ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಧರೆಗೆ ಉರುಳಿದ ಕೋಟೆ ಬತೇರಿ

ಸ್ಥಳಕ್ಕೆ ಭೇಟಿ ನೀಡಿದ ಇತಿಹಾಸ ಸಂಶೋಧಕ ಪ್ರೊ. ತಿಮ್ಮಹನುಮಯ್ಯ ಬೇಸರ
Last Updated 10 ಏಪ್ರಿಲ್ 2018, 11:01 IST
ಅಕ್ಷರ ಗಾತ್ರ

ಮಾಗಡಿ: ಸಾವನದುರ್ಗದಲ್ಲಿರುವ ಕೋಟೆಯ ಆಗ್ನೇಯ ದಿಕ್ಕಿನಲ್ಲಿ ನಿರ್ಮಾಣ ಹಂತದ ಬತೇರಿ (ಕಾವಲು ಗೋಪುರ) ಕಳಪೆ ಕಾಮಗಾರಿಯಿಂದಾಗಿ ಮೂರನೇ ಬಾರಿ ಧರೆಗೆ ಉರುಳಿದೆ ಎಂದು ಇತಿಹಾಸ ಸಂಶೋಧಕ ಪ್ರೊ. ತಿಮ್ಮಹನುಮಯ್ಯ ಆರೋಪಿಸಿದರು. ಬತೇರಿಗೆ ಧರೆಗೆ ಉರುಳಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.

ಮಾಗಡಿಯಲ್ಲಿ ಆಳ್ವಿಕೆ ಮಾಡಿದ್ದ ಗುಡೇಮಾರನಹಳ್ಳಿ ತಳಾರಿ ಗಂಗಪ್ಪ ನಾಯಕ ಮಣ್ಣಿನ ಕೋಟೆಯನ್ನು ಕಟ್ಟಿಸಿದ್ದರು. ಹೊಂಬಾಳಮ್ಮನಪೇಟೆ ಕೆರೆಯ ನೀರನ್ನು ಕೋಟೆಯ ಕಂದಕಕ್ಕೆ ಬಳಸಿಕೊಂಡಿದ್ದರು. ಮಣ್ಣಿನ ಕೋಟೆ ಕಟ್ಟುವಾಗ ಆಗ್ನೇಯ ಮೂಲೆಯ ಕಾವಲು ಗೋಪುರ ಉರುಳಿಬಿದ್ದಿತ್ತು. ತಿರುಮಲೆ ದಲಿತ ಮಹಿಳೆ ಮಾಗಡಿ ರಂಗಮ್ಮ ಬಲಿದಾನ ಗೈದ ಮೇಲೆ ಕೋಟೆಯ ಬತೇರಿ ನಿಂತಿತು ಎಂಬುದು ಜನಪದ ಕಥನ ಕಾವ್ಯದಲ್ಲಿದೆ ಎಂದು ಮಾಹಿತಿ ನೀಡಿದರು.

ಕ್ರಿ.ಶ. 1628 ರಲ್ಲಿ ಇಮ್ಮಡಿ ಕೆಂಪೇಗೌಡ, ತಳಾರಿ ಗಂಗಪ್ಪ ನಾಯಕನನ್ನು ಬಂಧಿಸಿ, ಕೋಟೆಯನ್ನು ವಶಪಡಿಸಿಕೊಂಡ. ನಂತರ ಮಣ್ಣಿನ ಕೋಟೆಯ ಹೊರಮೈಗೆ ಕಲ್ಲನ್ನು ಕಟ್ಟಿಸಿದ್ದರು. ಕೋಟೆ ಶಿಥಿಲವಾಗಿದ್ದ ಕಾರಣ, ಕೆಂಪೇಗೌಡ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಇತಿಹಾಸ ಸಂಶೋಧಕ ಡಾ. ಮುನಿರಾಜಪ್ಪ, ಎಚ್‌.ಎಂ. ಕೃಷ್ಣಮೂರ್ತಿ ತಂಡದವವರು ಕೋಟೆ ದುರಸ್ತಿಗೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೋಟೆ ದುರಸ್ತಿಗೆ ಬಹುಕೋಟಿ ಅನುದಾನ ನೀಡಿದ್ದರು. ಹಂಪೆ ಮತ್ತು ಮೈಸೂರಿನ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಮುಂದಾದರು. ಆಗ್ನೇಯ ದಿಕ್ಕಿನ ಬತೇರಿಯನ್ನು ಕಟ್ಟಿ ಮುಗಿಸಿದ್ದರು. ಒಂದು ತಿಂಗಳ ಒಳಗೆ ಬತೇರಿಯಲ್ಲಿ ಬಿರುಕು ಬಿಟ್ಟಿತು ಎಂದರು.

ತಜ್ಞ ಎಂಜಿನಿಯರ್‌ಗಳು ಕೋಟೆಗೆ ಭೇಟಿ ನೀಡಿ ಮತ್ತೊಮ್ಮೆ ದುರಸ್ತಿಪಡಿಸಿದರು. ಪುನಃ ಮೂರನೆ ಬಾರಿಗೆ ಬತೇರಿ ಧರೆಗೆ ಉರುಳಿದೆ. ಆಧುನಿಕ ತಂತ್ರಜ್ಞಾನದಂತೆ ದುರಸ್ತಿ ಮಾಡುತ್ತಿರುವ ಶಿಲ್ಪಿ ಯಲ್ಲಪ್ಪ ಅವರನ್ನು ಹೊರತು ಪಡಿಸಿದರೆ, ಎಂಜಿನಿಯರ್‌ಗಳು ಇತ್ತ ಬರುವುದು ಅಪರೂಪವಾಗಿದೆ. ಪುರಾತನ ಕಾಲದಲ್ಲಿ ಕಟ್ಟಿರುವ ಸಾವನದುರ್ಗದ ಮಣ್ಣಿನ ಕೋಟೆ ಇಂದಿಗೂ ಆಧುನಿಕ ಯುಗದ ಎಂಜಿನಿಯರ್‌ಗಳು ನಾಚುವಂತೆ ಸವಾಲಾಗಿ ಒಂದಿನಿತು ಮುಕ್ಕಾಗದೆ ನಮ್ಮ ಕಣ್ಣ ಮುಂದೆ ನಿಂತಿದೆ ಎಂದರು.

**

ಕೋಟೆಯ ದುರಸ್ತಿ ಕಾರ್ಯ ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರಾಚ್ಯವಸ್ತು ಇಲಾಖೆ ಮತ್ತು ಇತಿಹಾಸ ಪ್ರಿಯರಿಗೆ ಸೇರಿದೆ – ಕೆ.ಆರ್‌. ರವಿಕುಮಾರ್‌,ಇತಿಹಾಸ ಉಳಿಸಿ ಸಮಿತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT