ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯದ ನಿತ್ಯ ಅನ್ವೇಷಕ ಜಿಡ್ಡು ಕೃಷ್ಣಮೂರ್ತಿ

Last Updated 21 ಫೆಬ್ರುವರಿ 2023, 6:39 IST
ಅಕ್ಷರ ಗಾತ್ರ

ಇಪ್ಪತ್ತನೇ ಶತಮಾನದಲ್ಲಿ ಈ ವಿಶ್ವಕಂಡ ಶ್ರೇಷ್ಠ ದಾರ್ಶನಿಕರು ಹಾಗೂ ಚಿಂತಕರಲ್ಲಿ ಜಿಡ್ಡು ಕೃಷ್ಣಮೂರ್ತಿ ಅವರಂತೂ ಸದಾ ಮಿನುಗುವ ತಾರೆ. ತಮ್ಮ ವಿಶಿಷ್ಟ ರೀತಿಯ ಚಿಂತನಾಲಹರಿಯ ಮೂಲಕ ಸತ್ಯ ಅಥವಾ ನೈಜಜ್ಞಾನದ ಅನ್ವೇಷಕರಾಗಿದ್ದವರು ಅವರು. ಆಕಾಶದೆತ್ತರಕ್ಕೆ ಹಾರುವ ಪಕ್ಷಿಗಳು ಹೇಗೆ ತಮ್ಮ ಹಾರಾಟದ ಮಾರ್ಗವನ್ನು ಕಾಣದಂತೆ ಬಿಟ್ಟು ಹೋಗುವುವೋ ಹಾಗೆಯೇ ಸತ್ಯವನ್ನು ಹುಡುಕುವ ಮಾರ್ಗ ಕೂಡ ಅಗೋಚರ ಎಂದು ಹೇಳಿದ ದಾರ್ಶನಿಕರವರು.

ಜಿಡ್ಡು ನಾರಾಯಣಯ್ಯ ಹಾಗೂ ಸಂಜೀವಮ್ಮ ದಂಪತಿಗೆ ಜನಿಸಿದ (ಜನನ: 1895ರ ಮೇ 11) ಈ ಹುಡುಗ ಮುಂದೊಮ್ಮೆ ವಿಶ್ವಮಾನ್ಯತೆ ಪಡೆಯುವ ವ್ಯಕ್ತಿಯಾಗುತ್ತಾನೆಂದು ಯಾರಿಗೆ ಗೊತ್ತಿತ್ತು? ಸಹಜವಾಗಿ ತನ್ನ ಇತರ ಸಹೋದರರೊಂದಿಗೆ ಆಟ ಪಾಠ ಮಾಡುತ್ತ ಬೆಳೆದು ಕಿಶೋರಾವಸ್ಥೆಯಲ್ಲಿದ್ದ ಕೃಷ್ಣಮೂರ್ತಿ ಅದೇ ಸಮಯಕ್ಕೆ ಥಿಯೋಸಾಫಿಕಲ್ ಸೊಸೈಟಿಯ ಆ್ಯನಿ ಬೆಸೆಂಟ್‍ರ ಕಣ್ಣಿಗೆ ಬೀಳುತ್ತಾನೆ. ಮುಂದೆ ವಿಶ್ವಗುರುವಾಗಿ ಜನಮಾನಸವನ್ನು ಮುನ್ನಡೆಸುವಲ್ಲಿ ಒಬ್ಬ ವಿಶೇಷ ಬಾಲಕನ ಅನ್ವೇಷಣೆಯಲ್ಲಿದ್ದ ಆ್ಯನಿ ಬೆಸೆಂಟ್ ಈ ಬಾಲಕನ ಕಣ್ಣಿನಲ್ಲಿಯ ಹೊಳಪು ಸೆಳೆಯುತ್ತದೆ. ತಂದೆ ನಾರಾಯಣಯ್ಯ ಅವರನ್ನು ಒಪ್ಪಿಸಿ ಕೃಷ್ಣಮೂರ್ತಿಯನ್ನು ಸಹೋದರ ನಿತ್ಯಾನಂದನ ಸಹಿತ ದತ್ತು ಪಡೆದು ಅತ್ಯಂತ ಸಂವೇದನಾಶೀಲತೆಯ ಈ ಬಾಲಕನ್ನು ದೊಡ್ಡವನಾದ ಮೇಲೆ ಆಗಿನ ಕಾಲದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಥೆಯಾಗಿದ್ದ ಆರ್ಡರ್ ಆಫ್ ದಿ ಸ್ಟಾರ್ ಸಂಸ್ಥೆಯ ಮುಖ್ಯಸ್ಥನನ್ನಾಗಿ ಮಾಡುತ್ತಾರೆ. ನಂತರ ವಿಶ್ವಗುರುವೆಂದು ಘೋಷಣೆ ಮಾಡುವ ತಯಾರಿಯನ್ನು ನಿರಂತರ ಮಾಡುತ್ತಿರುವಾಗಲೇ ಸತ್ಯಾನ್ವೇಷಣೆಗೆ ಯಾವುದೇ ಸಂಘಟಿತ ಪ್ರಯತ್ನ ಅಥವಾ ಸಂಘಟನೆ ಅವಶ್ಯಕತೆ ಇಲ್ಲವೆಂದು ನಂಬಿದ್ದ ಕೃಷ್ಣಮೂರ್ತಿ ಆ್ಯನಿ ಬೆಸೆಂಟರಿಗೆ ಆಘಾತಕರವಾಗಿ ಅದನ್ನು ತೊರೆದು ಹೊರಬರುತ್ತಾರೆ.

ಅಂದು 1929ರ ಆಗಸ್ಟ್ 3. ಹಾಲೆಂಡಿನ ಆಗಿನ ಅತ್ಯಂತ ಶ್ರೀಮಂತ ಸಂಸ್ಥೆ ಆರ್ಡರ್ ಆಫ್ ಸ್ಟಾರ್‌ನ ವಾರ್ಷಿಕ ಸಮ್ಮೇಳನ ನಡೆದಿತ್ತು. ಅದರ ಸುಮಾರು 3,000 ಪ್ರತಿಷ್ಠಿತ ಸದಸ್ಯರು ಸೇರಿದ್ದ ಮಹಾಸಭೆ ಅದು. ಜಿಡ್ಡು ಕೃಷ್ಣಮೂರ್ತಿಯವರನ್ನು ವಿಶ್ವಗುರುವೆಂದು ಘೋಷಣೆಗೆ ಅಣಿಯಾಗಿತ್ತು ಐತಿಹಾಸಿಕ ಸಭೆ. ಆ್ಯನಿ ಬೆಸೆಂಟ್ ಹಾಗೂ ಲೀಡ್ ಬೀಟರ್ ಮುಂತಾದ ಥಿಯೋಸಾಫಿಕಲ್ ಸೊಸೈಟಿಯ ದಿಗ್ಗಜರು ಕೃಷ್ಣಮೂರ್ತಿಯವರ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದ ಕ್ಷಣಗಳವು. ಕೃಷ್ಣಮೂರ್ತಿಯವರೇನೋ ಬಂದರು ಆದರೆ ಅವರು ವೇದಿಕೆಯ ಮೇಲೆ ಬಂದು ಹೇಳಿದ್ದೇನು? ಆ ಹೇಳಿಕೆ ಆರ್ಡರ್ ಆಪ್ ಸೊಸೈಟಿ ಸದಸ್ಯರನ್ನೇ ದಿಗ್ಭ್ರಮೆಗೊಳಿಸಿತು.

ನಾನು ಈ ಕ್ಷಣವೇ ಈ ‘ಆರ್ಡರ್ ಆಫ್ ಸೊಸೈಟಿ’ ಸಂಸ್ಥೆಯನ್ನು ಇದರ ಮುಖ್ಯಸ್ಥನಾಗಿ ವಿಸರ್ಜಿಸುತ್ತಿದ್ದೇನೆ ಎಂದು ಅವರು ಘೋಷಿಸಿದರು. ಅಲ್ಲಿದ್ದವರಿಗೆ ಒಂದು ಕ್ಷಣ ಇಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಯೋಚಿಸಲೂ ಬಾರದಷ್ಟು ಆಕಸ್ಮಿಕ ಘಟನೆ ಅದಾಗಿತ್ತು. ಆಗಿನ ಕಾಲದಲ್ಲಿ ಅತ್ಯಂತ ಪ್ರತಿಷ್ಠಿತ ಸಂಸ್ಥೆಯ ಮುಖ್ಯಸ್ಥರಾಗಿ ಮುಂದೆ ವಿಶ್ವಗುರುವಾಗಿ ಮೆರೆಯುವ ಅವಕಾಶವನ್ನು ಕ್ಷಣಾರ್ಧದಲ್ಲಿ ತೊರೆಯುವುದು ಬಹುಶಃ ಪುರಾಣಗಳಲ್ಲಿ ಇನ್ನೇನು ಪಟ್ಟಾಭಿಷಕ್ತನಾಗಿ ಸಾಮ್ರಾಟನಾಗಬೇಕಿದ್ದ ಶ್ರೀರಾಮ ಎಲ್ಲವನ್ನೂ ಸಂತೋಷದಿಂದ ತೊರೆದು ಕಾಡಿಗೆ ಹೊರಟ ಘಟನೆಯನ್ನು ಅದು ನೆನಪಿಸುತ್ತಿತ್ತು. ಮಹಾಭಾರತದಲ್ಲಿ ರಾಜ್ಯದ ಒಳಿತಿಗಾಗಿ ನನಗೇನೂ ಬೇಡವೆಂದ ಭೀಷ್ಮರ ಹಾಗೂ ಇತ್ತೀಚಿನ ಇತಿಹಾಸದಲ್ಲಿ ಸತ್ಯದ ಅನ್ವೇಷಣೆಗಾಗಿ ರಾತ್ರೋ ರಾತ್ರಿ ಎಲ್ಲವನ್ನೂ ತೊರೆದು ಹೊರನಡೆದ ಗೌತಮ ಬುದ್ಧನ ಮಹಾಪರ್ಯಕ್ತತೆಗೆ ಸಮನಾದದ್ದು ಈ ಘಟನೆ. ನಂತರ ಅವರು ಜನರನ್ನು ಉದ್ದೇಶಿಸಿ ಹೇಳಿದ ಮಾತುಗಳು ಬಹುಶಃ ಅವರು 1911ರಿಂದ 1929ರವರೆಗೆ ಸತತ 18 ವರ್ಷಗಳಲ್ಲಿ ಅನ್ವೇಷಿಸಿದ ಸತ್ಯದ ಅನುಭವದ ಅಭಿವ್ಯಕ್ತಿ:

ಸತ್ಯದರ್ಶನ ಯಾವುದೇ ಸಂಘಟಿತ ಚಿಂತನೆ ಅಥವಾ ಅಂತಹ ಸಂಘಟಿತ ಸಂಸ್ಥೆಯ ಗುರು ಅನ್ನಿಸಿಕೊಂಡವರಿಂದ ನಮಗೆ ದೊರೆಯುವ ವಸ್ತುವಲ್ಲ. ಪುರಾಣ ಕಾಲದಿಂದ ಹಿಡಿದು ಇಲ್ಲಿಯವರೆಗೂ ಎಷ್ಟು ಅಂತಹ ಸಂಘಟಿತ ಧರ್ಮಗಳು, ಧರ್ಮಗುರುಗಳು ಬಂದು ಹೋಗಿಲ್ಲ. ಕೇವಲ ಅಂತಹ ಸಂಘಟಿತ ಸಮೂಹದ ಭಾಗವಾಗಿ ಅಥವಾ ಗುರುವನ್ನು ಅನುಸರಿಸುವುದರಿಂದ ನಮಗೆ ಸತ್ಯದ ದರ್ಶನ ಆಗದು. ಒಬ್ಬ ಗುರು ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡಿರಬಹುದು. ಆದರೆ ಅವನಿಂದ ಅದು ನಮಗೆ ದೊರೆತೀತೆಂಬುದು ವಾಸ್ತವವಲ್ಲ.

ಸಂಘಟಿತ ಧರ್ಮ ಅಥವಾ ಧರ್ಮಗುರುಗಳಿಂದ ಸಾವಿರಾರು ವರ್ಷಗಳಿಂದ ನಮಗೆ ಒಂದು ಜೀವನ ಧರ್ಮ ಅಥವಾ ಒಂದು ವ್ಯವಸ್ಥೆ ಅಸ್ತಿತ್ವದಲ್ಲಿ ಬಂದಿರಬಹುದು. ಆದರೆ ನಮ್ಮಲ್ಲಿ ಯಾವ ಕಾಲದಲ್ಲಿ ಇದರಿಂದ ಅಮೂಲಾಗ್ರ ಪರಿವರ್ತನೆಯಾಗಿದೆ? ಸಾವಿರಾರು ವರ್ಷಗಳಿಂದ ನಾವು ಸಾವಿರಾರು, ಲಕ್ಷಾಂತರ ಧಾರ್ಮಿಕ ವ್ಯವಸ್ಥೆ ಹಾಗೂ ಧರ್ಮಗುರುಗಳ ಉಪದೇಶ ಕೇಳುತ್ತಲೇ ಲಕ್ಷಾಂತರ ಯುದ್ಧಗಳನ್ನು, ಯುದ್ಧಗಳಲ್ಲಿ ಸಾವುಗಳನ್ನು, ಸರ್ವನಾಶಗಳನ್ನು ನೋಡುತ್ತಲೇ ಇದ್ದೇವೆ. ಕೆಲವು ರಾಜ್ಯ ಹಾಗೂ ಅಧಿಕಾರಕ್ಕಾದರೆ ಇನ್ನೂ ಹಲವಾರು ನನ್ನ ಧರ್ಮ ನಿನ್ನ ಧರ್ಮವೆಂಬ ಕಾರಣದಿಂದಾಗಿವೆಯಲ್ಲವೇ? ಹಾಗಾಗಿ ಸತ್ಯವೆಂಬುದು ನಮ್ಮ ಹೊರಗೆ ಇದ್ದು ಬೇರೆಯಾರಿಂದಲೋ ಅದು ನಮಗೆ ಸಾಕ್ಷಾತ್ಕರಿಸುತ್ತದೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಅದು ನಮ್ಮೊಳಗಿನ ನಮ್ಮಲ್ಲೇ ಇದೆ. ಅದನ್ನು ನಾವೇ ಅನ್ವೇಷಿಸಬೇಕು. ಒಂದು ಬೃಹತ್ ಪರ್ವತದ ಮೇಲಿನ ತುತ್ತತುದಿ ಮುಟ್ಟಬೇಕೆಂದರೆ ಆ ಪರ್ವತ ನಾವಿದ್ದಲ್ಲಿ ತಾನೇ ಬರುವುದಿಲ್ಲ. ಅದರ ಸುತ್ತಲಿನ ಕಂದಕಗಳನ್ನು ದಾಟಿ ನಾವೇ ಅದರತ್ತ ಕ್ರಮಿಸಬೇಕು ಸತ್ಯವೂ ಕೂಡಾ ಹಾಗೆ ನಾವು ಅದರತ್ತ ಕ್ರಮಿಸಬೇಕು. ಅದು ತಾನೆ ತಾನಾಗೇ ಬಂದು ನಮಗೆ ಲಭ್ಯವಾಗದು. ಇದನ್ನು ನಾನು ನಿಮಗೆ ತೋರಿಸುತ್ತೇನೆ, ನೀವು ನನ್ನನ್ನು ಹಿಂಬಾಲಿಸಿ ಎಂದೂ ನಾನು ಹೇಳಲಾರೆ. ನನಗೆ ಯಾರದೇ ಅನುಸರಣೆ ಅಥವಾ ಗುರುವಿನ ಸ್ಥಾನ ಬೇಕಿಲ್ಲ. ನಾನು ಅದರ ಅನ್ವೇಷಕನಾಗಿ ನಿರಂತರ ಪಯಣಿಸುತ್ತೇನೆ. ಆದರೆ ಈ ಪಯಣದಲ್ಲಿ ಮಾರ್ಗವೆಂಬುದಿಲ್ಲ. ಏಕೆಂದರೆ, Truth is a pathless land and you cannot approach it by path whatsover by any religion, by any sect’ ಎಂಬುದು ಅವರ ಒಟ್ಟಾರೆ ಚಿಂತನೆಯ ಸಾರ.

ಈ ಚಿಂತನವನ್ನೇ ಅವರು ಜೀವನದುದ್ದಕ್ಕೂ ತಮ್ಮ ಬರವಣಿಗೆ ಹಾಗೂ ಮಾತುಗಳಿಂದ ಕೊನೆಯ ಉಸಿರಿನವರೆಗೂ ಇಡೀ ವಿಶ್ವ ಸಂಚರಿಸಿ ಜನರೊಂದಿಗೆ ಹಂಚಿಕೊಂಡದ್ದು 1986 ಜನವರಿಯಲ್ಲಿ ಅವರು ಭಾರತಕ್ಕೆ ಬಂದಿದ್ದರು ಹಾಗೂ ಆಗ ಚೆನ್ನೈನಲ್ಲಿ ಅವರು ಒಂದು ಕಾರ್ಯಕ್ರಮದಲ್ಲಿ ತಮ್ಮ ಚಿಂತನೆ ಹಂಚಿಕೊಂಡಿದ್ದರು. ನಂತರ ತಮ್ಮ ಸ್ವಸ್ಥಾನವಾಗಿದ್ದ ಕ್ಯಾಲಿಫೋರ್ನಿಯಾದ ಓಝಾಯಿಯಲ್ಲಿ ಫೆಬ್ರುವರಿ, 17ರಂದು ಈ ಮಹಾನ್ ಚೇತನ ಅಸ್ತಂಗತವಾಯಿತು.
ಹೊಸತನದ ಅನ್ವೇಷಣೆ :
ಜಿಡ್ಡು ಕೃಷ್ಣಮೂರ್ತಿಯವರ (ಜೆ.ಕೆ) ವಿಚಾರಗಳು ಹಾಗೂ ಚಿಂತನೆಗಳು ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಅರ್ಥ ಮಾಡಿಕೊಳ್ಳುವುದೇ ದುಸ್ತರ. ಬಹುಶಃ ಇದು ನಮಗಲ್ಲ ಬಿಡಿ ಅನ್ನುವ ಭಾವನೆ ಬಹಳಷ್ಟು ಜನರಲ್ಲಿದೆ. ಆದರೆ ಇದು ಹಾಗಿಲ್ಲ ಜೆ.ಕೆ. ಅವರ ವಿಚಾರಗಳಿಗೆ ಕಳೆದ ಹಲವಾರು ವರ್ಷಗಳಿಂದ ತೆರೆದುಕೊಂಡಿರುವ ನನಗಂತೂ ಹಾಗೆನಿಸಿಲ್ಲ. ಹೆಚ್ಚು ಕಡಿಮೆ ಅವರ ವಿಚಾರಗಳ ಬಗ್ಗೆ ಹಾಗೂ ಜಗತ್ತಿನಾದ್ಯಂತ ಮನುಷ್ಯನ ಜೀವನದ ಹಲವಾರು ಮೂಲ ವಿಷಯಗಳ ಮೇಲಿನ ಅವರ ಚರ್ಚೆ, ವಿವಿಧ ಚಿಂತಕರೊಂದಿಗೆ ಅವರು ನಡೆಸಿದ ಸಂವಾದಗಳ ಬಗ್ಗೆ ಇರುವ ಪುಸ್ತಕಗಳನ್ನು ಓದಿರುವ ನನಗೆ ಜೆ ಕೆ. ಅವರು ಸೀಮಿತ ಓಲ್ಟೇಜಿನ ಎಲೆಕ್ಟ್ರಿಕ್ ಬಲ್ಬಿನ ಬೆಳಕನ್ನೇ ನಿಜವಾದ ಬೆಳಕೆಂದು ತಿಳಿದವರಿಗೆ ನಿಜವಾದ ಸೂರ್ಯನ ಪ್ರಖರತೆಯ ಜ್ಞಾನದ ಬೆಳಕನ್ನು ತೋರಿಸುವ ನಿಜ ಹೊಳಪಿನ ವ್ಯಕ್ತಿಯಾಗಿ ಕಾಣುತ್ತಾರೆ.

ವ್ಯಕ್ತಿ ಮತ್ತು ಸಮಾಜ:

ಸಮಾಜಕ್ಕಾಗಿ ವ್ಯಕ್ತಿಯೋ ಅಥವಾ ವ್ಯಕ್ತಿಗಾಗಿ ಸಮಾಜವೋ ಎಂಬ ಮೂಲಭೂತ ಪ್ರಶ್ನೆ ಎತ್ತುವುದರೊಂದಿಗೆ ಈ ವಿಷಯದ ಮೇಲೆ ಕ್ರಾಂತಿಕಾರಿ ಹೊಸಬೆಳಕು ಚೆಲ್ಲುತ್ತಾರೆ. ಸಮಾಜಕ್ಕಾಗಿಯೇ ವ್ಯಕ್ತಿಯೆಂದಾದಲ್ಲಿ ಅದರ ಕಟ್ಟುಪಾಡಿನ ಪರಿಧಿಯಲ್ಲಿ ವ್ಯಕ್ತಿ ಬಂದಿತನಾಗಿ ಬೆಳೆಯುತ್ತಾನೆ. ಸಮಾಜ ಹೀಗೆಯೇ ಇರಬೇಕೆಂಬ ವೈಚಾರಿಕ ಹಿನ್ನೆಲೆಯಲ್ಲಿ ಆತನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಮಾನಸಿಕ ಕಲಾತ್ಮಕ ಸ್ವರೂಪ ಸಿದ್ಧವಾಗಿ ವ್ಯಕ್ತಿ ಸಮಾಜಕ್ಕಾಗಿಯೇ ನಾಶವಾಗುವ ಜೀವಿಮಾತ್ರವೆಂದಾದಲ್ಲಿ ಸಮಾಜವೇ ಮೂಲಗುರಿಯಾಗುತ್ತದೆ. ಇಲ್ಲಿ ವ್ಯಕ್ತಿಗೆ ಯಾವುದೇ ಅಸ್ತಿತ್ವವಲ್ಲ. ಆತನಿಗೆ ಯಾವುದೇ ವ್ಯಕ್ತಿತ್ವವಿಲ್ಲ. ಸಾಮಾಜಿಕ ಬದ್ಧತೆಯ ಸೂತ್ರದ ಗೊಂಬೆ ಅಷ್ಟೆ.

ಆದರೆ ಜೆ.ಕೆ. ವಿಚಾರವೇ ಬೇರೆ. ಸಮಾಜ ಎಂದಿಗೂ ಸ್ಥಾಯಿಯಾಗಿರುವುದು. ಆದರೆ ವ್ಯಕ್ತಿಗೆ ಬರುವ ಸವಾಲುಗಳು ಚಲನಶೀಲ ನಿತ್ಯವಿನೂತನ ನಿನ್ನೆಯ ಸಮಸ್ಯೆಯ ಸ್ವರೂಪ ಇಂದು ಅದೇ ಆಗಿರುವುದಿಲ್ಲ. ಏಕೆಂದರೆ ಸತ್ಯವೆಂಬುದು ಹರಿಯುವ ನೀರಿನಂತೆ ಕ್ಷಣಕ್ಷಣಕ್ಕೂ ಅದರ ಚಲನ ಬದಲಾಗುತ್ತಲೆ ಇರುವುದು. ಹೀಗಾಗಿ ಅದನ್ನು ಎದುರಿಸುವ ಮನಸ್ಸೂ ನಿತ್ಯ ನೂತನವೇ ಇರಬೇಕು. ಒಂದು ವ್ಯವಸ್ಥೆಗೆ ಅನುಗುಣವಾಗಿ ರೂಪಿತವಾಗಿರುವ ಹಾಗೂ ಅದರ ಆಧಾರಿತ ಪ್ರತಿಕ್ರಿಯೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾರದು. ಇಂದಿನ ಆಹ್ವಾನಗಳನ್ನು ಹಾಗೂ ಸಮಸ್ಯೆಗಳನ್ನು ನಿನ್ನೆಯ ಮನಸ್ಥಿತಿಯಿಂದ ಎದುರಿಸಲು ಸಾಧ್ಯವಿಲ್ಲ. ಅದಕ್ಕೆ ನಮ್ಮ ಅಂತರಂಗದಾಳದಲ್ಲಿ ನಿರಂತರ ಹಾಗೂ ಆಮೂಲಾಗ್ರ ಕ್ರಾಂತಿಯಾಗುತ್ತಲೇ ಇದ್ದಾಗ ಮಾತ್ರ ಸಾಧ್ಯ. ಇದು ನಾನು ನೀನು ಹಾಗೂ ನೀವು ವ್ಯಕ್ತಿಗಳಾಗಿ ಮಾತ್ರಮಾಡಲು ಸಾಧ್ಯ.

ಅಷ್ಟಕ್ಕೂ ಸಮಾಜ ಅಂದರಾದರೂ ಏನು? ಒಂದು ವ್ಯಕ್ತಿ ಇನ್ನೊಂದು ವ್ಯಕ್ತಿಯೊಂದಿಗಿನ ಸಂಬಂಧವೇ ಅದು. ಅಸ್ತಿತ್ವವೆಂದರೇನು? ಇರುವುದು ಅಂದರೆ ಇನ್ನೊಬ್ಬರೊಂದಿಗಿನ ಸಂಬಂಧವಾಗಿರುವುದೆಂದೇ ಅರ್ಥವಲ್ಲವೇ? To be is to be related ಎಂದು ಅನ್ನುತ್ತಾರೆ ಜೆ.ಕೆ. it is not an animals existence ಸಮಾಜ ನಾಡಿನಲ್ಲಲ್ಲದೇ ಕಾಡಿನಲ್ಲಿ ಅಲ್ಲ? ಈ ಹಿನ್ನೆಲೆಯಲ್ಲಿ ಸಮಾಜ ವ್ಯಕ್ತಿ ಅಥವಾ ವ್ಯಕ್ತಿಗಳ ಅಂತರಗಂದಿಂದುಂಟಾಗುವ ನಿರಂತರ ಬದಲಾವಣೆಯಿಂದ ಅಸ್ತಿತ್ವಕ್ಕೆ ಬರುವುದೇ ಹೊರತು ಅದು ವ್ಯಕ್ತಿಗಳನ್ನು ಸೃಷ್ಟಿಸುವ ಸಂಘಟನೆಯಲ್ಲ. ವ್ಯಕ್ತಿಯಿಂದ ಸಮಾಜ ಅಂದರೆ ಹೊಸ ಉನ್ನತ ಬೌದ್ಧಿಕ ಶಕ್ತಿಯ ಉದಯ, ಆತ್ಮ ಸಾಕ್ಷಾತ್ಕಾರ ಅಥವಾ ಸತ್ಯದದರ್ಶನವೆನ್ನಬಹುದೇನೋ! ಕೃಷ್ಣಮೂರ್ತಿ ಇದು ಒಂದು ಪ್ರಕ್ರಿಯೆ ಎಂದರು. ಈ ಆನಂದೊನ್ಮಾದ (Ecstasy) ತಮ್ಮ ಜೀವನದ ಅಂತ್ಯದವರೆಗೂ ಅನುಭಿಸಿರುವದಾಗಿ ಹೇಳುತ್ತಾರೆ.

ಅವರು ಸಂಘಟನಾತ್ಮಕ ಉಪದೇಶ ಅಥವಾ ಮಾರ್ಗದರ್ಶನದ ಪರಿಯನ್ನು ತಿರಸ್ಕರಿಸಿದರು. ಪ್ರತಿವ್ಯಕ್ತಿಯೂ ತನ್ನ ಗುರು ಅಥವಾ ಮಾರ್ಗದರ್ಶಿಯನ್ನು ತನ್ನಲ್ಲಿಯೇ ಕಂಡುಕೊಳ್ಳಬೇಕು ಅದು ಸಾಧ್ಯವಿದೆಯೆಂಬ ವಿಚಾರ ಅವರದು. ಸತ್ಯಕ್ಕೆ ಸಿದ್ಧಾಂತವೆಂಬುದಿಲ್ಲ ಅಥವಾ ಅದರ ಚೌಕಟ್ಟಿನಲ್ಲಿ ಹಿಡಿದಿಡುವ ಸ್ಥಾಯಿ ವಸ್ತು ಅದಲ್ಲ. ಅದು ನಿತ್ಯ ನಿರಂತರ ಚಲನಶೀಲವಾದುದು ಈ ಸತ್ಯದರ್ಶನವನ್ನೇ ಅವರು ತಮ್ಮ ಜೀವನಪರ್ಯಂತ ಹೇಳಿದರು. ಅವರ ಈ ವಿಚಾರಗಳೇ ತಮ್ಮ “The Ending of time, Freedom from the known, Commentaries on living, the awakening of intelligence, The first and the last Freedom, you are the world, The flight of Egle ಮುಂತಾದ ಮಸ್ತಕಗಳಲ್ಲಿ ಹಾಗೂ ಅವರ ಅಸಂಖ್ಯಾತ ಚರ್ಚೆಗಳಲ್ಲಿ ಮೂಡಿಬಂದಿವೆ. ವ್ಯಕ್ತಿಯೇ ಸಮಾಜದ ನಿರ್ಮಾಪಕ. ಅಂತೆಯೇ ಸಮಾಜದ ಅಂತಿಮಗುರಿ. So the individual is the end of society not mere instrument of it ಅಂದರು. ಅವರು ಇಷ್ಟಕ್ಕೆ ನಿಲ್ಲುವುದಿಲ್ಲ. ಸಮಾಜ ಇಂತಹ ವ್ಯಕ್ತಿಗಳ ಪ್ರತಿಫಲನವಾಗಿರುವುದರಿಂದ ಎಂತಹ ವ್ಯಕ್ತಿಗಳಿಂದ ಸುಂದರ ರಚನಾತ್ಮಕ ಹಾಗೂ ನಿತ್ಯನೂತನ ಸಮಾಜ ಸಾಧ್ಯವೆಂಬುದರ ಬಗ್ಗೆ ಹಾಗೂ ನಮ್ಮ ನಿತ್ಯ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚಿಂತನೆ ಮಾಡುತ್ತಾರೆ. ಅವುಗಳಲ್ಲಿ ಕೆಲವನ್ನು ನೋಡಬಹುದು.

ಕೃಷ್ಣಮೂರ್ತಿ ಚಿಂತನೆ ವೈಶಿಷ್ಟ್ಯಪೂರ್ಣ:

ಬಹಳಷ್ಟು ಜನ ಕೃಷ್ಣಮೂರ್ತಿ ಅವರ ವಿಚಾರಗಳ ಜಾಡು ಹಿಡಿಯುವುದೇ ದುಸ್ತರ, ಅವರ ವಿಚಾರಲಹರಿ ಬಹಳ abstract ಆಗಿದೆ. ಅವುಗಳನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವದೇ ಕಷ್ಟ. ಇನ್ನು ಮತ್ತೊಬ್ಬರಿಗೆ ಹೇಳುವುದಂತೂ ಮತ್ತಷ್ಟೂ ಬಿಕ್ಕಟ್ಟಿನದು ಎಂದು ಮುಂತಾಗಿ ಹೇಳುತ್ತಾರೆ. ಇದು ಸ್ವಲ್ಪಮಟ್ಟಿಗೆ ನಿಜವೂ ಇರಬಹುದು. ಇದಕ್ಕೆಲ್ಲ ಅವರ ಮಾತಿನಲ್ಲಿಯೇ ಪರಿಹಾರವಿದೆ. ಅವರು ಹೇಳುವಂತೆ ನಾವು ಯೋಚಿಸುವ ರೀತಿಯೇ ಅದಕ್ಕೆ ಕಾರಣ. ವಾಸ್ತವಿಕತೆ ಅಥವಾ what is ಅನ್ನು ನಾವು ನೋಡುವದನ್ನು ಕಲಿಯಬೇಕಿದೆ. ಅದನ್ನು ನಾವು ನಮ್ಮ ವಿಚಾರ, ಪೂರ್ವಗ್ರಹಿಕೆ, ಸಮಾಜ, ವ್ಯವಸ್ಥೆ, ಧರ್ಮ, ಜಾತಿ, ಅಭಿಪ್ರಾಯಗಳ ಕನ್ನಡಕದಿಂದ ನೋಡುವವರೆಗೂ ಅದೇನೆಂಬುದನ್ನು ನಾವು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸತ್ಯದೆಡೆಗೆ ನಿರ್ಲಿಪ್ತತೆಯಿಂದ ಅವಲೋಕನೆ ನಡೆಸುವದೇ ಮುಖ್ಯ. ಇದನ್ನೇ ಅವರು choice less observation ಅನ್ನುವದು ಸತ್ಯವೆನ್ನುವದು what is ಎನ್ನುವುದರ ಚಿಂತನೆ. ಒಂದು ಗುಲಾಬಿ ಹೂವಿನ ಸೌಂದರ್ಯ ಆಸ್ವಾದಿಸಲು ಅದರ ಸಸ್ಯಶಾಸ್ತ್ರದ ಹಿನ್ನೆಲೆ ಬೇಕಿಲ್ಲ. ಹಾಗೆಯೇ ನಮ್ಮ ಸ್ನೇಹಿತರನ್ನು ನೆರೆಹೊರೆಯವನ್ನು ಬಂಧು ಬಾಂಧವನ್ನು ಮಕ್ಕಳನ್ನು ನೋಡಿದಾಗ ಅವರಲ್ಲಿಯ ವಾಸ್ತವವನ್ನು ಕಾಣಲು ಸಾಧ್ಯ. ಅದರ ಬದಲಾಗಿ ಅವರ ಬಗೆಗಿನ ನಮ್ಮ ಮನದಾಳದಲ್ಲಿ ರೂಪಿತವಾದ ಇಮೇಜ್‌ ಮೂಲಕ ನೋಡಿದಾಗ ಅವರೊಂದಿಗಿನ ನಮ್ಮ ಸಂಬಂಧವಿರದೇ ಅವರ ಬಗೆಗಿನ ನಮ್ಮ ಇಮೇಜ್‌ನೊಂದಿಗೆ ಮಾತ್ರವಿರುವದು. ಇದರರ್ಥ ನಮ್ಮ ಸಂಬಂಧಗಳು ಇನ್ನೊಬ್ಬರೊಂದಿಗೆ ನೇರವಾಗಿರದೇ ನಾವು ಅವರ ಬಗ್ಗೆ ರೂಪಿಸಿಕೊಂಡಿರುವ ಇಮೇಜ್‌ನೊಂದಿಗೆ ಮಾತ್ರ ಇರುತ್ತವೆ. ಈ ಇಮೇಜುಗಳು ನಮ್ಮ ವಿಚಾರಲಹರಿ ಹಾಗೂ ಪೂರ್ವಗ್ರಹಗಳಾಧಾರಿತ ಆಗಿರುವುದರಿಂದ ಅವೆಂದೂ ವಾಸ್ತವಿಕವಾಗಿರುವುದಿಲ್ಲ. ಹೀಗಾಗಿ ಭದ್ರಬುನಾದಿ ಇರದ ಇಂತಹ ಸಂಬಂಧಗಳು ಬೇಗ ಕುಸಿಯುತ್ತವೆ. ಇದರಿಂದ ನೇರಸಂಬಂಧದ ವಾಸ್ತವಿಕತೆ ಮರೆಯಾಗುವದು. ಅದರಿಂದಲೇ ಜೆ.ಕೆ. ಉದ್ಗರಿಸುವುದು Relationship is a mirror where we discover ourselves (ಸಂಬಂಧಗಳು ನಮ್ಮನ್ನು ನಾವು ಅರಿಯಲು ಇರುವ ಕನ್ನಡಿ) ಎಂದು.

ಉತ್ತಮ ಸಂಬಂಧಗಳಿಗೆ ವ್ಯಕ್ತಿಗಳ ನಡುವೆ ಭಾವನಾತ್ಮಕ ಐಕ್ಯತೆ ಮುಖ್ಯ. ಅಂದರೆ ಒಂದು ಸಂಬಂಧದಿಂದ ತನಗೇನು ಸಾರ್ಥಕತೆ ಎಂಬ ಪೂರ್ವಗ್ರಹಿಕೆ ಇಲ್ಲದಿರುವಿಕೆಯಿಂದ ಅಹಂ ಇಲ್ಲವಾಗುವುದು. ಅಹಂ ಇಲ್ಲದಿರುವಿಕೆ ಅಥವಾ ಅಹಂ ಜಾಗ ಖಾಲಿ ಮಾಡಿದಾಗ ಅಲ್ಲಿ ಪ್ರೀತಿ ಆವರಿಸುವುದು. ಆಗಮಾತ್ರ ನಿಜವಾದ ಸಂಬಂಧ ಏರ್ಪಡುವುದು. ಇಂತಹ ಸಂಬಂಧದಿಂದ ಮಾತ್ರ ವ್ಯಕ್ತಿಯ ವಾಸ್ತವಿಕ ಸ್ವರೂಪ ಪ್ರಕಟಗೊಳ್ಳುವುದು ಈ ಪ್ರಕಟಗೊಳ್ಳುವಿಕೆ ಎಂದರೆ ಎಲ್ಲೆಲ್ಲೂ ಪ್ರೀತಿಯು ಪಸರಿಸುವುದು ಅಲ್ಲವೆ. ಇಲ್ಲಿ ನನ್ನಲ್ಲಿರುವ ನಾನು ಅಥವಾ ನಿನ್ನಲ್ಲಿರುವ ನೀನು ಇಲ್ಲದಿರುವಾಗ ಸಣ್ಣವರು ದೊಡ್ಡವರು, ಮೇಲುಕೀಳು, ಬಡವ ಶ್ರೀಮಂತ, ಗಂಡು ಹೆಣ್ಣು, ಅಧಿಕಾರಿ ಅಥವಾ ಅಧಿಕಾರ ಇಲ್ಲದವರು ಮುಂತಾದ ಪ್ರಭೇದಗಳ ಪ್ರಶ್ನೆಯೇ ಇಲ್ಲ.

ಎಲ್ಲ ಸಂಬಂಧಗಳೂ ಸಮಾನಾಂತರ. ಹೀಗಾಗಿ ಸಮಾನತೆ ತಾನೇ ತಾನಾಗಿ ಹೊರಹೊಮ್ಮುವದು. ಒಂದು ರಚನಾತ್ಮಕ ಸಮಾಜದ ನಿರ್ಮಾಣವಾಗುವುದು. ಇದು ನಾನು, ನೀನು ಹಾಗೂ ನಾವು ವ್ಯಕ್ತಿಗಳಾಗಿ ಸಾಧಿಸುವ ಕ್ರಾಂತಿ. ಇದಕ್ಕೆ ಯಾವುದೇ ನಾಯಕರ ಅಥವಾ ಸಂಘಟಿತ ಧಾರ್ಮಿಕ ಬೋಧನೆಯ ಅಥವಾ ಸಂಘಟಿತ ವಿಚಾರಗಳ ಆಧಾರದ ಮೇಲೆ ಹುಟ್ಟಿದ ಅಥವಾ ಹುಟ್ಟಿಕೊಳ್ಳುತ್ತಿರುವ ಇಸಂಗಳು ಬೇಕಿಲ್ಲವೆಂಬುದು ಜೆ.ಕೆ. ವಿಚಾರಗಳ ಸಾರ.

ಪುನರುಚ್ಚರಿತ ಸತ್ಯ ಸುಳ್ಳಾಗುವದು

ಒಟ್ಟಾರೆ ಕೃಷ್ಣಮೂರ್ತಿ ಹೇಳುವದಿಷ್ಟೆ. ಸತ್ಯವೆಂಬುದು ಸ್ಥಾನಿಕವಾದುದಲ್ಲ (static). ಅದು ನಿರಂತರ ಚಲನಶೀಲವಾದುದು. ಆದ್ದರಿಂದಲೇ ಪುನರುಚ್ಚರಿತ ಸತ್ಯ ಸತ್ಯವಾಗುಳಿಯದು. ಅದು ಸುಳ್ಳಾಗುವದು (If truth repeated it becomes lie). ಇಲ್ಲಿ ಸುಳ್ಳು ಅಥವಾ ಮಿಥ್ಯವೆಂಬುದು ‘ನಿಜ’ದ ವಿರುದ್ಧಾರ್ಥ ಶಬ್ದವಲ್ಲ. ಸುಳ್ಳೆಂದರೇನು? ಇರದೇ ಇರುವದೇ ಸುಳ್ಳು. ಇರುವದೆಲ್ಲ ಸತ್ಯ. ನಮಗಾದ ಅನುಭವವನ್ನು ನಾವು ಪುನಃ ಪಡೆಯುವದು ಸಾಧ್ಯವಿಲ್ಲ. ಆದರೆ ಆ ಅನುಭವವನ್ನು ಶಬ್ದೀಕರಣಗೊಳಿಸಬಹುದು. ಅಂದರೆ ಅದಕ್ಕೊಂದು ಹೆಸರು ಕೊಡಬಹುದು. ಅಥವಾ ಅದೇ ಅನುಭವವನ್ನು ಮತ್ತೊಮ್ಮೆ ಹೊಂದುವ ಆಶೆ ಮಾಡಬಹುದು. ಆದರೆ ಅದನ್ನೇ ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಆದರೆ ದುರ್ದೈವದಿಂದ ಅನುಭವದ ನಂತರ ಅದನ್ನು ಗುರುತಿಸಲು ಹುಟ್ಟಿಕೊಳ್ಳುವ ಶಬ್ದವನ್ನೇ ಪುನರುಚ್ಚರಿಸಿ ಅದನ್ನೇ ಸತ್ಯವೆಂದು ಆರಾಧಿಸುವ ವ್ಯವಸ್ಥೆ ಇದೆ. ಉದಾ: ಸುಳ್ಳು ಹೇಳದೇ ಇರುವ ಅವಸ್ಥೆಯೇ ಸತ್ಯ. ಆದರೆ ಸುಳ್ಳು ಹೇಳಬಾರದೆಂಬ ಶಬ್ದಗಳೇ ಸತ್ಯವಲ್ಲ.

ಮೇಲೆ ಹೇಳಿದಂತೆ ಒಂದು ಸ್ವಸ್ಥ ಹಾಗೂ ರಚನಾತ್ಮಕ ಸಮಾಜದ ನಿರ್ಮಾಣಕ್ಕೆ ಯಾವದೇ ನಾಯಕತ್ವದ ಮಾರ್ಗದರ್ಶನ, ಧಾರ್ಮಿಕ ಗುರು ಅಥವಾ ಸಂಘಟಿತ ವಿಚಾರಗಳು ಕಾರಣವಾಗುವುದಿಲ್ಲ. ಅದಕ್ಕೆ ನನ್ನಲ್ಲಿ, ನಿನ್ನಲ್ಲಿ ಅಥವಾ ನಮ್ಮಲ್ಲಿ ಅಮೂಲಾಗ್ರ ಪರಿವರ್ತನೆ ಬರಬೇಕು (A radical transformation). ಅಂದರೆ ಒಬ್ಬ ವ್ಯಕ್ತಿಯಾಗಿ ಈ ಪರಿವರ್ತನೆ ಬರಬೇಕು. ಇದು ನಾನು ಬದಲಾಗಬೇಕು ಎಂಬ ಬೌದ್ಧಿಕ ಅರಿವಿನಿಂದ ಬರುವದಿಲ್ಲ. ಇದರರ್ಥ ನಾನು ಹಾಗೂ ಅ ಬದಲಾವಣೆ ಬೇರೆ ಬೇರೆ ಎಂದು ಎಲ್ಲಿಯವರೆಗೆ ತಿಳಿಯುತ್ತೇವೆಯೋ ಅಲ್ಲಿಯವರೆಗೆ ವ್ಯಕ್ತಿ ಹಾಗೂ ಬದಲಾಗಬೇಕಾದ ಆ ಸ್ಥಿತಿ ನಡುವಿನ ಅಂತರ ಕೂಡುವುದೇ ಇಲ್ಲ. ಅದಕ್ಕೆಂದೇ ಜೆ.ಕೆ. ಹೇಳುವದು: Thinker and the thought ಅಥವಾ Experiencer and the experienced ಎರಡೂ ಒಂದಾಗಬೇಕೆಂದು. ಅಂದರೆ ಉದಾಹರಣೆಗೆ ನಾನು ಸುಳ್ಳು ಹೇಳಬಾರದು, ನಾನು ಹಿಂಸಾತ್ಮಕನಾಗಿರಬಾರದು, ಅಥವಾ ನಾನು ಆಷಾಢಭೂತಿಯಾಗಿರಬಾರದು ಎನ್ನುವ ಭಾವನೆ ಹೀಗೆ ತಿಳಿದಲ್ಲಿ ನಾನು ಬೇರೆ, ಸುಳ್ಳು ಎಂಬುದು ಬೇರೆ ಇತ್ಯಾದಿ ಇತ್ಯಾದಿ ಮನಸ್ಥಿತಿ. ಆದರೆ ನಿಜವಾಗಿ ನೋಡಿದರೆ ನಾನೇ ಸುಳ್ಳು ನಾನೇ ಆ ಹಿಂಸೆ, ನಾನೇ ಆ ಮತ್ಸರ ಈ ಅರಿವು ಬಂದಕ್ಷಣವೇ ಅಲ್ಲಿ ಮೂಲಭೂತ ಪರಿವರ್ತನೆ ಸಾಧ್ಯ, ಅವಾಗ ಮಾತ್ರ Experiencer is the experienced, Thinker is the thought, Observer is the observed ಸ್ಥಿತಿ ಸಾಧ್ಯ. ಇಂತಹ ಸ್ಥಿತಿ ಇರುವಾಗ ವ್ಯಕ್ತಿಯ ಮನಸ್ಸು ಸಂಪೂರ್ಣ ಖಾಲಿ ಆಗುವದು. ಅಂದರೆ A Complete thoughtlessness. ಈ ಖಾಲಿ ಮನಸ್ಸಿನಲ್ಲಿ ಮಾತ್ರ ಹೊಸತನ ಹೊಸ ಚಿಂತನೆ ಅಥವಾ ರಚನಾತ್ಮಕ ಶಕ್ತಿ ಬಿಡುಗಡೆಯಾಗುವುದು. ಇಂತಹ ರಚನಾತ್ಮಕ ಶಕ್ತಿ ಹೊಸ ಪರಿವರ್ತನೆ ಹುಟ್ಟಿಹಾಕುವುದು. ಹೊಸ ಸಾಮಾಜಿಕ ಕ್ರಾಂತಿ ಕಾಣಿಸಿಕೊಳ್ಳುವುದು.

ಹೀಗೆ ತಮ್ಮ ಹೊಚ್ಚಹೊಸತನಗಳಿಂದ ಕೂಡಿದ ವಿಚಾರಗಳಿಂದ ಜೆ.ಕೆ. ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತರಾಗುತ್ತಾರೆ. ಸಂಘಟಿತ ವಿಚಾರಗಳಿಂದ ಆಚರಣೆಗಳಿಂದ ನಂಬುಗೆಗಳಿಂದ ನಾವೆಂದೂ ಸತ್ಯಕ್ಕೆ ಹತ್ತಿರವಾಗುವುದಿಲ್ಲ. ಏಕೆಂದರೆ ನಂಬುಗೆಗಳು, ವಿಚಾರಗಳು, ಆಚರಣೆಗಳು ನಮ್ಮನ್ನೆಂದೂ ಒಂದು ಮಾಡುವುದಿಲ್ಲ. ನನ್ನ ವಿಚಾರ ನಿನ್ನ ವಿಚಾರ, ನನ್ನ ನಂಬುಗೆ ನಿನ್ನ ನಂಬುಗೆ, ನನ್ನ ಧರ್ಮ ನಿನ್ನ ಧರ್ಮ ಹೀಗೆ ಅಂತರ ಅಂತರವಾಗಿಯೇ ಉಳಿಯುತ್ತದೆ. ನಮ್ಮನ್ನು ಬೇರ್ಪಡಿಸುತ್ತದೆ. ಮೇಲೆ ಹೇಳಿದಂತೆ ಸತ್ಯ ನಿತ್ಯನೂತನವಾದುದು. ಅಂತೆಯೇ ನಮ್ಮ ಕಷ್ಟಗಳು, ಸಮಸ್ಯೆಗಳು, ಎದುರಾಗುವ ಸವಾಲುಗಳು ನಿರಂತರ ಚಲನಶೀಲತೆಯುಳ್ಳವು. ನಿನ್ನೆಯ ನನ್ನ ಸಮಸ್ಯೆ ಇಂದು ನಿನ್ನೆಯಾಗಿಯೇ ಉಳಿಯುವುದಿಲ್ಲ. ಹಾಗೆಯೇ ಅದನ್ನು ಎದುರಿಸುವ ನಾನೂ ಕೂಡಾ ನಿನ್ನೆಯಲ್ಲಿಯೇ ಇದ್ದರೆ ಹೊಸತನದಿಂದ ಕೂಡಿದ ಸಮಸ್ಯೆಯನ್ನು ಎದುರಿಸಲಾರೆ. ಅದಕ್ಕೆ ನಾನೂ ಕೂಡಾ ಇಂದು ಆಗಿರಬೇಕು. ಅಂದರೆ ನಿರಂತರ ವರ್ತಮಾನದಲ್ಲಿ ನಾನಿರಬೇಕು. ಆಗ ನನ್ನ ಸಮಸ್ಯೆ ಸಮಸ್ಯಯಾಗಿರುವದಿಲ್ಲ. ಈ ನಿತ್ಯನವೀನ ಮಾನಸಿಕ ವ್ಯವಸ್ಥೆಯಿಂದ ಮಾತ್ರ ನಾವು ರಚನಾತ್ಮಕ ಸಮಾಜ ರಚಿಸಬಲ್ಲೆವು. ವಿಶ್ವಮಾನವರಾಗಿ ಬದುಕಬಲ್ಲೆವು ಇದೇ ಜೆ.ಕೆ. ಅವರ ಸರಳ ಸುಂದರ ಫಿಲಾಸಫಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT