ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ತೀರದ ‘ಪಾರಿಜಾತ ಪುಷ್ಪ’

Last Updated 15 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

’ನಮ್ ಅಪ್ಪ (ದುರುಗಪ್ಪ), ಚಿಕ್ಕಪ್ಪ (ಲಿಂಗಪ್ಪ) ಕಲಾವಂತರ್ರಿ,ಭಜನಿ, ರಿವಾಯತು ಪದ ಆಡೋರು. ಆದ್ರ ಆಟ (ಪಾರಿಜಾತ) ಆಡಿದೋರು ಅಲ್ಲ. ನಾ ಸಾಲಿಗ ಐದನೇ ಇಯತ್ತೆಗೆ ಹೆಸರು ಹಚ್ಚಿದ್ದಿನ್ರಿ, ಆಗಲೇ ಅಪ್ಪ–ಅವ್ವನ ಒತ್ತಾಯಕ್ಕ ದೇವದಾಸಿ ಆಗೇನಿ, ಮುಂದ ಐದಾರು ವರ್ಷ ಆತು, ಅದ್ಯಾಕೊ ಸರಿ ಬರ್ಲಿಲ್ಲ. ನಮ್ಮೂರ ವೆಂಕಟೇಶ್ವರನ ಗುಡಿಯಾಗ ಲೋಕಯ್ಯ ಸ್ವಾಮಿ ಗಣಾಚಾರಿ ಅನ್ನೋರು ಹಾರ್ಮೋನಿಯಂ ಪೆಟ್ಟಿಗೆ ಬಾರಿಸೋರು. ಅವ್ರ ಹತ್ರಾ ಆಟದ ತಾಲೀಮಿಗೆ ಹತ್ತಿದ್ನಿ, ಅವರೇ ನಂಗ ಪ್ರಥಮ ಗುರು, ಅವ್ರ ಮೂಲಕ ಕೃಷ್ಣಾಜಿ ದೇಶಪಾಂಡೆ ಪರಿಚಯ ಆದ್ರು’ ಅನ್ನುತ್ತಾ ಯಲ್ಲವ್ವ ರೊಡ್ಡಪ್ಪನವರ ಹಳೆಯ ನೆನಪುಗಳಿಗೆ ಜಾರಿದರು.

ಮುಧೋಳ ತಾಲ್ಲೂಕು ಲೋಕಾಪುರದ ರಾಣಿಕೇರಿಯ ಯಲ್ಲವ್ವ, ಕೃಷ್ಣಾ ತೀರದ ಪಾರಿಜಾತ–ಬಯಲಾಟದಲ್ಲಿಶ್ರೀಕೃಷ್ಣ, ಕೊರವಂಜಿ, ರುಕ್ಮಿಣಿಯ ಪಾತ್ರಗಳ ಮೂಲಕ ಕಳೆದ ಐದು ದಶಕಗಳಿಂದ ಚಿರಪ‍ರಿಚಿತರು. ಪಾರಿಜಾತದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಯಲ್ಲವ್ವ, ದೇಶಪಾಂಡೆ ಹೆಸರಿನ ಆಟದ ಕಂಪೆನಿ ಕೂಡ ನಡೆಸುತ್ತಿದ್ದಾರೆ.

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಯಲ್ಲವ್ವ, ಏಳುವರ್ಷಗಳ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವಕ್ಕೆ ಪಾತ್ರರಾಗಿದ್ದರು.

’ಆಗಷ್ಟೇ ಜಮಖಂಡಿಯ ವಿಠ್ಠಲರಾವ್ ಠಕ್ಕಳಕಿ ಕಂಪೆನಿ ಬಿಟ್ಟು ಬಂದಿದ್ದ ಕೃಷ್ಣಾಜಿ, ತಾಲೀಮಿನ ಮನೆಗೆ ಬಂದು ಕೂರುತ್ತಿದ್ದರು. ಪಾರಿಜಾತದ ಭಾಗವತದಲ್ಲಿ ದೊಡ್ಡ ಹೆಸರು ಮಾಡಿದ್ದಅವರು ನಮ್ಮೂರಿನವರೆಂದು ಗೊತ್ತಿರಲಿಲ್ಲ. ಆಗ ಅವರೇ ಸ್ವಂತ ಕಂಪೆನಿ ಆರಂಭಿಸಿದರು. ಅದರ ಮೂಲಕವೇ ನಮ್ಮ ರಂಗ ತಾಲೀಮು ಆರಂಭವಾಯಿತು. ಕಾಡುಗಲ್ಲಿನಂತಿದ್ದ ನನ್ನ ಸುಂದರ ಮೂರ್ತಿಯಾಗಿ ರೂಪಿಸಿದರು’ ಎಂದು ಯಲ್ಲವ್ವ ಭಾವುಕರಾಗುತ್ತಾರೆ.

ದೇಶಪಾಂಡೆ ಕಂಪೆನಿಯ ಆರಂಭದಲ್ಲಿ ನಾವಲಗಿಯ ಮಹಾಲಿಂಗಯ್ಯ ಹಡಪದ ಹಾರ್ಮೋನಿಯಂ ಸಾಥ್ ನೀಡಿದರೆ, ಯಮನವ್ವ ಮಾಚಕನೂರ ಕೃಷ್ಣನ ಪಾತ್ರ, ದುರುಗವ್ವ ರೊಡ್ಡಪ್ಪನವರ ಸತ್ಯಭಾಮೆ ಪಾತ್ರ ಮಾಡಿದರೆ ನಾನು ರುಕ್ಮಿಣಿ ಹಾಗೂ ಕೊರವಂಜಿ ಪಾತ್ರಗಳಿಗೆ ಯಲ್ಲವ್ವ ಬಣ್ಣ ಹಚ್ಚುತ್ತಿದ್ದರು.

‘ಪಾರಿಜಾತದಲ್ಲಿ ಕಲಾವಿದರಿಗೆ ಭಾಷಾ ಶುದ್ಧತೆ ಮುಖ್ಯ. ತಂಬಿಗೆ ಪದವನ್ನು ಸಾಮಾನ್ಯವಾಗಿ ಆಡು ಭಾಷೆಯಲ್ಲಿ ತೆಂಬಿಗಿ ಎನ್ನುತ್ತಿದ್ದೆವು. ನಮ್ ಭಾಷೆ ತಿದ್ದಬೇಕಾದರೆ ಸಾಮಾನ್ಯ ತೊಂದರೆ ಆಗಿಲ್ಲ.ಸಾಲ್ಯಾಗ ಹುಡುಗರಿಗೆ ಬೋರ್ಡಿಂಗ್ (ಉಳಿಯುವ ವ್ಯವಸ್ಥೆ) ಮಾಡಿದಂತೆ ಕೃಷ್ಣಾಜಿ ಅವರು ನಾನೂ ಸೇರಿದಂತೆ ಎಂಟು ಮಂದಿ ಕಲಾವಿದರಿಗೆ ಅವರ ಮನೆಯಲ್ಲಿಯೇ ಉಳಿಯುವ ವ್ಯವಸ್ಥೆ ಮಾಡಿದ್ದರು.ನಿತ್ಯ ಬೆಳಗಿನ ಜಾವ 3 ರಿಂದ 6 ಗಂಟೆವರೆಗೆ ತಾಲೀಮ ಆರಂಭವಾಗುತ್ತಿತ್ತು. ಥಂಡ್ಯಾಗ (ಚಳಿ) ಬೆವರು ಬಂದಾಗ ದುಡೀಕಿ ಆಗ್ಯಾತ ಅಂತಾ ತಿಳ್ಕೊತೀನಿ, ಇನ್ನೂ ನಿಮಗೆ ಬೆವರು ಬಂದಿಲ್ಲ ಅನ್ನೋರು ತಾಲೀಮು ಮಾಡಿಸೋರು’ ಎಂದು ಆ ದಿನಗಳಿಗೆ ಜಾರುತ್ತಾರೆ.

ಆರಂಭದಲ್ಲಿ ದಿನಕ್ಕೆ ₹12 ಪಗಾರ ಸಿಗುತ್ತಿತ್ತು. ಅದರೊಟ್ಟಿಗೆ ಅಪ್ಪ–ಅವ್ವ ಕಟ್ಟಿಗೆ ಮಾರಿ ಗಳಿಸುತ್ತಿದ್ದ ದುಡ್ಡು ಕುಟುಂಬದ ನಿರ್ವಹಣೆ ಆಗುತ್ತಿತ್ತು. ಎತ್ತಿನ ಗಾಡಿಯಲ್ಲಿ ತಿರುಗಾಟ. ಸ್ಪೀಕರ್ ಇರಲಿಲ್ಲ. ನಮ್ಮ ಧ್ವನಿಯೇ ಸ್ಪೀಕರ್. ಆಗೆಲ್ಲಾ ನಮ್ಮನ್ನು ಪತ್ರ ಹಾಕಿ ಕರೆಸಿಕೊಳ್ಳುತ್ತಿದ್ದರು. ಅದು ಲಘು ಮುಟ್ಟಲಿಲ್ಲ ಅಂದರ ಕರೆಯೋಕೆ ಒಬ್ಬ ಮನುಷ್ಯನ ಕಳಿಸುತ್ತಿದ್ದರು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಆಟ ಆಡುತ್ತಿದ್ದೆವು. ಅದೊಮ್ಮೆ ಅಥಣಿಯಲ್ಲಿ ಕೃಷ್ಣ, ಸತ್ಯಭಾಮರ ಪಾತ್ರಧಾರಿಗಳು ಕೈಕೊಟ್ಟಾಗ ಕೃಷ್ಣ, ಕೊರವಂಜಿ, ರುಕ್ಮಿಣಿ, ಸತ್ಯಭಾಮೆ ನಾಲ್ಕೂ ಪಾತ್ರಗಳನ್ನು ಮಾಡಿದ್ದ ಸಂದರ್ಭವನ್ನು ಸ್ಮರಿಸಿಕೊಳ್ಳುತ್ತಾರೆ.

’ಆಗಿನ ಅಭಿಮಾನವೇ ಬೇರೆ ಈಗಿನ ವಾತಾವರಣ ಬೇರೆ. ಆಗೆಲ್ಲಾ ನಾವು (ಕಲಾವಿದರು) ಬರೋ ಹಾದಿ ಕಾಯುತ್ತಿದ್ದರು. ನಮ್ಮನ್ನು ಕರೆದೊಯ್ಯಲು ಮುಂದಿನ ಊರಿಗೆ ಬಂದು ನಿಲ್ಲುತ್ತಿದ್ದರು. ಆಗ ನೋಡುವ ಜನ ಇದ್ದರು. ಪಾರಿಜಾತದ ಬಗ್ಗೆ ಜನರಿಗೆ ಈಗಲೂ ಅಭಿಮಾನ ಇದೆ. ಆದರೆ ರಾತ್ರಿಯೆಲ್ಲಾ ಕುಳಿತು ನೋಡೋ ವ್ಯವಧಾನ ಇಲ್ಲ. ಎಂಟು ತಾಸಿನ ಬದಲು ಮೂರು ತಾಸಿಗೆ ಮಾಡಿಕೊಡ್ರಿ ಅಂತಾ ನಡೆದಿದೆ. ಪ್ಯಾಂಟ್ ಹಾಕಿಕೊಂಡೋರು ಅಷ್ಟೊತ್ತು ಹ್ಯಾಂಗ ಕೂರುತಾರ’ ಎಂದು ಮುಗುಳ್ನಗುತ್ತಾರೆ.

ಅರ್ಧಶತಮಾನ ಕಾಲ ಪಾರಿಜಾತದ ರಂಗದಲ್ಲಿ ದುಡಿದು ದಣಿದಿರುವ ಯಲ್ಲವ್ವ ಈಗಲೂ ಲೋಕಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮೂವರು ಮಕ್ಕಳ ಪೈಕಿ ಪಾರ್ವತಿ ಅವ್ವನ ಹಾದಿಯಲ್ಲಿಯೇ ಸಾಗಿದ್ದರೆ, ಮಗ ಅಶೋಕ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬ ಮಗಳು ಪ್ರೇಮಾ ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ.

ಕೃಷ್ಣಾಜಿ ನನ್ನ ಪಾಲಿನ ಸತ್ಪುರುಷ
ಭಾಗವತ ಭೀಷ್ಮ ಎಂದೇ ಪಾರಿಜಾತದಲ್ಲಿ ಖ್ಯಾತರಾಗಿದ್ದ ಕೃಷ್ಣಾಜಿ ದೇಶಪಾಂಡೆ ತೀರಿಕೊಂಡು ಎರಡು ದಶಕ ಕಳೆದಿದೆ. ಆಗಿನಿಂದಲೂ ದೇಶಪಾಂಡೆ ಕಂಪನಿಯನ್ನು ಯಲ್ಲವ್ವ ನಡೆಸಿಕೊಂಡು ಹೋಗುತ್ತಿದ್ದಾರೆ.

ಕೃಷ್ಣಾಜಿ ಭೌತಿಕವಾಗಿ ತಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ಈಗಲೂ ಇದ್ದಾರೆ. ಹಾಗಾಗಿಯೇ ಕಂಪನಿಯ ಬೋರ್ಡ್‌ನಲ್ಲಿ ಅವರ ಹೆಸರ ಮುಂದೆ ದಿವಂಗತ ಎಂದು ಬರೆಸಿಲ್ಲ ಎನ್ನುತ್ತಾರೆ ಅವರು.

‘ಅದೊಮ್ಮೆ ಜುಂಜರವಾಡಿಯ ಹೊಲದಾಗ ಆಟ ಇಟ್ಟುಕೊಂಡಿದ್ರು. ಪ್ರಚಾರಕ್ಕೆ ಹಾಕಿದ್ದ ಬ್ಯಾನರ್‌ನಾಗ, ಅವರ ಹೆಸರಿನ ಮುಂದ ದಿವಂಗತ ಎಂದು ಬರಸಿದ್ರು. ಅವರನ್ನ ಸಾಯಿಸಾಕ ಬಿಡಲ್ಲ; ಮೊದ್ಲ ಅದನ್ನ ತಗೀರಿ. ಇಲ್ಲದಿದ್ರ ಆಟ ಆಡೋದಿಲ್ಲ ಅಂತ ಪಟ್ಟುಹಿಡ್ದು ತೆಗೆಸಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ.

‘ದೇವರಿಗೆ ನಮ್ಮ ಇಚ್ಛಾಪೂರ್ತಿ ಮಾಡೊ ಶಕ್ತಿ ಮಾತ್ರ ಇರತೈತಿ. ಆದ್ರ, ತನ್ನಂಗನ.. ಮಾಡಿಕೊಳ್ಳೋ ಶಕ್ತಿ ಇರೋದು ಮಾತ್ರ ಗುರುವಿಗೆ. ಹಂಗಾಗಿ ಕೃಷ್ಣಾಜಿ ನನಗೆ ದೇವರಿಗಿಂತ ಮಿಗಿಲು.ನನ್ನ ಪಾಲಿನ ಸತ್ಪುರುಷ’ ಎನ್ನುತ್ತಾರೆ ಯಲ್ಲವ್ವ.

50 ವರ್ಷದಿಂದ ನೇಮ ತಪ್ಪಿಸಿಲ್ಲ!
ಪ್ರತಿತಿಂಗಳ ಕಡೇ ಸೋಮವಾರ ವಿಜಯಪುರ ಬಳಿಯ ಸಾರವಾಡದ ಸದಾಶಿವ (ಚಿಕ್ಕಯ್ಯಪ್ಪನ) ಮಠದಲ್ಲಿ ದೇಶಪಾಂಡೆ ಕಂಪನಿಯ ಪಾರಿಜಾತ ಪ್ರದರ್ಶನ ಇರುತ್ತದೆ. ಈ ನೇಮ ಯಾವಾಗಲೂ ತಪ್ಪಿಲ್ಲ ಎಂದು ಯಲ್ಲವ್ವ ಹೇಳುತ್ತಾರೆ. ಅವರು ಮುಂಬೈನ ಕನ್ನಡ ಸಂಘ ಹಾಗೂ ದೆಹಲಿಯಲ್ಲೂ ಶ್ರೀಕೃಷ್ಣ ಪಾರಿಜಾತದ ಪ್ರದರ್ಶನ ನೀಡಿದ್ದಾರೆ.

ಯಲ್ಲವ್ವ ಆಟಕ್ಕೆ ಬೇಕಿರುವಷ್ಟು ಸಂಗೀತ ಕಲಿತಿದ್ದಾರೆ. ಕೃಷ್ಣಾಜಿ ಬರೆದ ‘ಹರಿ ನಿನ್ನನು ಮರೆತ’ ಹಾಡುವಾಗ ಮೈಮರೆಯುತ್ತಾರೆ. ‘ಆವಾಜ್ (ಧ್ವನಿ) ಕೆಡಿಸುತ್ತ ಅನ್ನೋ ಕಾರಣಕ್ಕ ಮೊಸರು, ಮಜ್ಜಿಗೆ ಉಣ್ಣಲ್ಲ. ಸೌತೆಕಾಯಿ ಇಷ್ಟ ಇದ್ರೂ ತಿನ್ನೊಲ್ಲ. ಬಾಳೆಹಣ್ಣು ಆಗೊಮ್ಮೆ ಈಗೊಮ್ಮೆ ಚುರಮುರಿ ಚೂಡಾ ಮಧ್ಯೆ ತಿಂತೇನಿ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT