ನನ್ನಜ್ಜಿಯ ಅಲ್ಗೊರಿದಮ್ಮು

7

ನನ್ನಜ್ಜಿಯ ಅಲ್ಗೊರಿದಮ್ಮು

Published:
Updated:

ಕೇಂಬ್ರಿಜ್ ಅನಲಿಟಿಕದ ಗದ್ದಲ ಭುಗಿಲೆದ್ದು ತಣ್ಣಗಾದ ನಂತರ ನನ್ನ ತಲೆಗೆ ಒಂದು ಯೋಚನೆ ಬಂತು. ಈ ಕೇಂಬ್ರಿಜ್ ಅನಲಿಟಿಕದವರು ಫೇಸ್‌ಬುಕ್‌ನಲ್ಲಿ ನಾವು ಹಾಕಿರುವ ಎಂಥೆಂಥದ್ದೋ ಪೋಸ್ಟುಗಳನ್ನು ಅಳೆದು, ಸುರಿದು ಲೆಕ್ಕ ಮಾಡಿ ನಮ್ಮ ಮನಃಸ್ಥಿತಿ ಇಂಥದ್ದೆಂದು ಗ್ರಹಿಸುತ್ತಾರಂತೆ. ಆಮೇಲೆ ಅದೇ ಮನಃಸ್ಥಿತಿಯನ್ನು ಬೇಕಾದವರ ಕಡೆಗೆ ತಿರುಗಿಸಲು ಏನು ಮಾಡಬೇಕು ಅಂತ ಸಲಹೆ ಕೊಟ್ಟು, ಆ ಮೂಲಕ ಕೋಟಿಕೋಟಿ ಸಂಪಾದನೆ ಮಾಡಿಕೊಳ್ತಾರಂತೆ! ನಮ್ಮ ಪೋಸ್ಟುಗಳನ್ನು ಅಳೆದು ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಒಂದಿಷ್ಟು ಸೂತ್ರಗಳು (ಆಲ್ಗರಿದಂ), ಅವನ್ನು ಬರೆಯಲು ಮನಃಶಾಸ್ತ್ರಜ್ಞರು, ಕಂಪ್ಯೂಟರ್ ಎಂಜಿನಿಯರ್‌ಗಳು – ಅಬ್ಬಬ್ಬಾ ಆ ಲೋಕವೇ ಬೇರೆ.

ಆದರೆ ಇಂಥದ್ದೇ ಒಂದು ಕೇಂಬ್ರಿಜ್ ಅನಲಿಟಿಕ ನಮ್ಮ ಮನೆಯಲ್ಲಿಯೂ ಇದೆ ಎಂದು ನನಗೆ ಅನಿಸುತ್ತಿರುತ್ತದೆ.

ತಾತ ಮನೆಗೆ ಬರುವ ಮೊದಲು ಬೀದಿಯ ಮೂಲೆಯಲ್ಲಿ ಸೈಕಲ್ ಬೆಲ್ ಮಾಡುವುದು ವಾಡಿಕೆ. ‘ಏಯ್, ತಾತ ಬಂದ್ರು. ಓದ್ಕೋ ಹೋಗ್ರೋ’ ಅಂತ ಅಜ್ಜಿ ಸಿಗ್ನಲ್ ಕೊಡುತ್ತಿದ್ದಂತೆ, ನೂರೆಂಟು ಆಟಗಳಲ್ಲಿ ಮೈಮರೆತಿದ್ದ ಮಕ್ಕಳೆಲ್ಲ ಒಂದೇ ಸಲಕ್ಕೆ ಪುಸ್ತಕ ಮುಂದಿಟ್ಟುಕೊಂಡು ಮುಸಿಮುಸಿ ನಗುತ್ತಾ ‘Rama Rama where are my glasses’ ಎಂದು ಬರುವ ಗಟ್ಟಿಯಾಗಿ ಓದುವುದು ನಿತ್ಯನಾಟಕ. ಅತ್ತ ತಾತನಿಗೆ ಮೊಮ್ಮಕ್ಕಳು ನನಗೆ ಹೆದರಿದರೆಂಬ ತೃಪ್ತಿ. ಮೊಮ್ಮಕ್ಕಳಿಗೆ ತಾತನಿಂದ ಬೈಸಿಕೊಳ್ಳದೆ, ಅವರನ್ನು ಮಂಗ ಮಾಡಿದೆವು ಎಂಬ ಖುಷಿ. ನನ್ನ ಸೂತ್ರದಲ್ಲಿ ಇಡಿ ಮನೆ ನಡೆಯುತ್ತಿದೆ ಎಂದು ಅಜ್ಜಿಗೆ ತೃಪ್ತಿ. ಇಷ್ಟೆಲ್ಲವನ್ನೂ ಸಾಧ್ಯ ಮಾಡಿದ್ದು ಅಜ್ಜಿಯ ‘ಅನಲಿಟಿಕ’ ತಾನೆ?

ಊಟದ ವಿಚಾರದಲ್ಲಿಯೂ ಅಜ್ಜಿಯ ’ಅನಲಿಟಿಕ’ ಭರ್ಜರಿಯಾಗಿ ವರ್ಕೌಟ್ ಆಗುತ್ತದೆ.

ಮನೆಯಲ್ಲಿ ಇರೋದು ಹತ್ತು ಜನರೇ ಆದರೂ ಎಲ್ಲರ ರುಚಿಯೂ ಭಿನ್ನ. ಒಂಬತ್ತು ಜನರಿಗೆ ಬೇಳೆಹೂರಣದ ಒಬ್ಬಟ್ಟು ಬೇಕು. ಆದರೆ ಚಿಕ್ಕಪ್ಪನಿಗೆ ಮಾತ್ರ ಕಾಯಿಹೋಳಿಗೆ ಆಗಬೇಕು. ಚಿಕ್ಕಮ್ಮನಿಗೆ ಬೇಳೆಒಬ್ಬಟ್ಟು ತೆಳುವಾಗಿರಬೇಕು, ಅಪ್ಪನಿಗೆ ಅಂಗೈದಪ್ಪದ ಒಬ್ಬಟ್ಟು ಬೇಕು. ಶುಗರ್ ಇರುವ ತಾತನಿಗೆ ನೆಪಮಾತ್ರಕ್ಕೆ ಹೂರಣ ಸೋಕಿಸಿ, ಕಣಕವನ್ನೇ ಬೇಯಿಸಿ ಬಡಿಸಿ ಒಬ್ಬಟ್ಟು ತಿನ್ನಬೇಕೆಂಬ ಅವರ ಆಸೆಯನ್ನು ತೀರಿಸಬೇಕು. ನಮ್ಮ ಮನೆಯಲ್ಲಿ ಹೋಳಿಗೆ ಮಾಡುವುದರ ಕೆಮಿಸ್ಟ್ರಿ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ತಲೆ ಚಿತ್ರಾನ್ನವಾಗಿಬಿಡುತ್ತೆ! ಆದರೆ ಈವರೆಗೆ ಯಾರೊಬ್ಬರೂ, ಯಾರಿಗೂ ಹೀಗೆಯೇ ಹೋಳಿಗೆ ಮಾಡಿ ಎಂದು ಹೇಳಿಲ್ಲ. ಆದರೆ ಕಣಕ ತುಂಬುವವರು, ಬೇಯಿಸುವವರು, ಬಡಿಸುವವರು... ಎಲ್ಲರಿಗೂ ಯಾರಿಗೆ ಎಂಥ ಹೋಳಿಗೆ ಹಾಕಬೇಕು ಎಂದು ಗೊತ್ತಿರುತ್ತೆ. ಅಷ್ಟರಮಟ್ಟಿಗೆ ಅಜ್ಜಿ ಎಲ್ಲರಿಗೂ ತಾವು ವಿಶ್ಲೇಷಿಸಿ ಕಂಡುಕೊಂಡಿರುವ ಅನಲಿಟಿಕವನ್ನು ಅರ್ಥ ಮಾಡಿಸಿದ್ದಾರೆ.

ನಮ್ಮ ಮನೆಗೆ ಬರುವ ಕೆಲವರು ನೆಂಟರು, ಅಪ್ಪನ ಗೆಳೆಯರು ಅವರ ಮನೆಯಲ್ಲಿ ತಮ್ಮ ಪಾಡಿಗೆ ತಾವು ಇರುತ್ತಾರೆ. ಆದರೆ ಬೇರೊಬ್ಬರ ಮನೆಗೆ ಬಂದಾಗ ಮಾತ್ರ ಮಡಿಮಡಿ ಎಂದು ಗೋಳು ತೆಗೆಯುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆ ಬಿಟ್ಟು ದೇವರ ಮನೆಗೆ ಹೋಗಿ ಮಂಟಪದಲ್ಲಿರುವ ವಿಗ್ರಹಗಳು, ಸಾಲಿಗ್ರಾಮಗಳನ್ನೆಲ್ಲಾ ಹಾಲ್‌ಗೆ ತಂದಿಟ್ಟುಕೊಂಡು ಆಟವಾಡುವ ತುಂಟ ಮಕ್ಕಳಿರುವ ಮನೆಯಲ್ಲಿ ನಡೆಯುವ ಮಡಿ ಆ ದೇವರಿಗೆ ಪ್ರೀತಿ. ಯಾರಾದರೂ ಬಂದಾಗ ಇಂಥದ್ದೇನಾದರೂ ಆಗಿಬಿಟ್ಟರೆ, ‘ಮಕ್ಕಳು ಸಾಕ್ಷಾತ್ ದೇವರು. ಮಕ್ಕಳು ದೇವರನ್ನು ಮುಟ್ಟಿ, ನಾವು ಅವರನ್ನು ಮುಟ್ಟಿದರೆ ಎಲ್ಲರೂ ಮಡಿ’ ಎಂದು ಅಜ್ಜಿ ಒಂದು ಸೂತ್ರ ಉದುರಿಸುತ್ತಾರೆ. ಎಲ್ಲರೂ ಗಪ್‌ಚುಪ್ಪಾಗಿ ಅದನ್ನು ಒಪ್ಪಿಕೊಂಡು ತೆಪ್ಪಗಾಗುತ್ತಾರೆ. ಬಂದವರ ಎದುರು ಹೀಗಾಯಿತಲ್ಲ ಎಂದು ತಾತ ಮೀಸೆಯೊಳಗೆ ಮುಸಿಮುಸಿ ಮಾಡಿದರೆ, ‘ಮಕ್ಕಳನ್ನು ಗದರಬೇಡ’ ಎಂದು ಅಜ್ಜಿ ಹುಬ್ಬಿನಲ್ಲೇ ಸೂಚನೆಯನ್ನು ರವಾನಿಸಿ ಸುಮ್ಮನಾಗಿಸುತ್ತಾರೆ.

ಪಗಡೆದಾಳದಲ್ಲಿ ಬೇಕಾದ ಗರ ಹಾಕುವ ಕಸುಬುದಾರರನ್ನು ನೀವು ಕೇಳಿರಬಹುದು. ಆದರೆ ನನ್ನಜ್ಜಿ ಕವಡೆಯಲ್ಲಿ ಹೀಗೆ ಬೇಕಾದ ಗರ ಹಾಕುವ ಪಂಟರ್. ಮಕ್ಕಳನ್ನು ಸುತ್ತ ಕೂಡಿಸಿಕೊಂಡು ಚೌಕಾಬಾರ ಆಡುವುದು ಅವರ ಇಷ್ಟದ ಆಟ. ಸಾಮಾನ್ಯವಾಗಿ ಮೊದಲ ಆಟದಲ್ಲಿ ಅವರೇ ಸೋಲುತ್ತಾರೆ. ಎದುರಿಗಿದ್ದ ಮಕ್ಕಳು ಗೆದ್ದೆವೆಂದು ಬೀಗಿ ಎರಡನೇ ಆಟ ಆಡುವ ಉತ್ಸಾಹ ತೋರುತ್ತಾರೆ. ಎರಡನೇ ಆಟದಲ್ಲಿ ಯಾರಿಗೂ ಕಾಯಿಕೊಡದೆ ಸುಲಭವಾಗಿ ಗೆದ್ದುಬಿಡುತ್ತಾರೆ. ಮಕ್ಕಳು ಸೋತೆವೆಂದು ಮಂಕಾಗುತ್ತವೆ. ‘ಗೆದ್ವಿ ಅಂತ ಅಹಂಕಾರ ಪಟ್ಟು ತಾತ್ಸಾರ ಮಾಡಿದ್ರೆ ದೇವ್ರು ಸೋಲಿಸಿ ಬಿಡ್ತಾನೆ. ಗೆದ್ದಾಗ ಬೀಗಬಾರದು, ಸೋತಾಗ ಅಳಬಾರದು. ಇನ್ನೊಂದು ಆಟ ಆಡೋಣ ಬನ್ನಿ’ ಎನ್ನುತ್ತಾ ಎಲ್ಲರಿಗೂ ಕಾಯಿಕೊಟ್ಟು, ತಾವೂ ಎಲ್ಲರ ಕಾಯಿ ಹೊಡೆದು ನಿಧಾನಗತಿಯಲ್ಲಿ ಲಂಬಿಸಿ ಆಟವಾಡಿಸುತ್ತಾರೆ. ‘ಗೆದ್ದಾಗ ಬೀಗೋದು ಸುಲಭ, ಸೋತಾಗ ಅರಗಿಸಿಕೊಳ್ಳೋದು ಕಷ್ಟ. ಮಕ್ಕಳಿಗೆ ಎರಡೂ ಗೊತ್ತಿರಬೇಕು’ ಇದು ನನ್ನಜ್ಜಿ ಮಕ್ಕಳಿಗೆ ಹೇಳಿಕೊಡುತ್ತಿರುವ ‘ಅನಲಿಟಿಕ’.

‘ಅಮ್ಮಯ್ಯ ಅವನು ದೇವರಪೂಜೆ ಮಾಡುವಾಗ ಗಟ್ಟಿಯಾಗಿ ಮಾತಾಡಬೇಡ – ಹೊರಗೆ ಬಂದು ರೇಗಾಡ್ತಾನೆ, ಅವನಿಗೆ ಗಸಗಸೆ ಪಾಯಸದ ಜೊತೆಗೆ ಹೀರೇಕಾಯಿ ಬೋಂಡಾ ಇರಬೇಕು, ಹಯಗ್ರೀವ ಅಂದ್ರೆ ಮುಂಡೇದು ಜೀವ ಬಿಡುತ್ತೆ, ಸ್ನಾನ ಮಾಡೋಕೆ ಹೋಗುವಾಗ ಟವಲ್ ಇಟ್ಕೊಳೊ ಅಭ್ಯಾಸ ಇಲ್ಲದ ಸೋಮಾರಿ ಅವನು, ಮೊದಲು ತಂಗಿ ಅವನ ಚಾಕರಿ ಮಾಡ್ತಿದ್ಳು – ಈಗ ನೀನು ಹಾಗೆ ಮಾಡಬೇಡ. ಅವನ್ನ ಬೇಕಾದ ಹಾಗೆ ತಿದ್ಕೊ. ಮದುವೆಯಾದ ಹೊಸತರಲ್ಲಿ ಹೆಂಡತಿ ಹೇಳಿದ ಮಾತು ಎಲ್ಲ ಹುಡುಗರಿಗೂ ಇಷ್ಟವಾಗುತ್ತೆ’ ಹೊಸದಾಗಿ ಮನೆತುಂಬಿಸಿಕೊಂಡ ಹುಡುಗಿ ಎದುರು ಅಜ್ಜಿ ಮೊಮ್ಮಗನ ‘ಅನಲಿಟಿಕ’ ಬಿಚ್ಚಿಟ್ಟ ಬಗೆ ಇದು.

ತಾನು ಮತ್ತು ತನ್ನ ಸೊಸೆ ಏನೆಲ್ಲ ಮಾಡಬೇಕು ಎಂದುಕೊಂಡು ವಿಫಲರಾಗಿದ್ದರೋ ಅದನ್ನು ಅದನ್ನು ಹೊಸ ಹುಡುಗಿಯಿಂದ ಮಾಡಿಸಲು ಅಜ್ಜಿ ತಂತ್ರ ಹೂಡಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿಬಿಟ್ಟರು. ಬಹುಶಃ ಆ ಅನಲಿಟಿಕದ ಆಲ್ಗೊರಿದಂ ಬರೆದ ಬ್ರಹ್ಮರಿಗೂ ಹೀಗೆ ಮೈಂಡ್‌ ಮ್ಯಾಪಿಂಗ್ ಮಾಡಿ, ಸಮಯ ಕಾದು, ತನ್ನ ಉದ್ದೇಶ ಈಡೇರಿಸಿಕೊಳ್ಳುವ ತಂತ್ರ ಹೊಳೆದಿತ್ತೋ ಇಲ್ಲವೋ ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !