ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಭವನ – ಮುದ ಮೂಡಿಸುವ ಪ್ರಹಸನ

Last Updated 4 ಜೂನ್ 2022, 20:15 IST
ಅಕ್ಷರ ಗಾತ್ರ

ವಿದ್ಯಾರ್ಥಿಭವನ ಬೆಂಗಳೂರು ದಕ್ಷಿಣದಲ್ಲಿರುವ ಹೆಸರಾಂತ ದೋಸೆ ಹೋಟೆಲ್. 1943ರಲ್ಲಿ ಪ್ರಾರಂಭವಾದ ಹೋಟೆಲ್ ಈವರೆಗೆ ನಿರಂತರವಾಗಿ ಆಸಕ್ತರ ನಾಲಗೆಯ ಅಪೇಕ್ಷೆಯನ್ನು ಗುಣಕಳೆದುಕೊಳ್ಳದೆ ಈಡೇರಿಸುತ್ತಿದೆ. ವಿದ್ಯಾರ್ಥಿಗಳಿಗಾಗಿಯೇ ಈ ಫಲಾಹಾರ ಮಂದಿರ ಪ್ರಾರಂಭವಾದುದರಿಂದ ಅದು ಆಗ ವಿದ್ಯಾರ್ಥಿಭವನ ಎಂಬ ನಾಮಫಲಕ ಧರಿಸಿತು. 1973ರಲ್ಲಿ ನಾನು ಬೆಂಗಳೂರಿಗೆ ಬಂದದ್ದು. ಅಲ್ಲಿಂದ ಈವರೆಗೆ ವಿದ್ಯಾರ್ಥಿಭವನ ನನಗೆ ಪ್ರಿಯವಾದ ಸ್ಥಳ. ಎಲ್ಲ ವರ್ಗದ, ಎಲ್ಲ ಸ್ತರದ ಜನ ಅಲ್ಲಿಗೆ ಬರುತ್ತಾರೆ. ರಾಜಕೀಯ ಧುರೀಣರು, ಖ್ಯಾತನಾಮರಾದ ಸಾಹಿತ್ಯವರೇಣ್ಯರು, ಜನಪ್ರಿಯರಾದ ಗಾಯಕರು, ಐ.ಟಿ, ಬಿ.ಟಿ ಸರದಾರರು ಹೀಗೆ ಎಲ್ಲರೂ ವಿದ್ಯಾರ್ಥಿಭವನದ ಹೊಕ್ಕಾಟ ಉಳ್ಳವರು. ಹೀಗಾಗಿ ವಿದ್ಯಾರ್ಥಿಭವನದ ದೋಸೆಯ ಕಂಪಿನೊಂದಿಗೆ ಆಪ್ತವಾದ ಅನೇಕ ಸಾಂಸ್ಕೃತಿಕ ನೆನಪುಗಳು ಸ್ಮರಣೆಯ ಸುರುಳಿ ಬಿಚ್ಚುತ್ತವೆ. ಮಾಸ್ತಿ, ಕೈಲಾಸಂ, ರಾಜರತ್ನಂ, ಜಿ.ಎಸ್.ಎಸ್, ಅಶ್ವತ್ಥ, ಅನಂತಸ್ವಾಮಿ, ಲಂಕೇಶ್, ವೈ.ಎನ್.ಕೆ ಮುಂತಾದವರಿಗೆ ಅದು ಪ್ರಿಯವಾದ ಸ್ಥಳವಾಗಿತ್ತು ಎನ್ನುವುದೇ ನಮ್ಮನ್ನು ಅದರತ್ತ ಸೆಳೆಯಲು ಸಾಕು! ಹೆಚ್ಚು ಕಮ್ಮಿ ಎಂಭತ್ತು ವರ್ಷಗಳ ದೀರ್ಘ ಇತಿಹಾಸವಿದೆ ಈ ಉಣ್ದಾಣಕ್ಕೆ!

ವಿದ್ಯಾರ್ಥಿಭವನದ ವಿಶೇಷ ಅದರ ಗರಿಮುರಿ ಮಸಾಲೆದೋಸೆ. ವಿಸೀ ಅವರ ಮಸಾಲೆ ದೋಸೆ ಎಂಬ ಪ್ರಬಂಧವನ್ನು ಹಳ್ಳಿಯಲ್ಲಿದ್ದಾಗಲೇ ಓದಿ ಆಕರ್ಷಿತರಾದ ನನ್ನಂಥವರಿಗೆ ನಾವು ಸಾಹಿತ್ಯದಲ್ಲಿ ಆಸ್ವಾದಿಸಿದ ದೋಸೆ ಕಣ್ಮುಂದೆ ಧುತ್ತೆಂದು ಪ್ರತ್ಯಕ್ಷವಾಗುವುದು ರೋಚಕ ಪವಾಡವೇ! ಇತ್ತೀಚೆಗೆ ವಿದ್ಯಾರ್ಥಿಭವನದ ಮಿತ್ರರಾದ ಅರುಣ ಅವರು ನನ್ನನ್ನು ಸಂಪರ್ಕಿಸಿ, ತಮ್ಮ ಹೋಟೆಲ್ ಬಗ್ಗೆಯೇ ಒಂದು ನಾಟಕ ಸಿದ್ಧವಾಗಿದೆಯೆಂದೂ, ಅದರ ಪ್ರಯೋಗ ಚೌಡಯ್ಯ ಸ್ಮಾರಕ ಭವನದಲ್ಲಿ ಇರುವುದೆಂದೂ, ಆ ಪ್ರಯೋಗಕ್ಕೆ ತಪ್ಪದೆ ಬರಬೇಕೆಂದೂ ಹಕ್ಕೊತ್ತಾಯ ಮಂಡಿಸಿದರು! ನಾನೂ ನನ್ನ ಕವಿಮಿತ್ರರಾದ ಲಕ್ಷ್ಮಣರಾಯರೂ ಹೋಟೆಲ್ ಒಂದರ ಬಗ್ಗೆ ಎಂಥ ನಾಟಕ ಮಾಡುವರು... ಕರೆದರಲ್ಲಾ ಎಂದು ಹೋಗಬೇಕಷ್ಟೆ ಎಂದು ಮಾತಾಡಿಕೊಂಡೆವು.

ಹಿಂದಿನಿಂದ ನಾಟಕದ ಸ್ಕ್ರಿಪ್ಟ್ ರಾಜೇಂದ್ರ ಕಾರಂತರದ್ದು, ನಿರ್ದೇಶನ ಅರ್ಜುನ ಕಬ್ಬಿಣ ಅವರದ್ದು, ಸಂಗೀತ ಪ್ರವೀಣ್ ಮತ್ತು ಪ್ರದೀಪ್ ಅವರದ್ದು ಎಂಬುದು ತಿಳಿದಾಗ ನಾಟಕದ ಪ್ರಯೋಗದ ಬಗ್ಗೆ ಸಹಜವಾಗಿಯೇ ಆಸಕ್ತಿ ಮೂಡಿತು. ಸಿಹಿ ಕಹಿ ಚಂದ್ರು ಪ್ರಧಾನ ಭೂಮಿಕೆ ವಹಿಸುವರೆಂಬುದು ಮತ್ತಷ್ಟು ಕುತೂಹಲ ಕೆರಳಿಸಿತು. ಸುಂದರ್ ವೀಣಾ ಅವರನ್ನೂ ಒಳಗೊಂಡಂತೆ 30ಕ್ಕೂ ಹೆಚ್ಚು ಮಂದಿ ಕಲಾವಿದರು ರಂಗಭೂಮಿಯ ಮೇಲೆ ಕಾಣಿಸುವವರಿದ್ದರು. ಹೇಗಾಗುತ್ತೋ ನೋಡುವ ಎಂದು ನಾನಂತೂ ಅರ್ಧ ಮನಸ್ಸಲ್ಲೇ ರಂಗಮಂದಿರಕ್ಕೆ ಹೋದದ್ದು!

ನಾಟಕ ನಿಗದಿತ ವೇಳೆಗೆ ಪ್ರಾರಂಭವಾಯಿತು. ವಿದ್ಯಾರ್ಥಿಭವನದ ಪ್ರವೇಶ ದ್ವಾರದ ರಂಗಸಜ್ಜಿಕೆ. ಒಳಗೆ ಗ್ರಾಹಕರು ಕುಳಿತುಕೊಳ್ಳಲು ಟೇಬಲ್ಲು, ಕುರ್ಚಿಗಳು. ಹೋಟೆಲ್ಲಿನ ತಿಂಡಿ ಒದಗಣೆಕಾರರು! ಅವರಲ್ಲಿ ವಿದ್ಯಾರ್ಥಿಭವನದ ಗೋಡೆಗೆ ಜೋತು ಬಿದ್ದಿರುವ ಕವಿ ಕಲಾವಿದರ ಚಿತ್ರಗಳನ್ನು ಬರೆದು ದಶಕಗಳ ಸೇವೆಯ ನಂತರ ನಿವೃತ್ತರಾದ ಮೂರ್ತಿಯವರ ಪಾತ್ರವೂ ಉಂಟು. ವಿದ್ಯಾರ್ಥಿಭವನಕ್ಕೆ ಡಾ. ರಾಜಕುಮಾರರು ಬಂದಿದ್ದಾರೆ. ಕೈಲಾಸಂ ಬಂದಿದ್ದಾರೆ, ರಾಮಕೃಷ್ಣ ಹೆಗಡೆ ಮೊದಲಾದ ರಾಜಕೀಯ ನಾಯಕರು ಬಂದಿದ್ದಾರೆ, ನಿಸಾರ್ ಅಹಮದ್‌ ಅವರಂತಹ ಕವಿಗಳೂ
ಅಶ್ವತ್ಥರಂಥ ವಿಖ್ಯಾತ ಗಾಯಕರೂ ಬಂದಿದ್ದಾರೆ.

ರಂಗದ ಮೇಲೆ ಆವತ್ತು ಸಂಭವಿಸಿದ್ದೂ ಅದೇ. ಒಬ್ಬೊಬ್ಬರಾಗಿ ಈ ಜನಮೆಚ್ಚಿನ ವಿಖ್ಯಾತರನ್ನು ಹೋಟೆಲ್ಲಿಗೆ ಕರೆತಂದು ಅವರವರ ಕಲೆಯ ಮಿಂಚು ರಂಗದ ಮೇಲೆ ಸಹಜವಾಗಿ ಸಂಭವಿಸುವಂತೆ ಮಾಡಿ, ಎಂಭತ್ತು ವರ್ಷಗಳ ಸವಿ ನೆನಪುಗಳನ್ನು ವಿದ್ಯಾರ್ಥಿಭವನದ ಕೇಂದ್ರ ನಾಯಕನಾದ ಮಸಾಲೆದೋಸೆ ನಿರೂಪಿಸುತ್ತಾ ಹೋಗುತ್ತದೆ! ನಿಸಾರ್ ಪದ್ಯ ವಾಚನ, ಅಶ್ವತ್ಥರ ಸಂಗೀತ, ರಾಜಕುಮಾರರ ಹಿತವಾದ ಕನ್ನಡ, ವೈ.ಎನ್.ಕೆ ಅವರ ಜೋಕು, ಕೈಲಾಸಂ ಅವರ ಹಾಡು, ಇನ್ಫೊಸಿಸ್‌ ನಾರಾಯಣಮೂರ್ತಿಯವರು ಅರುಣ್ ಅವರಿಗೆ ನೀಡುವ ಹಿತವಚನ ಒಂದೊಂದೂ ರೋಚಕ!

ಪರವಾಗಿಲ್ಲವೇ ವಿದ್ಯಾರ್ಥಿಭವನದ ದೋಸೆಯ ರಸಿಕತೆ ವಿಸ್ತಾರವಾದದ್ದು ಅನ್ನಿಸಿ ತೆಳುವಾದ ಮುಗುಳ್ನಗೆ ಮುಖದಲ್ಲಿ ಅರಳಿತು! ಆಪ್ತವಾದ ಈ ಹಿಲೇರಿಯಸ್ ನಾಟಕವನ್ನು (ಪ್ರಹಸನವನ್ನು!) ನೆನಪುಗಳ ಮರು ಜಾಗರಣೆ ಅನ್ನೋಣವೇ? ಜನಪ್ರಿಯ ಸಾಧಕರ ಆಪ್ತ ತುಂಡು ನೋಟಗಳೆನ್ನೋಣವೇ? ವಿದ್ಯಾರ್ಥಿಭವನದ ರುಚಿ ಮತ್ತು ಅಭಿರುಚಿಗಳ ಆಪ್ತ ಅಭಿವ್ಯಕ್ತಿ ಎನ್ನೋಣವೇ? ನಿಸಾರ್ ಅಹಮದ್, ಅಶ್ವತ್ಥ, ರಾಜಕುಮಾರ್-ಒಂದೊಂದು ಪಾತ್ರವೂ ತನ್ನ ಮಾತು ನಡಾವಳಿಗಳಿಂದ ಪ್ರೇಕ್ಷಕರನ್ನು ಮರುಳುಮಾಡಿದ್ದಂತೂ ಮೆಚ್ಚಬೇಕಾದದ್ದೇ! ದೋಸೆಯ ಪಾತ್ರದಲ್ಲಿ ಸಿಹಿಕಹಿ ಚಂದ್ರು, ಸಿ.ಅಶ್ವತ್ಥರ ಪಾತ್ರದಲ್ಲಿ ಸುಂದರರಾಜ್ ಮಿಂಚಿದರೆಂದೇ ಹೇಳಬೇಕು.

ನಾಟಕ ಮುಗಿದಾಗ ಎಲ್ಲರ ಮುಖಗಳೂ ಮಂದಸ್ಮಿತ. ವಿದ್ಯಾರ್ಥಿಭವನ ಕೇವಲ ತಿಂಡಿಪೋತರ ಜಾಗವಲ್ಲ. ಅದಕ್ಕೊಂದು ಸಾಂಸ್ಕೃತಿಕ ಸ್ಪರ್ಶವಿದೆ ಎನ್ನುವಂತಾಯಿತು. ಅನುಮಾನಿಸುತ್ತಾ ಬಂದವರು ಮೆಚ್ಚುಗಣ್ಣರಳಿಸಿ, ಕಲಾವಿದರ ಕೈಕುಲಕಿಚೌಡಯ್ಯ ಕಲಾಭವನದಿಂದ ಹೊರಬಿದ್ದೆವು. ನಾಟಕ ಮುಗಿದ ಮೇಲೂ ಸವಿರುಚಿಯೊಂದಿಗೆ, ಸ್ವಚ್ಛ ಅಭಿರುಚಿಯೂ ದೋಸೆಯ ಘಮದೊಂದಿಗೆ ನಮ್ಮನ್ನು ಹಿಂಬಾಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT