ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನಮಲ್ಲಿಕಾರ್ಜುನನೊಲಿದ ಪರಿ

Last Updated 2 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಆಂಡಾಳ್ ವರನಂದಿಯರದ್ದು ಭಕ್ತಿಮುಗ್ಧತೆಗಳಿಂದ ಹುಟ್ಟಿದ ಪ್ರೇಮವಾದರೆ ಈಕೆಯದ್ದು ತಾತ್ತ್ವಿಕಪ್ರೇಮ. ಅವರಿಬ್ಬರ ನಲ್ಲನು ಆಲದೆಲೆಯ ಮೇಲ್ಮಲಗಿ ಲಲ್ಲೆಗರೆಯುವ ಚೆಲುವಚೆನ್ನಿಗನಾದರೆ ಈಕೆಯವನೋ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ಚೆಲುವ; ಸೀಮೆಯಿಲ್ಲದ ನಿಸ್ಸೀಮ. ಈ ನಿರಾಕಾರಪರಂಜ್ಯೋತಿಯಲ್ಲಿ ‘ಚಿಕ್ಕಚಿಕ್ಕಜಡೆಗಳ ಸುಲಿಪಲ್ಲ ಗೊರವ’ನ ಕನಸು ಕಂಡಾಕೆ ನಮ್ಮ ಉಡುತಡಿಯ ಅಕ್ಕ, ಮಹಾದೇವಿಯಕ್ಕ.

ಹುಟ್ಟಿದ್ದು ಉಡುತಡಿಯಲ್ಲಿ. ಚಿಕ್ಕಂದಿನಿಂದ ತನ್ನೂರ ಚೆನ್ನಮಲ್ಲಿಕಾರ್ಜುನನೆಡೆಗಿನ ಒಲವು, ಶಿವಧ್ಯಾನ, ಶಿವಾರ್ಚನೆ - ಭಕ್ತಿಯೊಡನೆ ಬೆರೆತ ಬಾಲಿಶಪ್ರೇಮ. ಭವಿಯಾದ ಊರದೊರೆ ಕೌಶಿಕನಿಗೆ ಈಕೆಯ ಕಣ್ಣುಕುಕ್ಕುವ ಸೌಂದರ್ಯದ ಮೇಲೆ ಕಣ್ಣು. ಈಕೆಯದ್ದೋ ಚೆನ್ನಮಲ್ಲಿಕಾರ್ಜುನನಿಗಾದ ಚೇತನ. ‘ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?’ ವ್ಯಭಿಚಾರವಲ್ಲವೇ ಎಂಬುದು ಬಾಲೆಯ ಅಳಲು. ಇದು ಭವಿಬುದ್ಧಿಗೆ ಅರ್ಥವಾಗುವುದಾದರೂ ಹೇಗೆ. ಬಲವಂತದ ಮದುವೆ ಮುರಿಯಲೆಷ್ಟುದಿನ? ಲೌಕಿಕಗಂಡನ ಬಯಕೆ-ಬಲವಂತಗಳು ನಿಭಾಯಿಸಲಾಗದಂತಾಗಿ ‘ಒಳಗಿನ ಗಂಡನವ್ವ ಹೊರಗಿನ ಮಿಂಡನವ್ವ; ಎರಡನು ನುಡಿಸಲು ಬಾರದವ್ವ’ ಎನಿಸಿದ್ದೇ ತಡ, ದೊರೆಯ ಹಂಗೆಲ್ಲವನ್ನೂ, ಉಟ್ಟವಸ್ತ್ರವನ್ನೂ ತೆಗೆದೆಸೆದು ಹೊರಟೇಬಿಟ್ಟಳು ಮಹಾದೇವಿ. ಉಟ್ಟದ್ದನ್ನೇ ಕಿತ್ತೆಸೆದಮೇಲೆ ಕಿತ್ತುಕೊಳ್ಳುವುದಾದರೂ ಏನನ್ನು? ‘ಉಟ್ಟಂಥ ಉಡುಗೆಯನೆಲ್ಲ ಸೆಳೆದುಕೊಳಬಹುದಲ್ಲದೆ ಮುಚ್ಚಿ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೇ?’

ಹೋಗುತ್ತಾ, ಕೊನೆಗೆ ಬಟ್ಟೆಯನ್ನಾದರೂ ಧರಿಸಬಾರದೇ ಎಂಬ ಹೆರವರ ಪ್ರಶ್ನೆಗೆ ಆಕೆಯ ಉತ್ತರ ನೋಡಿ:

ನಾಳದ ಮರೆಯ ನಾಚಿಕೆ,

ನೂಲಮರೆಯಲ್ಲಿ ಅಡಗಿತ್ತೆಂದು ಅಂಜುವರು, ಅಳುಕುವರು.

ಮನ ಮೆಚ್ಚಿದಭಿಮಾನಕ್ಕೆ ಆವುದು ಮರೆ ಹೇಳಾ?

ಕಾಯ ಮಣ್ಣೆಂದು ಕಳೆದ ಬಳಿಕ,

ದೇಹದಭಿಮಾನ ಅಲ್ಲಿಯೇ ಹೋಯಿತ್ತು.

ಪ್ರಾಣ ಬಯಲೆಂದು ಕಳೆದ ಬಳಿಕ,

ಮನದ ಲಜ್ಜೆಯಲ್ಲಿಯೆ ಹೋಯಿತ್ತು.

ಚೆನ್ನಮಲ್ಲಿಕಾರ್ಜುನನ ಕೂಡಿ ಲಜ್ಜೆಗೆಟ್ಟವಳ

ಉಡಿಗೆಯ ಸೆಳೆದುಕೊಂಡಡೆ, ಮುಚ್ಚಿದ

ಸೀರೆ ಹೋದರೆ ಅಂಜುವರೆ ಮರುಳೆ?

ಹೀಗೆ ಚೆನ್ನಮಲ್ಲಿಕಾರ್ಜುನನನ್ನರಸುತ್ತಾ ನಡೆದ ಮಹಾದೇವಿ, ಅನುದಿನವೂ ಚೆನ್ನಮಲ್ಲಿಕಾರ್ಜುನನಿಗಾಗಿ ಹಾರೈಸುವಳು ‘ನಿನ್ನ ಬರವೆನ್ನಸುವಿನ ಬರವು ಬಾರಯ್ಯ’ ಎಂದು ಕರೆಯುವಳು, ‘ನೀವು ಕಾಣಿರೇ, ನೀವು ಕಾಣಿರೇ’ ಎಂದು ಶುಕಪಿಕಗಳನ್ನೂ ತರುಲತೆಗಳನ್ನೂ ವಿಚಾರಿಸುವಳು. ಕೊನೆಗೆ ಅಯಸ್ಕಾಂತದೆಡೆ ಆಕರ್ಷಿತಳಾದಂತೆ ಕಲ್ಯಾಣದ ಅನುಭವಮಂಟಪದೆಡೆ ತೆರಳಿದವಳು ಅಲ್ಲಮಬಸವಾದಿಗಳ ನಿಷ್ಠುರನಿಕಷದ ಪರೀಕ್ಷೆಗಳಿಗೊಡ್ಡಿಕೊಂಡು ಪುಟಕ್ಕಿಟ್ಟ ಚಿನ್ನವಾದಳು. ಕಿರಿಯ ಅನುಭಾವಿ ಮಹಾದೇವಿ, ಅಲ್ಲಿನ ಶರಣಶ್ರೇಷ್ಠರಿಗೂ 'ಅಕ್ಕ'ನಾದಳು. ಶರಣಸಂಗದಿಂದ ತವರಿನ ಸೊಗವುಂಟಾಯಿತು. ತನ್ನನ್ನು ಚೆನ್ನಮಲ್ಲಿಕಾರ್ಜುನನಿಗೆ ಧಾರೆಯೆರೆದ ಶರಣಬಂಧುಗಳೆಡೆಗೆ ಅದೆಷ್ಟು ಹಿಗ್ಗೋ ಅಕ್ಕನಿಗೆ. ಮಲ್ಲಯ್ಯನೊಡನೆ ತನ್ನ ಮದುವೆಯಾದರೂ ಎಂಥದ್ದು!

ಜಲದ ಮಂಟಪದ ಮೇಲೆ

ಉರಿಯ ಚಪ್ಪರವನಿಕ್ಕಿ,

ಆಲಿಕಲ್ಲ ಹಸೆಯ ಹಾಸಿ, ಬಾಸಿಗವ ಕಟ್ಟಿ

ಕಾಲಿಲ್ಲದ ಹೆಂಡತಿಗೆ

ತಲೆಯಿಲ್ಲದ ಗಂಡ ಬಂದು ಮುಟ್ಟಿದನು ನೋಡಾ!

ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚೆನ್ನಮಲ್ಲಿಕಾರ್ಜುನಯ್ಯನಿಗೆ!

ಗುರುವೆ ತೆತ್ತಿಗನಾದ

ಲಿಂಗವೆ ಮದವಳಿಗನಾದ

ಆನು ಮದವಳಿಗೆಯಾದೆನು

ಈ ಭುವನವೆಲ್ಲರಿಯಲು

ಅಸಂಖ್ಯಾತರೆನಗೆ ತಾಯಿತಂದೆಗಳು

ಕೊಟ್ಟರು ಪ್ರಭುವಿನ ಮನೆಗೆ

ಸಾದೃಶ್ಯವಪ್ಪ ವರನ ನೋಡಿ

ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನಾದ ಬಳಿಕ

ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ

ಕೆಲಕಾಲ ಅನುಭವಮಂಟಪದಲ್ಲಿದ್ದ ಅಕ್ಕ, ಆನಂತರ ಶ್ರೀಶೈಲದೆಡೆಗೆ ಪಯಣ ಬೆಳೆಸಿ, ಅಲ್ಲೇ ಕೆಲಕಾಲ ಜೀವಿಸಿದ್ದು ಕೊನೆಗೆ ಚೆನ್ನಮಲ್ಲಿಕಾರ್ಜುನನೊಡನೆ ಐಕ್ಯವಾದಳೆಂದು ಐತಿಹ್ಯ.

ಅನುಭವಮಂಟಪ ಮಹಾದೇವಿಯಕ್ಕನ ಮುಗ್ಧಭಕ್ತಿಗೆ ಒಂದು ತಾತ್ತ್ವಿಕ ನೆಲೆಗಟ್ಟನ್ನೊದಗಿಸಿ, ಬೆಳೆಸಿತು. ಶರಣಸತಿ ಲಿಂಗಪತಿ ಎನ್ನುವ ಶರಣಸಾಮಾನ್ಯವಾದ ಅನುಭಾವಕ್ಕೆ ಹೆಣ್ತನದ ಸೊಬಗುಗಾಣಿಸಿದಳು ಅಕ್ಕಮಹಾದೇವಿ. ಸತೀತ್ವಕ್ಕೆ ಸಹಜವಾದ ಹೆಣ್ತನದ ಅನುಭವವಿಲ್ಲದೇ ನೀರಸ ತತ್ತ್ವಬೋಧೆಯಾಗಬಹುದಾಗಿದ್ದ ಈ ಅನುಭಾವಕ್ಕೆ ಸ್ತ್ರೀತ್ವದ ಸಹಜಸೌಂದರ್ಯವನ್ನೂ ಮಾಧುರ್ಯವನ್ನೂ ಊಡಿದಾಕೆ ಅಕ್ಕಮಹಾದೇವಿ.

ಶರಣಜೀವವೊಂದು ಹೆಣ್ಣೂ ಅನುಭಾವಿಯೂ ಶಕ್ತಕವಿಯೂ ಆಗಿದ್ದರೆ, ಅದರ ಒಟ್ಟು ಪರಿಣಾಮ - ಅಕ್ಕಮಹಾದೇವಿ.

‘ದಿ ಮಿಥಿಕ್‌ ಸೊಸೈಟಿ’ ಮತ್ತು ‘ಭಾರತೀಯ ದಾರ್ಶನಿಕ ಅನುಸಂಧಾನ ಪರಿಷತ್‌’ ‘ಅಕ್ಕಮಹಾದೇವಿ: ದರ್ಶನ–ವಚನಗಳು’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಇದು ಬೆಂಗಳೂರಿನ ದಿ ಮಿಥಿಕ್‌ ಸೊಸೈಟಿ ಸಭಾಂಗಣದಲ್ಲಿ ಇಂದು ಮತ್ತು ನಾಳೆ (ಶನಿವಾರ ಮತ್ತು ಭಾನುವಾರ) ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT