ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯಂಗಳ’ದಲ್ಲಿ ದೇಶಮಾನೆ

vijayalakshmi deshamane
Last Updated 19 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಜನಸೇವೆಯೇ ಜನಾರ್ದನ ಸೇವೆ, ನೊಂದವರ ಕಂಬನಿ ಒರೆಸುವುದೇ ದೈವಾರಾಧನೆ ಎಂಬುದು ಜನಪದೀಯ ನಂಬಿಕೆ. ಇದನ್ನೇ ಆದರ್ಶವಾಗಿಟ್ಟುಕೊಂಡು ಸೇವೆಯನ್ನೇ ಬದುಕಾಗಿಸಿಕೊಂಡಿರುವ ಡಾ.ವಿಜಯಲಕ್ಷ್ಮಿ ದೇಶಮಾನೆಯವರು ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ. ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿ. ಕನ್ನಡ ನಾಡಿನ ಹೆಮ್ಮೆಯ ಮಹಿಳೆ.

ನೂರಾರು ಕ್ಯಾನ್ಸರ್ ಪೀಡಿತರ ಬಾಳು ಬೆಳಗಿದ ವೈದ್ಯೆ ವಿಜಯಕ್ಷ್ಮಿ ದೇಶಮಾನೆ ಅವರ ಸೇವಾಬದ್ಧತೆ, ಪ್ರಾಮಾಣಿಕತೆ, ದಕ್ಷತೆ ಮತ್ತು ಕಠಿಣ ಪರಿಶ್ರಮ ಇತರರಿಗೆ ಅನುಕರಣೀಯ. ಬಡತನ, ಅಪಮಾನಮ ಸಾಮಾಜಿಕ ಅಸಡ್ಡೆಯ ನಡುವೆ ತಳಸಮುದಾಯದ ಹೆಣ್ಣುಮಗಳು ದೇಶದ ಗಣ್ಯಮಾನ್ಯಗಳಾಗಿ ಅರಳಿ ನಿಂತಿದ್ದೇ ಸೋಜಿಗ.

ಡಾ.ವಿಜಯಲಕ್ಷ್ಮಿ ದೇಶಮಾನೆ ಕಲಬುರ್ಗಿಯ ಕೊಳೆಗೇರಿಯಲ್ಲಿ ಅರಳಿದ ಪ್ರತಿಭೆ. ತಂದೆ ಸ್ವಾತಂತ್ರ್ಯ ಹೋರಾಟಗಾರ ಬಾಬುರಾವ್ ದೇಶಮಾನೆ. ತಾಯಿ ತರಕಾರಿ ವ್ಯಾಪಾರಿ ರತ್ನಮ್ಮ. ಕಡುಬಡತನದ ಬಾಲ್ಯದಲ್ಲೂ ಅಕ್ಷರದ್ದೇ ಕನವರಿಕೆ. ತಳ ಸಮುದಾಯದ ಹೆಣ್ಣುಮಕ್ಕಳಿಗೆ ಮರೀಚಿಕೆಯೇ ಆಗಿದ್ದ ಶಿಕ್ಷಣದ ಭಾಗ್ಯ ದೊರಕಿಸಿದ ಅಪ್ಪನ ಪ್ರೋತ್ಸಾಹವೇ ದಾರಿದೀಪ. ಅಕ್ಷರ ಲೋಕ ತೆರೆದ ಜ್ಞಾನದ ಚುಂಗು ಹಿಡಿದು ಮುನ್ನಡೆದ ವಿಜಯಲಕ್ಷ್ಮಿ ಅವರ ಛಲ, ‘ತಾಳಿ’ ಮಾರಿ ಶುಲ್ಕ ಕಟ್ಟಿದ ಅಮ್ಮನ ತ್ಯಾಗದ ಫಲವಾಗಿ 1980ರಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯಕೀಯ ಪದವಿ. 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಾರ್ಥಕತೆ. 1985ರಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಗೆ ಸೇರ್ಪಡೆ. 1989ರಲ್ಲಿ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಕುರಿತು ಆರು ತಿಂಗಳ ತರಬೇತಿ. 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್‌ಎಐಎಸ್‌ ಫೆಲೋಶಿಪ್‌ಗೆ ಪಾತ್ರ. ಸತತ ಮೂರು ದಶಕಗಳ ಕಾಲ ಕ್ಯಾನ್ಸರ್ ಪೀಡಿತರ ಸೇವೆ. ಸಾಲುಸಾಲು ಯಶಸ್ವಿ ಶಸ್ತ್ರಚಿಕಿತ್ಸೆ. ಸಾವಿರಾರು ರೋಗಿಗಳಿಗೆ ಮರುಜನ್ಮ ನೀಡಿದ ಧನ್ಯತೆ.

ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ, ಮುಖ್ಯಸ್ಥೆ. ಸಂಸ್ಥೆಯ ನಿರ್ದೇಶಕಿಯಾಗಿ ಅನನ್ಯ ಸೇವೆ. ಪ್ರೌಢ ಪ್ರಬಂಧಗಳ ಮಂಡನೆ. ಸ್ತನ ಕ್ಯಾನ್ಸರ್ ಕುರಿತು ಗ್ರಾಮೀನ ಭಾಗದಲ್ಲಿ ಜಾಗೃತಿ ಅಭಿಯಾನ. ಸಂಶೋಧನಾತ್ಮಕ ಲೇಖನ–ಪುಸ್ತಕಗಳ ಪ್ರಕಟಣೆ.

ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿರುವ ಇವರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ. ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂತರರಾಷ್ಟ್ರೀಯ ವಲಯದ ರಾಷ್ಟ್ರೀಯ ರತ್ನ ಪ್ರಶಸ್ತಿಗಳು ಸಂದಿವೆ. ಅವಿವಾಹಿತರಾಗಿಯೇ ಉಳಿದು ರೋಗಿಗಳ ಸೇವೆಗೇ ಬದುಕು ಮುಡುಪಿಟ್ಟಿರುವ ಮಾತೃಸ್ವರೂಪಿ ಡಾ.ವಿಜಯಲಕ್ಷ್ಮಿ ದೇಶಮಾನೆ ವೈದ್ಯಲೋಕದ ಮಾನವೀಯ ಪ್ರತಿಮೆ.

**

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ–ಡಾ.ವಿಜಯಲಕ್ಷ್ಮಿ ದೇಶಮಾನೆ. ಆಯೋಜನೆ– ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸ್ಥಳ–ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಶನಿವಾರ ಸಂಜೆ 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT