ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಾಲ್ ತಾಳ-ಲಯದ ಬೇರು

Last Updated 24 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

'ವಿ ಆರ್ ನಾಟ್ ಲಿಸನಿಂಗ್'-ಇದು ಪೆಂಟಗ್ರಾಮ್ ಎಂಬ ಭಾರತೀಯ ಬ್ಯಾಂಡ್ ತಂಡದ ಮೊದಲ ಆಲ್ಬಂನ ಶೀರ್ಷಿಕೆ. 'ನಾವು ಕೇಳಿಸಿಕೊಳ್ಳುತ್ತಿಲ್ಲ' ಎಂಬ ಅರ್ಥದ ಈ ಶೀರ್ಷಿಕೆಗೂ ಬ್ಯಾಂಡ್ ಕಟ್ಟಿದ ಹುಡುಗರಿಗೂ ಆಗ ಸಾವಯವ ಸಂಬಂಧವಿತ್ತೆನ್ನಿ.

ರ‍್ಯಾಂಡಲ್ಫ್, ಕೊರಿಯ, ಕ್ಲೈಡ್ ಡಿಸೋಜಾ, ಪಾಪಲ್ ಮಾನೆ, ಶಿವಾಜ್ ಭಟ್ಟಾಚಾರ್ಯ ಇವರೆಲ್ಲ 1994ರಲ್ಲಿ ಕಟ್ಟಿದ ಬ್ಯಾಂಡ್ 'ಪೆಂಟಗ್ರಾಮ್'. ಅದರ ಸ್ವರದ ಆತ್ಮ ಇವರ‍್ಯಾರೂ ಅಲ್ಲ. ಅವರು ವಿಶಾಲ್ ಡಡ್ಲಾನಿ.

ವಾಣಿಜ್ಯ ಪದವಿ ಪಡೆದ ಮುಂಬೈನ ಸಿಂಧಿ ಕುಟುಂಬದ ಹುಡುಗ ವಿಶಾಲ್ ಆಗ ಸಮಕಾಲೀನ ಸ್ವರಗಳ ಮೂಲಕ ಸಂಚಲನ ಮೂಡಿಸಬೇಕೆಂಬ ದೊಡ್ಡ ಕನಸನ್ನು ಕಟ್ಟಿಕೊಂಡಿದ್ದರು. ಅವರು ಅದನ್ನು ನನಸಾಗಿಸಿಕೊಳ್ಳಲು ವ್ಯವಸ್ಥಿತವಾಗಿ ಹೆಜ್ಜೆ ಇಟ್ಟರು.

ಐಐಟಿ ಕಾನ್ಪುರ, ಐಐಟಿ ದೆಹಲಿ ಹಾಗೂ ಮುಂಬೈನಲ್ಲಿ ನಡೆದ ಮೂರು ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಮಹತ್ವಾಕಾಂಕ್ಷೆಗೆ ಇಂಧನ ಬೆರೆಸಿದರು. ದೇಸಿ ನೆಲದಲ್ಲಷ್ಟೇ ಅಲ್ಲದೆ, ಪೆಂಟಗ್ರಾಮ್ ಬ್ಯಾಂಡ್ ಹೊರದೇಶಗಳಲ್ಲೂ ಸದ್ದು ಮಾಡಿತು. ‘ಮಾಡ್ ಇಂಡಿಗೊ’ ಕಾರ್ಯಕ್ರಮದಲ್ಲಿ ಮನಗೆದ್ದಿದ್ದಲ್ಲದೆ 2003ರಲ್ಲಿ ಈಸ್ಟ್ರೇನಿಯಾದ ಸಂಡೆನ್ಸ್ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಸಂಗೀತಪ್ರಿಯರು ಕಣ್ಣರಳಿಸುವಂತೆ ಮಾಡಿದ್ದು ಸಾಧನೆ. ಗ್ಯಾಸ್ಟೊನ್‌ಬರಿ ಮ್ಯೂಸಿಕ್ ಫೆಸ್ಟ್‌ನಲ್ಲಿ ಪ್ರದರ್ಶನ ನೀಡಿದ ಭಾರತದ ಮೊದಲ ತಂಡ ಎಂಬ ಗೌರವ 2005ರಲ್ಲಿ ಈ ಬ್ಯಾಂಡ್‌ನದ್ದಾಯಿತು.

'ವಿ ಆರ್ ನಾಟ್ ಲಿಸನಿಂಗ್' ಆಲ್ಬಂ 1996ರಿಂದ 2001ರ ವರೆಗೆ ಛಾಪು ಮೂಡಿಸಿತ್ತೆನ್ನುವುದು ವಿಶೇಷ. 1990ರ ದಶಕದ ಕೊನೆಯಲ್ಲಿ ಎಂಟಿವಿ, ಚಾನೆಲ್ 'ವಿ'ಯಲ್ಲೂ 'ಪೆಂಟಗ್ರಾಮ್' ಸದ್ದು ಮಾಡಿತು. 2002ರಲ್ಲಿ 'ಅಪ್' ಎಂಬ ಎರಡನೇ ಆಲ್ಬಂ ಹೊರಬಂತು.

ಇಪ್ಪತ್ತು ವರ್ಷಗಳ ಭಾರತೀಯ ಬ್ಯಾಂಡ್ ಇತಿಹಾಸದ ಪುಟಗಳನ್ನು ತೆರೆದರೆ ಪ್ರಮುಖ ಬ್ಯಾಂಡ್‌ಗಳಲ್ಲಿ ಒಂದಾಗಿ ಕಾಣುವ 'ಪೆಂಟಗ್ರಾಮ್' ಸ್ವರಪ್ರೀತಿಯನ್ನು ತಡವಾಗಿಯಾದರೂ ಬಾಲಿವುಡ್ ಗುರುತಿಸಿತು. ವಿಶಾಲ್ ಡಡ್ಲಾನಿಗೆ ಶೇಖರ್ ಎಂಬ ಇನ್ನೊಬ್ಬ ಪ್ರತಿಭಾವಂತ ಸಂಗೀತ ಸಂಯೋಜಕ ಜತೆಯಾದರು. ವಿಶಾಲ್-ಶೇಖರ್ ಜೋಡಿಯಲ್ಲಿ 'ಝಂಕಾರ್ ಬೀಟ್ಸ್', 'ಬ್ಲಫ್ ಮಾಸ್ಟರ್', 'ಸಲಾಂ ನಮಸ್ತೆ' ಸಿನಿಮಾಗಳು ಬಂದವು. ಈಗಲೂ ವಿಶಾಲ್ ಕಂಠದ 'ಜೀಲೆ ಝರಾ' ಎಂಬ 'ತಲಾಷ್' ಸಿನಿಮಾ ಹಾಡು ಕಾಡುತ್ತಿದೆ.

ಹೊಸ ತಾಳಗಳು ಎಲ್ಲಿ ಕಿವಿಮೇಲೆ ಬಿದ್ದರೂ ಕಣ್ಣರಳಿಸುವ ಜೋಡಿ ವಿಶಾಲ್-ಶೇಖರ್. ಕನ್ನಡದ ಗಾಯಕ ರಘು ದೀಕ್ಷಿತ್ ಕಾರ್ಯಕ್ರಮವೊಂದರಲ್ಲಿ ದೊಡ್ಡ ಸ್ಥಾಯಿಯಲ್ಲಿ ಹಾಡುವುದನ್ನು ಕೇಳಿ ಅವರನ್ನು ಸ್ಟುಡಿಯೊಗೆ ಕರೆಸಿ ಸಂಗೀತ ಸಂವಾದ ನಡೆಸಿದ್ದ ಜೋಡಿ ಇದೇ.

ಅನಿಸಿದ್ದನ್ನು ಮುಚ್ಚು ಮರೆ ಇಲ್ಲದೆ ಹೇಳುವ ವಿಶಾಲ್ ಡಾಡ್ಲಾನಿಗೆ ಈಗಲೂ ತಮ್ಮ ಬ್ಯಾಂಡ್‌ನ ಬೇರುಗಳ ಹಂಗು. ನೆನಪಿನ ಅಟ್ಟದ ಮೇಲಿನ ಸ್ವರಗಳನ್ನು ಆಗೀಗ ಕೆಳಗಿಳಿಸಿ, ಅವನ್ನು ಕಕ್ಕುಲತೆಯಿಂದ ನೋಡುವುದಿದೆ.

–ಎನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT