ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಪೂಜನೀಯ ಸ್ವಾಮೀಜಿ

Last Updated 19 ಜೂನ್ 2021, 19:30 IST
ಅಕ್ಷರ ಗಾತ್ರ

ಪೌರಕಾರ್ಮಿಕರಿಗಾಗಿ ದೇವಾಲಯಗಳನ್ನು ಕಟ್ಟಿಸಿರುವ ಈ ಸ್ವಾಮೀಜಿ, ಪೌರಕಾರ್ಮಿಕರನ್ನೇ ಅರ್ಚಕರನ್ನಾಗಿ ನೇಮಿಸಿದ್ದಾರೆ. ಸಂಗೀತ ಬಲ್ಲ ಈ ಸ್ವಾಮೀಜಿಗೆ ಕುಬ್ಜ ಗಿಡಗಳ ಮೇಲೆ ಪ್ರೀತಿ, ಗಿಳಿಗಳೆಂದರೆ ಪಂಚಪ್ರಾಣ...

ಇವರನ್ನು ನೀವು ಪೌರಕಾರ್ಮಿಕರ ಸ್ವಾಮೀಜಿ ಎಂದೇ ಕರೆಯಬಹುದು. ಈ ಸ್ವಾಮೀಜಿ ಪೌರಕಾರ್ಮಿಕರಿಗೆ ತಮ್ಮ ಆಶ್ರಮದಲ್ಲಿ ಮುಕ್ತ ಅವಕಾಶ ನೀಡಿದ್ದಾರೆ. ಈಗಾಗಲೇ ಎರಡು ಬಾರಿ ತಮ್ಮ ಆಶ್ರಮದಲ್ಲಿ ಪೌರಕಾರ್ಮಿಕರ ಬೃಹತ್ ಸಮಾವೇಶ ನಡೆಸಿದ್ದಾರೆ. ಮೈಸೂರು ಮತ್ತು ಸುತ್ತಮುತ್ತಲಿನ ಪಟ್ಟಣಗಳ ಪೌರಕಾರ್ಮಿಕರ ಕಾಲೊನಿಗಳಲ್ಲಿ ಇದುವರೆಗೆ 14 ದೇವಾಲಯಗಳನ್ನು ಕಟ್ಟಿಸಿದ್ದಾರೆ ಅಥವಾ ಜೀರ್ಣೋದ್ಧಾರ ಮಾಡಿಸಿದ್ದಾರೆ. ಮೈಸೂರಿನ ಬನ್ನಿಮಂಟಪ, ಕುದುರೆ ಮಾಳಗಳಲ್ಲಿರುವ ಪೌರಕಾರ್ಮಿಕರ ಕಾಲೊನಿಗಳಲ್ಲಿ ಈಗ ಎರಡು ದೇವಾಲಯಗಳು ನಿರ್ಮಾಣವಾಗುತ್ತಿವೆ. ಈ ದೇವಾಲಯಗಳಲ್ಲಿ ಪೂಜೆ ಮಾಡುವವರೂ ಪೌರಕಾರ್ಮಿಕರೇ ಆಗಿದ್ದಾರೆ!

ಪೌರಕಾರ್ಮಿಕರನ್ನು ಆಶ್ರಮಕ್ಕೆ ಕರೆಸಿಕೊಂಡು ಅವರಿಗೆ ದೇವರ ಪೂಜೆ ಮಂತ್ರಗಳನ್ನು ಹೇಳಿಕೊಟ್ಟಿದ್ದಾರೆ. 2002 ಮತ್ತು 2019ರಲ್ಲಿ ಆಶ್ರಮದಲ್ಲಿ ಪೌರಕಾರ್ಮಿಕರ ಸಮಾವೇಶ ನಡೆಸಿ ಅವರ ಶಿಕ್ಷಣ ಮತ್ತು ವಸತಿ ಸೌಲಭ್ಯಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರತಿವರ್ಷ ಸ್ವಾಮೀಜಿ ಅವರ ಹುಟ್ಟುಹಬ್ಬದ ದಿನ ಪೌರಕಾರ್ಮಿಕರು ಆಶ್ರಮಕ್ಕೆ ಬಂದು ಸ್ವಾಮೀಜಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಾರೆ. ಅಲ್ಲದೆ ಸ್ವಾಮೀಜಿ ಅವರು ಕಟ್ಟಿಸಿದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಸಮಾಜದ ಕಟ್ಟಕಡೆಯ ಸ್ಥಾನದಲ್ಲಿರುವ ಹಾಗೂ ಸಮಾಜದ ಎಲ್ಲ ಕೊಳಕುಗಳನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರಿಗೆ ನೆರವಾಗುತ್ತಿರುವ ಸ್ವಾಮೀಜಿ ಯಾರಪ್ಪಾ ಎಂದರೆ ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ. ಹೆಚ್ಚಾಗಿ ದಲಿತರನ್ನೇ ಒಳಗೊಂಡ ಪೌರಕಾರ್ಮಿಕರಿಗೆ ನೆರವಾಗುವ ಇಂತಹ ಕಾರ್ಯಕ್ಕೆ ಪ್ರೇರಣೆ ಏನು ಎಂದು ಕೇಳಿದರೆ, ‘ನಾವು ವಿದೇಶಕ್ಕೆ ಭೇಟಿ ನೀಡಿದಾಗ ನಮ್ಮ ಧರ್ಮದ ಬಗ್ಗೆ ಎಲ್ಲರೂ ಪ್ರಶಂಸೆ ಮಾಡುತ್ತಾರೆ. ಆದರೆ ಅಸ್ಪೃಶ್ಯತೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಕೆಲವರು ನಿಂದನೆಯ ಮಾತುಗಳನ್ನೂ ಹೇಳಿದ್ದರು. ಅದು ನಮ್ಮ ಮನಸ್ಸಿಗೆ ತುಂಬಾ ನೋವಾಗಿದ್ದರಿಂದ ಅಸ್ಪೃಶ್ಯತೆಯನ್ನು ತೊಲಗಿಸುವ ಪ್ರಯತ್ನವಾಗಿ ಪೌರಕಾರ್ಮಿಕರಿಗೆ ನೆರವು ನೀಡಲು ಆರಂಭಿಸಿದ್ದೇವೆ’ ಎಂದು ಸ್ವಾಮೀಜಿ ಹೇಳುತ್ತಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಸ್ವಾಮೀಜಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆಶ್ರಮದಲ್ಲಿ ವೇದ ಪಾಠಶಾಲೆ ಇದೆ. ದತ್ತಪೀಠದಲ್ಲಿ ನಿರಂತರ ಸೇವಾ ಕಾರ್ಯಗಳು ನಡೆಯುತ್ತಿವೆ. ಗಣಪತಿ ಸಚ್ಚಿದಾನಂದ ಆಶ್ರಮದ 87 ಶಾಖೆಗಳು ಭಾರತದಲ್ಲಿವೆ. ವಿದೇಶಗಳಲ್ಲಿ 12 ಆಶ್ರಮಗಳಿವೆ. ವಿದೇಶಗಳಲ್ಲಿ ಎರಡು ದತ್ತಾತ್ರೇಯ ದೇವಾಲಯಗಳನ್ನು ಕಟ್ಟಿಸಿದ್ದಾರೆ. ವೆಸ್ಟ್ ಇಂಡೀಸ್ ದ್ವೀಪ ಸಮೂಹದ ಟ್ರಿನಿಡಾಡ್‍ನಲ್ಲಿ 87 ಅಡಿ ಎತ್ತರದ ಕಾರ್ಯಸಿದ್ಧಿ ಹನುಮಾನ್ ಬೃಹತ್ ಏಕಶಿಲಾ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಹೀಗೆ ನಿರಂತರ ಆಧ್ಯಾತ್ಮಿಕ ಕಾರ್ಯ ಮಾಡುತ್ತಿದ್ದರೂ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಸಿದ್ಧರಾಗಿರುವುದು ಅವರ ಇತರ ವಿಶಿಷ್ಟ ಕಾರ್ಯಗಳಿಂದ.

ಮೈಸೂರಿನ ದತ್ತಪೀಠದ ನಾದಮಂಟಪದಲ್ಲಿ ನಡೆದ ಪೌರಕಾರ್ಮಿಕರ ಸಮಾವೇಶದ ನೋಟ
ಮೈಸೂರಿನ ದತ್ತಪೀಠದ ನಾದಮಂಟಪದಲ್ಲಿ ನಡೆದ ಪೌರಕಾರ್ಮಿಕರ ಸಮಾವೇಶದ ನೋಟ

ಮೈಸೂರಿನ ಆಶ್ರಮದಲ್ಲಿ ಅವರು ಸ್ಥಾಪಿಸಿರುವ ಬೋನ್ಸಾಯಿ ಉದ್ಯಾನ ಸ್ವಾಮೀಜಿ ಅವರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದೆ. ಇಲ್ಲಿ 400ಕ್ಕೂ ಹೆಚ್ಚು ಬೋನ್ಸಾಯಿ ಗಿಡಗಳಿವೆ. ‘ಬೋನ್ಸಾಯಿಗಳ ಮೂಲ ಚೀನಾ ಮತ್ತು ಜಪಾನ್ ಎಂಬ ಭಾವನೆ ನಮ್ಮಲ್ಲಿ ಇತ್ತು. ನಾವು ಒಮ್ಮೆ ಚೀನಾಕ್ಕೆ ಹೋದಾಗ ಅಲ್ಲಿನ ಬೋನ್ಸಾಯಿ ಉದ್ಯಾನದ ಬಾಗಿಲಿನಲ್ಲಿಯೇ ಬೋನ್ಸಾಯಿ ಮೂಲ ಹಿಮಾಲಯ ಎಂಬ ಫಲಕ ಇತ್ತು. ಅದನ್ನು ನೋಡಿ ನಮಗೆ ಜ್ಞಾನೋದಯ ಆಯಿತು. ಅಲ್ಲದೆ ರಾಮಾಯಣದ ಸುಂದರಕಾಂಡದಲ್ಲಿ ಬರುವ ದಧಿಮುಖನ ಕತೆ ಕೂಡ ಬೋನ್ಸಾಯಿ ಬೆಳೆಸಲು ಪ್ರೇರಣೆ’ ಎಂದು ಸ್ವಾಮೀಜಿ ಹೇಳುತ್ತಾರೆ.

‘ನಮ್ಮಲ್ಲಿ ಕುಬ್ಜ ವೃಕ್ಷ ಶಾಸ್ತ್ರವೇ ಇದೆ. ಬೋನ್ಸಾಯಿ ಗಿಡಗಳ ವಿಶೇಷ ಏನು ಎಂದರೆ ನಿಮ್ಮ ಅಜ್ಜ ಅಥವಾ ಮುತ್ತಜ್ಜ ಅಥವಾ ಮುತ್ತಜ್ಜನ ಅಜ್ಜ ಒಂದು ಗಿಡವನ್ನು ನೆಟ್ಟಿದ್ದರೆ ಅದೇ ಗಿಡಕ್ಕೆ ನೀವೂ ನೀರು ಎರೆಯಬಹುದು. ಅಜ್ಜ, ಮುತ್ತಜ್ಜ ಎಲ್ಲರೂ ಕಣ್ಮರೆಯಾಗಬಹುದು. ಆದರೆ ಬೋನ್ಸಾಯಿ ಜೀವಂತವಾಗಿರುತ್ತದೆ. ನೀವು ನೆಟ್ಟು ಅದರಿಂದ ಆಮ್ಲಜನಕ ಪಡೆದಿದ್ದರೆ ನಿಮ್ಮ ಮೊಮ್ಮಕ್ಕಳು ಮಾತ್ರ ಅಲ್ಲ, ಮೊಮ್ಮಕ್ಕಳ ಮೊಮ್ಮಕ್ಕಳೂ ಅದರಿಂದ ಆಮ್ಲಜನಕ ಪಡೆಯಬಹುದು. ಬೋನ್ಸಾಯಿ ಬೆಳೆಸುವುದಕ್ಕೆ ಹೆಚ್ಚಿನ ಜಾಗವೂ ಬೇಡ. ಈಗಂತೂ ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ. ನಿಮ್ಮ ಫ್ಲ್ಯಾಟ್‌ಗಳಲ್ಲಿಯೂ ಬೋನ್ಸಾಯಿ ಬೆಳೆಯಬಹುದು. ನಿಮ್ಮ ಅಪಾರ್ಟ್‌ಮೆಂಟ್‌ ಮತ್ತು ಫ್ಲ್ಯಾಟ್‌ಗಳ ಆಯುಷ್ಯಕ್ಕಿಂತ ಬೋನ್ಸಾಯಿ ಆಯುಷ್ಯ ಹೆಚ್ಚು. ಮನೆಗೆ ಸೌಂದರ್ಯವೂ ಹೌದು, ಶುದ್ಧ ಗಾಳಿಯೂ ಸಿಗುತ್ತದೆ’ ಎಂದು ಅವರು ಹೇಳುತ್ತಾರೆ.

ಸ್ವಾಮೀಜಿ ಅವರ ಇನ್ನೊಂದು ವಿಶಿಷ್ಟ ಹವ್ಯಾಸ ಗಿಳಿಗಳ ರಕ್ಷಣೆ. ಮೈಸೂರಿನ ಆಶ್ರಮದಲ್ಲಿ 400 ಪ್ರಭೇದಗಳ ಮೂರು ಸಾವಿರಕ್ಕೂ ಹೆಚ್ಚು ಗಿಳಿಗಳಿವೆ. ಸ್ವಾಮೀಜಿ ಅವರು ಒಮ್ಮೆ ಭಾಗವತ ಪಾರಾಯಣ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮ ಮುಗಿದ ನಂತರ ಭಕ್ತರೊಬ್ಬರು ಎರಡು ಗಿಳಿಗಳನ್ನು ತಂದು ಇವುಗಳಿಗೆ ಆಶ್ರಮದಲ್ಲಿ ಆಶ್ರಯ ಕೊಡಿ ಎಂದರು. ಹೀಗೆ ಯಾರ ಯಾರದ್ದೋ ಮನೆಗಳಲ್ಲಿ ಪಂಜರಗಳಲ್ಲಿ ಇರುವ, ಗಾಯಗೊಂಡಿರುವ ಗಿಳಿಗಳನ್ನು ಆಶ್ರಮಕ್ಕೆ ತಂದುಕೊಡಿ ಎಂದು ಸ್ವಾಮೀಜಿ ಕರೆ ನೀಡಿದ್ದರಿಂದ ಗಿಳಿಗಳ ದಂಡೇ ಆಶ್ರಮಕ್ಕೆ ಹರಿದು ಬಂತು. ಅದರಿಂದಾಗಿ ಆಶ್ರಮದಲ್ಲಿ ಶುಕವನ ಸೃಷ್ಟಿಯಾಯಿತು. ಇದು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ.

ಸಂಗೀತದಲ್ಲಿ ತಲ್ಲೀನರಾದ ಸ್ವಾಮೀಜಿ
ಸಂಗೀತದಲ್ಲಿ ತಲ್ಲೀನರಾದ ಸ್ವಾಮೀಜಿ

ಸ್ವಾಮೀಜಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. ಅದು ಅವರ ತಾಯಿಯಿಂದ ಬಳುವಳಿಯಾಗಿ ಬಂದಿದ್ದು. ಅದು ನಾದ ಚಿಕಿತ್ಸೆ. ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳಿವೆ. ಯಾವ ಯಾವ ರಾಗಗಳನ್ನು ಹಾಡಿದರೆ ಅಥವಾ ಕೇಳಿದರೆ ಯಾವ ನಾಡಿ ಬಡಿತ ಸರಿಯಾಗುತ್ತದೆ ಎನ್ನುವುದನ್ನು ಶೋಧಿಸಿ ಅವರು ತಿಳಿಸಿದ್ದಾರೆ. ರಾಗರಾಗಿಣಿ ವಿದ್ಯೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿದ್ದಾರೆ. ಸ್ವಾಮೀಜಿ ಅವರು ರಾಗಪ್ರಿಯರೂ ಹೌದು. ಗಿಳಿ ಪ್ರಿಯರೂ ಹೌದು. ಮೈಸೂರಿನಲ್ಲಿ ಅವರು ಕಟ್ಟಿಸಿದ ನಾದ ಮಂಟಪವೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ.

ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಸತ್ಯನಾರಾಯಣ. ಮೇಕೆದಾಟು ಅವರ ಜನ್ಮಸ್ಥಳ. ತಂದೆ ಆಂಧ್ರಪ್ರದೇಶದ ಅನಂತಪುರದ ಬೊಮ್ಮೆಪರ್ತಿ ಗ್ರಾಮದ ನರಸಿಂಹಶಾಸ್ತ್ರಿ. ತಾಯಿ ಜಯಲಕ್ಷ್ಮಿ. ಸ್ವಾಮೀಜಿ ಹುಟ್ಟಿದ್ದು 1942ರ ಮೇ 26ರಂದು. ತಮ್ಮ 11ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ತಾಯಿ ನಿಧನದ ನಂತರ ತಂದೆ ವಿರಾಗಿಯಾದರು. ಜ್ಯೇಷ್ಠ ಪುತ್ರರಾಗಿದ್ದ ಸತ್ಯನಾರಾಯಣನ ಮೇಲೆ 8 ವರ್ಷ ಮತ್ತು 5 ವರ್ಷದ ತಂಗಿಯರು ಮತ್ತು ಒಂದು ತಿಂಗಳ ಹಸುಗೂಸು ತಮ್ಮ ಕೋದಂಡರಾಮನ ಜವಾಬ್ದಾರಿ ಬಿತ್ತು. ತಮ್ಮ ಬಹಳ ಕಾಲ ಬದುಕಲಿಲ್ಲ. ಕಡುಬಡತನದಲ್ಲಿ ಮೈಸೂರಿನ ಅಜ್ಜನ ಮನೆಯಲ್ಲಿ ಬೆಳೆದ ಸತ್ಯನಾರಾಯಣ ವಿದ್ಯಾಭ್ಯಾಸವನ್ನೂ ಮುಂದುವರಿಸಲು ಆಗಲಿಲ್ಲ. ಆದರೆ ಅಧ್ಯಾತ್ಮ ಸಾಧನೆಯನ್ನು ಬಿಡಲಿಲ್ಲ.

ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ಹುದ್ದೆಯಲ್ಲಿದ್ದರೂ ಅಧ್ಯಾತ್ಮದ ಒಲವು ಹೆಚ್ಚಾಗಿದ್ದರಿಂದ ಸನ್ಯಾಸ ಸ್ವೀಕರಿಸಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆದರು. 1966ರ ಜೂನ್ 6ರಂದು, ನಂಜನಗೂಡು ರಸ್ತೆಯಲ್ಲಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅವಧೂತ ದತ್ತ ಪೀಠದ ಆಶ್ರಮ ಸ್ಥಾಪಿಸಿದರು. 1969ರಲ್ಲಿ ಅನ್ನಪೂರ್ಣಮಂದಿರ ಸ್ಥಾಪಿಸಿದರು. 1971ರಲ್ಲಿ ದ್ವೈತ-ಅದ್ವೈತ-ವಿಶಿಷ್ಟಾದ್ವೈತ ಪೀಠಾಧಿಪತಿಗಳ ಆಶ್ರಯದಲ್ಲಿ ತ್ರಿಮತ ಸಮ್ಮೇಳನ ನಡೆಯಿತು. ಇದರ ಸ್ಮರಣಾರ್ಥ ‘ರಾಮಾನುಜ-ಮಧ್ವ-ಶಂಕರ ಕುಟೀರ’ ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದರು. ಇದು ‘ರಾ.ಮ.ಶಂಕರ ಕುಟೀರ’ ಎಂಬ ಮಂದಿರವಾಗಿ 1976ರಲ್ಲಿ ಲೋಕಾರ್ಪಣೆಯಾಯಿತು.

1978ರ ಜೂನ್ 9ರಂದು ಆಶ್ರಮದಲ್ಲಿ ಸ್ವಾಮೀಜಿಯವರ ಸ್ವಹಸ್ತದಿಂದ ಕಾಲಾಗ್ನಿಶಮನ ದತ್ತಾತ್ರೇಯ ಪ್ರತಿಷ್ಠಾಪನೆಯಾಯಿತು. ಸ್ವಾಮೀಜಿ ಅವರಿಗೆ ಕರ್ನಾಟಕ ಮಾತ್ರವಲ್ಲದೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಭಕ್ತರಿದ್ದಾರೆ. ವಿದೇಶಗಳಲ್ಲಿ ಸಾಕಷ್ಟು ಅನುಯಾಯಿಗಳಿದ್ದಾರೆ. ಕೊರೊನಾ ಕಾಲದಲ್ಲಿಯೂ ಅವರು ಸಾಕಷ್ಟು ಮಂದಿಗೆ ನೆರವಾಗಿದ್ದಾರೆ.‘ಮಾನವನ ಅತಿರೇಕದ ಮತ್ತು ವಿವೇಚನಾರಹಿತ ಭೋಗವಿಲಾಸ ಜೀವನದಿಂದ ಆರೋಗ್ಯಕರ ಪರಿಸರ ಹಾಳಾಗಿ ಕೊರೊನಾದಂಥ ರೋಗರುಜಿನಗಳ ಬಾಧೆ ಮಿತಿಮೀರಿದೆ. ಆಧುನಿಕತೆ ಹೆಸರಿನಲ್ಲಿ ಮಾನವರು ಮಾಡಿಕೊಂಡ ಐಷಾರಾಮಿ ಬದುಕು ಅವರ ರೋಗ ನಿರೋಧಕ ಶಕ್ತಿಯನ್ನೇ ಹಾಳುಮಾಡಿದೆ. ಮನುಷ್ಯನ ದೈಹಿಕ ಶಕ್ತಿ ಕುಸಿದಂತೆಲ್ಲಾ ಮಾನಸಿಕ ದೌರ್ಬಲ್ಯಗಳು ಹೆಚ್ಚಿ, ಆತಂಕದ ಉನ್ಮಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವೇ ಜನರ ಹಣದ ಲಾಲಸೆಗೆ ಇಡೀ ಮನುಕುಲ ನಾಶವಾಗುತ್ತಿದೆ. ಈಗಲಾದರೂ ಮಾನವರು ಎಚ್ಚೆತ್ತು, ಪರಿಸರಕ್ಕೆ ಒಳಿತಾಗುವ ಕಾರ್ಯಾನುಷ್ಠಾನಕ್ಕೆ ರಚನಾತ್ಮಕವಾದ ದಿಟ್ಟ ಹೆಜ್ಜೆ ಇಡಬೇಕಿದೆ’ ಎಂಬುದು ಅವರ ಸಂದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT