ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಚಿಮಿನ್ ನಗರದ ಮಡಿಲಲ್ಲಿ...

Last Updated 20 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಹೋಚಿಮಿನ್ ಸಿಟಿಗೆ ಮಗ ಕಾರ್ಯಾರ್ಥವಾಗಿ ಒಂದು ವಾರದ ಮಟ್ಟಿಗೆ ಹೊರಟು ನಿಂತಿದ್ದ. ಆತನೊಂದಿಗೆ ಒಬ್ಬರು ಹೋಗಿಬರುವ ಅವಕಾಶವಿದ್ದದ್ದನ್ನು ಕಂಡು ನನ್ನ ಕಾಲಿನ ಚಕ್ರಗಳು ತಿರುಗಹತ್ತಿದ್ದವು. ಒಂದು ವಾರದ ಕಾರ್ಯಕ್ರಮವಲ್ಲವೇ ಅಂತ ನಾನೂ ಹೊರಟು ನಿಂತೆ.

ವಿಯೆಟ್ನಾಂ ಪ್ರವಾಸ ಅಂದಕೂಡಲೆ ದಡಬಡನೆ ಮ್ಯಾಪ್ ನೋಡಿ ಹೋಚಿಮಿನ್ ಸಿಟಿ ಬಿಟ್ಟರೆ ಬೇರೇನಿಲ್ಲ ಅಂದು ಬೇರೆ ಸ್ಥಳ ಹುಡುಕುವವರೇ ಜಾಸ್ತಿ. ಆದರೆ ಅಮೇರಿಕಾ ದೊಡ್ಡಣ್ಣನಿಗೆ 19 ವರ್ಷ ನೀರು ಕುಡಿಸಿ ಅತೀ ದೀರ್ಘಕಾಲದ ಯುದ್ಧ ಮಾಡಿ ಜಗ್ಗದೇ ನಿಂತ ವಿಯೆಟ್ನಾಂ ಸ್ವಾಭಿಮಾನದ ಸಂಕೇತವಾಗಿ ಇತಿಹಾಸದಲ್ಲಿ ದಾಖಲಾಗಿದೆ.

ಬೆಂಗಳೂರಿನಿಂದ ಸುದೀರ್ಘ ಪ್ರಯಾಣದಲ್ಲಿ ಜೊತೆ ಕೊಟ್ಟದ್ದು ಇತಿಹಾಸದ ಪುಸ್ತಕ. ಬಹಳ ಹಿಂದೆ ಚಂಪಾಪುರ ಎಂದು ಕರೆಯಲಾಗುತ್ತಿದ್ದ ಇಲ್ಲಿ ಹಿಂದೂ ರಾಜರು ಆಳ್ವಿಕೆ ನಡೆಸಿದ್ದರಂತೆ. ನಂತರ ಚೀನಿ ಅರಸರ ಅಧೀನಕ್ಕೆ ವಿಯೆಟ್ನಾಂ ಬಂದಿತ್ತು. ನಂತರ ಫ್ರೆಂಚರು ಇಲ್ಲಿ ತಮ್ಮ ವಾಸಹತು ಸ್ಥಾಪನೆ ಮಾಡಿಕೊಂಡಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ರಾಜಕೀಯರಂಗಕ್ಕೆ ಬಂದ ಹೋಚಿಮಿನ್ ವಿಯೆಟ್ನಾಂ ಅನ್ನು ಸ್ವತಂತ್ರ ರಾಷ್ಟ್ರವಾಗಿ ಘೋಷಣೆ ಮಾಡಿದ್ದ. ಇದು ಮಿತ್ರ ರಾಷ್ಟ್ರಗಳಿಗೆ ಪಥ್ಯವಾಗದೇ ವಿಯೆಟ್ನಾಂ ಅನ್ನು ಎರಡು ಭಾಗ ಮಾಡಿ ಚೀನಾ ಮತ್ತು ಬ್ರಿಟೀಷರ ಆಡಳಿತಕ್ಕೆ ವಹಿಸಲಾಯ್ತು. ಇದನ್ನು ಸಹಿಸದ ಹೋಚಿಮಿನ್ ರಹಸ್ಯವಾಗಿ ಫ್ರೆಂಚರೊಂದಿಗೆ ಒಪ್ಪಂದ ಮಾಡಿಕೊಂಡದ್ದು ಅಮೆರಿಕಕ್ಕೆ ಸಿಟ್ಟು ತರಿಸಿತ್ತು. ಇದನ್ನು ತಡೆಯಲು ತನ್ನ ಸೈನ್ಯವನ್ನು ದಕ್ಷಿಣ ವಿಯೆಟ್ನಾಮಿನಲ್ಲಿಟ್ಟಿತು.

ಪಗೋಡ
ಪಗೋಡ

ಸ್ವಾಭಿಮಾನಿ ವಿಯೆಟ್ನಾಂ

ಹೋಚಿಮಿನ್ ಸ್ಥಳೀಯ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬ ಇಚ್ಛೆಯಿಂದ ಸ್ಥಳೀಯ ಜನರ ಸೈನ್ಯ ಅಮೇರಿಕವನ್ನು ಇನ್ನಿಲ್ಲದಂತೆ 19 ವರ್ಷ ಕಾಡಿತ್ತು. ವಿಯೆಟ್ನಾಂ ಮುಂದೆ ಸೋಲೊಪ್ಪಿಕೊಳ್ಳಲು ಬಯಸದ ಅಮೇರಿಕಾ ಹೆನ್ರಿ ಕಿಸಿಂಗರ್ ನೇತೃತ್ವದಲ್ಲಿ ವಿವಾದವನ್ನು ಬಗಹರಿಸಿಕೊಂಡಿತ್ತು. ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಒಂದಾಗಿದ್ದವು. ನಂತರದ ವಿಯೆಟ್ನಾಂ ಕಟ್ಟುವ ಕಠಿಣ ಕಾರ್ಯ ಹೊಸ ಅಧ್ಯಕ್ಷ ಹೋಚಿಮಿನ್ ಮೇಲೆ ಬಿತ್ತು. ಆತ ಕಟ್ಟುನಿಟ್ಟಿನ ಆಡಳಿತ ನಡೆಸಿ ವಿಯೆಟ್ನಾಮಿನ ಆಡಳಿತ ಮತ್ತು ಆರ್ಥಿಕ ಸ್ಥಿತಿಯನ್ನು ಹಳಿಗೆ ತಂದು ನಿಲ್ಲಿಸಿದ. ಆತನ ಪ್ರಯತ್ನದ ಫಲವನ್ನೇ ಇಂದು ವಿಯೆಟ್ನಾಂ ಉಣ್ಣುತ್ತಿರುವುದು.

ತನ್ನ ನಾಡು ಕಟ್ಟಿದ ಹೋಚಿಮಿನ್‍ಗೆ ವಿಯೆಟ್ನಾಂ ಸ್ಮಾರಕಗಳನ್ನು ನಿರ್ಮಿಸಿ ಆತನ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಿಕೊಂಡಿದೆ ಹಾಗೂ ಆತನ ದಾರಿಯಲ್ಲೇ ನಡೆಯುತ್ತಿದೆ. ಇದೆಲ್ಲಾ ನೆನೆಯುತ್ತ ಸಾಕಷ್ಟು ವಿಡಿಯೊಗಳನ್ನು ನೋಡುವ ವೇಳೆಗೆ ವಿಮಾನ ಹೋಚಿಮಿನ್ ನಗರದ ಮೇಲಿತ್ತು.

ಕುಚಿ ಸಾವಿನ ಓಣಿಗಳು

ನಾನು ಪ್ರವಾಸಕ್ಕೆ ಮುಂದಾಗಿಯೇ ಸಿದ್ಧ ಮಾಡಿಕೊಂಡಿದ್ದೆ. ಬೆಳಗ್ಗೆ 8 ಗಂಟೆಗೆ ಸಿದ್ಧವಾಗಿರಬೇಕೆಂದು ನನಗೆ ಸೂಚನೆ ಸಿಕ್ಕಿತ್ತು. ಸುಮಾರು 10 ಜನ ಪ್ರವಾಸಿಗಳಿದ್ದ ಬಸ್ಸೊಂದು ನನ್ನನ್ನು ಹತ್ತಿಸಿಕೊಂಡು ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಕು ಚಿ ಸುರಂಗಗಳ ಕಡೆಗೆ ನಡೆದಿತ್ತು. ದಾರಿಯುದ್ದಕ್ಕೂ ನಮ್ಮ ಮಾರ್ಗದರ್ಶಿ ಎಂಗುಯೆಂಗ್ ಪುವೊಂಗ್ ತನ್ನ ವಿವರಣೆ ಮುಂದುವರೆಸಿದ್ದ. ಕು ಚಿ ಸುರಂಗಗಳು ಹಿಂದೆ ವಿಯೆಟ್ನಾಮಿ ಯುದ್ಧದ ಸಂದರ್ಭದಲ್ಲಿ ವಿಯೆಟ್ನಾಮಿ ಸೈನಿಕರ ಅಡಗುದಾಣಗಳಾಗಿದ್ದ ಸಹಜ ಗುಹೆಗಳು ಇವು. ಇವುಗಳ ಅಂತ್ಯ ಎಲ್ಲಿ ಆರಂಭ ಎಲ್ಲಿ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇವನ್ನು ವಿಯೆಟ್ನಾಮಿಗಳು ಬೇಸ್ ಕ್ಯಾಂಪಾಗಿ ಮಾಡಿಕೊಂಡಿದ್ದರು.

ಅಮೆರಿಕನ್ ಸೈನಿಕರು ಈ ಸುರಂಗಗಳನ್ನು ಬ್ಲಾಕ್ ಎಕೋ ಎನ್ನುತ್ತಿದ್ದರಂತೆ. ಗಾಳಿ, ನೀರು, ಬೆಳಕು ಇಲ್ಲದ ಕಾರ್ಗತ್ತಲೆಯ ಇಕ್ಕಟ್ಟಾದ ಓಣಿಗಳಲ್ಲಿ ಚೇಳು, ಜೇಡ, ಸಹಸ್ರಪದಿ ಮುಂತಾದ ವಿಷಕಾರಿ ಪ್ರಾಣಿಗಳ ನಡುವೆ ಸ್ವಾತಂತ್ರ್ಯ ಯೋಧರು ಬದುಕು ನಡೆಸುತ್ತಿದ್ದರು. ಅದರೊಳಕ್ಕೆ ನುಗ್ಗಲಾರದ ಅಮೆರಿಕನ್ ಸೈನಿಕರು ಒಳಕ್ಕೆ ಬಾಂಬುಗಳನ್ನೆಸೆದು ಇಲ್ಲವೆ ವಿಷಾನಿಲಗಳನ್ನು ಬಿಟ್ಟು ಒಳಗಿದ್ದವರನ್ನು ಕೊಂದು ಹಾಕುತ್ತಿದ್ದರು. ವಿಯೆಟ್ನಾಮಿಗಳು ತಾವು ಏನೂ ಕಮ್ಮಿಯಿಲ್ಲ ಎಂದು ತೋರಿಸಲು ಅಮೆರಿಕನ್ ಸೈನಿಕರನ್ನು ಮೊಳೆಗಳ ಕುಣಿಯೊಳಕ್ಕೆ ಬೀಳಿಸಿ ಇಲ್ಲವೇ ಕೊರಕಲಿನೊಳಕ್ಕೆ ಜಾರುವಂತೆ ಮಾಡಿ ಕೊಲ್ಲುತ್ತಿದ್ದರು.

ಅಂದು ಸೈನಿಕರು ಬದುಕುತ್ತಿದ್ದ ವಿಧಾನಗಳ ಪ್ರತಿಕೃತಿ ಮಾಡಿ ಇಡಲಾಗಿದೆ. ಗಾಬರಿ ಹುಟ್ಟಿಸುವ ಸುರಂಗಳ ಒಳ ಹೋಗುವ ಮುನ್ನ ಸುರಂಗಗಳ ಬಗ್ಗೆ ವಿವರಣೆ ನೀಡುವ ಕಿರು ಸಿನಿಮಾ ಒಂದನ್ನು ಪ್ರವಾಸಿಗಳಿಗೆ ತೋರಿಸಿ ತಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಸಹಾನುಭೂತಿ ಗಳಿಸುವ ಪ್ರಯತ್ನ ಮಾಡಲಾಗಿದೆ.

ವಿಯೆಟ್ನಾಂ ರಾಷ್ಟ್ರಪಿತ

ನಮ್ಮ ಎರಡನೇ ದಿನದ ಪ್ರವಾಸ ಹೋ ಚಿ ಮಿನ್ ನಗರದಲ್ಲಿ. ವಿಯೆಟ್ನಾಂ ರಾಜಧಾನಿ ಸೈಗೋನ್ ಆಗಿದ್ದು ಸ್ವಾತಂತ್ರ್ಯಾ ನಂತರ ಅದನ್ನು ಹೋ ಚಿ ಮಿನ್ ನಗರ ಎಂದು ಪುನರ್ ನಾಮಕರಣ ಮಾಡಲಾಯ್ತು. ಸುಮಾರು 85 ಲಕ್ಷ ಜನ ವಾಸ ಮಾಡುತ್ತಿರುವ ದೊಡ್ಡ ನಗರ ಇದು. ಮೆಟ್ರೋ ರೈಲು, ಸಿಟಿ ಬಸ್ಸುಗಳು ಇದ್ದರೂ ಕೂಡ ಅಸಹನೀಯ ಟ್ರಾಫಿಕ್ ಒಮ್ಮೊಮ್ಮೆ ಬೆಂಗಳೂರು ನೆನಪಿಗೆ ಬರುವಂತೆ ಮಾಡುತ್ತದೆ. ಇಲ್ಲಿ 70 ಲಕ್ಷ ದ್ವಿಚಕ್ರಗಳು ಇವೆಯಂತೆ ಎನ್ನುವುದು ರೇಜಿಗೆ ಹುಟ್ಟಿಸಿತು.

ನಗರದಲ್ಲಿ ದಿನ್ಹ್ ಥೋಂಗ್ ನಾಥ್ ಅರಮನೆ, ಹೋ ಚಿ ಮಿನ್ ವಸ್ತುಸಂಗ್ರಹಾಲಯ, ಯುದ್ಧ ಸ್ಮಾರಕ, ನೋತ್ರೆದಾಂ ಕ್ಯಾತೆಡ್ರಲ್, ಖಗೋಳ ವೀಕ್ಷಣಾಲಯ, ಸೈಗಾನ್ ನದಿ ಪ್ರಯಾಣ ಪ್ರವಾಸಿ ಸ್ಥಳಗಳು. ಇವುಗಳಲ್ಲಿ ಅತ್ಯಂತ ಆಕರ್ಷಕವಾದ ಚುವಾ ವಾನ್ ಪತ್ ಬುದ್ಧನ ದೇವಾಲಯ ತಪ್ಪದೇ ನೋಡಬೇಕಾದಂತಹದ್ದು. ಇಲ್ಲಿನ ನಾಲ್ಕು ಮಹಡಿಗಳಲ್ಲಿ ಸಣ್ಣ-ದೊಡ್ಡ ಗಾತ್ರದ ಬುದ್ಧನ ವಿಗ್ರಹಗಳನ್ನು ಜೋಡಿಸಿಡಲಾಗಿದೆ. ಈ ಅಸಂಖ್ಯ ವಿಗ್ರಹಗಳು ಅಚ್ಚರಿ ಹುಟ್ಟಿಸುತ್ತವೆ.

ನಗರದಲ್ಲಿ ಅನೇಕ ಮಾಲ್‌ಗಳು ತುಂಬಿವೆ. ಇಲ್ಲಿನ ಜನ ಕೂಡ ನಮ್ಮ ಹಾಗೆಯೇ ಬೀದಿಬದಿ ತಿಂಡಿ ತಿನ್ನುವುದರಲ್ಲಿ ನಿಸ್ಸೀಮರು. ವಿಯೆಟ್ನಾಮೀಯರ ಮೆಚ್ಚಿನ ಅಹಾರ ಪೊ. ಇದರಲ್ಲಿ ನಿಂಬೆ ತುಂಡು, ತುಳಸಿ ಎಲೆ, ಪುದೀನ, ಈರುಳ್ಳಿ, ಮೊಳಕೆ ಕಾಳುಗಳು ಮತ್ತು ನ್ಯೂಡಲ್ಸ್ ಜೊತೆಗೆ ಒಗ್ಗರೆಣೆ ಸೇರಿಸಿ ಕೊಡಲಾಗುತ್ತದೆ. ಬುನ್‍ಚಾ (ಶಾವಿಗೆ), ಬಾನ್ ಕುವೋನ್ (ದೋಸೆಯ ಚಿಕ್ಕ ತಮ್ಮ) ಕೂಡಾ ಇಲ್ಲಿ ಜನಪ್ರಿಯ. ಇವರ ಕಾಫಿಗೆ ನಮ್ಮ ಹಾಗೆ ಹಾಲು ಹಾಕದೇ ಮಂದಗೊಳಿಸಿದ ಕಂಡೇನ್ಸ್ದ್ ಹಾಲು ಸೇರಿಸುತ್ತಾರಾದರೂ ಪರವಾಗಿಲ್ಲ. ಇನ್ನು ಬಿಯರನ್ನಂತೂ ಎಗ್ಗು-ತಗ್ಗಿಲ್ಲದೇ ಕುಡಿಯುತ್ತಾರೆ.

ಚುವಾ ವಾನ್ ಪತ್ ಬುದ್ಧನ ದೇವಾಲಯ
ಚುವಾ ವಾನ್ ಪತ್ ಬುದ್ಧನ ದೇವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT