ಶುಕ್ರವಾರ, ಜೂನ್ 18, 2021
25 °C

ಮಗುವ ಕಾಡದಿರಲಿ ‘ಆ ಗುಮ್ಮ’

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

‘ಶ್‌ ಶ್‌.. ನಿಧಾನಕ್ಕೆ ಮಾತಾಡು.. ಈ ವಿಷ್ಯ ಯಾರಿಗೂ ಹೇಳ್ಬೇಡ.. ಇಷ್ಟಕ್ಕೇ ಬಿಟ್‌ಬಿಡು..’ ಬೆದರಿಸುವ ಕಂಗಳಲ್ಲೇ ಹೆತ್ತಮ್ಮ ಮಗಳಿಗೆ ಮೆಲ್ಲಗೆ ಉಸುರಿದ್ದಳು.

ಮನೆಗೆ ಆಗಾಗ ಬರುತ್ತಿದ್ದ ಪರಿಚಿತ ಬಂಧುವೊಬ್ಬ ತನ್ನ ಪುಟ್ಟ ದೇಹದ ಮೇಲೆ ಅಸಹ್ಯಕರವಾಗಿ ಕೈಯಾಡಿಸುತ್ತಿದ್ದ ಬಗ್ಗೆ ತಾಯಿ ಮುಂದೆ ಮನಬಿಚ್ಚಿ ಹೇಳಿಕೊಳ್ಳಬೇಕೆಂದಿದ್ದ ಆ ಪುಟ್ಟ ಹುಡುಗಿಯ ನೋವು, ತುಟಿ ಬಿಗಿಹಿಡಿದ ಬಿಕ್ಕಳಿಕೆಯಲ್ಲಿ ಹುದುಗಿಹೋಗಿತ್ತು.

ಮುಚ್ಚಿಟ್ಟರೆ ಅಪಾಯ!

ಜಗತ್ತಿನ ಪ್ರತಿ ಹೆಣ್ಣೂ ಒಮ್ಮೆಯಾದರೂ ತನ್ನ ಜೀವನದಲ್ಲಿ ಲೈಂಗಿಕ ದೌರ್ಜನ್ಯ ಎದುರಿಸಿಯೇ ಎದುರಿಸಿರುತ್ತಾಳೆ ಎಂಬ ಮಾತಿಗೆ ಪುಟ್ಟ ಹೆಣ್ಣುಮಕ್ಕಳಷ್ಟೇ ಮಾತ್ರವಲ್ಲ ಗಂಡುಮಕ್ಕಳೂ ಹೊರತಲ್ಲ. ಈ ರೀತಿ ದೌರ್ಜನ್ಯಕ್ಕೀಡಾಗುವ ಬಹುತೇಕರು ಪೋಷಕರೆದುರು ಇಲ್ಲವೇ ತಮ್ಮ ಆಪ್ತರೆದುರು ಇಂಥ ಸಂಗತಿಗಳನ್ನು ಹಂಚಿಕೊಳ್ಳುವ ಬದಲು ಮುಚ್ಚಿಟ್ಟುಕೊಳ್ಳುವುದೇ ಹೆಚ್ಚು. ಈ ರೀತಿ ಮುಚ್ಚಿಟ್ಟುಕೊಳ್ಳುವ ಸಂಗತಿಯ ಹಿಂದಿನ ಅಪಾಯವನ್ನು ಪಶ್ಚಿಮ ಬಂಗಾಳದ ಸಂಸದ ಡೆರೆಕ್ ಒಬ್ರಿಯಾನ್ ಸಂಸತ್ತಿನಲ್ಲೇ ಬಿಚ್ಚಿಟ್ಟಿದ್ದರು.

ಡೆರೆಕ್ ಕೂಡಾ ಬಾಲ್ಯದಲ್ಲಿ ಲೈಂಗಿಕ ಶೋಷಣೆಗೆ ಒಳಪಟ್ಟವರೇ. ಸಂಸತ್‌ನಲ್ಲಿ ‘ಪೋಕ್ಸೊ ಕಾಯ್ದೆ’ ಕುರಿತು ನಡೆದ ಚರ್ಚೆಯಲ್ಲಿ ಮುಕ್ತವಾಗಿ ಮಾತನಾಡಿದ್ದ 58 ವರ್ಷದ ಡೆರೆಕ್, ‘ಬಾಲ್ಯದಲ್ಲಿ ನನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಏಳೆಂಟು ವರ್ಷಗಳ ಕಾಲ ಪೋಷಕರಲ್ಲಿ ಹೇಳಿಕೊಂಡಿರಲಿಲ್ಲ. ಕೊನೆಗೂ ಪೋಷಕರ ಗಮನಕ್ಕೆ ತಂದು ನಿರಾಳವಾದೆ. ದೌರ್ಜನ್ಯವನ್ನು ಮುಚ್ಚಿಟ್ಟುಕೊಂಡಷ್ಟೂ ಯಾತನೆ ದುಪ್ಪಟ್ಟಾಗುತ್ತದೆ’ ಎಂದಿದ್ದರು.

ಭಯ ಬಿಡಿ

ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡುವುದೇ ತಪ್ಪು ಎಂದು ಭಾವಿಸಿರುವ ಭಾರತೀಯ ಸಮಾಜದಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳುವುದು ದೂರದ ಮಾತು. ಮುಖ್ಯವಾಗಿ ಪೋಷಕರು ಈ ಬಗ್ಗೆ ಮಕ್ಕಳೆದುರು ಮಾತನಾಡಲು ಸಂಕೋಚಪಡುತ್ತಿರುವುದೂ ಕಾರಣವಿರಬಹುದು. ಇಂಥ ಪರಿಸರದಲ್ಲಿ ಮಕ್ಕಳು ತಮ್ಮ ಮೇಲಾಗುವ ಲೈಂಗಿಕ ದೌರ್ಜನ್ಯದ ಬಗ್ಗೆ ಭಯ, ಅವಮಾನ ಇಲ್ಲವೇ ಹತ್ಯೆಯ ಭೀತಿ ಅಥವಾ ಪೋಷಕರ ಪ್ರೀತಿಯಿಂದ ವಂಚಿತರಾಗುವ ಭಯದಿಂದ ನೋವನ್ನು ಸಹಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ ಮನೋವೈದ್ಯರು.

‘ದೌರ್ಜನ್ಯಕ್ಕೀಡಾದ ಮಕ್ಕಳು ದೈಹಿಕವಾಗಷ್ಟೇ ಅಲ್ಲ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಏರುಪೇರು ಅನುಭವಿಸುತ್ತಾರೆ. ಕೆಲವರು ತೀವ್ರ ಖಿನ್ನತೆಗೊಳಗಾಗುತ್ತಾರೆ’ ಎನ್ನುತ್ತದೆ ಮಕ್ಕಳ ಮೇಲಿನ ದೌರ್ಜನ್ಯ ಕುರಿತ ವರದಿ. ಭಾರತದಲ್ಲಿ ಪ್ರತಿ ಮೂವರು ಮಕ್ಕಳಲ್ಲಿ ಇಬ್ಬರು ಲೈಂಗಿಕ ದೌರ್ಜನ್ಯ ಎದುರಿಸುವಂಥ ಕೆಟ್ಟ ವಾತಾವರಣವಿದೆ. ಅಪರಿಚಿತರಿಗಿಂತ ಪರಿಚಿತರಿಂದಲೇ ಇಂಥ ದೌರ್ಜನ್ಯಗಳು ನಡೆಯುತ್ತವೆ ಎನ್ನುವುದು ಮತ್ತಷ್ಟು ಕಳವಳಕಾರಿ ಸಂಗತಿ.

ವೈದ್ಯರು ಅಥವಾ ಪೋಷಕರು ಅನುಮೋದಿಸಿದ ಯಾವುದೇ ವ್ಯಕ್ತಿ ಆರೋಗ್ಯ ಅಥವಾ ನೈರ್ಮಲ್ಯಕ್ಕೆ ಸಂಬಂಧಿಸಿದ ಕಾರಣಗಳಿಗೆ ಮಕ್ಕಳ ಖಾಸಗಿ ಅಂಗಗಳನ್ನು ಪರೀಕ್ಷಿಸುವ ಅಗತ್ಯವನ್ನು ಮನದಟ್ಟು ಮಾಡಿ. ಅದರ ಹೊರತು ಅವರ ದೇಹದ ಖಾಸಗಿ ಭಾಗಗಳನ್ನು ಮಕ್ಕಳು ಬೇರೆಯವರಿಗೆ ತೋರಿಸಬೇಕಿಲ್ಲ. ಅಕಸ್ಮಾತ್ ಹಾಗೆ ತೋರಿಸುವಂತೆ ಅಥವಾ ಅಂಥ ಭಾಗಗಳ ಮೇಲೆ ಇತರರು ಸ್ಪರ್ಶಿಸಿದರೆ ತಕ್ಷಣವೇ ಪೋಷಕರಿಗೆ ತಿಳಿಸುವಂತೆ ಮಕ್ಕಳಿಗೆ ಬಾಲ್ಯದಲ್ಲೇ ತರಬೇತಿ ಕೊಡುವುದು ಅಗತ್ಯ. ಅಂತೆಯೇ ಬೇರೆಯವರ ದೇಹದ ಖಾಸಗಿ ಭಾಗಗಳನ್ನು ನೋಡುವುದೂ ಸರಿಯಲ್ಲ ಎಂಬ ತಿಳಿವಳಿಕೆ ನೀಡುವುದೂ ಅಷ್ಟೇ ಮುಖ್ಯ.

ಗುಡ್‌ ಟಚ್‌... ಬ್ಯಾಡ್‌ ಟಚ್‌...

ಮಕ್ಕಳಿಗೆ ತಾವು ಲೈಂಗಿಕ ದೌರ್ಜನ್ಯಕ್ಕೀಡಾಗುತ್ತಿದ್ದೇವೆ ಎನ್ನುವ ಅರಿವು ಇರುವುದಿಲ್ಲ. ‘ಇದೊಂದು ಆಟ’ ಎಂತಲೋ ಅಥವಾ ಚಾಕೊಲೇಟ್, ಉಡುಗೊರೆ, ಗೊಂಬೆ ಇತ್ಯಾದಿಗಳ ಆಮಿಷವೊಡ್ಡಿಯೋ ಮಕ್ಕಳನ್ನು ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಬಳಸಿಕೊಳ್ಳುವುದುಂಟು. ದೌರ್ಜನ್ಯವೂ ಮುದ್ದುಮಾಡುವ ಅಥವಾ ಪ್ರೀತಿಸುವ ಮತ್ತೊಂದು ಬಗೆ ಎಂತಲೋ ಮಕ್ಕಳನ್ನು ನಂಬಿಸುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ, ಮಕ್ಕಳಿಗೆ ಯಾವುದು ಒಳ್ಳೆಯ ಸ್ಪರ್ಶ, ಯಾವುದು ಕೆಟ್ಟ ಸ್ಪರ್ಶ ಎನ್ನುವ ಕುರಿತು ಸ್ಪಷ್ಟವಾಗಿ ಹೇಳಿಕೊಡುವುದು ಸೇರಿದಂತೆ ಅಂಥ ಸಂದರ್ಭಗಳಲ್ಲಿ ‘ಇಲ್ಲ’, ‘ಬೇಡ’ ಅನ್ನುವಂಥ ಪದಗಳನ್ನು ಖಚಿತವಾಗಿ, ಜೋರಾಗಿ ಬಳಸುವಂತೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯ. 

ಬಾಲ್ಯದಲ್ಲೇ ತಿಳಿವಳಿಕೆ ನೀಡಿ

ಲೈಂಗಿಕತೆ ಮತ್ತು ಲೈಂಗಿಕ ದೌರ್ಜನ್ಯದಂಥ ಸಂಗತಿ ಬಗ್ಗೆ ಬಾಲ್ಯದಲ್ಲೇ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯ. ತಮ್ಮ ದೇಹ ಮತ್ತು ಅದರಲ್ಲಾಗುವ ಬದಲಾವಣೆ ಕುರಿತು ಮಕ್ಕಳು ಪೋಷಕರ ಬಳಿ ಮುಕ್ತವಾಗಿ ಹೇಳಿಕೊಳ್ಳುವಂಥ ಮನಸ್ಥಿತಿ ಮತ್ತು ವಾತಾವರಣ ನಿರ್ಮಿಸುವುದು ಪೋಷಕರ ಜವಾಬ್ದಾರಿ. ‌

ಕೇಳಿಸಿಕೊಳ್ಳಿ

ತನ್ನ ದೇಹ ಮತ್ತು ಮನಸ್ಸಿನ ಮೇಲಾಗುವ ಪರಿಣಾಮಗಳ ಕುರಿತು ಮಗು ಮಾತನಾಡುವಾಗ ಪೋಷಕರು ತಾಳ್ಮೆಯಿಂದ ಕೇಳಿಸಿಕೊಳ್ಳುವುದು ಅತ್ಯಗತ್ಯ. ಹಾಗೆಯೇ ಶಾಲೆಯಲ್ಲಿ ಶಿಕ್ಷಕರು ಮಗುವಿನ ಮಾತನ್ನು ನಿರ್ಲಕ್ಷಿಸದೇ ಗಮನವಿಟ್ಟು ಕೇಳಿಸಿಕೊಳ್ಳುವುದು ಸಾಧ್ಯವಾದರೆ ಈ ಬಗ್ಗೆ ಪೋಷಕರ ಗಮನಕ್ಕೆ ತರುವುದು ಸೂಕ್ತ.

ದೇಹದ ಭಾಗ ಪರಿಚಯಿಸಿ

ಪೋಷಕರು ತಮ್ಮ ಸಂಕೋಚ ಬದಿಗಿಟ್ಟು ಮಕ್ಕಳಿಗೆ ದೇಹದ ಎಲ್ಲಾ ಭಾಗಗಳ ಪರಿಚಯ ಮಾಡಿಕೊಡುವುದು ಅಗತ್ಯ. ಕೆಲವೊಮ್ಮೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಆರೋಗ್ಯಕರವಾಗಿ ಉತ್ತರಿಸುವುದು ಸೂಕ್ತ. ಹೀಗೆ ಉತ್ತರಿಸುವಾಗ ಅಥವಾ ದೇಹದ ಖಾಸಗಿ ಭಾಗಗಳ ಬಗ್ಗೆ ತಿಳಿವಳಿಕೆ ನೀಡುವಾಗ ಮಕ್ಕಳಲ್ಲಿ ಈ ಬಗ್ಗೆ ಅನಗತ್ಯ ಕುತೂಹಲ ಹುಟ್ಟದಂತೆ ಮಾಡುವುದು ಬಹಳ ಕಠಿಣದ ಕೆಲಸವಾದರೂ, ಅಂಥ ಸಂದರ್ಭವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು.

ಮಕ್ಕಳು ಶೋಕೇಸ್‌ ಗೊಂಬೆಗಳಲ್ಲ!

ಸಾಮಾನ್ಯವಾಗಿ ಮನೆಗೆ ಬಂದವರಿಗೋ ಅಥವಾ ಸಂಬಂಧಿಕರಿಗೋ ಕೆಲವು ಪೋಷಕರು ಮಕ್ಕಳಿಂದ ಬಲವಂತವಾಗಿ ಮುತ್ತು ಕೊಡಿಸುವುದುಂಟು. ಮಗುವಿಗೆ ಇಷ್ಟವಿಲ್ಲದಿದ್ದರೂ ಅವರ ಬಳಿ ಹೋಗು ಅಂತಲೋ ಅಥವಾ ಅವರು ನಿನ್ನನ್ನು ಪ್ರೀತಿಸುತ್ತಾರೆ ಅಂತಲೋ ಹೇಳಿ ಕಳಿಸುವುದುಂಟು. ಇಂಥ ವಿಚಾರದಲ್ಲಿ ಮಕ್ಕಳಿಗೆ ಎಂದಿಗೂ ಪೋಷಕರು ಬಲವಂತ ಮಾಡಬಾರದು. ಅಷ್ಟೇ ಅಲ್ಲ ಬಲವಂತವಾಗಿ ಮುತ್ತು ಕೊಡುವಂತೆ, ಅಪ್ಪಿಕೊಳ್ಳುವಂತೆ ಕೂಡಾ ಹೇಳಬೇಡಿ. ನಿಮ್ಮ ಮಕ್ಕಳು ಬಂದವರ ಎದುರು ಶೋಕೇಸ್‌ ಗೊಂಬೆಗಳಲ್ಲ! ಮಕ್ಕಳಿಗೂ ಭಾವನೆಗಳಿವೆ ಎಂಬುದನ್ನು ನೆನಪಿನಲ್ಲಿಡಿ.

ದೌರ್ಜನ್ಯದ ಅಂಕಿಸಂಖ್ಯೆ

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ 2018ರಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದಲ್ಲಿ 113 ಮಕ್ಕಳು ಲೈಂಗಿಕ ದುರ್ಬಳಕೆಗೆ ಒಳಗಾಗಿದ್ದಾರೆ. ಇದರಲ್ಲಿ 87 ಪ್ರಕರಣಗಳಲ್ಲಿ ಬಾಲಕರು ಮತ್ತು 26 ಪ್ರಕರಣಗಳಲ್ಲಿ ಬಾಲಕಿಯರು ದೌರ್ಜನ್ಯಕ್ಕೀಡಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು