ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವಾದ್ಯಗಳ ಏಕವಾದಕ

Last Updated 18 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಇಳಿ ಹೊತ್ತು. ಬಲಿತ ಬಿಸಿಲು ಕುಂದಿತ್ತು. ಕೂಡ್ಲಿಗಿ ಪಟ್ಟಣದ ಮಾರ್ಕೆಟ್ ಕಡೆ ಹೊರಟೆ. ಮದಕರಿ ವೃತ್ತದ ಬಳಿ ಬರುವಾಗ ರಸ್ತೆಯ ಬದಿ ಒಂದಿಷ್ಟು ಜನರ ಗುಂಪು ಇತ್ತು. ಆ ಗುಂಪಿನ ಮಧ್ಯದಿಂದ ಶಹನಾಯಿ ವಾದನದ ಧ್ವನಿಯಲ್ಲಿ ‘ಮಾದೇಶ್ವರ ದಯ ಬಾರದೇ...ಬರಿದಾದ ಬಾಳಲ್ಲಿ ಬರಬಾರದೇ...’ ಎಂಬ ಇಂಪಾದ ಸಂಗೀತ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು.

ಹತ್ತಿರ ಹೋದೆ. ಗುಂಪಿನಲ್ಲಿದ್ದವರನ್ನು ಸರಿಸಿದೆ. ಎದುರುಗಡೆ, ನೆಲದಲ್ಲಿ ಕುಳಿತ ವ್ಯಕ್ತಿಯೊಬ್ಬರು ಮೂರು ವಾದ್ಯಗಳನ್ನು ಬಾಯಲ್ಲಿಟ್ಟುಕೊಂಡು, ಈ ಗೀತೆಯನ್ನು ನುಡಿಸುತ್ತಿದ್ದರು. ಸುತ್ತಲೂ ಸೇರಿದ್ದವರು ಹಾಡು ಕೇಳುತ್ತಾ ತನ್ಮಯರಾಗಿದ್ದರು. ಸುತ್ತಲಿನ ವಾತಾವರಣ ‘ನಾದಮಯ ಈ ಲೋಕವೆಲ್ಲ..’ ಎನ್ನುವಂತಾಗಿತ್ತು.

ಅವರು ವಾದನಕ್ಕೆ ಬಿಡುವು ನೀಡಿದ ಮೇಲೆ, ಮಾತಿಗೆ ಸಿಕ್ಕರು. ತನ್ನ ಪೂರ್ವಾಪರವನ್ನು ತೆರೆದಿಟ್ಟರು. ಆ ವ್ಯಕ್ತಿ ಹೆಸರು ಹನುಮಯ್ಯ. ಅವರೊಬ್ಬ ಕಲಾವಿದ. ಕರ್ನಾಟಕದ ಗಡಿ ಆಂಧ್ರದ ಅನಂತಪುರ ಜಿಲ್ಲೆ ಕಲ್ಯಾಣದುರ್ಗದವರು. ಶಹನಾಯಿ, ಶೃತಿ ಹೊಮ್ಮಿಸುವ ಪೀಪಿ ಜತೆಗೆ ಗಾಳಿ ನಿಯಂತ್ರಣದ ಸಾಧನ – ಈ ಮೂರು ಪರಿಕರಗಳನ್ನು ಬಾಯಲ್ಲಿಟ್ಟುಕೊಂಡು ಒಂದೇ ಉಸಿರಲ್ಲಿ ನುಡಿಸುತ್ತಾರೆ. ಇಪ್ಪತ್ತರಿಂದ ಮೂವತ್ತು ನಿಮಿಷಗಳಲ್ಲಿ ಮೂರ್ನಾಲ್ಕು ಹಾಡುಗಳನ್ನು ನುಡಿಸುತ್ತಾರೆ. ಇವರು ನುಡಿಸಲು ಶುರುಮಾಡಿದರೆ, ಕೇಳುಗರಿಗೆ ಅವಿರತ ಸಂಗೀತದ ರಸದೌತಣ! ಅಷ್ಟು ಸುಶ್ರಾವ್ಯ, ಇಂಪಾಗಿರುತ್ತದೆ ಇವರ ಏಕ ವ್ಯಕ್ತಿಯ ವಾದ್ಯಗೋಷ್ಠಿ. ‘ದಮ್ಮ ಹಿಡಿದಿಡುವುದನ್ನು ಕಲಿತರೆ ಈ ವಾದ್ಯ ನುಡಿಸುವುದು ಒಲಿದಂತೆ..’ ಎನ್ನುತ್ತಾರೆ ಹನುಮಯ್ಯ.

ಆಂಧ್ರದ ಹಿಂದೂಪುರದಲ್ಲಿ ಹನುಮಯ್ಯನವರ ಪೂರ್ವಿಕರು ಇದ್ದರು. ಮೂರು ದಶಕಗಳ ಹಿಂದೆ ಇವರನ್ನೂ ಸೇರಿದಂತೆ ಹತ್ತಾರು ಮಂದಿಗೆ ಈ ವಿಶಿಷ್ಟ ವಾದ್ಯಗಾಯನ ಅಭ್ಯಾಸವಾಗಿತ್ತು. ಆದರೆ, ಈಗ ಸದ್ಯಕ್ಕೆ ಉಳಿದಿರುವುದು ಹನುಮಯ್ಯ ಮಾತ್ರ.

ಹನುಮಯ್ಯ ಅನಕ್ಷರಸ್ಥರು. ಮೊದಲಿಗೆ ಜಲವಾದ್ಯ ನುಡಿಸುತ್ತಿದ್ದರು. ವಯಸ್ಸಾಗಿದ್ದರಿಂದ ಈಗ ನಿಲ್ಲಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ಮಲೆಯಾಳಂ, ತಮಿಳು ಭಾಷೆ ಮಾತನಾಡುತ್ತಾರೆ. ಅಷ್ಟೇ ಅಲ್ಲ, ಈ ಭಾಷೆಗಳ ಹಳೆಯ, ಜನಪ್ರಿಯ ಚಿತ್ರಗೀತೆಗಳು, ಭಕ್ತಿಗೀತೆಗಳನ್ನು ನುಡಿಸುತ್ತಾರೆ.

ಅರವತ್ತೇಳರ ಹರೆಯದ ಹನುಮಯ್ಯ ತನ್ನ ಜೀವನದ ಮುಕ್ಕಾಲು ಭಾಗವನ್ನು ಹೀಗೆ ಅಲೆದಾಟದಲ್ಲಿಯೇ ಕಳೆದಿದ್ದಾರೆ. ವಾದ್ಯ ನುಡಿಸುವ ಕಲೆಯೊಂದಿಗೆ ರಾಜ್ಯ, ಹೊರ ರಾಜ್ಯಗಳಲ್ಲಿ ಸುತ್ತಾಡಿದ್ದಾರೆ. ಕಲಾಭಿಮಾನಿಗಳ ಮನ ಗೆದ್ದಿದ್ದಾರೆ. ಇವರ ಪ್ರತಿಭೆ ಗುರುತಿಸಿ ರಾಜ್ಯ ಮತ್ತು ನೆರೆ ರಾಜ್ಯದ ಅನೇಕ ಶಾಲಾ-ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಮುಂದೆ ಪ್ರದರ್ಶನ ಕೊಡಿಸಿವೆ. ಪ್ರಶಂಸಿಸಿವೆ. ಸನ್ಮಾನವನ್ನೂ ಮಾಡಿವೆ.

‘ನಮ್ಮದು ಕೊರವ ಜನಾಂಗ. ವಾದ್ಯ ನುಡಿಸುವುದು ನಮ್ಮ ಕುಲ ಕಸುಬು. ನನ್ನ ಮಕ್ಕಳಿಗೆ ಇದು ಇಷ್ಟ ಆಗ್ತಿಲ್ಲ. ಕೀಳು ಕೆಲಸವೆಂದು ವ್ಯಾಪಾರಕ್ಕೆ ಹೋಗ್ತಾರೆ.‌ ನನ್ನೊಂದಿಗೆ ಈ ಕಲೆ ಮಣ್ಣಾಗಿಬಿಡುತ್ತದಲ್ಲಾ...’ ಎನ್ನುತ್ತಾ ನುಡಿಸುತ್ತಿದ್ದ ವಾದ್ಯಗಳನ್ನು ಪಕ್ಕಕ್ಕಿಟ್ಟು ಬೇಸರದೊಂದಿಗೆ ಹೇಳಿದರು ಹನುಮಯ್ಯ.

ಕಲೆಯ ಬೆಳವಣಿಗೆ ಬಗ್ಗೆ ಇಷ್ಟೆಲ್ಲ ದುಃಖವಿದ್ದರೂ, ಈ ವಿದ್ಯೆಯ ಮೇಲೆ ಅವರಿಗೆ ತುಂಬಾ ಅಭಿಮಾನ ಮತ್ತು ಪ್ರೀತಿ. ‘ನಮ್ಗೆ ತುತ್ತು ಅನ್ನ ಕೊಟ್ಟಿದ್ದು ಈ ವಿದ್ಯೆ. ನಾನು ಇರುವ ತನಕ ಹೀಗೆ ಊರೂರು ಅಲೆಯುತ್ತಾ, ಕಲೆಯನ್ನು ಪ್ರದರ್ಶಿಸುತ್ತೇನೆ. ಈಗ ಸುಖ ಐತಿ ಅಂತಾ ಇದನ್ನು ತೊರೆಯಕ್ಕೆ ಆಗುತ್ತಾ’ – ಮುಖ ಅರಳಿಸಿಕೊಂಡೇ ಪ್ರಶ್ನಿಸುತ್ತಾರೆ ಅವರು.

‘ಆಗೆಲ್ಲ ಟಿ.ವಿ, ಮೊಬೈಲ್ ಇರಲಿಲ್ಲ. ಜನರಲ್ಲಿ ಸಂಗೀತದ ಬಗ್ಗೆ ಕನಿಷ್ಠ ಜ್ಞಾನ, ಅಭಿಮಾನ ಇತ್ತು. ನಮಗೂ ಬೇಡಿಕೆ ಇತ್ತು. ಮದುವೆ, ನಾಟಕ, ಬಯಲಾಟಗಳಲ್ಲಿ ಅವಕಾಶ ಕೊಡುತ್ತಿದ್ದರು. ಹಾರ್ಮೋನಿಯಂ, ತಬಲದೊಂದಿಗೆ ನಾವೂ ದನಿಯಾಗುತ್ತಿದ್ದೆವು. ಇನ್ನು ಮನರಂಜನೆಗಾಗಿ ನಮ್ಮನ್ನು ಕರೆದು ಮುಂದೆ ಕೂರಿಸಿಕೊಂಡು ವಾದ್ಯ ನುಡಿಸಲು ಹೇಳುತ್ತಿದ್ದರು. ಈಗ ಕಾಲ ಬದಲಾಗಿದೆ. ಜನಕ್ಕೂ ಜನಪದ ಸಂಗೀತದ ಬಗ್ಗೆ ಆಸಕ್ತಿ ಇಲ್ಲ. ಹಳೆ ರೆಕಾರ್ಡ್‌ಗಳ ಕೇಳಲು ಮೊದಲೇ ಪುರುಸೊತ್ತು ಇಲ್ಲ. ಇನ್ನೆಲ್ಲಿದೆ ಈ ಕಲೆಗೆ, ಅದನ್ನೇ ನಂಬಿದ ನಮಗೆ ಉಳಿಗಾಲ’ ಎನ್ನುತ್ತಲೇ ಪಕ್ಕದಲ್ಲಿದ್ದ ಸಂಗೀತದ ಪರಿಕರಗಳನ್ನು ಚೀಲಕ್ಕೆ ತುಂಬಿದರು.

ವಾದ್ಯಗಾರರ ಪರಿಶ್ರಮ ತಿಳಿಯದವರು, ಇವನು ಪೀಪಿ ಬಾರ್ಸೋನು ಎಂದು ತಿರಸ್ಕಾರದಿಂದ ನೋಡ್ತಾರಂತೆ. ಕೆಲವರು ಅಷ್ಟೊ ಇಷ್ಟೊ ಕೊಟ್ಟು ಸಾಗಿಹಾಕುತ್ತಾರೆ. ‘ಇದು ನಮ್ಮ ಕಸುಬು. ಇದರಲ್ಲೇ ತುತ್ತು ಅನ್ನ ಸಿಗುತ್ತೆ. ಹಾಗಾಂತ ನಮಗೆ ದುಡ್ಡು ಕೊಟ್ಟರಷ್ಟೇ ಖುಷಿ ಸಿಗಲ್ಲ. ನಾವು ನುಡಿಸುವುದನ್ನು ಮನಪೂರ್ವಕವಾಗಿ ಆಲಿಸಬೇಕು. ಆಗ ಇಬ್ಬರಿಗೂ ಸಾರ್ಥಕ ಸಿಗುತ್ತೆ’ ಎನ್ನುವಾಗ ಅವರ ಕಣ್ಣಂಚಲ್ಲಿ ನೀರು ಜಿನುಗಿತು.

‘ಪುಣ್ಯಕ್ಕೆ ನಮ್ಮ ಕಲೆಗೆ ಬೆಲೆಕೊಟ್ಟು, ಕಿವಿಗೊಟ್ಟು ಆಸ್ವಾದಿಸುವ ಮನಸ್ಸುಗಳು ಅಲ್ಲಲ್ಲಿ ಉಳಿದಿವೆ. ನಾನು ತಿಳಿದಷ್ಟು ನುಡಿಸುವ ಸಂಗೀತಕ್ಕೆ ಅವರೆಲ್ಲ ತಲೆದೂಗುತ್ತಾರೆ. ಇಂತಹವರು ಇಲ್ಲದಿದ್ದರೆ ಎಂದೋ....’ ಹೀಗೆ ಹೇಳುವಾಗ ಹನುಮಯ್ಯನ ಧ್ವನಿ ಕಂಪಿಸುತ್ತಿತ್ತು. ಅವರು ಮಾತು ಮೊಟಕುಗೊಳಿಸಿ ಅಲ್ಲಿಂದ ಹೊರಟರು.

ಈ ಕಲೆಯ ಪ್ರದರ್ಶನದಲ್ಲಿ ಸಿಹಿ-ಕಹಿಗಳನ್ನುಂಡ ಜೀವ ಕತ್ತಲಲ್ಲಿ ಮರೆಯಾಯಿತು. ಹನುಮಯ್ಯನವರ ಎಲ್ಲ ಮಾತುಗಳನ್ನು ಕೇಳಿಸಿಕೊಂಡು ಭಾರದ ಮನಸ್ಸಿನಿಂದ ಮನೆಗೆ ಮರಳಿದೆ.

ಅಂದು ಕಂಡಿದ್ದ ಹನುಮಯ್ಯ ಇತ್ತೀಚೆಗೆ ಹಡಗಲಿಯಲ್ಲಿ ನೋಡಿದ್ದೆ ಎಂದು ಗೆಳೆಯರೊಬ್ಬರು ಹೇಳಿದರು. ಅವರು ವಾದ್ಯ ನುಡಿಸುವುದನ್ನು ವಿಡಿಯೊ ಚಿತ್ರೀಕರಣ ಮಾಡಿ ಫೇಸ್‌ಬುಕ್‌ಗೆ ಹಾಕಿದ್ದರು. ಅದನ್ನು ಬಹಳ ಮಂದಿ ಮೆಚ್ಚಿಕೊಂಡಿದ್ದರು.

ಎಂಥ ವಾದ್ಯವಿದು?

‘ಇದು ದೇಸಿ ವಾದ್ಯ. ಈಗ ಜನಪದ ಸಂಗೀತ ಆಗಿದೆ. ಜಾಗತೀಕರಣದಿಂದ ಇಂತಹ ಅದೆಷ್ಟೋ ಪ್ರತಿಭೆಗಳು ಸೂಕ್ತ ಮಾನ್ಯತೆ ಸಿಗದೇ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಕ್ರಮಬದ್ಧ ಜ್ಞಾನವಿಲ್ಲ ಎನ್ನುವ ಕಾರಣಕ್ಕೆ ನಿರ್ಲಕ್ಷಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸುತ್ತಾರೆ ಕೊಟ್ಟೂರಿನ ಹಾರ್ಮೊನಿಯಂ ವಾದಕ ಯು.ಎಂ.ನಿರಂಜನಮೂರ್ತಿ.

‘ಇಂಥ ಕಲಾವಿದರನ್ನು ಗುರುತಿಸಿ, ಗೌರವಿಸಿ ಮುಖ್ಯವಾಹಿನಿಗೆ ತರಬೇಕು. ಜನಪದ ಸಂಗೀತದ ಕಲೆಯನ್ನು ಉಳಿಸಬೇಕು. ಈ ಕಲೆ ಮತ್ತು ಕಲಾವಿದರ ಬೆಳವಣಿಗೆಗೆ ಬೇಕಾದ ಮೂಲ ಸವಲತ್ತುಗಳನ್ನು ತುರ್ತಾಗಿ ನೀಡಬೇಕು. ಇಲ್ಲದಿದ್ದರೆ ಈ ಪರಂಪರೆ ನಿಸ್ಸಂದೇಹವಾಗಿ ನಶಿಸಿ ಹೋಗುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT