ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕುಮಾರಿಯ ಕೈಯನ್ನು ಹುಡುಕುತ್ತಾ…

Last Updated 22 ನವೆಂಬರ್ 2020, 6:50 IST
ಅಕ್ಷರ ಗಾತ್ರ
ADVERTISEMENT
"ಸೇಂಟ್ ಆಗಸ್ಟೀನ್ ಚರ್ಚ್‌ನಲ್ಲಿ ರಾಜಕುಮಾರಿ ಕೆಟೆವಾನ್‌ಳ ರೆಲಿಕ್‌ಗಳನ್ನು ಸಂಗ್ರಹಿಸಿ ಇಡಲಾಗಿದೆ"
"ಕಲ್ಲುರಾಶಿಗಳ ನಡುವೆ ಪೆಟ್ಟಿಗೆಯ ಮುಚ್ಚಳ"

ಯುರೋಪ್‌ನ ಪೂರ್ವ‌ ಮತ್ತು ಏಷ್ಯಾದ ಪಶ್ಚಿಮ ಭಾಗಗಳು ಸಂಧಿಸುವ ಜಾರ್ಜಿಯಾ ಹಾಗೂ ಪರ್ಷಿಯಾ ನಡುವಿನ ಪುಟ್ಟ ಪ್ರಾಂತ್ಯದ ರಾಜಕುಮಾರಿಯ ಮೃತಶರೀರದ ಅವಶೇಷಗಳು ಪಣಜಿಗೆ ಬಂದಿದ್ದಾದರೂ ಹೇಗೆ? ಪಾಳುಬಿದ್ದ ಚರ್ಚ್‌ನಲ್ಲಿ ಅವುಗಳು ಸಿಕ್ಕಿದ್ದಾದರೂ ಎಂತು?

1960ರ ದಶಕದಲ್ಲಿ ತೆರೆಕಂಡ ಹಿಂದಿ ಚಲನಚಿತ್ರ ‘ಗುಮ್‍ನಾಮ್’ - ಅದರಲ್ಲಿ ‘ಗುಮ್‍ನಾಮ್ ಹೈ ಕೋಯಿ’ ಎಂಬ ಹಾಡು ಬಹಳ ಜನಪ್ರಿಯವಾಗಿತ್ತು. ಅದಕ್ಕೆ ಸೂಕ್ತವಾದ ಕೌತುಕಮಯ ತಾಣವನ್ನು ಗೋವಾದ ಪಾಳುಬಿದ್ದ ಸೇಂಟ್ ಆಗಸ್ಟೀನ್ ಚರ್ಚ್ ಒದಗಿಸಿತ್ತು. ಸಿನಿಮಾದಿಂದಾಗಿ ಆ ಸ್ಥಳ ಅಷ್ಟೊಂದು ಢಾಳಾಗಿ ಎದ್ದುಕಂಡರೂ ಅದಕ್ಕಿಂತ ಹೆಚ್ಚಾಗಿ ಮಹತ್ವ ಪಡೆದಿದ್ದು, ಅದು ರಹಸ್ಯವೊಂದನ್ನು ಸುಮಾರು 250 ವರ್ಷಗಳ ಕಾಲ ಅಡಗಿಸಿಟ್ಟುಕೊಂಡ ಕಾರಣಕ್ಕಾಗಿ. ಅದರ ಶೋಧಕ್ಕೆ ತೊಡಗಿದವರು ಎರಡು ದೇಶಗಳ ಇತಿಹಾಸಕಾರರು, ವಾಸ್ತುಶಿಲ್ಪಿಗಳು, ಜಿನೋಮ್ ತಜ್ಞರು, ಹತ್ತಿಪ್ಪತ್ತು ವಿಜ್ಞಾನಿಗಳು ಮತ್ತು ಮೂರು ಸಂಶೋಧನಾ ಸಂಸ್ಥೆಗಳು.

ಪಣಜಿಯ ಪ್ರವಾಸೀ ಆಕರ್ಷಣೆಗಳಲ್ಲಿ ಒಂದಾದ ಬೋಮ್ ಜೀಸಸ್ ಚರ್ಚ್ ಆವರಣದಲ್ಲಿ ಪ್ರಾಚ್ಯ ವಸ್ತು ಸಂಗ್ರಹಾಲಯವಿದೆ. ಎಲ್ಲ ಸಂಗ್ರಹಾಲಯಗಳಂತೆ ಅಲ್ಲಿಯೂ ಕದಂಬರ ಕಾಲದ ಶಾಸನಗಳ ಜೊತೆಗೆ ಪೋರ್ಚುಗೀಸರ ಆಡಳಿತದ ದಾಖಲೆಗಳು, ಚಿತ್ರಗಳೂ ಇವೆ. ಅವುಗಳ ನಡುವೆ ಮೆಟ್ಟಿಲುಗಳಂತಹ ಪ್ರದರ್ಶಿಕೆಯಲ್ಲಿ ಐರೋಪ್ಯ ರಾಜಕುಮಾರಿಯದೊಂದು ಚಿತ್ರವಿದೆ. ಸ್ವಾರಸ್ಯವಾದÀ ದೀರ್ಘ ವಿವರಣೆಯೂ ಇದೆ.

ಸೇಂಟ್ ಆಗಸ್ಟೀನ್ ಚರ್ಚ್‌ನಲ್ಲಿ ರಾಜಕುಮಾರಿ ಕೆಟೆವಾನ್‌ಳ ರೆಲಿಕ್‌ಗಳನ್ನು ಸಂಗ್ರಹಿಸಿ ಇಡಲಾಗಿದೆ

ಈ ಆವರಣದಿಂದ ಸುಮಾರು 500 ಮೀ ದೂರದಲ್ಲಿ ಹೋಲಿ ಹಿಲ್ (ಮೋಂಟೆ ಸಾಂಟೋ) ಎಂಬ ಸಣ್ಣ ಗುಡ್ಡವಿದೆ. ಅದನ್ನು ಸಮೀಪಿಸುತ್ತಿದ್ದಂತೆ ಶಿಥಿಲವಾಗಿ ಬಿದ್ದುಹೋದ ಚರ್ಚ್‍ನ ಪಳೆಯುಳಿಕೆ ಕಾಣುತ್ತದೆ. ಅದೇ ಸೈಂಟ್ ಆಗಸ್ಟೀನ್ ಚರ್ಚ್. ನಾಲ್ಕು ಗೋಪುರಗಳ ಆ ಕಟ್ಟಡದ ಒಂದು ಗೋಪುರ ಮಾತ್ರ ಈಗ ಉಳಿದುಕೊಂಡಿದೆ. ಈಗ ಪ್ರಾಚ್ಯ ವಸ್ತು ಇಲಾಖೆ ಆ ಸ್ಥಳವನ್ನು ಶುದ್ಧ ಗೊಳಿಸಿ ಕಾಲುದಾರಿಗಳನ್ನು ಸೂಚನಾ ಫಲಕಗಳನ್ನೂ ಹಾಕಿದೆ. ಐರೋಪ್ಯ ರಾಜಕುಮಾರಿಯ ನಂಟು ಇದರೊಡನಿದೆ.

ರಾಜಕುಮಾರಿ ಕೆಟೆವಾನ್

17ನೆಯ ಶತಮಾನದ ಆದಿಭಾಗದಲ್ಲಿ ಪರ್ಷಿಯಾ ಮತ್ತು ಜಾರ್ಜಿಯಾ ನಡುವಿನ ಸಣ್ಣ ಪ್ರಾಂತ್ಯ ಮಖ್ರಾನಿಯಲ್ಲಿ ಹುಟ್ಟಿದ ಕೆಟೆವಾನ್ ಪಕ್ಕದ ಕಖೇತಿ ಪ್ರಾಂತ್ಯದ ಅಲೆಕ್ಸಾಂಡರ್ ಎಂಬ ರಾಜನ ಮಗÀ ಡೇವಿಡ್‍ನನ್ನು ಮದುವೆಯಾದಳು. ಆತ ಕೇವಲ ಎರಡು ವರ್ಷ ರಾಜನಾಗಿ ಆಡಳಿತ ನಡೆಸಿದ್ದ. ಆತನ ಸಹೋದರ ಕಾನ್ಸ್‍ಟೆಂಟೈನ್ ತಂದೆಯ ವಿರುದ್ಧವೇ ದಂಗೆ ಎದ್ದು ಕೊಂದು ಹಾಕಿದ. ಆಗ ಈಕೆ ಸೇನೆಯನ್ನು ಮುನ್ನಡೆಸಿ ಗೆದ್ದು ಪುನಃ ತನ್ನ ಅಧೀನಕ್ಕೆ ರಾಜಸ್ವವನ್ನು ಪಡೆದುಕೊಂಡಳು. ಸ್ವಭಾವತಃ ಧರ್ಮಭೀರುವಾಗಿದ್ದ ಈಕೆ ವಿರೋಧಿಗಳನ್ನು ಕ್ಷಮಿಸಿ ಪ್ರಜೆಗಳನ್ನಾಗಿ ಸ್ವೀಕರಿಸಿದಳು. ಮೈದುನನಿಗೆ ಕುಮ್ಮಕ್ಕು ಕೊಟ್ಟಿದ್ದ ಮುಸ್ಲಿಂ ಅಧಿಕಾರಿಗಳನ್ನೂ ಕ್ಷಮಿಸಿ ಬಿಡುಗಡೆ ಮಾಡಿ ಕಳುಹಿಸಿದಳು.

ಮುಂದೆ ತನ್ನ ಅಪ್ರಾಪ್ತ ವಯಸ್ಕ ಮಗನನ್ನೇ ರಾಜನನ್ನಾಗಿ ಮಾಡಿ ತಾನು ಆಡಳಿತವನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲು ಪರ್ಷಿಯಾದ ರಾಜ ಷಾ ಅಬ್ಬಾಸ್‍ನ ಒಪ್ಪಿಗೆ ದೊರಕಿಸಿಕೊಂಡಳು. ಆತನ ಆಧಿಪತ್ಯದಲ್ಲಿದ್ದ ಒಂದು ಸಣ್ಣ ರಾಜ್ಯದ (ಪಾಳ್ಯ ಎನ್ನಬಹುದು) ರಾಜನಾಗಿ ಆಕೆಯ ಮಗ ತೈಮೂರಝ್ ಗದ್ದುಗೆ ಏರಿದ. ಪರ್ಷಿಯಾದ ವೈರಿಗಳು ಎನ್ನಿಸಿಕೊಂಡಿದ್ದ ಒಟೊಮನ್ ಮತ್ತು ರಷಿಯನ್ನರೊಡನೆ ತೈಮೂರಝ್ ಸಂಪರ್ಕದಲ್ಲಿದ್ದ ಎಂದು ಷಾ ಅಬ್ಬಾಸ್‍ನಿಗೆ ಸಂಶಯ ಬಂದೊಡನೆ ಆತ 1614ರಲ್ಲಿ ದಂಡೆತ್ತಿ ಬಂದ. ಯುದ್ಧ ತಡೆಯಲು ರಾಜಕುಮಾರಿ ತಾನೇ ಒತ್ತೆಯಾಳಾಗಲು ಮುಂದೆ ಬಂದಳಾದರೂ ಯುದ್ಧ ನಡೆದೇ ನಡೆಯಿತು. ಆಕೆ ಹತ್ತು ವರ್ಷ ಶಿರಾಝ್‍ನಲ್ಲಿ ಜೈಲಿನಲ್ಲಿ ಕಾಲ ನೂಕಿದ ಮೇಲೂ ಷಾ ಅಬ್ಬಾಸ್ ಆಕೆಯನ್ನು ಹಿಂಸಿಸುವುದನ್ನು ನಿಲ್ಲಿಸಲಿಲ್ಲ. 60 ವರ್ಷದ ಆಕೆಯನ್ನು ಬಲವಂತವಾಗಿ ಇಸ್ಲಾಂ ಮತಕ್ಕೆ ಪರಿವರ್ತನೆಗೊಳ್ಳುವಂತೆ ಆಗ್ರಹಿಸಿದ. ತನ್ನ ಜನಾನಾಕ್ಕೆ ಸೇರಬೇಕೆಂದು ನಿರ್ಬಂಧಿಸಿದ. ಜಾರ್ಜಿಯಾದ ಸಂಪ್ರದಾಯಸ್ಥ ಕ್ರಿಶ್ಚಿಯನ್ ಆಗಿದ್ದ ಆಕೆ ಒಪ್ಪಲಿಲ್ಲ. ಕಾದ ಕಬ್ಬಿಣದ ಸಲಾಕಿಗಳಿಂದ ತಿವಿದು ಚಿತ್ರಹಿಂಸೆ ಕೊಟ್ಟು ಅವಳ ದೇಹವನ್ನು ಛಿದ್ರ ಛಿದ್ರಗೊಳಿಸಿ ಎಸೆದ. ಆಕೆಯ ಅಂತ್ಯ ತಿಳಿದು ಮರುಗಿದ ಜನ ಅವಳನ್ನು ಹುತಾತ್ಮಳು ಎಂದು ಕರೆದು ಗೌರವಿಸಿದರು.

ಶಿರಾಝ್‍ನ ಜೈಲಿನಲ್ಲಿದ್ದಾಗ ಆಕೆಗೆ ಇಬ್ಬರು ಪಾದ್ರಿಗಳ ಪರಿಚಯ ಆಗಿತ್ತು. ಆಕೆಯ ದುರಂತ ಜೀವನವನ್ನು ಕಣ್ಣಾರೆ ಕಂಡ ಆ ಪಾದ್ರಿಗಳು ಆಕೆಯ ಧರ್ಮಭೀರುತ್ವವನ್ನು ಪರಿಗಣಿಸಿ ಸಂತಳು ಎಂದು ರೋಮ್ ಘೋಷಿಸಬಹುದು ಎಂದು ನಿರೀಕ್ಷಿಸಿದರು. ಇದಕ್ಕೆ ಪೂರಕವಾಗಿ ಅವರು ಆಕೆಯ ದೇಹದ ಭಾಗವೊಂದನ್ನು (ರೆಲಿಕ್) ತೆಗೆದುಕೊಳ್ಳಬೇಕಾಗಿತ್ತು. ಅವರು ಆಕೆಯ ಸಮಾಧಿಯನ್ನು ಪತ್ತೆ ಮಾಡಿ ಗುಟ್ಟಾಗಿ ದೇಹದ ಭಾಗಗಳÀನ್ನು ಹೊರತೆಗೆದು ತಮ್ಮಲ್ಲೇ ಮುಚ್ಚಿಟ್ಟುಕೊಂಡರು. ಮೂರು ವರ್ಷಗಳ ನಂತರ 1627ರಲ್ಲಿ ಅವನ್ನು ಆಕೆಯ ಸ್ಥಳಕ್ಕೆ ಒಯ್ದರು. ಆಕೆಯ ಮಗ ಅವುಗಳನ್ನು ಸ್ವೀಕರಿಸಿ ಆಕೆಯ ಹೆಸರಿನಲ್ಲಿ ಒಂದು ಹೊಸ ಚರ್ಚ್ ಸ್ಥಾಪಿಸಲು ಯೋಜನೆ ಹಾಕಿದ. ದುರದೃಷ್ಟವಶಾತ್ ಅದನ್ನು ಕೊಂಡೊಯ್ಯುತ್ತಿದ್ದ ಕುದುರೆಗಾಡಿ ನದಿಗೆ ಬಿದ್ದು ರೆಲಿಕ್‍ಗಳು ನೀರು ಪಾಲಾದವು. ಆಕೆಯನ್ನು ಸಂತಳು ಎಂದು ಘೋಷಿಸುವುದು ಸಾಧ್ಯವಾಗಲಿಲ್ಲ. ಚರ್ಚ್ ಅಲೆರವೆದಿ ಎಂಬಲ್ಲಿ ನಿರ್ಮಾಣವಾಯಿತು. ಆಕೆಯ ಚರಿತ್ರೆಯ ವಿವರಗಳನ್ನು ಮಗ ತೈಮೂರಝ್ ಸುಂದರ ಕಾವ್ಯªನ್ನಾಗಿ ರಚಿಸಿದ. ಇದು ಭಾಷಾಂತರಗೊಂಡು ಯೂರೋಪ್‍ನಲ್ಲೆಲ್ಲಾ ಜನಪ್ರಿಯವಾಯಿತು. ಇದರ ಇಂಗ್ಲಿಷ್ ಅವತರಣಿಕೆ 1851ರಲ್ಲಿ ಪ್ರಕಟವಾಯಿತು.

ಕಲ್ಲುರಾಶಿಗಳ ನಡುವೆ ಪೆಟ್ಟಿಗೆಯ ಮುಚ್ಚಳ

ಇನ್ನೂರು ವರ್ಷಗಳ ನಂತರ

ಈ ಮಧ್ಯೆ ಪಾದ್ರಿಗಳು ಗುಟ್ಟಾಗಿ ನಡೆಸಿದ ಕೆಲವು ಪ್ರಯತ್ನಗಳ ಫಲವಾಗಿ ಕೆಲವು ರೆಲಿಕ್‍ಗಳು ದೇಶ ಬಿಟ್ಟು ಹೊರಗೆ ಹೋಗಿದ್ದವು. ಆದರೆ ವಿವರಗಳು ಯಾರಿಗೂ ತಿಳಿದಿರಲಿಲ್ಲ. 1958ರಲ್ಲಿ ಈ ಪಾದ್ರಿಗಳ ಇತಿಹಾಸವನ್ನು ಆಧ್ಯಯನ ಮಾಡುತ್ತಿದ್ದ ಸಿಲ್ವ ರೆಗೋ ಎಂಬುವರು ಕೆಲವು ರಹಸ್ಯ ಪತ್ರ ವಿನಿಮಯಗಳ ಮೇಲೆ ಕಣ್ಣಾಡಿಸಿದಾಗ ರಾಜಕುಮಾರಿಯ ಬಲಗೈಯನ್ನು ಗೋವಾಕ್ಕೆ ಸಾಗಿಸಿ ಆಗ ನಿರ್ಮಾಣವಾಗುತ್ತಿದ್ದ ಸೈಂಟ್ ಆಗಸ್ಟೀನ್ ಚರ್ಚ್ ನಲ್ಲಿ ಅಡಗಿಸಿ ಇಡಲಾಗಿದೆ ಎಂಬ ಮಹತ್ವದ ಅಂಶವನ್ನು ಬೆಳಕಿಗೆ ತಂದರು. ಆ ಮುಂದೆ ಜಾರ್ಜಿಯಾದ ಸರಕಾರ ಈ ಬಗ್ಗೆ ಆಸಕ್ತಿ ವಹಿಸಿತು. ಪೋರ್ಚುಗೀಸ್ ಭಾಷೆಯಲ್ಲಿ ಪ್ರಕಟವಾಗಿದ್ದ ಈ ವರದಿ ಇಂಗ್ಲಿಷ್‍ಗೆ ಭಾಷಾಂತರವಾದದ್ದು 1985ರಲ್ಲಿ. ಆಗ ತರಾತುರಿಯಿಂದ ಎಲ್ಲರೂ ರಾಜಕುಮಾರಿಯ ಹಸ್ತದ ಹುಡುಕಾಟ ನಡೆಸಿದರು. ಮೂಲ ಹಸ್ತಪ್ರತಿಯಲ್ಲಿ ಬಲಭಾಗದ ಯಾವ ಗೋಡೆಯ ಯಾವ ಸಾಲಿನಲ್ಲಿ ಈ ಲೋಹದ ಪೆಟ್ಟಿಗೆಯನ್ನು ಅಡಗಿಸಿಲಾಗಿದೆ ಎಂಬ ವಿವರವೂ ಚಿತ್ರ ಸಮೇತ ಇದ್ದರೂ ಅದು ಸಿಗಲಿಲ್ಲ.

ಗೋವಾಕ್ಕೆ ಭೇಟಿ ಕೊಟ್ಟಿರುವವರಿಗೆ ಈ ಪಾಳು ಬಿದ್ದ ಕಟ್ಟಡ ನೆನಪಾಗಲಾರದು. ಅದಕ್ಕಾಗಿಯೇ ಗುಮ್‍ನಾಮ್ ಚಿತ್ರ ನೆನಪಿಸಬೇಕಾಯಿತು. ಆ ಚಿತ್ರೀಕರಣ ನಡೆಸಿದಾಗ ಸುತ್ತಲೂ ಕಾಡಿನಂತೆ ಮರಗಳು ಪೊದೆಗಳು - ಆ ದೆವ್ವದ ದೃಶ್ಯಕ್ಕೆ ಸರಿಯಾಗಿ ಹೊಂದುವಂತಿದ್ದವು. ಈಗ ಅದನ್ನು ಸ್ವಚ್ಛಗೊಳಿಸಿ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿನಲ್ಲಿ ನೋಡಿಕೊಳ್ಳಲಾಗುತ್ತಿದೆ. 1700 ರ ಸುಮಾರಿಗೆ 5 ಅಂತಸ್ತುಗಳ ಭವ್ಯ ಕಟ್ಟಡವಾಗಿ ತಲೆ ಎತ್ತಿದ್ದ ಇದು ಸೈಂಟ್ ಆಗಸ್ಟೀನ್ ಅನುಯಾಯಿಗಳ ಪವಿತ್ರಧಾಮವಾಗಿತ್ತು. ಆದರೆ ಸುಮಾರು 1835 ರ ಹೊತ್ತಿಗೆ ಪೋರ್ಚುಗೀಸರ ಅವಕೃಪೆಗೆ ಸಿಕ್ಕಿ ಸೈಂಟ್ ಆಗಸ್ಟೀನ್ ಅನುಯಾಯಿಗಳೆಲ್ಲಾ ಪಲಾಯನ ಮಾಡುವಂತಾಯಿತು. ವರುಣನ ಅವಕೃಪೆಗೂ ಗುರಿಯಾಗಿ ಅದರ ಮುಖ್ಯ ಗೋಪುರ ಕುಸಿದು ಬಿದ್ದು ಇಡೀ ಕಟ್ಟಡವೇ ಹೇಳ ಹೆಸರಿಲ್ಲದಾಯಿತು. ನೂರಾರು ಧರ್ಮಾಧಿಕಾರಿಗಳು ಯುವಕರೂ ವಾಸವಾಗಿದ್ದ ಈ ಕಟ್ಟಡದ ಅಮೂಲ್ಯ ವಸ್ತುಗಳನ್ನು ಅಲ್ಲಿ ಇಲ್ಲಿ ಸಾಗಿಸಿ ಕಾಪಾಡಲಾಗಿತ್ತು. ಆದರೆ ಗೋಡೆಗಳು ಕ್ರಮೇಣ ಕುಸಿದು ಬಿದ್ದು ಕಲ್ಲುಗಳು ರಾಶಿರಾಶಿಯಾಗಿ ಒತ್ತರಿಸಿಕೊಂಡಿದ್ದವು.

ರಾಜಕುಮಾರಿಯ ಕೈಯನ್ನು ಹುಡುಕುತ್ತಾ ಬಂದ ಮೊದಲ ಅನ್ವೇಷಕರಿಗೆ ಘೋರ ನಿರಾಶೆ ಕಾದಿತ್ತು. ಪಾಳು ಬಿದ್ದ ಕಲ್ಲುಗಳ ಇಟ್ಟಿಗೆಗಳ ರಾಶಿಯಲ್ಲಿ ಅದು ಎಲ್ಲಿ ಸೇರಿ ಹೋಗಿತ್ತೋ ಅಥವಾ ಯಾರಾದರೂ ಕೊಂಡೊಯ್ದರೋ ಎಂಬ ಎಲ್ಲ ಪ್ರಶ್ನೆಗಳನ್ನು ಹುಟ್ಟು ಹಾಕಿತು.

1980ರ ದಶಕದಲ್ಲಿ ರಷ್ಯಾ ಮತ್ತು ಜಾರ್ಜಿಯಾ ಇಲ್ಲಿ ರಾಜಕುಮಾರಿಯ ಕೈಯನ್ನು ಹುಡುಕಲು ತಂಡಗಳನ್ನು ಕಳುಹಿಸಿದವು. ಇವರೆಲ್ಲ ಒಟ್ಟಿಗೇ ಸೇರಿ ಒಂದೊಂದು ಕಲ್ಲನ್ನೂ ಜಾಗರೂಕತೆಯಿಂದ ಎತ್ತಿ ಅದರ ಮೇಲಿದ್ದ ವಿನ್ಯಾಸ, ಚಿತ್ತಾರ ಇವನ್ನೆಲ್ಲಾ ದಾಖಲು ಮಾಡಿದರು. 1985ರಲ್ಲಿ ಅರ್ಮೇನಿಯಾದ ಇತಿಹಾಸÀಕಾರ ರಾಬರ್ಟೋ ಗುಲ್ಬೆನ್‍ಕೈನ್ ರಾಜಕುಮಾರಿಯ ಬಗ್ಗೆ ಎಲ್ಲ ವಿವರಗಳನ್ನೂ ಕಲೆಹಾಕಿ ಪುಸ್ತಕ ಪ್ರಕಟಿಸಿದರು. ಹುಡುಕಾಟ ಮುಂದುವರೆದೇ ಇತ್ತು. 25 ವರ್ಷಗಳಲ್ಲಿ ಸರಕಾರಗಳು ಬದಲಾದವು; ಕೆಲಸ ಆರಂಭಿಸಿದವರು ನಿವೃತ್ತಿ ಹೊಂದಿದರು. ಆದರೆ ಆ ಪೆಟ್ಟಿಗೆ ಸಿಗಲೇ ಇಲ್ಲ.

ಛಲ ಬಿಡದ ವಿದ್ಯಾರ್ಥಿಗಳಲ್ಲೊಬ್ಬ ಈ ಕಟ್ಟಡದ ವಾಸ್ತುವನ್ನ ಅಧ್ಯಯನ ಮಾಡಿ ಕಂಪ್ಯೂಟರ್ ಮಾದರಿಯೊಂದನ್ನು ತಯಾರಿಸಲು ಹೊರಟ. 2004ರಲ್ಲಿ ಪ್ರಾಚ್ಯವಸ್ತು ಇಲಾಖೆ ಈ ಪರಿಸರವನ್ನು ಶುದ್ಧಿಗೊಳಿಸಿ ವೀಕ್ಷಕರು ಓಡಾಡಲು ಕಾಲುಹಾದಿಯೊದನ್ನು ನಿರ್ಮಾಣ ಮಾಡುವ ಕೆಲಸವನ್ನು ಆರಂಭಿಸಿತು. ಮುಖ್ಯಕಟ್ಟಡದ ಗೋಡೆಯ ಕಲ್ಲುಗಳೆಲ್ಲ ಆಗಲೇ ಶೋಧನೆಗೆ ಒಳಪಟ್ಟಿದ್ದವು. ಆ ರಾಶಿಯಲ್ಲಿ ಪೆಟ್ಟಿಗೆ ಇಲ್ಲ ಎಂಬುದೇ ಹೆಚ್ಚು ಕಡಿಮೆ ಎಲ್ಲರ ತೀರ್ಮಾನವಾಗಿತ್ತು. ಆದರೂ ರಾಜಕುಮಾರಿಯ ಕತೆ ಮನೆಮಾತಾಗಿದ್ದುದರಿಂದ ಎಲ್ಲರಿಗೂ ಆ ಬಗ್ಗೆ ಆಸಕ್ತಿಯಂತೂ ಇತ್ತು. ಅದರ ಹೊರ ಆವರಣದ ಪುಟ್ಟ ಕಟ್ಟಡಗಳ ದುರಸ್ತಿ ಆರಂಭವಾಯಿತು. ಅಲ್ಲೊಂದು ಸಮಾಧಿ ಸಿಕ್ಕಿತು. ಅದರ ಕಲ್ಲಿನ ಮೇಲೆ ಮಾನ್ಯುಯೆಲ್ ಡಿ ಸಿಕ್ವೇರಾ ಎಂಬ ಹೆಸರಿತ್ತು. ವಾಸ್ತುವಿಭಾಗದ ವಿದ್ಯಾರ್ಥಿ ಮೆಂಡಿರಟಾ ಸಿದ್‍ಗೆ ಕುತೂಹಲ ಉಂಟಾಯಿತು. ಮುಂಬಯಿ ಪ್ರಾಂತದಲ್ಲಿ ಪೋರ್ಚುಗೀಸರ ಪ್ರಭಾವವನ್ನು (ಮುಖ್ಯವಾಗಿ ಕಟ್ಟಡ ನಿರ್ಮಾಣದಲ್ಲಿ) ಅಧ್ಯಯನ ಮಾಡಲೆಂದೇ ಅವರು ಬಂದಿದ್ದರು. ಆ ಹೆಸರು ಅವರಿಗೆ ಪರಿಚಿತವಾಗಿತ್ತು. ರಾತ್ರಿಯೆಲ್ಲ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿ ಸಿಲ್ವ ರೆಗೋ ಒದಗಿಸಿದ್ದ ಸಮಾಧಿಸ್ಥರ ಪಟ್ಟಿಯನ್ನೂ ಹುಡುಕಿದಾಗ ಆ ಹೆಸರು ಸಿಕ್ಕಿತು. ಅದಕ್ಕೊಂದು ಷರಾ ಇತ್ತು. ಆ ಸಮಾಧಿಯ ಗೋಡೆಯಲ್ಲಿಯೇ ರಾಜಕುಮಾರಿಯ ಹಸ್ತದ ಪೆಟ್ಟಿಗೆ ಇದೆ ಎಂದಿತ್ತು.

ಪ್ರಾಚ್ಯ ವಸ್ತು ವಿಭಾಗದ ತಾಹಿರ್ ಅವರು ಉತ್ಸಾಹದಿಂದ ಹುಡುಕಾಟ ಆರಂಭಿಸಿದರು. ಪ್ರತಿ ಕಲ್ಲನ್ನೂ ಜಾಗರೂಕತೆಯಿಂದ ತೆಗೆದು ಇಡುತ್ತಾ ಬಂದವರಿಗೆ ಪುನಃ ನಿರಾಶೆಯೇ ಕಾದಿತ್ತು. ಯಾವ ಪೆಟ್ಟಿಗೆಯೂ ಸಿಗಲಿಲ್ಲ. ಆದರೆ ಸುಮಾರು ಎರಡು ಮೀಟರ್ ದೂರದಲ್ಲಿ ಕಲ್ಲು ಚೂರುಗಳ ನಡುವೆ ಮೂಳೆಯೊಂದು ಸಿಕ್ಕಿತು. ಅದು ಎರಡು ತುಂಡಾಗಿತ್ತು. ಸ್ವಲ್ಪ ದೂರದಲ್ಲಿ ಇನ್ನೆರಡು ಚೂರುಗಳೂ ಸಿಕ್ಕವು. ಇದು ಎಲ್ಲರಿಗೂ ರೋಮಾಂಚವನ್ನೇ ಉಂಟುಮಾಡಿತು.

ಅತ್ಯುತ್ಸಾಹದಿಂದ ಮೂಳೆಗಳನ್ನು ತೆಗೆದುಕೊಂಡು ಹೋಗಲು ಜಾರ್ಜಿಯಾದಿಂದ ಸರಕಾರಿ ಅಧಿಕಾರಿಗಳ ತಂಡ ಆಗಮಿಸಿದ್ದು 2006ರಲ್ಲಿ. ಅಷ್ಟು ಹೊತ್ತಿಗೆ ಪೆಟ್ಟಿಗೆಯ ಮುಚ್ಚಳ ಎಂದು ಹೇಳಬಹುದಾದ ಲೋಹದ ಹಾಳೆ ಸಿಕ್ಕಿತ್ತು. ಮೂಳೆಗಳನ್ನು ತೆಗೆದುಕೊಂಡು ಹೋಗಲು ಕೊಡುವುದು ಹೇಗೆ ಎಂಬ ಸಂದಿಗ್ಧ ಪ್ರಾಚ್ಯ ವಸ್ತು ಅಧಿಕಾರಿಗಳದ್ದು. ಆ ತುಂಡುಗಳು ರಾಜಕುಮಾರಿಯದೇ ಎಂದು ಪ್ರಮಾಣೀಕರಿಸುವುದು ಹೇಗೆ?

ವಿಜ್ಞಾನಿಗಳಿಗೊಂದು ಸವಾಲು

ಡಿ ಎನ್ ಎ ಎಂಬ ಜೀವವಾಹಿನಿಯ ತಂತು ಏನೆಲ್ಲ ಚಮತ್ಕಾರಗಳನ್ನು ಮಾಡಬಹುದು ಎಂದಷ್ಟೇ ತಿಳಿದಿದ್ದ ವಿಜ್ಞಾನಿಗಳಿಗೆ ಅದನ್ನು ಪ್ರಾಯೋಗಿಕವಾಗಿ ಬಳಸುವ ಅವಕಾಶ ಸಿಕ್ಕಿರಲಿಲ್ಲ. ಆಗಷ್ಟೇ ಅದು ಹೊಸ ವಿಜ್ಞಾನ ವಿಭಾಗವಾಗಿ ಬೆಳೆಯುತ್ತಿತ್ತು. ಹೈದರಾಬಾದ್ ನ ಸಿ ಸಿ ಎಂ ಬಿ ಸಂಸ್ಥೆಯನ್ನು ಪ್ರಾಚ್ಯವಸ್ತು ಇಲಾಖೆಯ ತಾಹಿರ್ ಸಂಪರ್ಕಿಸಿದರು. ಅಲ್ಲಿಯ ವಿಜ್ಞಾನಿ ತಂಗರಾಜ್ ಈ ಹೊಸ ಸವಾಲನ್ನು ಸ್ವೀಕರಿಸಿದರು. ಮೂಳೆಗಳಿಂದ ಡಿ ಎನ್ ಎ ತೆಗೆದು ಅದರ ಅಂಶದಿಂದ ಮೂಲ ಹುಡುಕುವುದೇ ಉದ್ದೇಶ. ಅದೇನೂ ಸುಲಭದ ಕೆಲಸವಾಗಿರಲಿಲ್ಲ. ಅನೇಕ ಹಿರಿಯ ವಿಜ್ಞಾನಿಗಳು ಒಟ್ಟುಗೂಡಿದರು. ಬಗೆಬಗೆಯ ಉಪಾಯಗಳನ್ನು ಹುಡುಕಿದರು. ಡಿ ಎನ್ ಎ ಕಂಡು ಹಿಡಿಯುವುದೇನೋ ಸಾಧ್ಯವಾಯಿತು. ಆದರೆ ಅದು ರಾಜಕುಮಾರಿಯದೇ ಎಂದು ಖಚಿತಪಡಿಸುವುದು ಹೇಗೆ?

ತಂಗರಾಜ್ ಅವರ ತಂಡ ಹುಡುಕಿ ತೆಗೆದದ್ದು ಮೈಟೋ ಕಾಂಡ್ರಿಯಲ್ ಡಿ ಎನ್ ಎ ಎಂಬ ತಂತುಗಳನ್ನು. ಇದರ ಅಧ್ಯಯನಕ್ಕೆ ಬನಾರಸ್ ವಿಶ್ವವಿದ್ಯಾಲಯದವರು, ಎಸ್ಟೋನಿಯದ ಬಯೋ ಸೆಂಟರ್‍ನವರು ಕೈ ಜೋಡಿಸಿದರು. ಅವರು ವಿಶೇಷ ತಯಾರಿ ನಡೆಸಿ ಪ್ರಯೋಗ ಮಾಡುತ್ತಿರುವವರ ಡಿ ಎನ್ ಎ ಅದಕ್ಕೆ ಸೋಂಕದ ಹಾಗೆ ಎಚ್ಚರ ವಹಿಸಬೇಕಾಗಿತ್ತು. ಇವು ತಾಯಿಯಿಂದ ಮಕ್ಕಳಿಗೆ ಸೇರುವ ವಂಶವಾಹಿಗಳು. ಆದ್ದರಿಂದ ಈ ವಾಹಿ ಯಾವ ಯಾವ ಜನರಲ್ಲಿ ಕಂಡುಬರುತ್ತದೆ ಎಂದು ಪತ್ತೆ ಮಾಡಿದಲ್ಲಿ ಆ ವ್ಯಕ್ತಿಯ ಭೌಗೋಳಿಕ ಪರಿಸರವನ್ನು ನಿಗದಿ ಪಡಿಸಬಹುದು. ಯು1ಬಿ ಎಂಬ ವರ್ಗಕ್ಕೆ ಸೇರಿದ ಈ ವಂಶವಾಹಿ ಭಾರತದ ಯಾವ ವ್ಯಕ್ತಿಯಲ್ಲೂ ಕಂಡು ಬಂದಿರಲಿಲ್ಲ ಎಂಬುದೇ ಮುಂದಿನ ಕಾರ್ಯಕ್ಕೆ ಪ್ರೇರೇಪಣೆಯಾಯಿತು.

ಮೂಳೆಯ ಪುಡಿಯನ್ನು ಬಳಸಿ ಅದು ಹೆಂಗಸಿನದೇ ಎಂದು ಖಚಿತ ಪಡಿಸಲು ಸಾಧ್ಯವಾಗಿದ್ದು 2013ರಲ್ಲಿ. ಜಾರ್ಜಿಯಾದ ಚರ್ಚ್ ಈ ಅಧ್ಯಯನದಲ್ಲಿ ಆಸಕ್ತಿ ವಹಿಸಿ ಅಲ್ಲಿಯ ಮೂವತ್ತು ಜನರ ವಂಶವಾಹಿಗಳನ್ನು ಕಳುಹಿಸಿಕೊಟ್ಟಿತು. ಅವುಗಳಲ್ಲಿ ಕೆಲವು ಯು1ಬಿ ವರ್ಗಕ್ಕೆ ಸೇರಿದ್ದವು. ಸುಮಾರು 20000 ಭಾರತೀಯರ ಮಾದರಿಗಳಲ್ಲಿ ಈ ವರ್ಗ ಕಂಡಿಲ್ಲ ಎಂದು ರುಜುವಾತು ಪಡಿಸಿಕೊಂಡಮೇಲೆ ಈ ಸಂಶೋಧನಾ ಪ್ರಬಂಧವನ್ನು ಪ್ರಕಟಣೆಗೆ ಸಲ್ಲಿಸಲಾಯಿತು. ಮೈಟೋಕಾಂಡ್ರಿಯನ್ ಎಂಬ ಸಂಶೋಧನಾ ಪತ್ರಿಕೆಯ ಪರಿಶೀಲಕರು ಇದೇ ಅಧ್ಯಯನವನ್ನು ಬೇರೊಂದು ಪ್ರಯೋಗಶಾಲೆಯಲ್ಲಿ ಪುನಃ ನಡೆಸಿ ಎಂದು ಸಲಹೆ ಕೊಟ್ಟರಾದರೂ ಅದರ ಪ್ರಾಯೋಗಿಕ ಮಿತಿಯನ್ನು ಅರ್ಥ ಮಾಡಿಕೊಂಡು ಪ್ರಕಟಣೆಗೆ ಅನುವು ಮಾಡಿಕೊಟ್ಟರು. 2014ರಲ್ಲಿ ಈ ಪ್ರಬಂಧ ಪ್ರಕಟವಾಯಿತು. ಚಾರಿತ್ರಿಕ ಸಂಶೋಧನೆಗೆ ಡಿ ಎನ್ ಎ ಬಳಸಿ ನಡೆಸಿದ್ದ ಈ ಬಗೆಯ ಮೊದಲ ವರದಿ ಇದಾಗಿತ್ತು.

ಈ ರಹಸ್ಯವನ್ನು ಅಡಗಿಸಿಟ್ಟುಕೊಂಡಿದ್ದ ಪಾಳು ಬಿದ್ದ ಚರ್ಚ್ ಇಂದು ಮತ್ತೆ ಪ್ರವಾಸಿ ತಾಣವಾಗುತ್ತಿದೆ. ಎರಡು ದೇಶಗಳ ದೇಶಪ್ರೇಮಿಗಳು, ಇತಿಹಾಸಕಾರರು, ವಿಜ್ಞಾನಿಗಳ ಸಂಯುಕ್ತ ಪ್ರಯತ್ನಗಳ ಕುರುಹಾಗಿ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ರಾಜಕುಮಾರಿಯ ಚಿತ್ರದೊಡನೆ ಮೂಳೆಗಳ ಚೂರುಗಳೂ ಇವೆ. ಈ ಸುದೀರ್ಘ ಅಧ್ಯಯನದ ವಿವರಗಳೂ ಇವೆ. ಗೋವಾದ ಇತಿಹಾಸ ಮುಜುಗುರ ಗೊಳಿಸುವಂತಹುದಾದರೂ ಇದೊಂದು ಪ್ರದರ್ಶಿಕೆ ಮಾತ್ರ ಹುಬ್ಬೇರಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT