ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೋನಾ ಎಂಬ ಡ್ರ್ಯಾಗನ್ ತೆಕ್ಕೆಯಿಂದ

Last Updated 20 ಜೂನ್ 2020, 19:45 IST
ಅಕ್ಷರ ಗಾತ್ರ

ಇಂಗ್ಲೆಂಡಿನ ಮಧ್ಯ ಪ್ರಾಂತ್ಯಕ್ಕೆ ಮಿಡ್ಲೆಂಡ್ ಎಂದೇ ಹೆಸರು. ಅಲ್ಲಿನ ನಗರವೊಂದರಲ್ಲಿ ನಾನು ಎರಡು ದಶಕಗಳಿಂದ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಜನವರಿ - ಫೆಬ್ರುವರಿಯ ಆದಿಯಲ್ಲಿ ಕೋವಿಡ್–19 ಬಗ್ಗೆ ಕೇಳಿದ್ದೆ. ಕಳೆದ ದಶಕಗಳಲ್ಲಿ ಚೀನಾದಿಂದ ಬಂದ ಸಾರ್ಸ್ ಹಾಗೂ ಸ್ವೈನ್ ಫ್ಲ್ಯೂ ಹೆದರಿಕೆ ಹುಟ್ಟಿಸಿದ್ದು ನಿಜ. ಕಡೆಯಲ್ಲಿ ಅವು ಅಷ್ಟೇನೂ ಅಪಾಯಕಾರಿ ಆಗಿರಲಿಲ್ಲ. ಇದನ್ನು ಕಂಡಿದ್ದ ವೈದ್ಯ ಸಮೂಹಕ್ಕೆ, ಕೋವಿಡ್‌–19 ಕೂಡ ಅದೇ ಜಾತಿಯ ಜ್ವರವೆಂದೆನಿಸಿದ್ದರಲ್ಲಿ ತಪ್ಪೇನಿಲ್ಲ. ವುಹಾನ್ ನಗರದಲ್ಲಿ ವ್ಯಾಪಕವಾಗಿ ಹರಡಿದ ಸೋಂಕಿನ ಬಗ್ಗೆ ವರದಿಯಾಗುತ್ತಿತ್ತಾದರೂ ಚೀನಾದ ಇತರ ಮಹಾನಗರಗಳಲ್ಲಿ ಇದು ಹರಡಿದ ಸುದ್ದಿ ಇಲ್ಲದಿದ್ದದ್ದೂ ಹೀಗೆ ಅನಿಸಿದ್ದಕ್ಕೆ ಒಂದು ಕಾರಣವಿರಬಹುದು. ಫೆಬ್ರುವರಿ ಕಡೆ ವಾರದಲ್ಲಿ ಬಿರುಗಾಳಿಯಂತೆ ಇಟಲಿಯ ಲೋಮ್ಬಾರ್ಡಿ ಪ್ರಾಂತ್ಯವನ್ನು ಕೋವಿಡ್–19 ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಾಗಲೇ ಇದು ಹಿಂದೆ ಕಂಡಂತಹ ಸಾಮಾನ್ಯ ಸೋಂಕಲ್ಲ ಎಂಬ ಸುಳಿವು ಸಿಗತೊಡಗಿತ್ತು.

ಮಾರ್ಚ್ ಮೊದಲ ವಾರದಲ್ಲಿ ಲಂಡನ್ ನಗರಕ್ಕೆ ಕೋವಿಡ್ ಕಾಲಿಟ್ಟಿತ್ತು. ಇಂಗ್ಲೆಂಡಿನಲ್ಲಿ ಚಳಿಗಾಲವಿನ್ನೂ ಹೋಗಿರಲಿಲ್ಲ. ಅನೇಕ ಕಡೆ ‘ವೈರಲ್ ಫ್ಲೂ ಸೀಸನ್’ ಮುಗಿದಿರಲಿಲ್ಲ. ನನ್ನ ಮಗಳು ಕೆಮ್ಮುತ್ತ ತಿರುಗುತ್ತಿದ್ದಳು. ಪ್ರತಿ ವರ್ಷ ಮಕ್ಕಳಲ್ಲೊಬ್ಬರು ತರುವ ಫ್ಲೂ ನನಗೂ ಬರುವುದು ಸಾಮಾನ್ಯ. ವಾರಾಂತ್ಯದಲ್ಲಿ ನನಗೆ ಲಂಡನ್ನಿನ ರಾಯಲ್ ಕಾಲೇಜಿನಲ್ಲಿ ಎರಡು ದಿನಗಳ ಕೆಲಸವಿತ್ತು. ಅಲ್ಲಿಂದ ಹಿಂದಿರುಗಿ ಬಂದ ನಂತರ ಎರಡು ದಿನಗಳಲ್ಲಿ ಸಣ್ಣಗೆ ತಲೆನೋವು ಶುರುವಾಗಿತ್ತು. ಆಲಸ್ಯ, ಕೆಲಸಕ್ಕೆ ಹೋದಾಗ ನಿರುತ್ಸಾಹ. ದಿನದ ಕೆಲಸ ಹೇಗೋ ಮುಗಿಸಿದೆ. ಮರುದಿನ ಮೈ-ಕೈ ನೋವು, ತಲೆ ನೋವು ಜಾಸ್ತಿ ಆಗಿದ್ದಕ್ಕೆ ಮನೆಗೆ ಬಂದುಬಿಟ್ಟೆ. ರಾತ್ರಿ ಚಳಿ ಜಾಸ್ತಿ ಆಗುತ್ತ ಜ್ವರ ಬಂತು. ಜೊತೆಗೆ ಒಣ ಕೆಮ್ಮು ಬೇರೆ. ಕೆಮ್ಮು ಜ್ವರ ಕೊಟ್ಟುಬಿಟ್ಟಳಲ್ಲ ಎಂದು ಮಗಳಿಗೆ ಬಯ್ದು, ರಗ್ ಹೊದ್ದು, ಹೀಟರ್ ಹಾಕಿ ಮುದುರಿಕೊಂಡೆ.

ವಾಡಿಕೆಯಂತೆ ಬೇರೆ ಕೋಣೆಯಲ್ಲಿ ಮಲಗಿದ್ದೆ. ಮನೆಯ ಇತರರಿಗೆ ವೈರಸ್ ಹಂಚಬಾರದೆಂದು. ಬೆಳಗ್ಗೆ ಏಳಲಾಗದಷ್ಟು ನೋವು-ಜ್ವರ. ಪ್ಯಾರಾಸಿಟಮೋಲ್ ತೆಗೆದುಕೊಂಡರೂ ಈ ಸಲ ಯಾಕೋ ಜ್ವರ ಇಳಿಯುತ್ತಿರಲಿಲ್ಲ. ಬ್ರುಫೆನ್ ಬೇಕಾಯಿತು. ಮೂಗಿನ ಹೊಳ್ಳೆಯ ಸುತ್ತಲೂ ವಿಚಿತ್ರವಾದ ತಣ್ಣಗಿನ ಸಂವೇದನೆ. ಇದು ಕೋವಿಡ್-19 ಇರಬಹುದಾ ಎಂಬ ಸಂದೇಹ ಮನಸ್ಸಿನಲ್ಲಿ ಹೊಯ್ದಾಡತೊಡಗಿತು. ಆಗ ಕೋವಿಡ್ ಪರೀಕ್ಷೆಯು ಆಸ್ಪತ್ರೆಗೆ ದಾಖಲಾದವರಿಗೆ ಮಾತ್ರ ಮೀಸಲಾಗಿತ್ತು.

ನನ್ನ ಸಹೋದ್ಯೋಗಿ ಮೈಕೆಲ್, ಕೊರೊನಾ ಸೋಂಕಿನಿಂದ ತೀವ್ರ ಚಿಕಿತ್ಸಾ ಘಟಕದಲ್ಲಿದ್ದಾನೆಂಬ ಸುದ್ದಿಯನ್ನು ಮಡದಿ ಕರುಣಾ ತಂದಳು. ರಾತ್ರೆಯಿಡೀ ಜ್ವರ, ಚಳಿ, ಮೈಕೈ ನೋವು, ಜೊತೆಗೆ ವಿಚಿತ್ರ ಕನಸುಗಳು. ಯಾಕೋ ಅಸಮಾಧಾನ, ಚಡಪಡಿಕೆ; ನನಗೂ ಕೋವಿಡ್–19 ಬಂದಿದೆ ಎಂಬ ಸಂಶಯ, ನಿಶ್ಚಿತತೆಯ ಹಾದಿ ತುಳಿದಿತ್ತು. ಹಾಳಾದ ಡಯಾಬಿಟಿಸ್ ಎರಡು ವರ್ಷದಿಂದ ರಕ್ತದೊತ್ತಡದೊಟ್ಟಿಗೆ ವಕ್ಕರಿಸಿದೆ. ಇಂಥವರಿಗೇ ಕೊರೊನಾ ಬಂದಾಗ ತೊಂದರೆ ಜಾಸ್ತಿಯಾಗೋದು ಅಂತ ಕೇಳಿದ್ದೆ. ನೀರು ಕಂಡರೂ ವಾಕರಿಕೆ ಬರುತ್ತಿತ್ತು. ಅಡುಗೆಯ ಘಾಟೂ ಮೂಗಿಗೆ ಬಡಿಯುತ್ತಿರಲಿಲ್ಲ. ಸಹೋದ್ಯೋಗಿ ಪಾರ್ಥ ಗಂಗೂಲಿ, ಮೈಕೆಲ್‌ನ ಸ್ಥಿತಿ ಗಂಭೀರವಾಗಿ, ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫ್ಟ್ ಮಾಡಿದರೆಂದು ಸಂದೇಶ ಕಳಿಸಿದ್ದ. ಇದನ್ನು ಓದುತ್ತಲೇ ನನ್ನ ಜಂಘಾಬಲವೇ ಉಡುಗಿದಂತಾಯಿತು. ಕರುಣಾ ಸ್ಟೆಥೋಸ್ಕೋಪ್, ಪಲ್ಸ್ ಆಕ್ಸಿಮೀಟರ್ (ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಅಳೆಯುವ ಸರಳ ಉಪಕರಣ) ತಂದು ಪರೀಕ್ಷೆ ಮಾಡಿ, ಎಲ್ಲವೂ ಸರಿ ಇದೆಯೆಂದು ಖಚಿತಪಡಿಸಿಕೊಂಡಳು.

ನನಗೂ ಮೈಕಲ್‌ ಸ್ಥಿತಿ ಬಂದರೆ ಎಂಬ ಕರಾಳ ಚಿಂತನೆಯೇ ತಲೆತುಂಬ. ಇಂದು-ನಾಳೆ ಅಂತ ಕಾಲಹರಣ ಮಾಡದೇ ವಿಲ್ ಮಾಡಿಸಬೇಕಿತ್ತು. ಬ್ಯಾಂಕ್ ಪಾಸ್ವರ್ಡ್‌, ಖಾತೆಗಳ ವಿವರವನ್ನೆಲ್ಲ ಬರೆದಿಡು ಎಂಬ ಕರುಣಾಳ ಎಚ್ಚರಿಕೆಯನ್ನೂ ಬಹಳ ಕಾಲದಿಂದ ನಿರ್ಲಕ್ಷ್ಯ ಮಾಡಿದ್ದೆ. ಇನ್ನು ತಡ ಮಾಡಬಾರದೆಂದು ಬಸವಳಿಸುವ ಜ್ವರದ ಬೇಗೆಯಲ್ಲೇ ಎಲ್ಲ ವಿವರಗಳನ್ನು ಕೈಲಾದಷ್ಟು ಬರೆದಿಟ್ಟೆ. ಇದೇ ನನ್ನ ಮರಣ ಶಾಸನ ಎಂದೆನಿಸತೊಡಗಿತು. ಜ್ವರ ಯಾಕೋ 98 ಡಿಗ್ರಿಗಿಂತ ಕೆಳಗಿಳಿಯಲು ಒಪ್ಪಲೇ ಇಲ್ಲ. ಬೆಳಗಾಗುವಷ್ಟರಲ್ಲಿ ಆಮ್ಲಜನಕದ ಪ್ರಮಾಣ ಮೆಲ್ಲನೆ 96ರಿಂದ 90ಕ್ಕೆ ಇಳಿದಿತ್ತು. ತಡೆಯಲಾಗದೇ ನಾನು ಪಾರ್ಥನಿಗೆ ಸಂದೇಶ ಕಳಿಸಿದೆ. ಪಾರ್ಥ ಆಸ್ಪತ್ರೆಗೆ ಬರಹೇಳಿದ.

ಇಂಗ್ಲೆಡ್‌ನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್–19 ರೋಗಿಗಳ ತಪಾಸಣೆಗೆಂದು ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು. ರೋಗಿ ಒಮ್ಮೆ ಒಳಗೆ ಬಂದ ಮೇಲೆ, ಜೊತೆಯಲ್ಲಿರಲು ಯಾರಿಗೂ ಅವಕಾಶವಿರಲಿಲ್ಲ. ನನ್ನನ್ನು ಎದುರ್ಗೊಂಡ ನರ್ಸ್ ನಾಡಿ, ರಕ್ತದೊತ್ತಡ, ಆಮ್ಲಜನಕದ ಮಟ್ಟವನ್ನೆಲ್ಲ ತಪಾಸಣೆ ಮಾಡಿ, ಮೂಗು-ಗಂಟಲನ್ನು ಕೆರೆದು, ಕ್ಷ-ಕಿರಣದ ವ್ಯವಸ್ಥೆ ಮಾಡಿ, ರಕ್ತ ತಪಾಸಣೆಗೆ ಕಳಿಸಿದಳು. ಆಮ್ಲಜನಕದ ಪ್ರಮಾಣ ಕಡಿಮೆ ಇದ್ದುದರಿಂದ ಮೂಗಿಗೆ ಆಮ್ಲಜನಕದ ನಳಿಕೆ ಏರಿಸಿದಳು. ನಾನು ಆಹಾರ ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ, ವಾಂತಿ ಮಾಡುತ್ತಿದ್ದೇನೆಂದು ಸಲೈನ್ ಹಚ್ಚಿದಳು. ಯಾವಾಗಲೂ ತಮಾಷೆ ಮಾಡಿಕೊಂಡೇ ಇರುವ ಪಾರ್ಥನ ಗಂಭೀರ ಮುಖ ನನಗೆ ಒಳ್ಳೆ ಶಕುನದಂತೆ ಕಾಣಲಿಲ್ಲ. ನನ್ನಲ್ಲಿ ನ್ಯೂಮೋನಿಯಾ ಛಾಯೆಗಳಿದ್ದವು, ಬಿಳಿ ರಕ್ತಕಣದ ಪ್ರಮಾಣ ಸ್ವಲ್ಪ ಕಡಿಮೆ ಇತ್ತು. ಹಾಗಾಗಿ, ಪಾರ್ಥ ಡ್ರಿಪ್ಪಿನಲ್ಲೇ ಆ್ಯಂಟಿಬಯೋಟಿಕ್ಸ್ ಕೊಡುವ ವ್ಯವಸ್ಥೆ ಮಾಡಿ, ವಾರ್ಡಿಗೆ ಸೇರಿಸಿದ. ಆಸ್ಪತ್ರೆಯಲ್ಲಿದ್ದ ಸಮಾಧಾನ ಒಂದೆಡೆಯಿದ್ದರೂ ನನ್ನ ತಲೆಯ ಮೇಲೆ ಕತ್ತಿಯಿನ್ನೂ ನೇತಾಡುತ್ತಿರುವ ತಲ್ಲಣ ನನಗೆ.

ಮುಂದಿನ 24 ಗಂಟೆಗಳಲ್ಲಿ ನನ್ನ ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದಿತ್ತು. ಸುತ್ತಲೂ ಅಪ್ಪ-ಅಮ್ಮ, ಬಂಧುಗಳು, ಮಿತ್ರರು ಅಂತಿಮ ಪ್ರದಕ್ಷಿಣೆ ಹಾಕುತ್ತಿದ್ದಾರೆಂದೆನಿಸುತ್ತಿತ್ತು. ನಾನು ಹತಾಶ ಜೀವಿಯಲ್ಲದಿದ್ದರೂ ಕೊರೊನಾದ ಸುದ್ದಿಗಳೆಲ್ಲ ಕರಾಳವಾಗಿರುವಾಗ, ಉದಾತ್ತ ಯೋಚನೆಗಳು ಬರುವುದು ಕಷ್ಟವೇ. ಹಾಗಾಗಿ ಫೋನಿನ ಅಂತರ್ಜಾಲದ ಸಂಪರ್ಕವನ್ನೇ ಕಡಿದುಹಾಕಿದೆ. ಆದರೆ ಪಾರ್ಥ ತಂದ ಮೈಕೆಲ್‌ ಮರಣದ ಸುದ್ದಿ ನನ್ನ ಮನಃಸ್ಥಿತಿಯನ್ನು ಇನ್ನೂ ಹದಗೆಡಿಸಿತ್ತು. ಮೈಕೆಲ್ ಸಾಮಾನ್ಯನೇನಲ್ಲ. ಎವರೆಸ್ಟ್ ಪರ್ವತದ ಬುಡದವರೆಗೆ ಹೈಕ್ ಮಾಡಿದವನು. ಅಂತಹ ಗಟ್ಟಿಗನನ್ನೇ ಕೋವಿಡ್–19 ಬಲಿ ತೆಗೆದುಕೊಂಡರೆ, ನನ್ನಂಥ ಹುಲು ಮಾನವನ ಗತಿ ಕೈಲಾಸವೇ ಎಂದು ಹತಾಶನಾದೆ.

ಕೆಲವೊಮ್ಮೆ ರಕ್ತ ಮಿಶ್ರಿತ ಕಫ ಕೆಮ್ಮಿನಲ್ಲಿ ಕಂಡುಬಂದಿತ್ತು. ಜ್ವರ ಸ್ವಲ್ಪ ತಹಬಂದಿಗೆ ಬಂದಿದ್ದರೂ, ಆಮ್ಲಜನಕದ ಪ್ರಮಾಣ ಮೇಲೇರುತ್ತಿರಲಿಲ್ಲ. ತೀವ್ರಚಿಕಿತ್ಸಾ ಘಟಕದ ವೈದ್ಯ ಬಂದು ನೋಡಿ, ಅದರ ಪ್ರಮಾಣ ಇನ್ನೂ ಕಡಿಮೆ ಆದರೆ ವೆಂಟಿಲೇಟರ್ ಸಹಾಯ ಬೇಕಾಗಬಹುದೆಂದು ಹೇಳಿ ಹೋದ. ನಳಿಕೆಯಲ್ಲಿ ಕೊಡುವ ಆಮ್ಲಜನಕದ ಪ್ರಮಾಣ ಜಾಸ್ತಿ ಮಾಡಿದ ಮೇಲೆ ನಿಧಾನವಾಗಿ ನನ್ನ ಪರಿಸ್ಥಿತಿ ಸುಧಾರಿಸತೊಡಗಿತು. ಆಸ್ಪತ್ರೆಗೆ ಬಂದು ಐದು ದಿನಗಳಾದ ಮೇಲೆ ಜ್ವರ ಬಿಟ್ಟು, ಆಮ್ಲಜನಕ ಸಹಾಯವಿಲ್ಲದೇ ಹಾಸಿಗೆಯಲ್ಲಿ ಎದ್ದು ಕೂರುವ ಸ್ಥಿತಿಗೆ ಬಂದಿದ್ದೆ. ಏಳನೆಯ ದಿನ ಮನೆಗೆ ಬಿಡುಗಡೆಯಾಗುವ ಮೊದಲು ಫೋನಿಗೆ ಅಂತರ್ಜಾಲದ ಸಂಪರ್ಕ ಕೊಟ್ಟಾಗ ಸುರಿದ ಸಂದೇಶಗಳಲ್ಲಿ ಮೊದಲಿತ್ತು ಗೆಳೆಯನೊಬ್ಬನ ಸಂದೇಶ: ‘ಡ್ರ್ಯಾಗನ್ ಬಾಯಿಂದ ಹೊರಬಂದಿದದ್ದಕ್ಕೆ ಅಭಿನಂದನೆಗಳು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT