ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲವರ್ಣ ಕಲೆಯ ಜಾದೂಗಾರ

Last Updated 9 ಜನವರಿ 2019, 19:45 IST
ಅಕ್ಷರ ಗಾತ್ರ

ತಿಳಿನೀರ ಕೊಳದ ಮೇಲೆ ಕದಲದೆ ತೇಲುವ ಸುಂದರ ಚೆಲುವೆ ಒಂದೆಡೆ, ಗೋಡೆಗೊರಗಿ ನಲ್ಲನ ಬರುವಿಕೆಗಾಗಿ ಕಾಯುವ ಯುವತಿ ಮತ್ತೊಂದೆಡೆ. ಹಸಿರು ಮೈದಳೆದು ನಿಂತ ಪ್ರಕೃತಿಯ ಕಲಾಕೃತಿ, ಕೋಟೆಯೊಂದರ ನೀಲ ನಕ್ಷೆ, ಹೈಟೆಕ್‌ ನಗರದ ಜನ ಸಂಚಾರ, ಐತಿಹಾಸಿಕ ಸ್ಮಾರಕಗಳ ತದ್ರೂಪ ಚಿತ್ರಣ.

ಇದು ನಾಟಕ, ಸಿನಿಮಾದ ದೃಶ್ಯಗಳಲ್ಲ. ನಾಸಿಕ್‌ನ ಯುವ ಚಿತ್ರಕಲಾವಿದ ಪ್ರಫುಲ್‌ ಭೀಮರಾಜ ಸಾವಂತ್‌ ಅವರ ಜಲವರ್ಣ ಚಿತ್ರಕಲೆಯಲ್ಲಿ ಮೂಡಿದ ಚೆಲುವಿನ ಚಿತ್ತಾರಗಳು.

ಸಾವಂತ್‌ ಅವರು ಕುಂಚ ಹಿಡಿದು ದಿಟ್ಟ ನೋಟ ನೆಟ್ಟರೇ ಅಲ್ಲೊಂದು ಅದ್ಬುತ ಚಿತ್ರ ಮೂಡುತ್ತದೆ. ಕಂಡದ್ದನ್ನು ಕಂಡಂತೆಯೇ ಚಿತ್ರಿಸುವುದರಲ್ಲಿ ಪ್ರಫುಲ್‌ ನಿಸ್ಸೀಮರು. ಜಲವರ್ಣ ಚಿತ್ರಕಲೆಯಲ್ಲಿ ಪರಿಣತಿ ಹೊಂದಿದ ಕಲಾವಿದ ಪ್ರಫುಲ್‌. ಮುಂಬೈನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಸದ್ಯ ಜಲವರ್ಣ ಚಿತ್ರಕಲೆಯನ್ನು ತಮ್ಮ ಸಂಪೂರ್ಣ ವೃತ್ತಿಯಾಗಿ ಮಾಡಿಕೊಂಡಿದ್ದಾರೆ.

ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿಯಿದ್ದ ಕಾರಣ ಚಿತ್ರ ಬರೆಯುವುದನ್ನು ಹವ್ಯಾಸವಾಗಿಸಿಕೊಂಡರು. ಕ್ರಮೇಣ ಅದು ವೃತ್ತಿಯಾಯಿತು. 2002 ರಿಂದ ಜಲವರ್ಣ ಚಿತ್ರಕಲೆಯನ್ನು ಆರಂಭಿಸಿದರು. ಪೋಟ್ರೇಟ್‌, ಲ್ಯಾಂಡ್‌ಸ್ಕೇಪ್‌ ಮಾದರಿಯಲ್ಲಿ ಪ್ರಕೃತಿ ಸಹಜ ಚಿತ್ರಗಳನ್ನು ಬಿಡಿಸುವ ಕಲೆ ಇವರಿಗೆ ಸಿದ್ದಿಸಿದೆ. ವ್ಯಕ್ತಿ ಚಿತ್ರಗಳನ್ನು, ಪರಿಸರದ ವಿವಿಧ ನೋಟಗಳನ್ನು, ಮಾನವ ಆಸಕ್ತಿ ಚಿತ್ರಗಳು, ನಿಸರ್ಗ, ಕೋಟೆ ಕೊತ್ತಲಗಳನ್ನು ಯಥಾವತ್ತಾಗಿ ಮೂಡಿಸುವ ಸಾಮರ್ಥ್ಯ ಇವರ ಕುಂಚಕ್ಕಿದೆ.

ಜಲವರ್ಣ ಚಿತ್ರಕಲೆಯಲ್ಲಿಯೇ ವಾಟರ್‌ ಕಲರ್‌, ಆಯಿಲ್‌ ಕಲರ್‌ ಹಾಗೂ ಅಕ್ರ್ಯಾಲಿಕ್‌ ಮಾದರಿಯಲ್ಲಿ ಚಿತ್ರಗಳನ್ನು ಬಿಡಿಸುತ್ತಾರೆ. ಚಿತ್ರಕಲೆಯ ಜೊತೆ ಜೊತೆಗೆ ಕಾರ್ಯಾಗಾರಗಳನ್ನು ಕೈಗೊಳ್ಳುವ ಮೂಲಕ ಯುವ ಉತ್ಸಾಹಿ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಾರೆ. ಇವರ ಕಲಾಸೇವೆಗೆ 50 ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ 35 ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇದುವರೆಗೆ ಕಲಾಸೇವೆಯ ಮೂಲಕ ಇಟಲಿ, ಫ್ರಾನ್ಸ್‌, ರಷ್ಯಾ, ಚೀನಾ, ಸ್ಪೇನ್‌, ಜರ್ಮನಿ, ಮಲೇಷಿಯಾ, ಹಾಲೆಂಡ್‌, ಮಾಲ್ಟಾದಂತಹ 18ಕ್ಕೂ ಹೆಚ್ಚು ರಾಷ್ಟ್ರಗಳನ್ನು ಸುತ್ತಾಡುತ್ತಾ ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಫ್ರಾನ್ಸ್‌ ಪೇಪರ್‌, ಮುಂಬೈ ಕಲರ್ಸ್‌

ಈ ಜಲವರ್ಣ ಚಿತ್ರಕಲೆಗೆ ಪ್ರಫುಲ್‌ ಅವರು ಫ್ರಾನ್ಸ್‌ನಲ್ಲಿ ತಯಾರಿಸುವ 300 ಜಿಎಸ್‌ಎ ಆರ್ಚಸ್‌ ರಬ್‌ಗ್ರೀನ್‌ ವಾಟರ್‌ ಕಲರ್‌ ಪೇಪರ್‌ನ್ನು ಬಳಸುತ್ತಾರೆ. ಇನ್ನು ಮುಂಬೈನಿಂದ ವಾಟರ್‌ ಕಲರ್ಸ್‌ಗಳನ್ನು ತರಿಸಿಕೊಳ್ಳುತ್ತಾರೆ. ಅವುಗಳಲ್ಲಿ 34 ತರದ ವಿಭಿನ್ನ ಶೇಡ್‌ಗಳ ಬಣ್ಣಗಳನ್ನು ಬಳಸುತ್ತಾರೆ. ಕಲೆ ಎಷ್ಟು ಮುಖ್ಯವೋ ಅದನ್ನು ಬಿಡಿಸಲು ಆಯ್ದುಕೊಳ್ಳುವ ಪೇಪರ್‌, ಬಣ್ಣಗಳು, ಬ್ರಷ್‌ಗಳು ಸಹ ಅಷ್ಟೇ ಮುಖ್ಯ ಎನ್ನುತ್ತಾರೆ ಪ್ರಫುಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT