ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ: ಚಂದನವನದ ಸುಡುನೆಲದ ಹನಿಮಳೆಗೆ ಚಿಗುರಿದ ಹಸಿರು

Last Updated 2 ಜನವರಿ 2021, 19:30 IST
ಅಕ್ಷರ ಗಾತ್ರ

2021ನೇ ವರ್ಷ ಸಂಖ್ಯೆಯ ದೃಷ್ಟಿಯಿಂದಂತೂ ಭರಪೂರ ಸಿನಿಮಾಗಳ ಸುಗ್ಗಿಕಾಲವಾಗುವುದರಲ್ಲಿ ಸಂಶಯವಿಲ್ಲ. ಒಂದು ಅಂದಾಜಿನ ಪ್ರಕಾರ ಕಳೆದ ವರ್ಷ ಬಿಡುಗಡೆಯಾಗಬೇಕಾಗಿದ್ದ ಕನ್ನಡದ ಸಿನಿಮಾಗಳೇ ಇನ್ನೂರೈವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸರತಿಯಲ್ಲಿ ನಿಂತಿವೆ. ಬೇರೆ ಭಾಷೆ ಸಿನಿಮಾಗಳಿಗೂ ಕರ್ನಾಟಕ ದೊಡ್ಡ ಮಾರುಕಟ್ಟೆಯೇ ಆಗಿರುವುದರಿಂದ ಅವೆಲ್ಲವೂ ಸೇರಿ ಸಾವಿರಕ್ಕೂ ಮಿಕ್ಕಿ ಸಿನಿಮಾಗಳು ಕರುನಾಡಲ್ಲಿ ದಿಗಿಣ ಕುಣಿಯಲು ಕಾಯುತ್ತಿವೆ. ಇನ್ನು 2020ರಲ್ಲಿ ಸಿದ್ಧವಾದ ಸಿನಿಮಾಗಳು ಬೇರೆಯೇ ಇವೆ. ಹಾಗಾಗಿ 2021ರಲ್ಲಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸರತಿಗಿಂತ ಬಿಡುಗಡೆಯಾಗಲು ಕಾಯುತ್ತಿರುವ ಸಿನಿಮಾಗಳ ಸರತಿಯೇ ದೊಡ್ಡದಾಗಿದ್ದರೆ ಅಚ್ಚರಿಯಿಲ್ಲ. ಈ ನೂಕುನುಗ್ಗಲಿನಲ್ಲಿ ಎಷ್ಟು ಸಿನಿಮಾಗಳು ಕಾಲ್ತುಳಿತಕ್ಕೆ ಸಿಲುಕಿ ಅಸುನೀಗಲಿವೆಯೋ, ಎಷ್ಟು ಸಿನಿಮಾಗಳು ನೆಲಕಚ್ಚಿ ನಿಲ್ಲಲಿವೆಯೋ ಹೇಳುವುದು ಕಷ್ಟ.

ಇದು ವ್ಯಾಪಾರಿ ಸಿನಿಮಾಗಳ ಕಥೆಯಾದರೆ, ಇನ್ನು ಆರ್ಟ್ ಸಿನಿಮಾಗಳು ಎಂದು ನಾವು ಗುರ್ತಿಸುವ ಸಿನಿಮಾಗಳ ಕಥೆಯೂ ಕಳೆದ ಕೆಲವು ವರ್ಷಗಳಲ್ಲಿ ಇನ್ನಷ್ಟು ದಾರುಣವಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಹೆಸರನ್ನು ಎತ್ತಿಹಿಡಿದ, ನಿಜವಾದ ಸತ್ವಶಾಲಿ ಸಿನಿಮಾ ಯಾವುದು ಎಂದರೆ ನಮಗೆ ಈಗಲೂ ನೆನಪಾಗುವುದು ‘ತಿಥಿ’ ಸಿನಿಮಾವೇ. ಅದರ ಆಸುಪಾಸಿನಲ್ಲೆಲ್ಲೂ ಅಂಥ ತಾಜಾ ಮತ್ತು ಸತ್ವಶಾಲಿ ಪ್ರಯೋಗ ಕಣ್ಣಿಗೆ ಬೀಳುವುದಿಲ್ಲ.

ಹಾಗಾದರೆ 2021ನೇ ವರ್ಷದಲ್ಲಿಯೂ ತಮಿಳು, ಮಲಯಾಳಂ ಭಾಷೆಯಲ್ಲಿ ತಯಾರಾದ ಬೆಚ್ಚಿ ಬೀಳಿಸುವ, ಎಡಬಿಡದೆ ಕಾಡಿಸುವ ಸತ್ವಶಾಲಿ ಸಿನಿಮಾಗಳನ್ನು ಕೊಂಡಾಡುವುದರಲ್ಲಿಯೇ ಕಳೆಯಬೇಕೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟರೆ, ನಿರಾಶೆಯ ಕಡಲ ನಡುವೆ ಕೆಲವು ನಂಬಿಕೆಯ ಹಾಯಿದೋಣಿಗಳೂ ಕಾಣಿಸುತ್ತವೆ.

ನಟೇಶ್‌ ಹೆಗಡೆ
ನಟೇಶ್‌ ಹೆಗಡೆ

‘ಪೆದ್ರೋ’ವಿನ ಪ್ರಸಂಗ
‘ಕುರ್ಲಿ’ ಮತ್ತು ‘ನಮಗೆ ನಾವೇ ಗೋಡೆಗೆ ಮಣ್ಣು’ ಕಿರುಚಿತ್ರಗಳ ಮೂಲಕ ಗಮನ ಸೆಳೆದ ಯುವ ನಿರ್ದೇಶಕ ನಟೇಶ್ ಹೆಗಡೆ. ವಿಶ್ವ ಸಿನಿಮಾ ಮತ್ತು ಸಾಹಿತ್ಯದ ವಿದ್ಯಾರ್ಥಿಯಾಗಿರುವ ನಟೇಶ್ ಅವರ ನಿರ್ದೇಶನದ ಪೂರ್ಣ ಪ್ರಮಾಣದ ಮೊದಲ ಸಿನಿಮಾ ಹೆಸರು ‘ಪೆದ್ರೋ’. ರಿಷಭ್ ಶೆಟ್ಟಿ ಹಣ ಹೂಡಿರುವ ಈ ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಕೂಡ ಒಂದು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕನ್ನಡದ ಹಳ್ಳಿಯೊಂದರಲ್ಲಿ ನಡೆಯುವ ಈ ಕಥನ, ಮನುಷ್ಯನ ಮೂಲಸ್ವಭಾವದ ಹಲವು ಛಾಯೆಗಳನ್ನು ಕಾಣಿಸುತ್ತಲೇ ಇಂದಿನ ಸಾಂಸ್ಕೃತಿಕ ರಾಜಕಾರಣದ ಬಗ್ಗೆಯೂ ಬಹುದಿಟ್ಟವಾಗಿ ಮಾತನಾಡುತ್ತದೆ. ವಿಷುವಲ್ಸ್ ಮತ್ತು ಸೌಂಡ್ ಮೇಲೆ ಅಸಾಧ್ಯ ಹಿಡಿತ ಹೊಂದಿರುವ ನಟೇಶ್ ಹೆಗಡೆ ಅವುಗಳ ಮೂಲಕವೇ ಕಾಡುವ ಪ್ರತಿಮೆಗಳನ್ನು ಕಟ್ಟಬಲ್ಲರು. 2019ನೇ ಸಾಲಿನ ಪ್ರತಿಷ್ಠಿತ ಫಿಲಂ ಬಜಾರ್‌ಗೆ ಆಯ್ಕೆಯಾಗಿರುವ ‘ಪೆದ್ರೋ’, 2021ರಲ್ಲಿ ಜಗತ್ತಿನ ಬೇರೆ ಬೇರೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲು ಸಜ್ಜಾಗಿದೆ.

ಕಮರ್ಷಿಯಲ್ ಚೌಕಟ್ಟಿನಲ್ಲಿಯೇ ಗರುಡ ಗಮನ
‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಪ್ರಸಿದ್ಧಿಗೆ ಬಂದ ರಾಜ್‌ ಶೆಟ್ಟಿ ನಂತರದ ಕೆಲವು ವರ್ಷಗಳ ಕಾಲ ನಟನೆಯನ್ನೇ ನೆಚ್ಚಿಕೊಂಡರು. ಈಗ ಅವರ ನಿರ್ದೇಶನದ ಎರಡನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಗರುಡ ಗಮನ ವೃಷಭ ವಾಹನ‘ ಇದು ಅವರ ಸಿನಿಮಾ ಹೆಸರು. ಹೆಸರಿನಷ್ಟೇ ಚಿತ್ರವೂ ಭಿನ್ನವಾಗಿದೆ ಎಂಬುದು ಫಸ್ಟ್ ಕಟ್ ಕಂಡವರ ಅಂಬೋಣ. ‘ಕನ್ನಡದ ನಿರ್ದೇಶಕರಿಗೆ ಒಳ್ಳೆಯ ಕಮರ್ಷಿಯಲ್ ಸಿನಿಮಾನೂ ಮಾಡೋಕೆ ಬರಲ್ಲ’ ಎಂಬ ಗೊಣಗಾಟಕ್ಕೆ ಈ ಸಿನಿಮಾ ಉತ್ತರವಾಗಬಹುದು.

ರಾಜ್‌ ಬಿ. ಶೆಟ್ಟಿ
ರಾಜ್‌ ಬಿ. ಶೆಟ್ಟಿ

ಸುಧೀರ್ ಶ್ಯಾನುಭೋಗ್ ಹೊಸ ಸಾಹಸ
‘ಅನಂತು ವರ್ಸಸ್ ನುಸ್ರತ್’ ಎಂಬ ಸಂವೇದನಾಶೀಲ ಸಿನಿಮಾ ಮೂಲಕ ಗಮನಸೆಳೆದಿದ್ದ ನಿರ್ದೇಶಕ ಸುಧೀರ್ ಶ್ಯಾನುಭೋಗ್. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ, ಸಿನಿಮಾದೊಳಗೆ ಎರಡು ಧರ್ಮಗಳನ್ನು ಮುಖಾಮುಖಿಯಾಗಿಸಿ, ಕೊನೆಗೆ ಎದೆಯ ದನಿಯೇ ಎಲ್ಲಕ್ಕೂ ಮಿಗಿಲು ಎಂಬ ಸಂದೇಶವನ್ನು ಹೊಮ್ಮಿಸಿ ಮಾನವೀಯತೆಯನ್ನು ಗೆಲ್ಲಿಸಿದ್ದರು ಸುಧೀರ್. ಅವರ ಹೊಸ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ. ಮೊದಲ ಯತ್ನದಲ್ಲಿ ಧರ್ಮದ ಗೋಡೆಯ ಮೇಲೇ ಅರಳಿದ ಪ್ರೇಮಕಥೆಯನ್ನು ಹೇಳಿದ್ದ ಅವರು ಈಗ ಎಡ–ಬಲಗಳೆಂಬ ಸಿದ್ಧಾಂತಗಳ ನಡುವೆ ಛಿದ್ರವಾದ ಸಮಾಜದ ಕಥೆಯನ್ನು ಹೇಳಲು ಹೊರಟಿದ್ದಾರೆ. ಚಿಂತಕ, ಕಥೆಗಾರ ನಟರಾಜ್ ಹುಳಿಯಾರ್ ಅವರ ಕಥೆಯನ್ನು ಆಧರಿಸಿ ಚಿತ್ರಕಥೆಯನ್ನು ಕಟ್ಟಿರುವ ಗೌತಮ್ ಜೋತ್ಸ್ನಾ ಈ ಚಿತ್ರಕ್ಕೆ ಹಣವನ್ನೂ ಹೂಡಿದ್ದಾರೆ. 2021ರಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಮೇಲೆ ಒಂದಿಷ್ಟು ನಿರೀಕ್ಷೆಯನ್ನು ಖಂಡಿತ ಇರಿಸಿಕೊಳ್ಳಬಹುದು.

ಇವಿಷ್ಟು ಮೇಲು ನೋಟಕ್ಕೆ ಕಂಡ ಭರವಸೆಯ ಸೆಲೆಗಳು. ಇದನ್ನು ಹೊರತುಪಡಿಸಿಯೂ ಇನ್ನೊಂದಿಷ್ಟು ಒಳ್ಳೆಯ ಸಿನಿಮಾಗಳು ಸುಡುನೆಲದಲ್ಲಿ ಬಿದ್ದ ಹನಿಮಳೆಗೆ ಕಡುಹಸಿರಾಗಿ ಅರಳಿಕೊಂಡು ಅಚ್ಚರಿ ಹುಟ್ಟಿಸಬಹುದು. ಬದಲಾವಣೆ ಎನ್ನುವುದು ಅನಿರೀಕ್ಷಿತವೂ ಆಗಿರುತ್ತದಲ್ಲವೇ? ಗಣೇಶ್ ಹೆಗಡೆ ಎಂಬ ಯುವ ನಿರ್ದೇಶಕರ ‘ನೀಲಿ ಹಕ್ಕಿ’, ಮಿಥಿಲೇಶ್ ನಿರ್ದೇಶನದ ‘ರೂಪಾಂತರ’ ಸಿನಿಮಾಗಳೂ ಒಳ್ಳೆಯ ಸಿನಿಮಾಗಳ ಸಾಲಿಗೆ ಸೇರಬಲ್ಲ ಶಕ್ತಿ ಉಳ್ಳವು ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುಧೀರ್ ಶ್ಯಾನುಭೋಗ್
ಸುಧೀರ್ ಶ್ಯಾನುಭೋಗ್

‘ಕೆಜಿಎಫ್ 2’, ಪ್ರಶಾಂತ್ ನೀಲ್, ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬರಲಿರುವ ‘ಬಘೀರ’, ಸುದೀಪ್, ದರ್ಶನ್‌ರಂಥ ಸೂಪರ್‌ ಸ್ಟಾರ್‌ಗಳ ಪ್ಯಾನ್ ಇಂಡಿಯಾ ಸಿನಿಮಾಗಳು ಎಬ್ಬಿಸಲಿರುವ ದೂಳು ಕನ್ನಡ ಚಿತ್ರರಂಗವನ್ನು ಹೊಳೆಯಿಸುತ್ತವೆಯೇ ಕೊಳೆಮಾಡುತ್ತವೆಯೇ ಎಂಬುದರ ಬಗ್ಗೆ ಮಾತಾಡಲು ಹೊರಟರೆ ಬೇರೆಯೇ ಚರ್ಚೆಯಾದೀತು.

ಎಲ್ಲಿಂದಲೋ ತಂದು ಗಾಜಿನ ಪೆಟ್ಟಿಗೆಯಲ್ಲಿಟ್ಟು, ಅನುದಿನವೂ ಕೃತಕ ಆಮ್ಲಜನಕ ಉಣಿಸಿ ಬದುಕಿಸಬೇಕಾದ ಅಕ್ವೇರಿಯಂನ ಬಣ್ಣದ ಮೀನುಗಳನ್ನು ಕಂಡರೆ ನಮಗೆ ಮುದ್ದುಕ್ಕಬಹುದು; ಆದರೆ ನಮ್ಮ ಮನೆಯ ಹಿತ್ತಿಲಲ್ಲಿ, ಅಲ್ಲಿನ ಮಣ್ಣಲ್ಲಿ ಬೇರೂರಿ, ಅಲ್ಲಿನ ಗಾಳಿ ಬೆಳಕನ್ನೇ ಹೀರಿ ಬೆಳೆಯುವ ಗಿಡಗಳೇ ನಮ್ಮ ಹಲವು ಸಮಸ್ಯೆಗಳಿಗೆ ಮದ್ದಾಗಬಲ್ಲವು. ಸದ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ಬೇಕಿರುವುದು ಅಕ್ವೇರಿಯಂ ಮೀನುಗಳ ಮುದ್ದಲ್ಲ; ಹಿತ್ತಿಲ ಗಿಡದ ಮದ್ದು.

ಪಿಂಕಿ ಎಲ್ಲಿ?
2017ರಲ್ಲಿ ಬಂದ ‘ರೈಲ್ವೆ ಚಿಲ್ಡ್ರನ್’ ಸಿನಿಮಾ, ವಲಸೆ ಬಂದ ಅನಾಥ ಮಕ್ಕಳು ಮಹಾನಗರಗಳಲ್ಲಿ ಬದುಕು ಸಾಗಿಸುವ ರೀತಿಯನ್ನು ಬೆಚ್ಚಿಬೀಳಿಸುವ ಹಾಗೆ ಕಟ್ಟಿಕೊಟ್ಟಿತ್ತು. ಡಾಕ್ಯುಮೆಂಟರಿ ಮತ್ತು ಫೀಚರ್ ಫಿಲಂ ಎರಡೂ ಪ್ರಕಾರಗಳ ಕಸಿಯಂತೆ ಕಾಣುವ ಈ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿಯಾಯಿತು. ಆ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಅವರ ಹೊಸ ಸಿನಿಮಾ ‌‘ಪಿಂಕಿ ಎಲ್ಲಿ?’. ಈಗಾಗಲೇ ಬೂಸಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಈ ಸಿನಿಮಾ, ಇಂಡಿಯನ್ ಪನೋರಮಾ ವಿಭಾಗಕ್ಕೂ ಆಯ್ಕೆಯಾಗಿದೆ. ಈ ವರ್ಷಾಂತ್ಯಕ್ಕೇ ಪರ್ಯಟನೆ ಆರಂಭಿಸಿರುವ ‘ಪಿಂಕಿ’ ಮುಂದಿನ ವರ್ಷ ಇನ್ನಷ್ಟು ಸುದ್ದಿಯಾಗಿ ಕನ್ನಡಕ್ಕೆ ಹೆಮ್ಮೆ ತರುವ ನಿರೀಕ್ಷೆಯಿದೆ.

ಪೃಥ್ವಿ ಕೊಣನೂರು
ಪೃಥ್ವಿ ಕೊಣನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT