ಗುರುವಾರ , ಜೂನ್ 4, 2020
27 °C
ರುದ್ರಪ್ಪ ತಳವಾರರ ಕಲಾಪ್ರಪಂಚ

ಕುಂಚದಲ್ಲಿ ಅರಳಿದ ಸಾಮಾಜಿಕ ತಲ್ಲಣಗಳು

ರಾಘವೇಂದ್ರ ಹಾರಣಗೇರಾ Updated:

ಅಕ್ಷರ ಗಾತ್ರ : | |

Prajavani

ಕಲಾ ಶಿಕ್ಷಕರೊಬ್ಬರು ‘ಪ್ರಯೋಗ‘ಗಳ ಮೂಲಕ ಚಿತ್ರಗಳನ್ನು ರಚಿಸುತ್ತಾ, ಸಂವೇದನಾಶೀಲ ಚಿತ್ರಕಾರರಾಗಿ ರೂಪುಗೊಂಡಿದ್ದಾರೆ. ಸಮಕಾಲೀನ ವಿಷಯಗಳನ್ನು ಚಿತ್ರಗಳ ಮೂಲಕವೇ ಪ್ರಸ್ತುತಪಡಿಸುತ್ತಾರೆ.

ಕಲ್ಬುರ್ಗಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕಾಗಿ ‘ಸಾಮಾಜಿಕ ಅಂತರ’ ಕಾಪಾಡಿಕೊಳ್ಳುವಂತೆ ಜನಜಾಗೃತಿ ಮೂಡಿಸಲು ಆರಂಭಿಸಿತು. ಇದೇ ವೇಳೆ ಯಾದಗಿರಿ ಜಿಲ್ಲೆ ಶಹಪೂರದ ಚಿತ್ರಕಲಾ ಶಿಕ್ಷಕ ರುದ್ರಪ್ಪ ಎಸ್. ತಳವಾರ, ‘ಲಾಕ್‌ಡೌನ್‌’ ರಜೆಯಲ್ಲಿ ಮನೆಯಲ್ಲೇ ಕುಳಿತು ಕೊರೊನಾ ಸೋಂಕು ಮತ್ತು ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತು ಅದ್ಭುತವಾದ ಕಲಾಕೃತಿಗಳನ್ನು ರಚಿಸುತ್ತಿದ್ದರು..!

ಜಲವರ್ಣ ಮಾಧ್ಯಮದಲ್ಲಿ ಅವರು ರಚಿಸಿದ ಕಲಾಕೃತಿಯಲ್ಲಿ ‘ಜನರು ಸಾಮಾಜಿಕ ಅಂತರ ಕಾಯ್ದುಕೊಂಡರೆ ಕರೋನಾ ತನ್ನನ್ನು ತಾನು ಸುಟ್ಟುಕೊಂಡು ನಾಶವಾಗುತ್ತದೆ’ ಎಂಬ ಸಂದೇಶವಿತ್ತು. 

ಶಹಾಪೂರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹದಿನೆಂಟು ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿರುವ ರುದ್ರಪ್ಪ ತಳವಾರ, ಸಮಾಜದಲ್ಲಿ ನಡೆಯುವ ಸಮಕಾಲೀನ ವಿಚಾರಗಳು, ವರ್ತಮಾನದ ತಲ್ಲಣಗಳನ್ನು ಚಿತ್ರಕಲೆಯ ಮೂಲಕ ಅಭಿವ್ಯಕ್ತಪಡಿಸುತ್ತಾರೆ. 

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಕರಡಕಲ್ಲು ಗ್ರಾಮದ ರುದ್ರಪ್ಪ ತಳವಾರ, ಬಾಲ್ಯದಿಂದಲೇ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶಾಲಾ ಹಂತಗಳಲ್ಲಿ ಸ್ವಯಂ ಪ್ರೇರಿತರಾಗಿ ಚಿತ್ರ ಬರೆಯುತ್ತಿದ್ದರು. ಪ್ರೌಢಶಾಲೆ– ಕಾಲೇಜು ಹಂತ ದಲ್ಲಿ ಕಲಾ ಶಿಕ್ಷಕರಿಂದ ಚಿತ್ರಕಲೆ ಕಲಿತರು. ಮುಂದೆ ಪಾಠ ಮಾಡುತ್ತಲೇ ಚಿತ್ರಕಲೆಯಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಾ ಬೆಳೆದರು.

ಮುಂದೆ, ಅಕ್ರಾಲಿಕ್‌ ಪೇಂಟಿಂಗ್, ಲ್ಯಾಂಡ್‌ಸ್ಕೇಪ್, ಪೋಸ್ಟರ್ ಮಾಧ್ಯಮ, ಜಲವರ್ಣ, ಸೃಜನಶೀಲ ಪೇಂಟಿಂಗ್ ಮಾಧ್ಯಮಗಳಲ್ಲಿ ಸಂಪ್ರದಾಯಿಕ ಮತ್ತು ನೈಜಶೈಲಿಯ ಚಿತ್ರಗಳ ರಚನೆ ಹಾಗೂ ಮಿಶ್ರ ಮಾಧ್ಯಮದಲ್ಲಿಯೂ ಪ್ರಯೋಗ ಮಾಡುತ್ತಿದ್ದಾರೆ. ತಮ್ಮ ಚಿತ್ರಕಲೆಯಲ್ಲಿ ಎಲ್ಲೂ ಢಾಳ ಹಾಗೂ ಪ್ರಖರ ಬಣ್ಣಗಳನ್ನು ಬಳಸುವುದಿಲ್ಲ. ಸರಳವಾದ ಕೃತಿಗಳನ್ನು ರಚಿಸುತ್ತಾರೆ. ಜನರಿಗೆ ಅರ್ಥವಾಗುವ ರೀತಿಯಲ್ಲಿ ಚಿತ್ರಗಳನ್ನು ಬಿಡಿಸುತ್ತಾರೆ. 

ವಿಮಾನ ದುರಂತ, ಹಡಗು ದುರಂತ, ನೆರೆ ಹಾವಳಿ ಸೇರಿದಂತೆ ದೇಶದಲ್ಲಿ ನಡೆದ ಪ್ರಮುಖ ವಿದ್ಯಮಾನಗಳನ್ನು ಅಕ್ರಿಲಿಕ್‌ ಮಾಧ್ಯಮದಲ್ಲಿ ಚಿತ್ರಿಸಿದ್ದಾರೆ. ಇವುಗಳನ್ನು ಕ್ರಿಯೇಟಿವ್ ಲ್ಯಾಂಡ್‍ಸ್ಕೇಪ್‍ನಲ್ಲಿ ರಚಿಸಿದ್ದಾರೆ. ಇವರ ಪ್ರತಿ ಚಿತ್ರದಲ್ಲೂ ಹೊಸತನವಿದೆ. 

ಬುದ್ಧ ಮತ್ತು ಬುದ್ಧನ ಕಾಲದ ಪರಿಕರಗಳು, ಐತಿಹಾಸಿಕ ತಾಣಗಳು, ದೇವಾಲಯಗಳು, ಸ್ತೂಪಗಳನ್ನು ಅಕ್ರಾಲಿಕ್ ಮಾಧ್ಯಮದಲ್ಲಿ ರಚಿಸಿದ್ದಾರೆ. ಈ ಕಲಾಕೃತಿಗಳನ್ನು ನಿಸರ್ಗದ ಭಾಗಗಳನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಕಲೆಗೆ ಹೊಸ ರೂಪವನ್ನು ನೀಡಲು ಪ್ರಯತ್ನಿಸಿದ್ದಾರೆ.  

‘ಕ್ರಿಯೇಟಿವ್ ಲ್ಯಾಂಡ್‍ಸ್ಕೇಪ್ ಕಲೆ ಇಂದು ಜಗತ್ತಿನಲ್ಲಿ ಬಹಳ ಮಹತ್ವ ಪಡೆದುಕೊಳ್ಳುತ್ತಿದೆ‘ ಎನ್ನುವ ರುದ್ರಪ್ಪ, ಸಮಾಜವನ್ನು ಕಾಡುವ ಅನೇಕ ಸಮಸ್ಯೆಗಳು, ತಲ್ಲಣಗಳು, ಬದುಕು, ಬದುಕಿನ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ ರುದ್ರಪ್ಪ. ಹೀಗಾಗಿ ಕಲಾಸಕ್ತರಿಗೆ ಈ ಲ್ಯಾಂಡ್‌ಸ್ಕೇಪ್ ಕಲೆ ಇಷ್ಟವಾಗುತ್ತದೆ ಎಂಬುದು ಅವರ ಅಭಿಪ್ರಾಯ.

‘ಕಲಾಕೃತಿ ಅಲಂಕಾರಿಕ ವಸ್ತುವಲ್ಲ. ಅದು ಒಬ್ಬ ಕಲಾವಿದನ ಸೃಜನಶೀಲತೆಯ ಅಭಿವ್ಯಕ್ತಿ. ಅದು ಭಾವ ಪ್ರಚೋದನೆಯಾಗಿರಬೇಕು’ ಎಂಬ ಖ್ಯಾತ ಚಿತ್ರಕಲಾವಿದ ಎಂ.ಟಿ. ಭೋಪಲೆಯವರ ಅಭಿಪ್ರಾಯದಂತೆ ತಳವಾರ ಅವರ ಚಿತ್ರಕಲಾಕೃತಿಗಳಲ್ಲಿ ಇಂತಹ ಸೂಕ್ಷ್ಮ ಭಾವಗಳನ್ನು ಕಾಣಬಹುದು. ಜಲವರ್ಣ, ಅಕ್ರಾಲಿಕ್ ಮಾಧ್ಯಮದ ಅನೇಕ ವರ್ಣಚಿತ್ರಗಳಲ್ಲಿ ತಳವಾರ ಅವರ ಸೂಕ್ಷ್ಮ ಸಂವೇದನೆ ಮತ್ತು ಕಲಾ ಪ್ರೌಢಿಮೆ ಅಭಿವ್ಯಕ್ತವಾಗಿದೆ.

ತಾವು ರಚಿಸಿದ ಚಿತ್ರಗಳನ್ನು ಕಲಬುರ್ಗಿಯ ರಾಜ್ಯ ಚಿತ್ರಕಲಾ ಶೈಕ್ಷಣಿಕ ಸಮ್ಮೇಳನ, ಹಾಸನದಲ್ಲಿ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ, ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ವರ್ಣ ಜಾಗೃತಿ ರಾಜ್ಯ ಚಿತ್ರಕಲಾವಿದರ ಬೃಹತ್ ಶಿಬಿರ, 8ನೇ ಶೈಕ್ಷಣಿಕ ಚಿತ್ರಕಲಾ ಸಮ್ಮೇಳನ ಮೈಸೂರು, ರಾಜ್ಯಮಟ್ಟದ ಚಿತ್ರಕಲಾ ಸಮ್ಮೇಳನ ಉಡುಪಿ... ಹೀಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಚಿತ್ರಕಲಾ ಪ್ರದರ್ಶನಗಳಲ್ಲಿ ಪ್ರದರ್ಶಿಸಿದ್ದಾರೆ.

ಇದೇ ಇತ್ತೀಚಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಕಲಬುರ್ಗಿಯ ಮಾತೋಶ್ರೀ ಗುರುಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸಮೂಹ ಕಲಾಪ್ರದರ್ಶನದಲ್ಲಿ ಹಾಗೂ ಕಲಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರುದ್ರಪ್ಪ ಅವರ ಸೃಜನಶೀಲ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಪುರಸ್ಕಾರ – ಪ್ರಶಸ್ತಿಗಳು

ರುದ್ರಪ್ಪ ಅವರ ಕಲಾ ಸಾಧನೆಗೆ ರಾಜ್ಯ ಕಲಾರತ್ನ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಮಾರ್ಗದರ್ಶಕ ಶಿಕ್ಷಕ ಪ್ರಶಸ್ತಿ, ಸಾಧನ ಶ್ರೀ ಪುರಸ್ಕಾರ , 2013ರಲ್ಲಿ ಗುಲ್ಬರ್ಗಾ ವಿ.ವಿ.ಯಿಂದ ಹೈದರಬಾದ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 2013ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ್ಮ ಶಿಕ್ಷಕ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಗುಲ್ಬರ್ಗಾ ಇವರಿಂದ ಉತ್ತಮ ಕಲಾಕೃತಿಗೆ ಪ್ರಶಸ್ತಿ, ರಾಜ್ಯ ಕಲಾಶಿಕ್ಷಕ ಶ್ರೀ ಪ್ರಶಸ್ತಿ ಇಲಕಲ್ ಪ್ರಶಸ್ತಿ ದೊರೆತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು