ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ...

7
ಒಡಲಾಳ

ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ...

Published:
Updated:
Deccan Herald

‘ಯಾಕೆ ಎಲ್ರೂ ಮನೆ ಬಿಟ್ಟು, ಊರು ಬಿಟ್ಟು ಹೋಗ್ತಾರೆ? ಏನು ಅವಶ್ಯಕತೆ ಇದೆ? ಶಾಲೆ, ಕಾಲೇಜು, ನಂತ್ರ ಕೆಲಸ ಹಿಂಗೆ ಏನೇನೋ ಹೇಳಿಕೊಂಡು ಊರು ಬಿಟ್ಟು ಹೋಗುವವರು ಎಲ್ಲಿ ಉಳ್ಕೋತಾರೆ? ಮನೆಗಿನೆ ಎಲ್ಲಾ ಬಿಟ್ಟು ಹೋಗಿ ಏನು ಮಾಡ್ತಾರೆ? ಅವರನ್ನು ಯಾರು ಕಾಳಜಿಯಿಂದ ನೋಡ್ಕೋತಾರೆ? ಅಲ್ಲಿ ಅವರ ಜತೆ ಆಡೋಕೆ ಯಾರು ಇರ್ತಾರೆ? ಊಟ ತಿಂಡಿ ಹೇಗೆ ಮಾಡ್ತಾರೆ? ದೊಡ್ಡ ಊರಿಗೆ ಹೋಗಿ ಕಳೆದು ಹೋದ್ರೆ ಏನ್ ಮಾಡ್ತಾರೆ! ಅದೂ ಅಲ್ಲದೆ ಎಲ್ಲಿ ಇರ‍್ತಾರೆ ಅವರು? ಅಪ್ಪ ಅಮ್ಮನ ನೆನಪೂ ಕೂಡಾ ಆಗಲ್ವ? ಅಪ್ಪ ಅಮ್ಮನ ಬಿಟ್ಟು ಅದೇನ್ ಮಾಡ್ತಾರೋ’

ಹೀಗೆ ಸಾಲು ಸಾಲು ಪ್ರಶ್ನೆಗಳು ನನ್ನ ಮನಸೊಳಗೆ ಸಮುದ್ರದ ತೆರೆಗಳ ಹಾಗೆ ಅಪ್ಪಳಿಸುತ್ತಿದ್ದಾಗ ನಾನಿನ್ನೂ ಚಿಕ್ಕ ಹುಡುಗಿ. ನನ್ನ ಜತೆಗೆ ಆಡುತ್ತಿದ್ದ ನನಗಿಂತ ಕೊಂಚ ದೊಡ್ಡವರೆಲ್ಲ ಚಕ್ಕನೇ ಹೈಯರ್‌ ಎಜುಕೇಷನ್‌ ಎಂಬ ಮಂತ್ರ ಪಠಿಸಿ ಊರಿನಿಂದ, ಆಟದ ಮೈದಾನದಿಂದ, ಗದ್ದೆ ಬಯಲಿನಿಂದ ಮಾಯವಾಗಿಬಿಟ್ಟಾಗಲೆಲ್ಲ ನನ್ನೊಳಗೆ ಇಂಥ ನೂರು ಪ್ರಶ್ನೆಗಳು ರಪರಪನೇ ಏಳುತ್ತಿದ್ದವು. ಆ ಪ್ರಶ್ನೆಗಳ ಹಿಂದೆಯೇ ಸುಳಿದು ಸುತ್ತಾಡಿದರೂ ಗಟ್ಟಿಯಾದ ಉತ್ತರ ಮಾತ್ರ ನನಗೆ ಸಿಗುತ್ತಲೇ ಇರಲಿಲ್ಲ. ಯಾವುದೋ ಮಾಯೆ ನನ್ನೂರಿನ ಸ್ನೇಹಿತರನ್ನೆಲ್ಲ ಸೆಳೆದುಕೊಂಡು ಹೋಗುತ್ತಿದೆ. ನಾನು ಒಂಟಿಯಾಗಿಬಿಡುತ್ತೇನೆ ಎಂಬ ತಳಮಳದಲ್ಲಿ ಒದ್ದಾಡುತ್ತಿದ್ದೆ. 

 ಯಾವಾಗ ನಾನು ಶಾಲೆಗೆ ಸೇರಿದೆನೋ ನನ್ನ ಜಗತ್ತು ಕೊಂಚ ಬದಲಾಯಿತು. ಊರಲ್ಲಿ ಪ್ರಾಥಮಿಕ ಶಾಲೆ, ನಂತರ ಹೈಸ್ಕೂಲು. ಕಾಲೇಜಿಗೆ ಎಂದು ಊರು ಬಿಡುವ ಪ್ರಸಂಗ ಬಂದಾಗ ನನ್ನನ್ನು ಬಾಲ್ಯದಲ್ಲಿ ಕಾಡುತ್ತಿದ್ದ ಪ್ರಶ್ನೆಗಳ ನೆನಪೇ ಇರಲಿಲ್ಲ. ಕಾಲೇಜು ಶಿಕ್ಷಣಕ್ಕೆ ಅಂತ ಒಳ್ಳೆ ಕಾಲೇಜು ತಲಾಶ್‌ಗೆ ಇಳಿದೆ. ಮನೆಯಲ್ಲಿ ಕೂಡಾ ತುಂಬಾ ವಾದ ವಿವಾದಗಳ ನಂತರ ಧಾರಾವಾಡದಲ್ಲಿ ಕಾಲೇಜಿಗೆ ಸೇರಿಕೊಳ್ಳುವುದು ಎಂದು ತೀರ್ಮಾನವಾಯಿತು. ಇಲ್ಲಿಂದ ನನ್ನ ಅಲೆಮಾರಿತನ ಶುರುವಾಯ್ತು. ಕಾಲೇಜಿನ ರಂಗುರಂಗಿನ ಜಗತ್ತು, ನೋಡಿರದ ಹೊಸ ಊರು, ಸ್ನೇಹಿತರು, ಹೊಸ ಕಲಿಕೆ ಇವುಗಳ ಮಧ್ಯ ಕೆಲವೊಮ್ಮೆ, ಮುಸ್ಸಂಜೆಯ ರಂಗು ಊರ ನೆನಪಿಸಿದಾಗ ಬಾಲ್ಯದಲ್ಲಿ ಕಾಡುತ್ತಿದ್ದ ಪ್ರಶ್ನೆಗಳು ಮನಸ್ಸಿಗೆ ಬರುತ್ತಿದ್ದವಾದರೂ ಅವುಗಳಿಗೆ ಉತ್ತರ ಕಂಡುಕೊಳ್ಳುವ ಸಂಯಮ ಆಗಲಿ, ಕಂಡುಕೊಳ್ಳಲೇಬೇಕು ಎಂಬ ಹಟವಾಗಲಿ ಇರಲಿಲ್ಲ. ಬಹುಶಃ ಆ ಪ್ರಶ್ನೆಗಳನ್ನು ದಿಟ್ಟವಾಗಿ ಎದುರಿಸುವ ಪ್ರಬುದ್ಧತೆಯೂ ಇರಲಿಲ್ಲವೆನಿಸುತ್ತದೆ. 

 ಈ ಪ್ರಶ್ನೆಗಳು ನನ್ನನ್ನು ಮತ್ತೆ ಎಡಬಿಡದೇ ಕಾಡಲು ಶುರುವಾಗಿದ್ದು ಐದು ವರ್ಷಗಳ ನಂತರ. ಆದರೆ ಅವವೇ ಪ್ರಶ್ನೆಗಳಿಗೆ ಬಾಲ್ಯದಲ್ಲಿ ಇದ್ದ ಮುಗ್ಧತೆಯಾಗಲಿ, ಕಾಲೇಜು ದಿನಗಳಲ್ಲಿದ್ದ ಸರಳತೆಯಾಗಲಿ ಇರಲಿಲ್ಲ.  ಅವು ಸಂಪೂರ್ಣವಾಗಿ ತಮ್ಮ ಸ್ವರೂಪವನ್ನು ಬದಲಿಸಿಕೊಂಡು ಹೊಸ ರೂಪ ಪಡೆದುಕೊಂಡು ಇನ್ನಷ್ಟು ಸಂಕೀರ್ಣವಾಗಿ ಈಗ ಮತ್ತೆ ಕಾಡುವುದಕ್ಕೆ ಶುರುಮಾಡಿವೆ. ಬಹುಶಃ ಬದಲಾಗಿದ್ದು ಪ್ರಶ್ನೆಗಳಲ್ಲ; ಅವುಗಳನ್ನು ಎದುರಿಸುತ್ತಿರುವ ನಾನು. 

ಈ ಐದು ವರ್ಷಗಳಲ್ಲಿ ನಾನೇ ಎಷ್ಟೊಂದು ಬದಲಾಗಿದ್ದೇನೆ. ಕಾಲೇಜು ಮುಗಿಸಿಕೊಂಡು ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೇನೆ. ಚಿಕ್ಕವಳಿದ್ದಾಗ ತಾನು ಹೇಳಿದ್ದೇ ಸತ್ಯ ಎಂಬಷ್ಟು ಜಗಮೊಂಡಿಯಾಗಿದ್ದವಳು ಈಗ ಚರ್ಚೆ ಬಿಸಿಯಾಗಿ, ಜಗಳ ತಲುಪಿದಾಗ ಅದನ್ನು ಹಾಸ್ಯಕ್ಕೆ ತರುವಷ್ಟು ಚಿಗುರಿದ್ದೇನೆ. ತರ್ಕಕ್ಕೆ ಒಂದು ಶಾಶ್ವತ ಪೂರ್ಣ ವಿರಾಮ ನೀಡುವಷ್ಟು ರೆಕ್ಕೆ ಬಲಿತಿದೆ. ಇವೆಲ್ಲಕ್ಕಿಂತ ಮುಖ್ಯವಾದ ವಿಷಯವನ್ನು ಆಳಕ್ಕೆ ಅರಿಯುವಲ್ಲಿ ಸಲಹೆ ಸಂಯಮಗಳಿಂದ ಕಾಲು ಸ್ಥಿರವಾಗಿ ನಿಂತಿದೆ. ಹಾಗೆಂದೇ ಆ ಪ್ರಶ್ನೆಗಳು ಇನ್ನಷ್ಟು ಗಾಢವಾಗಿ ಸಂಕೀರ್ಣವಾಗಿ ನನ್ನನ್ನು ಕಾಡತೊಡಗಿವೆ. 

ಈ ಬೃಹತ್ ಬೆಂಗಳೂರಿಗೆ ಬಂದು ಕಾಲಿಟ್ಟ ಮೊದಲ ದಿನವೇ ನಾನು ನನ್ನ ಅರಮನೆಯನ್ನು ಕಳೆದುಕೊಂಡಂತೆ ಭಾಸವಾಯಿತು. ಶುಭ್ರವಾದ ಗಾಳಿ ಇಲ್ಲವೇ ಇಲ್ಲ ಅನ್ನಿಸಿಬಿಡ್ತು. ಪ್ರೀತಿ ಮಾತುಗಳಿಂದ ಸಂತೈಸುವ ಅಪ್ಪ ಅಮ್ಮ ನೆನಪಾದರು. ಬೆಂಗಳೂರಿಗಿಂತ ತಂಗಿ ತಮ್ಮನ ಜೊತೆ ಮಾಡೋ ಜಗಳ ಸಿಹಿ ಅನ್ನಿಸ್ತು. ಜೀವನದಲ್ಲಿ ಮೊದಲ ಬಾರಿ ಸ್ವಾತಂತ್ರ್ಯ ಕಳೆದುಕೊಂಡೆ ಅನ್ನಿಸಿತು. ಪಂಜರದ ಪಕ್ಷಿಯ ಪದ ನೆನಪಾಯಿತು. ಸಣ್ಣ ಪೆಟ್ಟಿಗೆಯಲ್ಲಿ ಇಟ್ಟ ಮೀನಿನಂತೆ ಭಾಸವಾಯಿತು.

ತಿಂಗಳುಗಟ್ಟಲೆ ಬೇಟೆಯಾಡಿ ಕೊನೆಗೆ ಒಂದು ಕೆಲಸ ಗಿಟ್ಟಿಸಿಕೊಂಡೆ. ಕೆಲಸ ಇನ್ನೊಬ್ಬರ ಕೈಗೆ ಮಾಡೋವಾಗ ನಾನು ಯಾರ ಒತ್ತಾಯಕ್ಕೆ ಮಣಿದು ಈ ಕೆಲಸ ಒಪ್ಪಿಕೊಂಡಿರಲಿಲ್ಲ ಅಥವಾ ಹಣದ ಅವಶ್ಯಕತೆಗಾಗಿ ಒಪ್ಪಿರಲಿಲ್ಲ ಅಥವಾ ಕಂಪನಿ ಬಾಸ್‌ಗೆ ಉದ್ಧಾರ ಮಾಡಬೇಕು ಅಂತೂ ಅಲ್ಲ. ಇದು ಜೀವನದ ಮತ್ತೊಂದು ಮಹತ್ತರ ಘಟ್ಟ. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡೋದು ಹೇಗಿರುತ್ತೆ ಅಂತಾ ಅನುಭವಿಸುವುದಕ್ಕೆ, ನನ್ನನ್ನು ನಾನು ತಿದ್ದಿಕೊಳ್ಳೋಕೆ ಇನ್ನೂ ಸ್ವಲ್ಪ ಕಾಲುಗಳನ್ನು ಗಟ್ಟಿ ಮಾಡಿಕೊಳ್ಳೋದಿಕ್ಕೆ, ಹೊಸದಾಗಿ ಹುಟ್ಟಿರೋ ಜವಾಬ್ದಾರಿಗಳನ್ನು ಮತ್ತೆ ಸಲೀಸಾಗಿ ನಿಭಾಯಿಸೋದಿಕ್ಕೆ ಈ ಕೆಲಸ ನನಗೆ ಮುಖ್ಯ ಅನಿಸಿತು.

ಇಲ್ಲಿನ ಬದುಕು ನನಗೆ ತುಂಬ ಕಲಿಸಿದೆ. ಇಂದು ನಾನು ಯಾವ ಚಿಕ್ಕ ವಿಷಯದಿಂದಲೂ ಕೂಡಾ ಓಡಿ ಹೋಗೋಕೆ ಇಷ್ಟಪಡೋದಿಲ್ಲ. ನಾನು ಇಷ್ಟು ಚಿಕ್ಕ ವಯಸ್ಸಿನ ಆ ಪುಟ್ಟ ಮುಗ್ಧ ಪ್ರಶ್ನೆಗಳನ್ನು ತುಂಬಾ ಗಂಭೀರವಾಗಿ ಎದುರಿಸುವಷ್ಟು ಬೆಳೆದಿದ್ದೇನೆ. ಈ ಬದುಕೊಂದು ನಿರಂತರ ಪಯಣ. ನಮ್ಮ ಹೃದಯಬಡಿತ ನಿಲ್ಲುವ ಕ್ಷಣದವರೆಗೂ ಹೊಸ ಹೊಸ ದಿಕ್ಕುಗಳಲ್ಲಿ ಸಾಗುತ್ತಲೇ ಇರುವ ಯಾತ್ರೆ ಎಂದು ನನಗನಿಸಿದೆ. ಈ ದೃಷ್ಟಿಯಲ್ಲಿ ನೋಡಿದಾಗ ‘ಊರು ಮನೆ ಬಿಟ್ಟು ಹೋಗಿ ಏನು ಮಾಡ್ತಾರೆ’ ಎನ್ನುವುದಕ್ಕಿಂತ ಹಾಗೆ ಬಿಟ್ಟು ಹೋದ ಮೇಲೂ ತನ್ನ ಬೇರುಗಳ ಕಡೆಗೆ, ಊರಿನ ಕಡೆಗೆ, ಕುಟುಂಬದ ಜತೆಗೆ ಎಂಥ ಬಾಂಧವ್ಯ ಇರಿಸಿಕೊಂಡಿರುತ್ತಾರೆ ಎನ್ನುವುದು ಮುಖ್ಯ ಅನಿಸಿದೆ. ಈ ವಲಸೆ ಅನ್ನುವುದು ಈಗ ನನ್ನ ಬದುಕಿನಲ್ಲಿ ಹೊಸ ಹೊಸ ಜವಾಬ್ದಾರಿಗಳನ್ನು ಕಲಿಸಿಕೊಟ್ಟಿದೆ. ಅದನ್ನು ನಿಭಾಯಿಸುವಷ್ಟು ಛಾತಿ ಕೊಟ್ಟಿದೆ. ಹಾಗೆ ಊರಿನ ಕಡೆಗಿನ ನನ್ನ ಅಕ್ಕರೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ನನ್ನ ಪಾಲಿಗೆ ಬದುಕೆಂದರೆ ಹೊಸ ಜವಾಬ್ದಾರಿಗಳ ಜೊತೆ ಹೊಸ ಜಾಗದಲ್ಲಿ ಗಟ್ಟಿಯಾಗಿ ಕಾಲೂರುವುದು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !