ಯುವಜನೋತ್ಸವದಲ್ಲಿ ಪ್ರತಿಭಾ ಝೇಂಕಾರ

7

ಯುವಜನೋತ್ಸವದಲ್ಲಿ ಪ್ರತಿಭಾ ಝೇಂಕಾರ

Published:
Updated:
Deccan Herald

ಕಣ್ಣು ಹಾಯಿಸಿದಲ್ಲೆಲ್ಲಾ ಯುವ ಪಡೆ. ನೆಲದ ಮೇಲೆ ಚುಕ್ಕಿಗಳ ಮೂಲಕ ಮೂಡಿದ ವರ್ಣಚಿತ್ತಾರ. ಯುವಕಲಾವಿದರ ಕುಂಚದಲ್ಲಿ ಅರಳಿದ ಪ್ರಕೃತಿಯ ಸೊಬಗು. ಸಂಸತ್ ಕಲಾಪಗಳನ್ನೇ ಮೀರಿಸುತ್ತಿದ್ದ ಯುವಜನರ ವಾಗ್ಝರಿಗೆ ಸಾಕ್ಷಿಯಾದ ಚರ್ಚೆ, ಭಾಷಣಗಳು. ಅಕ್ಷರಶ: ಸಂಗೀತ ಕಛೇರಿಗಳಾಗಿ ಪರಿವರ್ತನೆಯಾದ ಸಭಾಂಗಣಗಳು. ಕೇಳಿದ ಪ್ರಶ್ನೆಗೆ ಥಟ್ ಅಂತ ಉತ್ತರಿಸುತ್ತಿದ್ದ ಜಾಣ ಜಾಣೆಯರು. ಹೃಣ್ಮನ ಸೆಳೆದ ನೃತ್ಯಪಟುಗಳ ಆಂಗಿಕ ಅಭಿನಯ...

ಸೆ.3ರಿಂದ 5ರವರೆಗೆ ಮಾನಸಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ನಡೆದ ಅಂತರಕಾಲೇಜು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.

ಮೈಸೂರು ವಿಶ್ವವಿದ್ಯಾನಿಲಯದ ಕ್ಷೇಮಪಾಲನಾ ನಿರ್ದೇಶಾಲನಯ ಹಮ್ಮಿಕೊಂಡಿದ್ದ ಈ ಉತ್ಸವದಲ್ಲಿ  62 ಕಾಲೇಜುಗಳ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿತ್ರಕಲೆ, ನೃತ್ಯ, ಸಂಗೀತ, ನಾಟಕ, ಭಾಷಣ, ರಂಗೋಲಿ, ರಸಪ್ರಶ್ನೆ ಸೇರಿದಂತೆ ಒಟ್ಟು 26 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸಿದರು.

ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಅಭಿರುಚಿಯಿಲ್ಲದವನು ಪಶುವಿಗೆ ಸಮಾನ ಎಂಬ ಮಾತಿದೆ. ಸದಾ ಪಠ್ಯ ವಿಷಯಗಳಲ್ಲಿ ಮುಳುಗುವಂತೆ ಮಾಡುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕ ಪ್ರತಿಭೆ ವ್ಯಕ್ತವಾಗುವುದು ಬಹಳ ಅಪರೂಪ. ಆದರೆ ವಿದ್ಯಾರ್ಥಿಗಳಲ್ಲಿನ ಈ ಸುಪ್ತ ಪ್ರತಿಭೆಯನ್ನು ಹೊರಗೆಡವಲು ಈ ಸಾಂಸ್ಕೃತಿಕ ಉತ್ಸವ ವೇದಿಕೆಯನ್ನು ಒದಗಿಸಿತು ಎಂದರೆ ತಪ್ಪಾಗಲಾರದು.

ಸ್ಪರ್ಧೆಗೆ ಉತ್ತಮ ರೀತಿಯಲ್ಲಿ ತಯಾರಿ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಕೂತುಹಲ, ಸಂಭ್ರಮ, ಕಾತರ, ತವಕ, ಆತಂಕ ಎಲ್ಲವೂ ಎದ್ದು ಕಾಣುತ್ತಿದ್ದವು. ಕೆಲವರು ಸ್ಪರ್ಧೆಗೆ ಮುನ್ನ ಕ್ಯಾಂಪಸ್ ಕಾರಿಡಾರ್‌ನಲ್ಲಿ ಗುಂಪು ಗುಂಪಾಗಿ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆಗಳಿಗೆ ತರಾತುರಿಯಲ್ಲಿ ತಯಾರಿ ನಡೆಸುತ್ತಿದ್ದ ಸನ್ನಿವೇಶಗಳು ಗಮನ ಸೆಳೆದವು. ಪಾಶ್ಚಾತ್ಯ ಮತ್ತು ಜಾನಪದ ಎರಡೂ ಶೈಲಿಯ ಹಾಡು, ನೃತ್ಯಗಳಿಗೆ ಉತ್ಸವ ವೇದಿಕೆ ಕಲ್ಪಿಸಿದ್ದು ವಿಶೇಷವಾಗಿತ್ತು.

ಕೆಲವು ವಿದ್ಯಾರ್ಥಿಗಳು ತಮ್ಮ ಸುಶ್ರಾವ್ಯ ಸುಮಧುರ ಕಂಠದಿಂದ ಸಂಗೀತದ ರಸದೌತಣ ಬಡಿಸಿದರೆ ಮತ್ತೇ ಕೆಲವರು ನಾಟಕ, ಮೈಮ್, ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಹೃದಯ ಗೆದ್ದರು. ಯುವ ವ್ಯಂಗಚಿತ್ರಕಾರರ ಕೈಯಲ್ಲಿ ಮೂಡಿದ ಗೆರೆಗಳು ನಗೆಬುಗ್ಗೆ ಉಕ್ಕಿಸಿದವು. ಇಷ್ಟು ದಿನ ಜೀನ್ಸ್, ಪ್ಯಾಂಟು ತೊಟ್ಟು ಓಡಾಡುತ್ತಿದ್ದ ವಿದ್ಯಾರ್ಥಿಗಳೆಲ್ಲ ಅಂದು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಗ್ರಾಮೀಣ ಸೊಗಡನ್ನು ಮತ್ತು ಜಾನಪದ ಲೋಕವನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

ಕೊನೆಯ ದಿನ ಸಮಾರೋಪ ಸಮಾರಂಭದಲ್ಲಿ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಆಗಮಿಸಿದ್ದು ಉತ್ಸವಕ್ಕೆ ಮತ್ತಷ್ಟು ರಂಗು ತಂದಿತ್ತು. ಸ್ಪರ್ಧೆಗಳಲ್ಲಿ ಗೆದ್ದವರ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರಶಸ್ತಿ ಬರದ ವಿದ್ಯಾರ್ಥಿಗಳಲ್ಲಿ ಒಂದಿಷ್ಟು ನಿರಾಸೆಯಾಗಿದ್ದರೂ, ಇಂತಹ ಅಪರೂಪದ ವೇದಿಕೆಯಲ್ಲಿ ಭಾಗವಹಿಸಿದೆವಲ್ಲ ಎಂಬ ಸಾರ್ಥಕ ಭಾವದೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು. ಮೂರು ದಿನ ಈ ಸಾಂಸ್ಕೃತಿಕ ಉತ್ಸವ ನಡೆಯಿತು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !