ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮ ಶತಾಬ್ದಿ: ಸೂಲಗಿತ್ತಿ ನರಸಮ್ಮ ನೂರೊಂದು ನೆನಪು...

Last Updated 19 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಜನಪದ ವೈದ್ಯಕೀಯ ಪದ್ಧತಿಯ ರಾಯಭಾರಿಯಂತಿದ್ದವರು ಸೂಲಗಿತ್ತಿ ನರಸಮ್ಮ. ಸುಮಾರು 70 ವರ್ಷಗಳ ಕಾಲ ಸಾಂಪ್ರದಾಯಿಕ ಪದ್ಧತಿ ಮೂಲಕ 15,000ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಅವರ ಸಾಧನೆಯೇನು ಸುಮ್ಮನೆಯೇ ಮತ್ತೆ?

ನರಸಮ್ಮನವರು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ತಿಮ್ಮನಾಯಕಪೇಟೆ ಗ್ರಾಮದವರು. ಕದಿರಪ್ಪ ಮತ್ತು ಬಾವಮ್ಮನವರ ಏಳು ಮಕ್ಕಳಲ್ಲಿ ಎರಡನೆಯವರು. ನರಸಮ್ಮ ಹುಟ್ಟುವಾಗ ಅವರ ತಾಯಿಗೆ ಹೆರಿಗೆ ಮಾಡಿಸಿದ್ದು, ಅವರ ಅಜ್ಜಿ ಮರಿಗೆಮ್ಮ. ಮುಂದೆ ಅಜ್ಜಿ ಮರಿಗೆಮ್ಮನವರ ಪರಿಪಾಲನೆಯಲ್ಲಿಯೇ ಬೆಳೆದು, ಅವರಿಂದಲೇ ಹೆರಿಗೆ ಮಾಡಿಸುವ ಕಲೆಯನ್ನು ಕರಗತ ಮಾಡಿಕೊಂಡರು ನರಸಮ್ಮ.

ಹನ್ನೆರಡನೇ ವರ್ಷಕ್ಕೆ ನರಸಮ್ಮನವರಿಗೆ ಕೃಷ್ಣಾಪುರದ ಆಂಜಿನಪ್ಪ ಅವರ ಜೊತೆಗೆ ವಿವಾಹವಾಯಿತು. ಮುಂದೆ 12 ಮಕ್ಕಳ ತಾಯಿಯಾದರು. 22ನೇ ವಯಸ್ಸಿನಿಂದ ಹೆರಿಗೆ ಮಾಡಿಸುವ ಕಾಯಕದಲ್ಲಿ ತೊಡಗಿಸಿಕೊಂಡರು. ಇದಲ್ಲದೆ ನಾಟಿ ಔಷಧಿಗಳನ್ನೂ ಅವರು ನೀಡುತ್ತಿದ್ದರು. ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ದೊರೆತರೂ ಆ ಯಾವ ಪ್ರಶಸ್ತಿಗಳ ಅರಿವೂ ಅವರಿಗೆ ಇರಲಿಲ್ಲ. ಅವರಿಗೆ ಗೊತ್ತಿದ್ದುದು ಎರಡೇ. ಒಂದು ತಾಯಿಗೆ ಮರುಹುಟ್ಟು ಕೊಡುವುದು, ಎರಡನೆಯದು ಮಗುವಿಗೆ ಹೊಸ ಹುಟ್ಟು ಕೊಡಿಸುವುದು.

ನರಸಮ್ಮನವರ ಜನಪದ ವೈದ್ಯವೃತ್ತಿಯು ಸಂಪಾದನೆಯ ಹಿನ್ನೆಲೆ ಉಳ್ಳದ್ದಾಗಿರಲಿಲ್ಲ. ಅದು ತಮ್ಮ ಪೂರ್ವಜರ ಕಸುಬನ್ನು ಕೌಟುಂಬಿಕವಾಗಿ ಮುಂದುವರಿಸಿಕೊಂಡು ಬಂದಂತಹ ಬಂಧುತ್ವ ಬೆಸೆಯುವ ಕಾಯಕವಾಗಿತ್ತು. ಅಷ್ಟೊಂದು ಹೆರಿಗೆಗಳನ್ನು ಮಾಡಿಸಿದ್ದರೂ ಪ್ರತಿಫಲವಾಗಿ ಯಾವುದೇ ಹಣಕಾಸಿನ ಬಯಕೆಯನ್ನು ಉಳ್ಳವರಾಗಿರಲಿಲ್ಲ. ಅವರ ಕೆಲಸಕ್ಕೆ ಪ್ರತಿಯಾಗಿ ರಾಗಿ, ಭತ್ತ ಮತ್ತು ಇತರೆ ಧಾನ್ಯಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಹೆರಿಗೆಯ ಸಮಯದಲ್ಲಿ ಆ ಮನೆಯವರೇ ಅಜ್ಜಿಯಲ್ಲಿಗೆ ಬಂದು ಕರೆದುಕೊಂಡು ಹೋಗುತ್ತಿದ್ದರು. ನರ್ಸ್ ವೃತ್ತಿಯನ್ನು ಕೊಡುವುದಾಗಿ ಸರ್ಕಾರ ಮುಂದೆ ಬಂದರೂ ನಿರಾಕರಿಸಿದವರು.

ಹೆರಿಗೆ ಮಾಡಿಸುವುದೆಂದರೆ ಎರಡು ಜೀವ ಉಳಿಸುವ ಕಾಯಕ ಮಾತ್ರವೆಂದು ಅವರು ನಂಬಿದ್ದರು. ಆ ಭಾಗದಲ್ಲಿ ಪ್ರತಿವರ್ಷದ ಮೊದಲ ಕುಯಿಲಿನ ಬೆಳೆಯ ಒಂದು ಭಾಗವನ್ನು ಸೂಲಗಿತ್ತಿ ನರಸಮ್ಮನ ಹೆಸರಿನಲ್ಲಿ ಮೀಸಲಿಡುವುದು ಈಗಲೂ ರೂಢಿ.

ಕೌಟುಂಬಿಕವಾಗಿ ನರಸಮ್ಮನವರ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಒಮ್ಮೆ ನರಸಮ್ಮ ತಮ್ಮ ಪತಿಯನ್ನು ಕೇಳಿದ್ದರು: ‘ಏನ್ರೀ, ಎಲ್ಲಾರ ಮನೆಗಳು ಮುಂದೆ ಮುಂದೆ ಹೋಗುತ್ತಿವೆ. ನಮ್ಮ ಮನೆ ಹಾಗೇ ಇದೆ’ ಎಂದು. ಮನೆಯ ಹಿಂದೆ ನರಸಮ್ಮನವರನ್ನು ಕರೆದೊಯ್ದು ಅವರ ಪತಿ ಮನೆಯ ಗೋಡೆಯನ್ನು ಹಿಡಿದು ತಳ್ಳು ಎಂದರಂತೆ. ಏನೂ ಗೊತ್ತಾಗದ ನರಸಮ್ಮ, ತಳ್ಳಿ ತಳ್ಳಿ ಸಾಕಾಗಿ ಯಾಕೆ ಹೀಗೆ ಮಾಡಿಸ್ತಿದಿರ’ ಎಂದು ಕೇಳಿದರಂತೆ. ‘ನೀನೇ ಅಲ್ವಾ, ಎಲ್ಲಾರ ಮನೆಗಳೂ ಮುಂದೆ ಹೋಗುತ್ತಿವೆ. ನಮ್ಮ ಮನೆ ಮುಂದೆ ಹೋಗುತ್ತಿಲ್ಲ ಅಂದೆಯಲ್ಲವೇ’ ಎಂದು ಅವರ ಪತಿ ತಮಾಷೆ ಮಾಡಿದ್ದರಂತೆ.

ಗಿರೀಶ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯನೇರಿ’ ಸಿನಿಮಾದಲ್ಲಿ ನರಸಮ್ಮ ಮತ್ತು ಅವರ ಕೌಟುಂಬಿಕ ವಾಸ್ತವಾಂಶಕ್ಕೂ ತಾಳೆ ನೋಡಬಹುದಾದ ಸಮಾನನೋಟ ಕಂಡುಬರುತ್ತದೆ. ಅಲ್ಲಿ ಬರುವ ಎರಡು ಬಡ ಜೀವಗಳ ಬಟ್ಟೆಗಳು ಹರಿದು, ಇಡೀ ಪ್ರಪಂಚವೇ ಕಾಣುತ್ತಿದ್ದರೂ ಅವರ ಬದುಕಿನ ಬಗ್ಗೆ ಅವರಿಗೆ ಬೇಸರವಾಗಲಿ, ಅಸಡ್ಡೆಯಾಗಲಿ ಇರುವುದಿಲ್ಲ. ಹೊಟ್ಟೆ ಹಸಿದಿದ್ದರೂ ಸಂತೋಷಕ್ಕೆ ನೆಮ್ಮದಿಗೆ ಕೊರಗು ಇರಲಿಲ್ಲ. ಸಾಮಾಜಿಕವಾಗಿ ಅಜ್ಜಿಗೆ ಯಾವತ್ತೂ ಜಾತಿ ವ್ಯವಸ್ಥೆ ಕಾಡಿಲ್ಲ. ಜಾತಿ ವ್ಯವಸ್ಥೆ ಗಟ್ಟಿಯಿದ್ದ ಕಾಲಮಾನದಲ್ಲೂ ಜಾತಿಯನ್ನು ಮೀರಿ ತಮ್ಮ ಕಾಯಕವನ್ನು ಮಾಡಿದ್ದಾರೆ. ಅದೇ ಊರಿನ ಬ್ರಾಹ್ಮಣರಾದ ಕೋದಂಡ ರಾಮಸ್ವಾಮಿಯವರ ಮಗಳ ಹೆರಿಗೆ ಮಾಡಲು ಎಲ್ಲರೂ ಪ್ರಯತ್ನಿಸಿ ಸಾಧ್ಯವಾಗದೆ ಇದ್ದಾಗ ಕೊನೆಗೆ ನರಸಮ್ಮನವರ ಸಹಾಯವನ್ನು ಅವರ ಕುಟುಂಬ ಪಡೆದಿತ್ತು. ಹಾಗೆ ಬುಡಬುಡಿಕೆ ಜನಾಂಗದವರಿಗೆ ಹೆರಿಗೆ ಮಾಡಿಸಿ ಅವರಿಂದ ನಾಟಿ ಔಷಧಿಗಳ ಮಾಹಿತಿಯನ್ನು ಈ ಅಜ್ಜಿ ಪಡೆದುಕೊಂಡಿದ್ದಿದೆ.

ಅನಕ್ಷರಸ್ಥೆಯಾಗಿದ್ದ ಸೂಲಗಿತ್ತಿ ನರಸಮ್ಮ ತಾವು ಹೊಂದಿದ್ದ ವಿದ್ಯೆಯಿಂದ ಒಂದು ಯೂನಿವರ್ಸಿಟಿಯೇ ಆಗಿದ್ದರು. ಆಸ್ಪತ್ರೆಯಲ್ಲಿ ಹಲವಾರು ವೈದ್ಯರ ಕೈಯಲ್ಲಿ ಆಗದೇ ಇದ್ದ ಹೆರಿಗೆಗಳನ್ನ ಸುಲಭವಾಗಿ ಮಾಡಿಸುತ್ತಿದ್ದರು. ಅವರ ಕೈಗಳಲ್ಲಿ ಅಂತಹದೊಂದು ಶಕ್ತಿ, ಕಲೆ, ಕೌಶಲ ಇತ್ತು. ಅವರ ಜನ್ಮ ಶತಮಾನೋತ್ಸವವನ್ನು ಇದೇ 25ರಂದು ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT