ಯಕ್ಷ ಕಲಾವಿದ, ನಿರ್ದೇಶಕ ಸುಜಯೀಂದ್ರ ಹಂದೆ

ಬುಧವಾರ, ಏಪ್ರಿಲ್ 24, 2019
34 °C

ಯಕ್ಷ ಕಲಾವಿದ, ನಿರ್ದೇಶಕ ಸುಜಯೀಂದ್ರ ಹಂದೆ

Published:
Updated:
Prajavani

ಮಂಗಳೂರು: ಕೋಟದ ಹಂದಟ್ಟು ಪಟೇಲರ ಮನೆ ಸಾಲಿಗ್ರಾಮ ಮಕ್ಕಳ ಮೇಳದ ಗುರುಕುಲ. ಎಚ್. ಶ್ರೀಧರ ಹಂದೆ ವಸುಮತಿ ಹಂದೆ ಅವರ ಪುತ್ರರಾಗಿ ಜನಿಸಿದ ಸುಜಯೀಂದ್ರ ಹಂದೆ ಅವರು ಯಕ್ಷಗಾನದ ಹಾಡನ್ನೆ ಜೋಗುಳದಲ್ಲಿಯೇ ಕೇಳಿ ಬೆಳೆದವರು. ಮಕ್ಕಳ ಮೇಳದಲ್ಲಿ ಬಾಲ ಕಲಾವಿದರಾಗಿ ಬೆಳೆಯುತ್ತಾ ಪ್ರಧಾನ ವೇಷಧಾರಿಯಾಗಿ ಮೂಡಿ ಬಂದವರು.

ಜತೆಗೆ ಯಕ್ಷಗಾನ ಭಾಗವತಿಕೆಯನ್ನೂ ಅಭ್ಯಾಸ ಮಾಡಿ ಪರಿಣತಿ ಪಡೆದವರು. ನಾಲ್ಕು ದಶಕಗಳ ಇತಿಹಾಸವಿರುವ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರಾಗಿ, ಯಕ್ಷಗಾನದ ಕಲಾವಿದನಾಗಿ, ಅಧ್ಯಾಪಕನಾಗಿ, ಅನೇಕ ಹವ್ಯಾಸಿ ಸಂಘಗಳಲ್ಲಿ ಮತ್ತು ವೃತ್ತಿ ಮೇಳದ ಪ್ರಸಿದ್ಧ ಕಲಾವಿದರೊಂದಿಗೆ ಅತಿಥಿ ಕಲಾವಿದರಾಗಿ ಎಲ್ಲ ರೀತಿ ಪಾತ್ರಗಳನ್ನೂ ಸಂಪ್ರದಾಯ ಬದ್ಧವಾಗಿ ನಿರ್ವಹಿಸಿ ಕಲಾರಸಿಕರ ಮನ್ನಣೆಗೆ ಪಾತ್ರರಾಗಿರುವ ಹಂದೆ ಅವರು, ಅನೇಕ ಕೂಟಗಳಲ್ಲಿ ಅರ್ಥಧಾರಿಯಾಗಿ ಗುರುತಿಸಲ್ಪಟ್ಟಿದ್ದಾರೆ.

ಮುಖವಾಡ ರಚನೆ, ಮೇಕಪ್ ಕಲೆಯಲ್ಲೂ ಪರಿಣತರು. ಗಂಗೊಳ್ಳಿ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕವಿ, ಬರಹಗಾರ ಕೂಡಾ ಹೌದು. ಬಂಜೆ ಹೆತ್ತ ನೋವು ಕವನ ಸಂಕಲನ ಹೊರತಂದಿದ್ದಾರೆ. ಹಲವು ಯಕ್ಷಗಾನ ನಾಟಕ, ಸಾಹಿತ್ಯ ಸಂಬಂಧೀ ಕಮ್ಮಟ, ವಿಚಾರಗೋಷ್ಟಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧ ಮಂಡಿಸಿದ್ದಾರೆ. ಹಲವಾರು ಸಾಂಸ್ಕೃತಿಕ ಸಂಘಟನೆಗಳ ಸದಸ್ಯರಾಗಿ ಸಕ್ರಿಯರಾಗಿದ್ದಾರೆ. ಗಮಕ ವಾಚನ ಪ್ರವಚನಗಳನ್ನೂ ನಡೆಸಿಕೊಟ್ಟಿದ್ದಾರೆ. ಕರ್ನಾಟಕ ಯಕ್ಷಗಾನ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಹವ್ಯಾಸಿ ರಂಗದಲ್ಲಿ ನಂಬರ್ ಒನ್ ಕಲಾವಿದ ಹಂದೆ ಅವರು ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಮಳವಳ್ಳಿ ಹಿರಿಯ ನಾಯ್ಕ್, ಎಂ.ಎ.ನಾಯ್ಕ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ದಿವಂಗತ ಮಹಾಬಲ ಹೆಗಡೆ, ಐರೋಡಿ ಗೋವಿಂದಪ್ಪ ಮುಂತಾದ ಹಿರಿಯ ಕಲಾವಿದರೊಂದಿಗೆ ವೇಷ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇವರ ಸುಧನ್ವ, ಅರ್ಜುನ, ತಾಮ್ರಧ್ವಜ, ಬ್ರಬ್ರುವಾಹನ, ಭೀಷ್ಮ, ಪರಶುರಾಮ, ಕೃಷ್ಣನ ಪಾತ್ರಗಳು ದಿ.ಹಾರಾಡಿ ರಾಮ ಗಾಣಿಗರನ್ನು ನೆನಪಿಸುತ್ತದೆ ಎನ್ನುವುದು ಯಕ್ಷ ಅಭಿಮಾನಿಗಳ ಅಂಬೋಣ. ಅಪರೂಪಕ್ಕೆ ಕಸೆ ಸ್ತ್ರೀವೇಷ ಮಾಡುವ ಸುಜಯೀಂದ್ರ ಹಂದೆ ಅವರು ಹೆಚ್ಚಾಗಿ ಎಲ್ಲಾ ಪೌರಾಣಿಕ ಪ್ರಸಂಗದಲ್ಲಿ ವೇಷ ಮಾಡಿದ ಅನುಭವ ಇವರದ್ದಾಗಿದೆ.
ರಾಜ್ಯದಾದ್ಯಂತ ಮಾತ್ರವಲ್ಲದೇ ನವದೆಹಲಿ, ಒಡಿಸ್ಸಾ, ಮಧ್ಯಪ್ರದೇಶ,  ಆಂಧ್ರಪ್ರದೇಶ, ಚೆನ್ನೈ, ಕೇರಳ, ಗೋವಾ, ಮಹಾರಾಷ್ಟ್ರ ಅಲ್ಲದೇ ಬೆಹರಿನ್, ಲಂಡನ್, ಮೆಂಚೆಸ್ಟರ್, ಕುವೈಟ್ ಮೊದಲಾದ ವಿದೇಶದ ನೆಲದಲ್ಲೂ ಯಕ್ಷಗಾನ ಪ್ರದರ್ಶನ ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಆಕಾಶವಾಣಿಯ ಗ್ರೇಡ್ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಇವರು ಅನೇಕ ಕಡೆ ಯಕ್ಷಗಾನ ಪ್ರಾತ್ಯಕ್ಷಿಕೆ ನೀಡಿ ಯುವ ಜನತೆಯಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ.

ಕರ್ನಾಟಕ ಯಕ್ಷಗಾನ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರೂ ಆಗಿರುವ ಇವರಿಗೆ ಮುಂಬೈ ಕನ್ನಡ ಸಂಘದಿಂದ ಪೇಜಾವರ ಸದಾಶಿವ ರಾವ್ ಸ್ಮಾರಕ ಪ್ರಶಸ್ತಿ, ದೆಹಲಿ ಕನ್ನಡ ಸಂಘದಿಂದ ಪರಸ್ಕಾರ, ಮುಂಬೈ ಕನ್ನಡ ಸಂಘದಿಂದ ಯುವ ಕವಿ ಪ್ರಶಸ್ತಿ, ರೋಟರಿ ಕುಂದಾಪುರದವರಿಂದ ಜಿಲ್ಲಾ ಅತ್ಯುತ್ತಮ ಯಕ್ಷ ಪುರುಷ ವೇಷ ಪ್ರಶಸ್ತಿ, ಚೆನೈ, ಹೈದರಾಬಾದ್, ತ್ರಿರುವನಂತಪುರ ಕನ್ನಡ ಸಂಘದಿಂದ ಗೌರವ ಪುರಸ್ಕಾರ, ಅಂಬಲಪಾಡಿ ಯಕ್ಷಗಾನ ಸಂಘದಿಂದ ಅರುವತ್ತರ ಸಂಭ್ರಮದಲ್ಲಿ ಉತ್ತಮ ಹವ್ಯಾಸಿ ಕಲಾವಿದನೆಂಬ ಗೌರವ ಪುರಸ್ಕಾರ ಸ್ಥಳೀಯ ಸಂಘ-ಸಂಸ್ಥೆಗಳಿಂದ ಸಾಕಷ್ಟು ಕಲಾ-ಸಾಹಿತ್ಯ ಗೌರವ ಪಡೆದಿರುತ್ತಾರೆ. ಮಕ್ಕಳಲ್ಲಿ ಯಕ್ಷಗಾನ ಮಾತ್ರವಲ್ಲದೇ, ಸಂಪ್ರದಾಯಬದ್ದ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಜಯೀಂದ್ರ ಹಂದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದು ಸ್ತುತ್ಯಾರ್ಹ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !