ಮಂಗಳವಾರ, ಮೇ 18, 2021
29 °C

ಕಲ್ಲಿನ ರಥ ನಿರ್ಮಿಸಿದ್ದು ಕೂಡ್ಲಿಗಿಯ ಶಿಲ್ಪಿಗಳೇ?

ಎಸ್.ಸಿ. ಪಾಟೀಲ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ರಥಗಳು ವಿಜಯನಗರ ಕಾಲದಿಂದ ಹೆಚ್ಚು ಬಳಕೆಯಾಗುತ್ತಾ ಬಂದುದಕ್ಕೆ ಸಾಕಷ್ಟು ಉಲ್ಲೇಖಗಳಿವೆ. ಹಂಪಿ ವಿರೂಪಾಕ್ಷನ ರಥದ ಕುರಿತಂತೂ ವಿದೇಶಿ ಬರಹಗಾರರು ಹಲವೆಡೆ ಪ್ರಸ್ತಾಪ ಮಾಡಿದ್ದಾರೆ. ಇಲ್ಲಿಯ ವಿಠಲ ದೇವಾಲಯದ ಕಲ್ಲಿನ ರಥವನ್ನು ಗಮನಿಸಿದಾಗ ರಥಗಳ ನಿರ್ಮಾಣಕ್ಕೆ ವಿಜಯನಗರ ಅರಸರ ಕಾಲದಲ್ಲಿ ಎಷ್ಟೊಂದು ಮಹತ್ವ ನೀಡಲಾಗಿತ್ತು ಎನ್ನುವುದು ಕಂಡುಬರುತ್ತದೆ.

ಕಲ್ಲಿನ ರಥವನ್ನು ನೋಡಿದ ಅನೇಕ ಹಿರಿಯರು ಅದು ಪೂರ್ಣವಾದ ರಥವಲ್ಲ; ಅದರ ಮೇಲಿನ ಗೋಪುರ ಬಿದ್ದು ಹೋಗಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ಈ ರಥದ ಶಿಲ್ಪಿಗಳು ಯಾರಾಗಿರಬಹುದು ಎನ್ನುವುದು ನನ್ನ ಕುತೂಹಲವಾಗಿತ್ತು. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಮಾಡಿಕೊಂಡ ಕೆಲವು ಟಿಪ್ಪಣಿಗಳೇ ಇಲ್ಲಿ ಲೇಖನದ ರೂಪ ತಾಳಿವೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಕಿರುರೂಪದ ಕಲ್ಲಿನರಥದ ಮಾದರಿಯೊಂದು ಕಂಡುಬಂದಿದೆ. ವಿಜಯನಗರ ಸಾಮ್ರಾಜ್ಯದ ರಾಜಾಶ್ರಯದ ಪ್ರದೇಶವಾಗಿದ್ದ ಕೂಡ್ಲಿಗಿಯು ಜರಿಮಲೆ, ಗುಡೇಕೋಟೆ ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿತ್ತು. ಈ ಪಟ್ಟಣದಲ್ಲಿ ಊರಮ್ಮನ ದೇವಸ್ಥಾನ ಹಾಗೂ ಕೇಶವಸ್ವಾಮಿ ದೇವಸ್ಥಾನ ಹತ್ತಿರದಲ್ಲೇ ಇವೆ. ಕೇಶವಸ್ವಾಮಿಯದು ಸುಂದರವಾದ ಕಪ್ಪುಶಿಲೆಯ ಮೂರ್ತಿ. ಈ ದೇವಸ್ಥಾನದ ಬಲಭಾಗದ ಕಟ್ಟೆಯ ಮೇಲೆ ಒಂದು ಚಿಕ್ಕ ಕಲ್ಲಿನ ರಥವಿದೆ. ಸ್ಥಳೀಯರು ಹೇಳುವ ಹಾಗೆ ಹಂಪಿಯ ರಥಕ್ಕಿಂತ ಮೊದಲು ಈ ರಥದ ನಿರ್ಮಾಣವಾಗಿದೆ. ಆದರೆ, ಇದರ ಬಗ್ಗೆ ಯಾರೂ ಹೆಚ್ಚಿನ ಅಧ್ಯಯನ ಮಾಡಿಲ್ಲ. ಹೀಗಾಗಿ ಹೊರಗಿನವರಿಗೆ ಈ ಕುರಿತು ಅಷ್ಟಾಗಿ ಗೊತ್ತಿಲ್ಲ ಎನ್ನುವುದು ಅವರ ಹೇಳಿಕೆ. 

ಕೂಡ್ಲಿಗಿಯ ಈ ರಥಶಿಲ್ಪವು ವಿಜಯನಗರ ಕಾಲದ ವಾಸ್ತುಶಿಲ್ಪದ ಎಲ್ಲ ಲಕ್ಷಣಗಳನ್ನು ಹೊಂದಿದೆ. ರಥವು ಬಣ್ಣದಿಂದ ಅಲಂಕರಣಗೊಂಡಿದ್ದು ಅದರ ಮೇಲೆ ಸಾಕಷ್ಟು ಬಣ್ಣವನ್ನು ಸುಣ್ಣವನ್ನು ಮೆತ್ತಿರುವುದರಿಂದ ಕೆತ್ತನೆಯ ಸೂಕ್ಷ್ಮರೂಪದ ವಿನ್ಯಾಸಗಳು ಸರಿಯಾಗಿ ಗೋಚರವಾಗುವುದಿಲ್ಲ. ಆದರೆ, ಈ ಕಲ್ಲಿನ ರಥದ ಗೋಪುರ ಮಾತ್ರ ಸುಂದರವಾಗಿ ಕಾಣಿಸುತ್ತದೆ.

ಇನ್ನು ಹಂಪಿಯ ಕಲ್ಲಿನ ರಥದ ಪೂರ್ಣಭಾಗ ಈಗ ಉಳಿದಿಲ್ಲ. ಮೊದಲು ರಥಕ್ಕೆ ಗೋಪುರವಿದ್ದು ಅದು ನಂತರ ಶಿಥಿಲಗೊಂಡು ಬಿದ್ದು ಹೋಗಿದೆ. ಮತ್ತು ಈ ರಥದಲ್ಲಿ ಸಹ ಬಣ್ಣವನ್ನು ಲೇಪನ ಮಾಡಿದ ಕುರುಹುಗಳು ಈಗಲೂ ಅಲ್ಲಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ. ಹಲವರು ರಥದ ರೇಖಾಚಿತ್ರವನ್ನು ಮಾಡಿ, ಹೀಗಿರಬಹುದು ಎಂದು ಊಹಿಸಿರುವುದು ಉಂಟು. ಕೂಡ್ಲಿಗಿಯ ರಥದ ಗೋಪುರದಂತೆ ಹಂಪಿಯ ರಥದ ಗೋಪುರವು ರಚನೆಗೊಂಡಿದ್ದು ನಂತರದ ದಿನಗಳಲ್ಲಿ ಅದು ಬಿದ್ದು ಹೋಗಿದೆ. ರಥದ ಹಿಂದಿನ ಛಾಯಾಚಿತ್ರಗಳಿಂದ ಈ ಅಂಶ ಸ್ಪಷ್ಟವಾಗುತ್ತದೆ. ಪಾಶ್ಚಿಮಾತ್ಯ ವಿದ್ವಾಂಸ ಗ್ರೀನ್‍ಲಾ ಕ್ರಿ.ಶ 1868ರಲ್ಲಿ ತೆಗೆದ ಛಾಯಾಚಿತ್ರವನ್ನು ನೋಡಿದರೆ ಹಂಪಿ ರಥದ ಮೇಲೆ ಗೋಪುರವಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕೂಡ್ಲಿಗಿಯಲ್ಲಿರುವ ರಥವನ್ನು ಉರುಟು ಶಿಲೆಯಲ್ಲಿ ಕೆತ್ತನೆ ಮಾಡಲಾಗಿದ್ದು ಕೆಳಭಾಗದಲ್ಲಿ ಸುಂದರವಾದ ನಾಲ್ಕು ಗಾಲಿಗಳಿವೆ. ನಂತರ ರಥದ ಪಟ್ಟಿಕೆ, ಅದರ ಮೇಲೆ ಸುಳುವು ಮತ್ತು ಶಿಲ್ಪಗಳ ಅಸ್ಪಷ್ಟ ಆಕಾರಗಳಿವೆ. ಅದರ ಮೇಲೆ ನಾಲ್ಕು ಕಂಬಗಳಿದ್ದು ದೇವಸ್ಥಾನದ ಕಂಬಗಳನ್ನೇ ಇವುಗಳು ಹೋಲುತ್ತವೆ. ಕಂಬಗಳ ಮೇಲ್ಭಾಗದಲ್ಲಿ ಮೂರು ಹಂತಗಳಲ್ಲಿ ಗೋಪುರವಿದೆ. ಮೊದಲನೇ ಹಂತದಲ್ಲಿ ವಿವಿಧ ವಿನ್ಯಾಸದ ಪಟ್ಟಿಕೆಗಳಿದ್ದು, ಎರಡನೇ ಹಂತದಲ್ಲಿ ಗೋಪುರದ ರೀತಿಯಲ್ಲಿ ಕೆತ್ತನೆಯನ್ನು ಮಾಡಲಾಗಿದೆ. ಕೊನೆಯ ಹಂತದಲ್ಲಿ ದೇವಸ್ಥಾನದ ಕಳಸದ ರೀತಿಯಲ್ಲಿ ಗೋಲಾಕಾರದ ವಿನ್ಯಾಸದ ಕೆತ್ತನೆ ಇದೆ.  ಈ ರಥದ ಎತ್ತರವು ಐದು ಅಡಿ ಇದ್ದು, ಅಗಲ ಮೂರು ಅಡಿ ಇದೆ.


ಬ್ರಿಟಿಷ್‌ ಅಧಿಕಾರಿ ಗ್ರೀನ್‌ಲಾ 1868ರಲ್ಲಿ ತೆಗೆದ ಹಂಪಿ ಕಲ್ಲಿನ ರಥದ ಛಾಯಾಚಿತ್ರ

ಒಂದು ಐತಿಹ್ಯದ ಪ್ರಕಾರ ಈ ರಥವು ಈ ಮೊದಲು ಊರಮ್ಮನ ಬಾವಿಕಟ್ಟೆಯ ಮೇಲಿದ್ದು, ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಹಾಳಾಗಬಹುದು ಎಂದು ಪಕ್ಕದಲ್ಲಿಯೇ ಇದ್ದ ಕೇಶವಸ್ವಾಮಿ ದೇವಸ್ಥಾನದ ಕಟ್ಟೆಯ ಮೇಲೆ ಇದನ್ನು ತಂದು ನಿಲ್ಲಿಸಲಾಗಿದೆಯಂತೆ. ಇದು ಸುಮಾರು 50 ವರ್ಷಗಳ ಹಿಂದೆ ಇರಬಹುದೆಂದು ಹೇಳಲಾಗುತ್ತದೆ. ಹಾಗಾದರೆ ರಥವು ಈ ದೇವಸ್ಥಾನಕ್ಕಾಗಿ ನಿರ್ಮಾಣ ಮಾಡಿರುವುದಲ್ಲ ಎನಿಸುತ್ತದೆ. ಇನ್ನು ಊರಮ್ಮದೇವಿಯ ದೇವಸ್ಥಾನಕ್ಕಾಗಿ ನಿರ್ಮಿಸಿರಬಹುದೇ? ಈ ಸಾಧ್ಯತೆಯೂ ಇಲ್ಲವೆನಿಸುತ್ತದೆ.

ವಿಜಯನಗರದ ಅರಸರು ಹಂಪಿಯಲ್ಲಿ ಕಲ್ಲಿನರಥ ನಿರ್ಮಿಸಲು ನಿರ್ದೇಶನ ನೀಡಿದ ಮೇಲೆ ಕೂಡ್ಲಿಗಿಯಲ್ಲಿ ಈ ರಥದ ಮಾದರಿಯೊಂದನ್ನು ಶಿಲ್ಪಿಗಳು ಕೂಡಿ ಚರ್ಚಿಸಿ ಮಾಡಿದ್ದಾರೆ ಮತ್ತು ಅವರು ಅದೇ ರೀತಿಯಲ್ಲಿ ಹಂಪಿಯಲ್ಲಿ ದೊಡ್ಡ ಪ್ರಮಾಣದ ಈ ರಥವನ್ನು ನಿರ್ಮಿಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಚಿತ್ರಕಾರರು, ಶಿಲ್ಪಿಗಳು ಯಾವುದಾದರೂ ದೊಡ್ಡ ಪ್ರಮಾಣದ ಚಿತ್ರ, ಶಿಲ್ಪ, ಕಲಾಕೃತಿಗಳನ್ನು ಮಾಡುವ ಸಂದರ್ಭದಲ್ಲಿ ಅದು ಹೇಗಿರಬೇಕು ಎಂದು ಅದರ ಒಂದು ಚಿಕ್ಕದಾದ ಸ್ಕೆಚ್ ಇಲ್ಲವೆ ಚಿಕ್ಕದಾದ ಶಿಲ್ಪದ ಮಾದರಿಯನ್ನು ಮಾಡುವ ಪರಂಪರೆ ಕಲಾವಿದರಲ್ಲಿ ಈಗಲೂ ಇದೆ. ಕೂಡ್ಲಿಗಿಯಲ್ಲಿ ಸಹ ಇದೇ ರೀತಿಯಲ್ಲಿ ಅಲ್ಲಿನ ಕಲಾವಿದರು ಮಾದರಿಗಾಗಿ ಚಿಕ್ಕ ರಥವನ್ನು ಮುಖ್ಯಶಿಲ್ಪಿಯ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿರಬೇಕು.

ರಥದಲ್ಲಿ ಸಾಮಾನ್ಯವಾಗಿ ಹಲವಾರು ಬಿಡಿ ಭಾಗಗಳನ್ನು ಕಲಾತ್ಮಕವಾಗಿ ಜೋಡಿಸುತ್ತಾರೆ. ರಥದ ಮೇಲೆ ಪಟ್ಟಿಕೆಗಳಲ್ಲಿ ದೇವತಾ ವಿಗ್ರಹಗಳು, ಪುರಾಣದ ಘಟನಾವಳಿಗಳು, ರಾಮಾಯಣ, ಮಹಾಭಾರತ, ಭಾಗವತ, ದಶಾವತಾರ, ಪಂಚತಂತ್ರ ಇತ್ಯಾದಿ ಕಥಾಪ್ರಸಂಗಗಳ ಶಿಲ್ಪಗಳನ್ನು ರಚಿಸುವುದುಂಟು. ರಥದ ಮುಂದೆ ದ್ವಾರಪಾಲಕರು ಜಯ ವಿಜಯ, ಬ್ರಹ್ಮ, ಕುದುರೆ, ಗರುಡ, ಸಿಂಹ, ದೇವತೆಗಳನ್ನು ರಥದ ಸೂಕ್ತ ಅಂಗಗಳಲ್ಲಿ ಕಲಾತ್ಮಕವಾಗಿ ಜೋಡಿಸಿ ರಥಕ್ಕೆ ಜೀವಕಳೆಯನ್ನು ತುಂಬುತ್ತಾರೆ. ಹೀಗೆ ಅಲಂಕೃತ ರಥವು ಚಲಿಸುವಾಗ ದೇವಾಲಯವೇ ನಡೆದು ಬಂದಂತೆ ಭಾಸವಾಗುತ್ತದೆ. ಹೀಗಾಗಿಯೇ ರಥದ ಮೇಲೆ ಗೋಪುರ ನಿರ್ಮಿಸಿರುವ ಸಾಧ್ಯತೆ ಇದೆ. ಹಂಪಿ ರಥದ ಮೇಲುಗಡೆ ಗೋಪುರ ಇರುವುದು ಇದರಿಂದ ಇನ್ನಷ್ಟು ಸ್ಪಷ್ಟವಾಗುತ್ತದೆ.

ಕೂಡ್ಲಿಗಿಯ ರಥದ ಕಮಾನಿನಲ್ಲಿ ಅನೇಕ ಚೌಕಟ್ಟುಗಳಿದ್ದು ಸುಂದರ ಹೂ ಬಳ್ಳಿಗಳಿಂದ ಅಲಂಕೃತಗೊಂಡಿವೆ. ಚೌಕಟ್ಟುಗಳ ಮೇಲಿನ ಭಾಗದಲ್ಲಿ ದೇವತೆಗಳ ಶಿಲ್ಪಗಳಿರುವುದು ಗಮನ ಸೆಳೆಯುತ್ತದೆ. ವಿಜಯನಗರ ಕಾಲದ ಮಂಟಪದ ಕಂಬಗಳಲ್ಲಿ ಕಂಡುಬರುವ ದ್ವಾರಪಾಲಕರ ಶಿಲ್ಪಗಳ ಮಾದರಿಯಲ್ಲಿ ಇಲ್ಲಿನ ಶಿಲ್ಪಗಳು ರಚನೆಗೊಂಡಿವೆ. ಈ ಯಥಾವತ್ತಾದ ಅನುಕರಣೆಯಾಗಿ ಹಂಪಿಯ ಕಲ್ಲಿನರಥವು ಇರುವುದನ್ನು ಗುರುತಿಸಲಾಗಿದೆ. ಸಮೀಪದಲ್ಲಿಯೇ ಕೂಡ್ಲಿಗಿ ಇದ್ದು, ಅಲ್ಲಿನ ಶಿಲ್ಪಿಗಳು ಹಂಪಿಗೆ ಬಂದು ಈ ರಥವನ್ನು ನಿರ್ಮಿಸಿದ್ದಾರೆ ಎನ್ನಲು ಇದು ಮತ್ತೊಂದು ಪುರಾವೆ.


ಹಂಪಿ ಕಲ್ಲಿನ ರಥ

1 ಕೂಡ್ಲಿಗಿಯ ಕಲ್ಲಿನ ರಥದಲ್ಲಿ ಮತ್ತು ಹಂಪಿಯ ಕಲ್ಲಿನ ರಥದಲ್ಲಿ ಒಳಗಡೆ ಹಾಗೂ ಹೊರಗಡೆ ವಿನ್ಯಾಸವು ವರ್ಣವಿನ್ಯಾಸದಿಂದ ಕೂಡಿರುವ ಕುರುಹುಗಳು ಒಂದೇ ರೀತಿಯಾಗಿವೆ

2 ಈ ಎರಡೂ ರಥಶಿಲ್ಪಗಳು ದ್ರಾವಿಡ ಶೈಲಿಯಲ್ಲಿ ರಚನೆಯಾಗಿವೆ ಮತ್ತು 16ನೇ ಶತಮಾನದವುಗಳಾಗಿವೆ

3 ಈ  ಎರಡೂ ರಥಶಿಲ್ಪಗಳು ವಿಜಯನಗರ ಶೈಲಿಯಲ್ಲಿಯೇ ನಿರ್ಮಾಣವಾಗಿವೆ

4 ಈ ಎರಡೂ ರಥಗಳು ಚಲನೆಯನ್ನು ಹೊಂದಿರುವಂತೆ ಕಲಾತ್ಮಕವಾಗಿ ವಿನ್ಯಾಸಗೊಂಡಿವೆ

5 ಕೂಡ್ಲಿಗಿಯ ಕಲ್ಲಿನ ರಥವು ಐದು ಅಡಿ ಎತ್ತರದಲ್ಲಿದೆ ಮತ್ತು ನಾಲ್ಕು ಗಾಲಿಗಳು ಇವೆ. ಹಂಪಿಯ ರಥವು ಸಹ ಇದೇ ಮಾದರಿಯಲ್ಲಿದ್ದು, ಗಾತ್ರದಲ್ಲಿ ದೊಡ್ಡದಾಗಿದೆ

6 ಕೂಡ್ಲಿಗಿಯ ರಥವು ಕಚ್ಚಾ ಮಾದರಿಯಲ್ಲಿ ರಚನೆಯಾಗಿದೆ ಮತ್ತು ಮೇಲೆ ಗೋಪುರವು ಕೆತ್ತಲ್ಪಟ್ಟಿದೆ. ಹಂಪಿಯಲ್ಲಿ ದೊಡ್ಡ ರಥವು ಸುಂದರವಾದ ಕೆತ್ತನೆಯಿಂದ ಕೂಡಿದೆ. ಆದರೆ, ಈಗ ಗೋಪುರವು ಬಿದ್ದು ಹೋಗಿದೆ

7 ಕೂಡ್ಲಿಗಿಯ ಶಿಲ್ಪಿಗಳೇ ಈ ಹಂಪಿಯ ರಥವನ್ನು ಮತ್ತು ಕೂಡ್ಲಿಗಿಯ ಚಿಕ್ಕ ರಥವನ್ನು ನಿರ್ಮಿಸಿದ್ದಾರೆ ಎನ್ನಲು ಈ ಚಿಕ್ಕರಥವು ಸಾಕ್ಷಿಯಾಗಿದೆ ಮತ್ತು ಸ್ಥಳೀಯ ಐತಿಹ್ಯಗಳು ಈ ಮಾತಿಗೆ ಪೂರಕವಾಗಿವೆ

ಈ ಮೇಲಿನ ಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಹಂಪಿಯ ಕಲ್ಲಿನ ರಥಕ್ಕೆ ಕೂಡ್ಲಿಗಿಯ ಈ ಚಿಕ್ಕದಾದ ರಥವು ಪ್ರತಿರೂಪದ ಮಾದರಿಯಾಗಿದೆ. ಈ ವಿವರಗಳ ಹಿನ್ನೆಲೆಯಲ್ಲಿ ಹಂಪಿಯ ರಥದ ಶಿಲ್ಪಿಗಳು ಕೂಡ್ಲಿಗಿ ಶಿಲ್ಪಿಗಳಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು