒತ್ತಡದ ಭಾವ ಕಾಣಿಸಿಕೊಳ್ಳುವುದು ಈ ಎಲ್ಲಾ ಅಂಶಗಳಿಂದಲೇ ಎನ್ನುವುದು ನನ್ನ ಅಭಿಪ್ರಾಯ.

ಯಾವುದೇ ಕೆಲಸವಾಗಲಿ ನಮ್ಮ ಮನಸ್ಸಿಗೆ ಹಿಡಿಸಿ ಅದನ್ನು ಮಾಡುತ್ತಾ ಹೋದರೆ ಆಗ ಒತ್ತಡ ಎನ್ನಿಸುವುದಿಲ್ಲ. ಅದರ ಬದಲು ಆ ಕೆಲಸಕ್ಕೆ ಬೇಲಿ ಹಾಕುತ್ತಾ ಹೋದರೆ ಒತ್ತಡ ಬಿಡದಂತೆ ಕಾಡುತ್ತದೆ.

ನಾನು ಒತ್ತಡ ನಿಭಾಯಿಸಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸುತ್ತೇನೆ. ಅದರಲ್ಲಿ ಮುಖ್ಯವಾದುದು ‘ಟೈಮ್ ಟೇಬಲ್ ಹಾಗೂ ಟೈಮ್ ಮ್ಯಾನೇಜ್‌ಮೆಂಟ್‌’. ನಾಳಿನ ಕೆಲಸಗಳ ಬಗ್ಗೆ ಇಂದೇ ಟೈಮ್ ಟೇಬಲ್ ಹಾಕಿಕೊಳ್ಳುತ್ತೇನೆ. ಸಮಯದ ಹೊಂದಾಣಿಕೆ ಒತ್ತಡ ನಿವಾರಣೆಗೆ ಇರುವ ಪ್ರಮುಖ ಔಷಧ. ನಾಳೆ ನಾನು ಏನು ಮಾಡುತ್ತೇನೆ ಎಂಬುದರ ಬಗ್ಗೆ ಸ್ಪಷ್ಟತೆ ಇದ್ದರೆ ಕೆಲಸ ಸರಿಯಾಗಿ ನಡೆಯುತ್ತದೆ.

ಇನ್ನು ಒತ್ತಡ ನಿವಾರಣೆಗೆ ಇರುವ ಉತ್ತಮ ದಾರಿ ಎಂದರೆ ದೈಹಿಕ ಶ್ರಮ. ಯಾವತ್ತೂ ದೈಹಿಕ ವ್ಯಾಯಾಮಗಳಿಲ್ಲದೇ ಮನಸ್ಸನ್ನು ನೇರವಾಗಿ ನಮ್ಮ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಹಾಗಾಗಿ ದೈಹಿಕ ವ್ಯಾಯಾಮಗಳು ತುಂಬಾ ಮುಖ್ಯ. ಓಟ, ಯೋಗ ಹೀಗೆ ದೇಹಕ್ಕೆ ಶ್ರಮ ನೀಡುವ ಕೆಲಸಗಳನ್ನು ಮಾಡಿದಾಗ ದೇಹ, ಮನಸ್ಸು ಎರಡು ನಮ್ಮ ನಿಯಂತ್ರಣಕ್ಕೆ ಬರುತ್ತದೆ. ದೇಹ ಹೇಳಿದ ಮಾತು ಕೇಳಿದರೆ ಮನಸ್ಸು ಹೇಳಿದ ಮಾತು ಕೇಳುತ್ತದೆ ಎಂಬ ಪ್ರಮೇಯವೂ ಇದೆ.

ಇದರಿಂದ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಒಬ್ಬ ಸಂಗೀತಗಾರನಾಗಿ ಹೇಳಬೇಕು ಎಂದರೆ ಸಂಗೀತ ಎನ್ನುವುದು ಒಂದು ದೊಡ್ಡ ಪ್ರಪಂಚ. ಇದನ್ನು ಅಧ್ಯಾತ್ಮ ಎನ್ನಬಹುದು. ನಮ್ಮ ಹಿರಿಯರು ರಾಗಗಳನ್ನು ಯಾವ ರೀತಿ ಸಂಯೋಜಿಸಿದ್ದಾರೆ ಎಂದರೆ ಒಂದೊಂದು ರಾಗಕ್ಕೂ ಒಂದೊಂದು ಮೂಡ್ ಇರುತ್ತದೆ. ಸಂಗೀತ ಎನ್ನುವುದು ಯಾವುದೇ ರಾಕೆಟ್, ಸಾಟಲೈಟ್ ಇಲ್ಲದೇ ಮನುಷ್ಯನನ್ನು ಬೇರೊಂದು ಪ್ರಪಂಚಕ್ಕೆ ಕರೆದ್ಯೊಯುವ ಒಂದು ಅದ್ಭುತ ಶಕ್ತಿ. ಸಂಗೀತದಲ್ಲಿ ಸಕಲವೂ ಅಡಗಿದೆ.

ಕಂಠ ಕೈಕೊಟ್ಟಾಗ...

ಒಂದು ವರ್ಷದಿಂದ ನನಗೆ ಕಂಠದ ಸಮಸ್ಯೆ ಕಾಣಿಸಿಕೊಂಡಿತ್ತು. ಅದು ಇಡೀ ವರ್ಷ ನನಗೆ ಹಿಂಸೆ ಮಾಡಿತ್ತು. ಇದರಿಂದ ನನ್ನಲ್ಲಿ ಆತ್ಮವಿಶ್ವಾಸವೂ ಕುಗ್ಗಿ ಹೋಗಿತ್ತು. ಕೆಲಸದ ಒತ್ತಡದಿಂದ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡಲು, ವಿಶ್ರಾಂತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಕಂಠದ ಸಮಸ್ಯೆಗೆ ಅನೇಕ ಡಾಕ್ಟರ್‌ಗಳ ಬಳಿ ಹೋದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮೈಸೂರಿನ ಆಸ್ಪತ್ರೆಯೊಂದಕ್ಕೆ ತೋರಿಸಿದೆ. ಅವರು, ‘ನಿಮಗೆ ಒತ್ತಡ ಹೆಚ್ಚಾಗಿದೆ. ನೀವು ವಿಶ್ರಾಂತಿ ಮಾಡಿ, ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದಿದ್ದರು. ಆಮೇಲೆ ಎಲ್ಲವೂ ಒಂದು ಹಂತಕ್ಕೆ ಬಂದಿತ್ತು. ಇದು ನಾನು ನನ್ನ ಜೀವನದಲ್ಲಿ ಅತಿಯಾದ ಒತ್ತಡದಿಂದ ಹೊರ ಬಂದ ಘಟನೆ.

ನಾನು ಕಂಪೋಸ್ ಮಾಡಿರುವ ಹಾಡುಗಳಲ್ಲಿ ತುಂಬಾ ಇಷ್ಟವಾದ ಹಾಡು ಎಂದರೆ ರಾಮಾ ರಾಮಾ ರೇ ಸಿನಿಮಾದ ‘ಕೇಳು ಕೃಷ್ಣ, ಕೇಳು ಪಾರ್ಥ, ಅಮ್ಮ ತಾನೇ ದೇವರು’ ಹಾಡುಗಳನ್ನು ಕೇಳಿದಾಗ ನನಗೆ ಅವು ಸದಾ ಖುಷಿ ಕೊಡುತ್ತವೆ, ಅದನ್ನು ಕೇಳಿದಾಗ ಏನೋ ಒಂದು ನೆಮ್ಮದಿಯ ಭಾವ ನನ್ನಲ್ಲಿ ಮೂಡುತ್ತದೆ. ಅದರ ಸಂಗೀತ, ನನಗೆ ಅದರೊಟ್ಟಿಗೆ ಇರುವ ನೆನಪುಗಳು ಇವೆಲ್ಲವೂ ನನ್ನಲ್ಲಿ ಒತ್ತಡದ ಭಾವವನ್ನು ಮರೆಸುತ್ತವೆ.

ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ಒತ್ತಡದ ಪ್ರಮಾಣದ ಬಗ್ಗೆ ಹೇಳಬೇಕು ಎಂದರೆ ಹಿಂದಿನ ಕಾಲದಲ್ಲಿ ಹೆಚ್ಚು ನೆಮ್ಮದಿಯಿತ್ತು. ಆ ಕಾಲದವರಿಗೆ ಈಗಿನಷ್ಟು ಒತ್ತಡ, ಹಪಹಪಿ, ಅಬ್ಬರಗಳಿರಲಿಲ್ಲ. ಆದರೆ ಈಗ ಎಲ್ಲದರಲ್ಲೂ ಒಂದು ಅಬ್ಬರವಿದೆ. ಮೊದಲೆಲ್ಲಾ ತಾಳ್ಮೆಯಿಂದ ವ್ಯವಹರಿಸುತ್ತಿದ್ದರು.

ಹಿಂದಿನ ಕಾಲದಲ್ಲಿ ಕಲಿಕೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ನಿಧಾನವಾಗಿ ಕಲಿಯುತ್ತಿದ್ದರು. ಈಗ ಎಲ್ಲವೂ ಬದಲಾಗಿದೆ. ಸಣ್ಣ ವಯಸ್ಸಿಗೆ ಸಿಕ್ಕಾಪಟ್ಟೆ ಹೆಸರು ಬರುತ್ತದೆ. ಆ ವಯಸ್ಸಿನಲ್ಲಿ ಅದನ್ನು ನಿಭಾಯಿಸುವುದು ಹೇಗೆ ಎಂಬುದು ತಿಳಿಯುವುದಿಲ್ಲ. ಹಾಗಾಗಿ ಎಲ್ಲವೂ ದಿಢೀರ್ ಎಂದು ಹೋಗುತ್ತವೆ. ಆಗ ಒತ್ತಡ ಕಾಡುತ್ತದೆ!

ಅಲ್ಲದೆ, ನಾವು ಇಂದು ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಧ್ಯೆ ಕಳೆದು ಹೋಗುತ್ತಿದ್ದೇವೆ. ಈಗ ಒಂದು ಒಳ್ಳೆಯ ಉಸಿರಾಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಎಲ್ಲವೂ ಮನುಷ್ಯನನ್ನು ಒತ್ತಡಕ್ಕೆ ಸಿಲುಕಿಸಿ ಒತ್ತಡದ ನಡುವೆ ಬದುಕುವಂತೆ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !