ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಅನುಭವದಲ್ಲಿ ಅದ್ದಿ ತೆಗೆದ ಸಾಮುದಾಯಿಕ ನೆನಪು

Last Updated 8 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಆತ್ಮವೃತ್ತಾಂತ-ಕಾದಂಬರಿ ಎಂದು ಕರೆಯಬಹುದಾದ ಹೊಸ ಪ್ರಕಾರದ ಕೃತಿಗಳಲ್ಲಿ ತಮ್ಮ ವೈಯಕ್ತಿಕ ನೆನಪುಗಳ ಬೇರುಗಳು, ಅಗಲಿಕೆಗಳು ಹಾಗೂ ಸಾಮೂಹಿಕ ನಿರ್ಬಂಧಗಳನ್ನು ಚಿಕಿತ್ಸಕ ನೋಟದಿಂದ ದಾಖಲಿಸುವ ಧೈರ್ಯ ತೋರಿದ ಎಂಬತ್ತೆರಡು ವರ್ಷದ ಫ್ರೆಂಚ್ ಲೇಖಕಿ ಆ್ಯನೀ ಎರ‍್ನೋಗೆ ಈ ಬಾರಿಯ ನೊಬೆಲ್ ಬಹುಮಾನ ದೊರೆತಿದೆ.

***

ಆ್ಯನೀ ಎರ‍್ನೋ ಈವರೆಗೆ ಪ್ರಕಟಿಸಿದ ಎಲ್ಲ ಕೃತಿಗಳೂ ಅವರ ಖಾಸಗಿ ಬದುಕಿನ ಪುಟಗಳೇ. ಆದರೆ ಸುತ್ತಲ ಸಮಾಜದ ಸಾಮೂಹಿಕ ಬದುಕು, ಸಾಮೂಹಿಕ ಅನುಭವ ಎರಡೂ ಈ ಪುಟಗಳಲ್ಲಿ ಬೆರೆತಿವೆ. ಎಷ್ಟರಮಟ್ಟಿಗೆ ಎಂದರೆ ಇವು ಆತ್ಮವೃತ್ತಾಂತಕ್ಕೆ ಸೀಮಿತಗೊಳ್ಳದೇ, ವೈಯಕ್ತಿಕ ಅನುಭವಗಳ ಮೂಲಕವೇ ಎರಡನೇ ಮಹಾಯುದ್ಧದ ನಂತರದ ಸಾಮಾಜಿಕ ಬದುಕು, ಪಲ್ಲಟಗಳು, ದುಡಿಯುವ ವರ್ಗದವರು ಎದುರಿಸುವ ಅವಮಾನಗಳು, ಸಂಕಟಗಳು, ಒಟ್ಟಾರೆ ಒಂದು ಕಾಲಘಟ್ಟದ ಇತಿಹಾಸವನ್ನು, ಕಳೆದ ಆರೇಳು ದಶಕಗಳ ಸಾಮುದಾಯಿಕ ನೆನಪನ್ನು ಅವರು ಕಟ್ಟಿಕೊಟ್ಟಿದ್ದಾರೆ.

ಉತ್ತರ ಫ್ರಾನ್ಸಿನ ಚಿಕ್ಕ ಪಟ್ಟಣವೊಂದರಲ್ಲಿ ಆನೀಯ ಅಪ್ಪ–ಅಮ್ಮ ಸಣ್ಣದಾದ ಗೂಡಂಗಡಿಯನ್ನು ನಡೆಸುತ್ತಿದ್ದವರು. ಅದು ದುಡಿಯುವ ವರ್ಗದವರೇ ವಾಸಿಸುತ್ತಿದ್ದ ಪ್ರದೇಶ. ಶಾಲೆಗೆ ಸೇರಿದ ಆ್ಯನೀ ಮಧ್ಯಮವರ್ಗದ ಹುಡುಗಿಯರೊಂದಿಗೆ ಮುಖಾಮುಖಿಯಾದಾಗ ತನ್ನಂತಹ ದುಡಿಯುವ ವರ್ಗದಿಂದ ಬಂದವರು ಅನುಭವಿಸುವ ಅವಮಾನದ ಅರಿವು ಮೊತ್ತಮೊದಲ ಬಾರಿಗೆ ಆಗಿತ್ತು. ಶಿಕ್ಷಕ ವೃತ್ತಿಯ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ ಇಪ್ಪತ್ತು ವರ್ಷದ ಆನೀ ಲಂಡನ್ನಿಗೆ ಹೋಗಿ ಅಂಗಡಿಯೊಂದರಲ್ಲಿ ಕೆಲಸ ಮಾಡಿದಳು. ಮತ್ತೆ ಫ್ರಾನ್ಸಿಗೆ ವಾಪಾಸಾಗಿ, ಓದು ಮುಂದುವರಿಸಿ, ಆಧುನಿಕ ಸಾಹಿತ್ಯದಲ್ಲಿ ಉನ್ನತ ಪದವಿ ಪಡೆದರು. ಮೊದಲು ಕಾಲೇಜೊಂದರಲ್ಲಿ ಕಲಿಸುತ್ತಿದ್ದವರು ನಂತರ ‘ನ್ಯಾಶನಲ್ ಸೆಂಟರ್ ಫಾರ್ ಡಿಸ್ಟನ್ಸ್ ಎಜುಕೇಶನ್’ ಸಂಸ್ಥೆಯಲ್ಲಿ ಬೋಧಕರಾಗಿ ಕೆಲಸ ಮಾಡಿದರು.

ಆ್ಯನೀಯವರ ಮೊದಲ ಕೃತಿ ‘ಕ್ಲೀನ್ಡ್ ಔಟ್’ ಪ್ರಕಟವಾಗಿದ್ದು 1974ರಲ್ಲಿ. ಅದರಲ್ಲಿ ತಾನು ಹತ್ತು ವರ್ಷಗಳ ಕೆಳಗೆ ಮಾಡಿಸಿಕೊಂಡಿದ್ದ ಕಾನೂನುಬಾಹಿರ ಗರ್ಭಪಾತದ ತಲ್ಲಣವನ್ನು ಚಿತ್ರಿಸುತ್ತಲೇ, ಆ ಕಾಲಘಟ್ಟದ (ಮತ್ತು ಇಂದಿನ ಕಾಲಘಟ್ಟಕ್ಕೂ ಸಲ್ಲಬಹುದಾದ) ಬೇಡದ ಗರ್ಭವನ್ನು ಇಳಿಸಿಕೊಳ್ಳಲು ಬಯಸುವ ಎಲ್ಲ ಮಹಿಳೆಯರು ಎದುರಿಸುವ ಒಂದು ಆತ್ಯಂತಿಕ ಯಾತನೆಯನ್ನು, ಸಮಾಜದ ಕ್ರೌರ್ಯವನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ಅಪಾರ ಮನ್ನಣೆಯನ್ನು ಗಳಿಸಿತು. ನಂತರ ಪ್ರಕಟವಾದ ‘ಎ ಮ್ಯಾನ್ಸ್ ಪ್ಲೇಸ್’ ಕೃತಿಯಲ್ಲಿ ತಂದೆತಾಯಿ ಸಾಮಾಜಿಕವಾಗಿ ಪ್ರಗತಿಯಾಗಿದ್ದು ಹಾಗೂ ತಂದೆಯೊಂದಿಗೆ ತನ್ನ ಸಂಬಂಧ, ಚಿಕ್ಕ ಪಟ್ಟಣದಲ್ಲಿ ಬೆಳೆದದ್ದು – ಇಂತಹ ಅನುಭವಗಳನ್ನು ಹೇಳುತ್ತಲೇ, ಆ ಕಾಲಘಟ್ಟದ ದುಡಿಯುವ ವರ್ಗದ ಸ್ಥಿತಿಗತಿ, ಅವರು ಅನುಭವಿಸುತ್ತಿದ್ದ ಅವಮಾನಗಳನ್ನು ಚಿತ್ರಿಸಿದ್ದಾರೆ.

ಆ್ಯನೀ ತಮ್ಮ ಕೃತಿಗಳಲ್ಲಿ ಅವರ ತಲೆಮಾರಿನವರ, ಅಪ್ಪಅಮ್ಮನ, ಮಹಿಳೆಯರ, ಅಲ್ಲಿ ಇಲ್ಲಿ ಹೊರಗೆ ಭೇಟಿಯಾದ, ಮರೆತ ಎಷ್ಟೋ ಅನಾಮಿಕರ ಬದುಕಿನ ಅನುಭವಗಳನ್ನೂ ಶೋಧಿಸುತ್ತಾರೆ. ತಮ್ಮ ವೈಯಕ್ತಿಕ ಯಾತನೆ, ದುಡಿಯುವ ವರ್ಗದವರು ಎದುರಿಸುವ ಅವಮಾನ, ಅದೇ ಅರಳುತ್ತಿದ್ದ ಲೈಂಗಿಕತೆ, ಒಲವು, ಕಾನೂನುಬಾಹಿರ ಗರ್ಭಪಾತ, ಅನಾರೋಗ್ಯ, ಸಮಯದ ಗ್ರಹಿಕೆ, ಹೀಗೆ ತೀರಾ ಖಾಸಗಿ ಎನ್ನಿಸುವ ಅನುಭವಗಳನ್ನು ಕೇವಲ ತಮ್ಮೊಬ್ಬರದು ಎಂಬಂತೆ ಅಲ್ಲದೇ, ಬೇರೆಯವರೂ ಹಂಚಿಕೊಂಡ, ಆ ಕಾಲಘಟ್ಟದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭವನ್ನು ಪ್ರತಿಫಲಿಸುವ ರೀತಿಯಲ್ಲಿ ಕಟ್ಟಿಕೊಡುವುದೇ ಅವರ ಕೃತಿಗಳ ಹಿರಿಮೆ.

‘ಕಾದಂಬರಿಕಾರರ ಕೆಲಸವೇ ಸತ್ಯವನ್ನು ಹೇಳುವುದು. ನಾನು ಹುಡುಕುತ್ತಿರುವ ಸತ್ಯ ಯಾವುದು ಎಂದು ನನಗೆ ಕೆಲವೊಮ್ಮೆ ಗೊತ್ತಿರುವುದಿಲ್ಲ, ಆದರೆ, ನಾನು ಸದಾ ಸತ್ಯದ ಹುಡುಕಾಟದಲ್ಲಿ ಇರುತ್ತೇನೆ ಎನ್ನುವ ಆ್ಯನೀ ಅವರಿಗೆ ನೊಬೆಲ್‍ ಪ್ರಶಸ್ತಿ ಸಂದಿರುವುದು ಒಂದು ಕಾಲಘಟ್ಟದ ಸಾಮುದಾಯಿಕ ನೆನಪುಗಳನ್ನು ಮತ್ತು ಸತ್ಯಗಳನ್ನು ಒಟ್ಟಿಗೇ ತೆರೆದಿಡುವ ಪ್ರಾಮಾಣಿಕತೆಗೆ ಸಂದ ಮನ್ನಣೆಯೂ ಹೌದು.

2000ನೇ ಇಸ್ವಿಯಲ್ಲಿ ನಿವೃತ್ತರಾದ ನಂತರ ಬರವಣಿಗೆಯಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡ ಆ್ಯನೀ 2008ರಲ್ಲಿ ‘ದಿ ಇಯರ್ಸ್’ ಕೃತಿಯನ್ನು ಪ್ರಕಟಿಸಿದರು. ಸುಮಾರು ಆರು ದಶಕಗಳ ಸಾಮೂಹಿಕ ಇತಿಹಾಸ ಹಾಗೂ ಖಾಸಗಿ ಬದುಕಿನ ವಿವರ ಒಂದಕ್ಕೊಂದು ಹೆಣೆದುಕೊಂಡಿದ್ದು, ತನ್ನ ವಸ್ತು ಹಾಗೂ ಹೊಸಬಗೆಯ ನಿರೂಪಣಾ ಸ್ವರೂಪದಿಂದಾಗಿ ಇದು ಅವರ ಮೇರು ಕೃತಿಯೆಂದೇ ಪರಿಗಣಿತವಾಗಿದೆ.

ಈ ಕೃತಿಯ ಭಾವತೀವ್ರತೆಯನ್ನು ತೋರಿಸುವ ಆಯ್ದಭಾಗದ ಅನುವಾದ ಇಲ್ಲಿದೆ:

***

ಯುದ್ಧ ಮತ್ತು ಹಸಿವೆ ಬಿಟ್ಟು ಇನ್ನೇನೂ ಇರಲಿಲ್ಲ

ಎಲ್ಲ ಚಿತ್ರಗಳೂ ಮರೆಯಾಗುತ್ತವೆ.
ಯುದ್ಧಾನಂತರ ಇವಿತೊ ಪಟ್ಟಣದ ಭಗ್ನಾವಶೇಷಗಳ ಅಂಚಿನಲ್ಲಿದ್ದ ಕಾಫಿ ಗೂಡಂಗಡಿಯ ಹಿಂದೆ ಹಾಡುಹಗಲೇ ಕುಕ್ಕುರುಗಾಲಿನಲ್ಲಿ ಕೂತು ಉಚ್ಚೆ ಹೊಯ್ದು, ಎದ್ದು ನಿಂತು, ಲಂಗವನ್ನು ಮೇಲೆತ್ತಿ ಒಳ ಉಡುಪನ್ನು ಮೇಲೆಳೆದುಕೊಂಡು, ನಂತರ ಗೂಡಂಗಡಿಗೆ ಮರಳಿದ ಹೆಂಗಸಿನ ಚಿತ್ರ; ದಿ ಲಾಂಗ್ ಆಬ್ಸೆನ್ಸ್ ಸಿನಿಮಾದಲ್ಲಿ ಜಾರ್ಜಸ್ ವಿಲ್ಸನ್ ಜೊತೆಗೆ ನರ್ತಿಸುತ್ತಿದ್ದ ಅಲೀಡ ವ್ಯಾಲಿಯ ಕಣ್ಣೀರು ತುಂಬಿದ ಮುಖ; 1990ರ ಬೇಸಿಗೆಯಲ್ಲಿ ಪಜುವ ನಗರದ ಪಾದಚಾರಿ ಹಾದಿಯಲ್ಲಿ ನಡೆದುಹೋದ ಮನುಷ್ಯನ ಚಹರೆ, ಭುಜದ ಬಳಿ ಕಟ್ಟಿದ್ದ ಅವನ ಕೈಗಳು ತಟ್ಟನೆ ಮೂವತ್ತು ವರ್ಷಗಳ ಹಿಂದೆ ಬಸುರಿ ಹೆಂಗಸಿಗೆ ಹೊಟ್ಟೆ ತೊಳೆಸುವುದನ್ನು ತಡೆಯಲು ಬರೆದುಕೊಟ್ಟಿದ್ದ ಥ್ಯಾಲಿಡೊಮೈಡ್‍ ಗುಳಿಗೆಯನ್ನು ನೆನಪಿಸುವಂತೆ ಇದ್ದವು.

ಹೊರಾಂಗಣ ವೇದಿಕೆಯಲ್ಲಿ, ಸುತ್ತಲೂ ನಿಂತ ಗಂಡಸರು ಬೆಳ್ಳಿಯ ಈಟಿಗಳಿಂದ ಮುಚ್ಚಿದ ಪೆಟ್ಟಿಗೆಯನ್ನು ಹೊರಗಿನಿಂದ ಚುಚ್ಚುತ್ತಿರುವಾಗ ಜೀವಂತವಾಗಿ ಹೊರಬರುವ ಹೆಂಗಸಿನ ಚಹರೆ; ಕ್ಯಾಂಪ್‍ಗಳಿಂದ ಹೊರದೂಡುವ ಮೊದಲು ಅಧಿಕಾರಿಗಳು ತೆಗೆದ ನೂರಾರು ಭಯಬೀತ ಮುಖಗಳ ಫೋಟೊ... ನಿದ್ರಿಸುವ ತನಕ ಉದ್ದಕ್ಕೂ ನಮ್ಮನ್ನು ಹಿಂಬಾಲಿಸುವ, ನೈಜ ಅಥವಾ ಕಾಲ್ಪನಿಕ ಚಿತ್ರಗಳು. ತಮಗಷ್ಟೇ ಸೇರಿದ ಬೆಳಕಿನಲ್ಲಿ ಅದ್ದಿತೆಗೆದ ಕ್ಷಣವೊಂದರ ಚಿತ್ರಗಳು.

ಏಕಕಾಲಕ್ಕೆ ಈ ಎಲ್ಲ ಚಿತ್ರಗಳೂ ಕಣ್ಮರೆಯಾಗುತ್ತವೆ.

ಅರೆಶತಮಾನದ ಹಿಂದೆ ಸತ್ತುಹೋದ ಅಜ್ಜ ಅಜ್ಜಿಯರ ಮತ್ತು ಈಗ ಸತ್ತಿರುವ ಅಪ್ಪ ಅಮ್ಮನ ಹಣೆನೆರಿಗೆಯ ಹಿಂದೆ ಅಡಗಿದ ಲಕ್ಷಾಂತರ ಚಿತ್ರಗಳಂತೆ. ಆ ಚಿತ್ರಗಳಲ್ಲಿ, ನಾವು ಹುಟ್ಟುವ ಮೊದಲೇ ತೀರಿಹೋದವರ ನಡುವೆ ಚಿಕ್ಕ ಹುಡುಗಿಯರಂತೆ ನಾವು ಕಾಣಿಸಿಕೊಳ್ಳುತ್ತೇವೆ; ನಮ್ಮದೇ ನೆನಪುಗಳಲ್ಲಿ ನಮ್ಮ ತಂದೆತಾಯಿಯರು, ಸಹಪಾಠಿಗಳ ನೆನಪುಗಳ ನಂತರ ನಮ್ಮ ಚಿಕ್ಕ ಮಕ್ಕಳು ಇರುವಂತೆ. ಮತ್ತು ಒಂದು ದಿನ ನಾವೆಲ್ಲರೂ ನಮ್ಮ ಮಕ್ಕಳ ನೆನಪುಗಳಲ್ಲಿ ಅವರ ಮೊಮ್ಮಕ್ಕಳು ಹಾಗೂ ಇನ್ನೂ ಹುಟ್ಟೇ ಇರದ ಜನರ ನಡುವೆ ಕಾಣಿಸಿಕೊಳ್ಳುತ್ತೇವೆ. ಲೈಂಗಿಕ ಕಾಮನೆಯಂತೆ ನೆನಪು ಎಂದೂ ನಿಲ್ಲುವುದಿಲ್ಲ. ಅದು ಸತ್ತಿರುವುದನ್ನು ಜೀವಂತವಿರುವುದರೊಂದಿಗೆ, ವಾಸ್ತವವನ್ನು ಕಾಲ್ಪನಿಕ ಸ್ಥಿತಿಯೊಂದಿಗೆ, ಕನಸುಗಳನ್ನು ಇತಿಹಾಸದೊಂದಿಗೆ ಜೊತೆಯಾಗಿಸುತ್ತಲೇ ಇರುತ್ತದೆ.

ಸಾವಿರಾರು ಪದಗಳು ತಟ್ಟನೆ ಅಳಿಸಿಹೋಗುತ್ತವೆ.

ವಸ್ತುಗಳು, ಮುಖಗಳು, ಕ್ರಿಯೆಗಳು, ಭಾವನೆಗಳನ್ನು ಹೆಸರಿಸಲು ಬಳಸುವ, ವಿಶ್ವವನ್ನು ಕ್ರಮಬದ್ಧವಾಗಿಡುವ, ಹೃದಯ ಬಡಿಯುವಂತೆ ಮಾಡುವ ಪದಗಳು ಅವು.

ಘೋಷಣೆಗಳು, ಸಾರ್ವಜನಿಕ ಶೌಚಾಲಯಗಳ ಮೇಲೆ, ರಸ್ತೆ ಬದಿ ಗೋಡೆಯ ಮೇಲೆ ಗೀರಿದ ಚಿತ್ರಗಳು, ಕವನಗಳು, ಕೊಳಕು ಕಥೆಗಳು, ಶೀರ್ಷಿಕೆಗಳು; ನಾವು ಹದಿಹರೆಯಲ್ಲಿದ್ದಾಗ ನೋಟ್‍ಪುಸ್ತಕಗಳಲ್ಲಿ ಕಾಪಿ ಮಾಡಿದ ವ್ಯಾಕರಣ ಪುಸ್ತಕದ ಉದಾಹರಣೆಗಳು, ಉಲ್ಲೇಖಗಳು, ಅವಮಾನಗಳು, ಹಾಡುಗಳು, ವಾಕ್ಯಗಳು; ಹಿಂದೆ ಮುಂದೆ ಯೋಚಿಸದೇ ಬೇರೆಯವರು ಬಳಸುವ, ನಾವೆಂದಾದರೂ ಹಾಗೆ ಬಳಸಲು ಸಾಧ್ಯವೇ ಎಂದು ನಾವು ಅನುಮಾನಿಸುವ ಪದಗುಚ್ಛಗಳು; ಮರೆತೇಬಿಟ್ಟ ಭಯಾನಕ ವಾಕ್ಯಗಳು; ಹಾಸಿಗೆ ಯಲ್ಲಿರುವ ಗಂಡಸರ ಪದಗಳು, ‘ನಾನು ನಿನ್ನ ವಸ್ತು, ನಿನ್ನಷ್ಟದಂತೆ ಮಾಡು’; 2001ರ ಸೆಪ್ಟೆಂಬರ್ 11ರಂದು ನೀನೇನು ಮಾಡುತ್ತಿದ್ದೆ...

ಈ ಎಲ್ಲ ಪದಗಳೂ ಒಂದೇ ಸೆಕೆಂಡಿನಲ್ಲಿ ಅಳಿಸಿಹೋಗುತ್ತವೆ.

ತೊಟ್ಟಿಲು ಹಾಗೂ ಮರಣಶಯ್ಯೆಯ ನಡುವೆ ಗುಡ್ಡೆಹಾಕಿದ ಪದಗಳ ನಿಘಂಟನ್ನು ತೆಗೆದುಹಾಕಲಾಗಿದೆ. ಅಲ್ಲಿರುವುದು ಬರಿಯ ಮೌನ, ಅದನ್ನು ಹೇಳಲೂ ಪದಗಳಿಲ್ಲ. ತೆರೆದ ಬಾಯಿಯಿಂದ ಯಾವುದೇ ಪದ ಹೊರಬರುತ್ತಿಲ್ಲ. ವಿಶ್ವವನ್ನು ಪದಗಳೊಳಗೆ ಇಡುವುದನ್ನು ಭಾಷೆಯು ಮುಂದುವರಿಸುವುದು. ರಜಾದಿನದಂದು ಮೇಜಿನ ಸುತ್ತ ನಡೆಯುವ ಸಂಭಾಷಣೆಗಳಲ್ಲಿ, ದೂರದ ತಲೆಮಾರಿನ ಅಗಾಧ ಅನಾಮಧೇಯತೆಯೊಳಗೆ ಮರೆಯಾಗುವವರೆಗೂ, ನಾವು ಚಹರೆಯಿಲ್ಲದ ಬರಿಯ ಮೊದಲ ಹೆಸರಾಗಿ ಉಳಿಯುತ್ತೇವೆ.

ಯುದ್ಧಾನಂತರ ರಜೆಯ ಮಧ್ಯಾಹ್ನಗಳಲ್ಲಿ, ನಿಧಾನವಾಗಿ ಉಣ್ಣುವಾಗ ಅದೆಲ್ಲಿಂದಲೋ ಕಾಣಿಸಿಕೊಂಡು, ಅದು ರೂಪು ತಳೆಯಿತು, ತಂದೆತಾಯಿಯರು ದಿಟ್ಟಿಸಿ ನೋಡುತ್ತ, ನಾವು ಕೇಳಿದ್ದಕ್ಕೆ ಅವರು ಉತ್ತರಿಸಲು ಮರೆತಾಗ, ಆ ಸಮಯ ಅದಾಗಲೇ ಶುರುವಾಗಿತ್ತು, ಅದು ನಾವು ಇಲ್ಲದ ಸಮಯ, ನಾವೆಂದೂ ಇರಲಾಗದ ನಮಗಿಂತ ಮುಂಚಿನ ಸಮಯ. ಅತಿಥಿಗಳ ಧ್ವನಿಗಳು ಒಂದಾಗಿ ಹೊರಹೊಮ್ಮಿ ಸಾಮೂಹಿಕ ಘಟನೆಗಳ ಅಗಾಧ ಕಥಾನಕವನ್ನು ರಚಿಸಿತು, ಕೊನೆಗೆ ನಾವೂ ಅದನ್ನು ಕಂಡಿದ್ದೇವೆ ಎಂದು ನಂಬುವಂತಾಯಿತು. 1942ರ ಚಳಿಗಾಲ, ಮೂಳೆ ಕೊರೆಯುವ ತಂಪು, ಹಸಿವು ಹಾಗೂ ಗೆಡ್ಡೆಗೆಣಸು, ರೇಷನ್ ಮತ್ತು ಹೊಗೆಸೊಪ್ಪಿನ ವೋಚರ್‌ಗಳು, ಗುಂಡಿನ ದಾಳಿಗಳ ಕುರಿತು ದಣಿವಿಲ್ಲದಂತೆ ಅವರು ಮಾತನಾಡಿದರು.

ಉತ್ತರ ಧ್ರುವಫ್ರಭೆಯು ಯುದ್ಧದ ಮುನ್ಸೂಚನೆಯನ್ನು ಸಾರಿದ್ದು; ದೊಂಬಿಯ ಸಮಯದಲ್ಲಿ ರಸ್ತೆಯಲ್ಲಿದ್ದ ಸೈಕಲ್ಲುಗಳು, ಗಾಡಿಗಳು, ಲೂಟಿಯಾದ ಅಂಗಡಿಗಳು; ಭಗ್ನಾವಶೇಷಗಳಲ್ಲಿ ತಮ್ಮ ಫೋಟೊ ಹಾಗೂ ಹಣವನ್ನು ಹುಡುಕುತ್ತಿರುವ ಸಂತ್ರಸ್ತರು; ಜರ್ಮನ್ನರು ಬಂದಿದ್ದು - ಎಲ್ಲಿಂದ ಯಾವ ನಗರಕ್ಕೆ ಅವರು ಬಂದಿಳಿದರು ಎಂಬುದನ್ನು ಮೇಜಿನ ಮುಂದೆ ಕೂತ ಪ್ರತಿ ವ್ಯಕ್ತಿಯೂ ಸರಿಯಾಗಿ ಹೇಳಬಲ್ಲವರಾಗಿದ್ದರು - ಇಂಗ್ಲಿಷರು ಸದಾ ವಿನಯಶೀಲರು, ಅಮೆರಿಕನ್ನರು ದುಡುಕಿನ ಮಂದಿ; ಪ್ರಾಪಗಾಂಡ; ಹಳ್ಳಿಯ ಹೆಂಗಸರು ಜರ್ಮನ್ನರೇ ತುಂಬಿದ್ದ ರೈಲಿನ ಬೋಗಿಯೊಂದರ ಕಿಟಕಿಯನ್ನು ಮುರಿದು, ಜೋರುಧ್ವನಿಯಲ್ಲಿ ಸಾರಿದರು, ‘ನಮಗೆ ಇದನ್ನು ಹೇಳಲು ಅಸಾಧ್ಯವಾದರೆ, ಅವರಿಗೆ ಇದರ ವಾಸನೆ ಬಡಿಯುವಂತೆ ಮಾಡುತ್ತೇವೆ’.

ಅದು ಹಿಂಸೆ, ವಿನಾಶ ಮತ್ತು ಸಾವು ನೋವುಗಳು ತುಂಬಿದ ಕಥೆ.

ನಡುನಡುವೆ ಸುಳ್ಳು ಹೆಣೆದು, ‘ಮತ್ತೆಂದೂ ಇಂಥದು ನಡೆಯಬಾರದು’ ಎಂಬ ಸ್ಫೂರ್ತಿದಾಯಕ, ಗಂಭೀರ ಮಾತಿನೊಂದಿಗೆ ಉಲ್ಲಾಸದಿಂದ ನಿರೂಪಿಸಿದ ಕಥಾನಕ. ಆದರೆ, ಅವರು ತಾವು ನೋಡಿದ್ದರ ಕುರಿತು ಮತ್ತು ಕುಡಿಯುವಾಗ, ತಿನ್ನುವಾಗ ಪುನಃ-ಅನುಭವಿಸಬಹುದಾದ ಘಟನೆಗಳ ಬಗ್ಗೆ ಮಾತ್ರವೇ ಮಾತನಾಡಿದರು. ಅವರಿಗೆ ಚೆನ್ನಾಗಿ ಗೊತ್ತಿದ್ದ, ಆದರೆ ಕಣ್ಣಾರೆ ಕಾಣದಿದ್ದ ಸಂಗತಿಗಳ ಕುರಿತು ಮಾತನಾಡುವ ಪ್ರತಿಭೆ ಹಾಗೂ ಗಾಢನಂಬಿಕೆ ಅವರಲ್ಲಿ ಇರಲಿಲ್ಲ. ಹೀಗಾಗಿ ಆಶ್‍ವಿಟ್ಜ್ ಕ್ಯಾಂಪಿಗೆ ರೈಲು ಹತ್ತಿದ ಯಹೂದಿ ಮಕ್ಕಳಾಗಲೀ ಅಥವಾ ವಾರ್ಸಾ ಘೆಟ್ಟೋದಿಂದ ಪ್ರತಿ ಬೆಳಿಗ್ಗೆ ಸಂಗ್ರಹಿಸುತ್ತಿದ್ದ ಹಸಿವೆಯಿಂದ ಸತ್ತವರ ಶವಗಳಾಗಲೀ ಅಥವಾ ಹಿರೋಶಿಮಾದ 10,000 ಡಿಗ್ರಿ ಉಷ್ಣತೆಯಲ್ಲಿ ಬೆಂದವರಾಗಲೀ ಆ ಮಾತುಕತೆಯಲ್ಲಿ ಇರುತ್ತಿರಲಿಲ್ಲ.

ಕ್ರಿಮಿಯಾದ ಯುದ್ಧ, 1870ರಲ್ಲಿ ಜರ್ಮನ್ನರು ಪ್ಯಾರಿಸ್ ವಶಪಡಿಸಿಕೊಂಡಿದ್ದು, ಆಗ ಪ್ಯಾರಿಸ್ಸಿಗರು ಇಲಿಯನ್ನು ತಿಂದು ಬದುಕುಳಿದಿದ್ದು, ಹೀಗೆ ಅವರು ತಾವು ಹುಟ್ಟುವುದಕ್ಕಿಂತ ಮೊದಲಿನ ಕಾಲಘಟ್ಟಕ್ಕೂ ಸಾಗಿದರು.

ಅವರು ಮಾತನಾಡಿದ ಆ ಮೊದಲಿನ ಕಾಲದಲ್ಲಿ ಯುದ್ಧ ಮತ್ತು ಹಸಿವೆ ಬಿಟ್ಟು ಇನ್ನೇನೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT