ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹಗಾರರ ಬವಣೆ

Last Updated 17 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

‘ಜಗತ್ತು ಇಂದು ಗಾಯಗೊಂಡಿದೆ, ರಕ್ತಸ್ರಾವವಾಗುತ್ತಿದೆ ಎಂದು ನನಗೆ ಗೊತ್ತು. ಅದರ ನೋವನ್ನು ಅಲಕ್ಷ್ಯ ಮಾಡದೇ ಇರುವುದು ಎಷ್ಟು ಮುಖ್ಯವೋ ಅದರ ಕೆಡುಕಿನ ಪ್ರವೃತ್ತಿಗಳಿಗೆ ಮಣಿಯದೇ ಇರುವುದೂ ಅಷ್ಟೇ ಮುಖ್ಯ’ ಎಂದಿದ್ದ ದಿಟ್ಟ ಕಾದಂಬರಿಕಾರ್ತಿ ಟೋನಿ ಮಾರಿಸನ್ ಇನ್ನು ಬರೀ ನೆನಪು..

ಮೊನ್ನೆಯಷ್ಟೇ ನಿಧನಳಾದ ಟೋನಿ ಮಾರಿಸನ್ ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕದ ಮಹಾನ್‌ ಕಾದಂಬರಿಕಾರ್ತಿ. ಹೆಚ್ಚು ಕಡಿಮೆ ಶೇಕ್ಸ್‌ಪಿಯರ್‌ನಷ್ಟೇ ಸುಂದರವಾಗಿ ಬರೆಯುವ, ಅಮೆರಿಕದ ಕಪ್ಪು ಜನಾಂಗದ ಚರಿತ್ರೆಯನ್ನು, ಇಂದಿನ ಸ್ಥಿತಿಗಳನ್ನು ತನ್ನ ಕಾದಂಬರಿಗಳಲ್ಲಿ ಇನ್ನಿಲ್ಲದಂತೆ ಶೋಧಿಸಿ ಬರೆದ ಪ್ರತಿಭಾವಂತೆ.

ತನ್ನ ನವ ವಸಾಹತುಶಾಹಿಯ ಫಲವಾಗಿ ಇಂದು ಜಗತ್ತಿನ ಅಪ್ರತಿಮ ಶಕ್ತಿ ತಾನೆಂದುಕೊಳ್ಳುವ ಮತ್ತು ಬಿಳಿಯ ನಾಗರಿಕತೆಯ ಪ್ರತಿನಿಧಿಯೆಂದುಕೊಳ್ಳುವ ಅಮೆರಿಕವು ತನ್ನ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದು ಕಪ್ಪು ಜನಾಂಗದವರ ಮೂಳೆಗಳ ಮೇಲೆ. ಭಾಷೆಯೇ ನಾಚಿಕೊಳ್ಳುವಂಥ ಪಾಶವಿ ಹಿಂಸೆಯನ್ನು ಈ ಜನಾಂಗದ ಮೇಲೆ ಶತಮಾನಗಳವರೆಗೆ ತೋರಿಸಲಾಯಿತು. ಈ ಚರಿತ್ರೆಯ ಕರಾಳ ಮುಖಗಳು ಟೋನಿ ಮಾರಿಸನ್‍ಳ ಕಾದಂಬರಿಯಲ್ಲಿ ದಾಖಲಾಗಿವೆ. ‘Beloved’ ಕಾದಂಬರಿಯ ನಾಯಕಿ ಸೆಟ್‌ ತನ್ನ ಕಂದಮ್ಮನನ್ನೇ ಕೊಲ್ಲುತ್ತಾಳೆ- ಅವಳು ಬಿಳಿ ಜನರ ಕೈಗೆ ಸಿಗದೇ ಇರಲಿ ಎಂದು. ಇನ್ನೊಬ್ಬನಿಗೆ ಕುದುರೆಗಳ ದವಡೆಗೆ ಹಾರುವ bit ಅನ್ನು ಕೂರಿಸಲಾಗುತ್ತದೆ.

ಅಷ್ಟು ಮಾತ್ರವಲ್ಲ, ತಾನೊಬ್ಬ ಮಾನವಶಾಸ್ತ್ರಜ್ಞ ಎಂದುಕೊಳ್ಳುವ School Master ಎಂದು ಕರೆಯಲಾಗುವ ಬಿಳಿಯ ಒಡೆಯನೊಬ್ಬನು ಪ್ರಾಣಿಗಳನ್ನು ಅಳತೆ ಮಾಡಿದಂತೆ ಅವಳ ದೇಹದ ಅಂಗಾಂಗಗಳನ್ನು ಅಳತೆ ಮಾಡಿಸುತ್ತಾನೆ. ಅನೇಕ ಓದುಗರಿಗೆ ಇದು ಭೀಭತ್ಸವೆನಿಸಿ ಇವನ್ನೆಲ್ಲಾ ಯಾಕೆ ನೆನಪು ಮಾಡಿಕೊಳ್ಳಬೇಕು ಎಂದು ವಾದಿಸುತ್ತಾರೆ. ಆದರೆ ಟೋನಿ ಮಾರಿಸನ್ ಹೇಳುವಂತೆ ಮಿತಿಯೇ ಇಲ್ಲದ ಹಿಂಸೆ, ನೋವುಗಳನ್ನು ಅನುಭವಿಸಿದ ಜನಾಂಗಗಳು, ಅವುಗಳಿಗೆ ಕಾರಣವಾದ ಜನಾಂಗಗಳು ಅವುಗಳನ್ನು ಮರೆತುಬಿಟ್ಟರೆ ಅದು ಅನೈತಿಕವಾಗುತ್ತದೆ; ಮತ್ತು ಆ ಜನಾಂಗಗಳಿಗೆ ಮುಕ್ತಿ ಸಿಗುವುದಿಲ್ಲ. ಇದನ್ನು ಅವಳು rememorying ಎಂದು ಕರೆದು ಹೊಸ ಪದವನ್ನೇ ಸೃಷ್ಟಿಸಿದ್ದಾಳೆ.

ಹಾಗೆಂದ ಮಾತ್ರಕ್ಕೆ ಕಪ್ಪು ಜನಾಂಗನ್ನು ಕೇವಲ ಶೋಷಿತ ಜನಾಂಗವೆಂದು ಅವಳು ಚಿತ್ರಿಸುವುದಿಲ್ಲ. ಮಹಾದೇವರ ಕತೆ ಕಾದಂಬರಿಗಳಲ್ಲಿ ಬರುವ ದಲಿತ ವ್ಯಕ್ತಿಗಳಂತೆ, ಮಾರಿಸನ್‍ಳ ಕಥನಗಳಲ್ಲಿ ಅಪಾರವಾದ ಜೀವನ ಪ್ರೀತಿ, ಸಮುದಾಯದಲ್ಲಿ ಬೆರೆಯುವ ಹಂಬಲ, ಪರಸ್ಪರರಿಗೆ ಆಸರೆಯಾಗುವುದು, ಕತೆ, ಹಾಡು, ನೃತ್ಯ ಇವೆಲ್ಲವುಗಳಿಂದ ಶ್ರೀಮಂತವಾದ ಕಪ್ಪು ಜನಾಂಗವು ಮೂಡಿಬರುತ್ತದೆ. ಅವರದು ಮೌಖಿಕ (ತೋಂಡಿ) ಸಂಪ್ರದಾಯಗಳ ಜನಾಂಗ. ಹೀಗಾಗಿ ಅನನ್ಯವಾದ ಕತೆಗಳು, ಪುರಾಣಗಳು ಪ್ರತಿಮೆಗಳು ಹಾಡುಗಳ ಮೂಲಕ ತಮ್ಮ ಚರಿತ್ರೆಯನ್ನು ಕಾಪಿಟ್ಟುಕೊಂಡಿದ್ದಾರೆ. ಅಲ್ಲದೆ ಟೋನಿ ಮಾರಿಸನ್‍ಳ ಕಾದಂಬರಿಗಳು ಇಂದಿನ ಅತ್ಯಾಧುನಿಕ ಕಪ್ಪು ತಲೆಮಾರುಗಳ ಬಗ್ಗೆಯು ಇವೆ. ‘ಸೂಲಾ’ ಕಾದಂಬರಿಯ ಅದೇ ಹೆಸರಿನ ನಾಯಕಿ ಸಾಮಾಜಿಕ, ಲೈಂಗಿಕ ಕಟ್ಟುಪಾಡುಗಳನ್ನು ಮುರಿದು ಸಮುದಾಯವನ್ನೇ ತಲ್ಲಣಗೊಳಿಸಬಲ್ಲಳು. ‘ಒಡಲಾಳ’ದ ಸಾಕವ್ವನ ಅನೇಕ ಅಕ್ಕಂದಿರು ಈ ಕಾದಂಬರಿಗಳಲ್ಲಿದ್ದಾರೆ.

2004ರಲ್ಲಿ ಅಮೆರಿಕದ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಲಿಯ ಮತದಾರರು ಜಾರ್ಜ್ ಬುಷ್‍ರನ್ನು ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ತೀವ್ರವಾದ ಬೇಸರ ಹಾಗೂ ರೋಷದಿಂದ ‘ಬರೆಯುವುದು ಯಾಕೆ, ಅದರಿಂದ ಉಪಯೋಗವೇನು’ ಎಂದು ಪ್ರಕ್ಷುಬ್ಧಳಾಗಿ ಸ್ನೇಹಿತನಿಗೆ ಟೋನಿ ಮಾರಿಸನ್ ಹೇಳಿದಾಗ, ಇಂಥ ಕಾಲದಲ್ಲಿಯೇ ಬರೆಯುವುದು ನಮ್ಮ ಜವಾಬ್ದಾರಿಯೆಂದು ಎಚ್ಚರಿಸುತ್ತಾನೆ. ಆಗ ಅವಳು ‘The Nation’ ಎನ್ನುವ ಅಮೆರಿಕದ ಹಳೆಯ ಪತ್ರಿಕೆಗೆ ಅದ್ಭುತವಾದ ಲೇಖನವೊಂದನ್ನು ಬರೆಯುತ್ತಾಳೆ. ಯಾವ ಕಾಲಕ್ಕೂ ಬರಹಗಾರರಿಗೆ ದಾರಿದೀಪವಾಗುವ ಬರಹವದು. ಆ ಲೇಖನದ ಕೆಲವು ಭಾಗಗಳು ಹೀಗಿವೆ:

‘ಸರ್ವಾಧಿಕಾರಿಗಳು ಮತ್ತು ನಿರಂಕುಶ ನಾಯಕರು ತಮ್ಮ ಆಳ್ವಿಕೆಯನ್ನು ಆರಂಭಿಸುವುದು ಮತ್ತು ತಮ್ಮ ಅಧಿಕಾರವನ್ನು ಪೋಷಿಸಿಕೊಳ್ಳುವುದು ಸಾಮಾನ್ಯವಾಗಿ ಉದ್ದೇಶಪೂರ್ವಕವಾಗಿ ಮತ್ತು ಖಚಿತ ಲೆಕ್ಕಾಚಾರದಿಂದ ಕಲೆಯನ್ನು ನಾಶಮಾಡುವುದರ ಮೂಲಕವೇ. ಪೊಲೀಸರ ಕಡಿವಾಣವಿಲ್ಲದೆ ಬರೆದ ಗದ್ಯದ ಸೆನ್ಸಾರ್ ಮೂಲಕ ಅಥವಾ ಪುಸ್ತಕಗಳನ್ನು ಸುಡುವುದರ ಮೂಲಕ; ಕಲಾವಿದರು, ಪತ್ರಿಕೋದ್ಯಮಿಗಳು, ಕವಿಗಳು, ನಾಟಕಕಾರರು, ಕಾದಂಬರಿಕಾರರು ಮತ್ತು ಪ್ರಬಂಧಕಾರರನ್ನು ಹಿಂಸಿಸಿ ಬಂಧಿಸುವುದರ ಮೂಲಕ- ಇತ್ಯಾದಿ. ಒಬ್ಬ ಸರ್ವಾಧಿಕಾರಿಯು ಇಡುವ ಮೊದಲ ಹೆಜ್ಜೆಯು ಇದು. ಅವನು ತನ್ನ ಸಹಜ ಪ್ರವೃತ್ತಿಯಿಂದ ಮಾಡುವ ಕ್ರೂರ ಕೃತ್ಯಗಳು ಕೇವಲ ಮನೋಹೀನ ಅಥವಾ ಕೆಡುಕಿನ ಕ್ರಿಯೆಗಳಲ್ಲ; ಅವುಗಳು ಮುಂದಾಲೋಚನೆ ಹಾಗೂ ದೂರಗಾಮಿ ದೃಷ್ಟಿಯಿಂದ ಮಾಡುವ ಕೃತ್ಯಗಳು. ಇಂಥ ಸರ್ವಾಧಿಕಾರಿಗಳಿಗೆ ಇಂಥ ದಬ್ಬಾಳಿಕೆಯ ತಂತ್ರಗಳು ಅವರ ಅಧಿಕಾರವನ್ನು ಪೋಷಿಸುವ ತಂತ್ರಗಳಿಗೆ ಶಕ್ತಿ ಕೊಡುತ್ತದೆಯೆಂದು ಗೊತ್ತಿರುತ್ತದೆ.

ಅವರ ತಂತ್ರಗಳು ಬಹಳ ಸರಳವಾಗಿವೆ:

1) ಒಬ್ಬ ಉಪಯುಕ್ತನಾದ ‘ಶತ್ರು’ವನ್ನು- ಒಬ್ಬ ‘ಅನ್ಯ’ನನ್ನು ಆಯ್ದುಕೊಳ್ಳುವುದು. ಈ ಮೂಲಕ [ಜನರ] ರೋಷವನ್ನು ಘರ್ಷಣೆ ಅಥವಾ ಯುದ್ಧದಲ್ಲಿ ಪರಿವರ್ತಿಸುವುದು.

2) ಕಲೆಯು ಕೊಡುವ ಕಲ್ಪನಾ ಶಕ್ತಿಯನ್ನು ಮೊಟಕುಗೊಳಿಸುವುದು ಅಥವಾ ಅಳಿಸಿಯೇ ಹಾಕಿಬಿಡುವುದು. ಹಾಗೆಯೇ ವಿದ್ವಾಂಸರು ಮತ್ತು ಪತ್ರಿಕೋದ್ಯಮಿಗಳು ಕೊಡುವ ವಿಮರ್ಶಾತ್ಮಕ ಚಿಂತನೆ, ಜಿಜ್ಞಾಸೆಗಳನ್ನು ನಿಯಂತ್ರಿಸುವುದು.

3) ಜನರಿಗೆ ‘ಆಟಿಕೆ’ಗಳನ್ನು ಕೊಟ್ಟು ಅವರ ಗಮನವನ್ನು ಆಚೆಗೆ ಸೆಳೆಯುವುದು. ಕೊಳ್ಳೆ ಹೊಡೆಯಬಹುದಾದ ಸಂಪತ್ತು, ಪರಮಶ್ರೇಷ್ಠ ಧರ್ಮದ ಕಥನವಸ್ತುಗಳು ಅಥವಾ ಭೂತಕಾಲದ ನೋವು ಮತ್ತು ಅವಮಾನಗಳನ್ನು ಪೂಜಿಸುವ (enshrine) ರಾಷ್ಟ್ರಾಭಿಮಾನ ಇವು ಇಂಥ ಆಟಿಕೆಗಳು.

‘ಒಂದು ದೇಶದ ಜನರಲ್ಲಿ ಅತೃಪ್ತಿಯು ಪ್ರಬಲವಾಗಿದ್ದಾಗ ಮತ್ತು ಹಿಂಸೆಯ ಮೂಲಕವೇ ಶಮನವಾಗುವ ಅಸಹಾಯಕತೆಯ ಭಾವನೆಯು ಸಾರ್ವತ್ರಿಕವಾದಾಗ ಅವರನ್ನು ಬಲಪ್ರಯೋಗಕ್ಕೆ ಒತ್ತಾಯಿಸುವುದು ತುಂಬಾ ಸುಲಭದ ಕೆಲಸ’.

ಹೀಗೆ ಬರೆಯುವ ಟೋನಿ ಮಾರಿಸನ್ ನಿರಾಶೆಯ ಪಾಠವನ್ನು ಹೇಳಿಕೊಡುತ್ತಿಲ್ಲ. ಇಂಥ ಕಾಲದಲ್ಲಿಯೇ ಬರೆಯಬೇಕಾದುದು ನಮ್ಮ ಜವಾಬ್ದಾರಿಯೆಂದು ಹೇಳುತ್ತಾಳೆ:

‘ಇಲ್ಲ, ಕಲಾವಿದರು ಕೆಲಸ ಮಾಡಬೇಕಾದ ಕಾಲವೇ ಈ ಕಾಲವಾಗಿದೆ. ಈಗ ನಿರಾಶೆಗೆ ಸಮಯವಿಲ್ಲ; ಸ್ವಮರುಕಕ್ಕೆ ಜಾಗವಿಲ್ಲ; ಮೌನವಾಗಿರುವುದು ಅವಶ್ಯಕವಲ್ಲ; ಹೆದರಿಕೆಗೆ ಅವಕಾಶವಿಲ್ಲ. ನಾವು ಮಾತಾಡುತ್ತೇವೆ, ನಾವು ಬರೆಯುತ್ತೇವೆ, ನಾವು ಭಾಷೆಯನ್ನು ಬಳಸುತ್ತೇವೆ. ಹೀಗೆ ಮಾತ್ರ ನಾಗರಿಕತೆಗಳು ವಾಸಿಯಾಗಬಲ್ಲವು’.

‘ಜಗತ್ತು ಇಂದು ಗಾಯಗೊಂಡಿದೆ, ರಕ್ತಸ್ರಾವವಾಗುತ್ತಿದೆ ಎಂದು ನನಗೆ ಗೊತ್ತು. ಅದರ ನೋವನ್ನು ಅಲಕ್ಷ್ಯ ಮಾಡದೇ ಇರುವುದು ಎಷ್ಟು ಮುಖ್ಯವೋ ಅದರ ಕೆಡುಕಿನ ಪ್ರವೃತ್ತಿಗಳಿಗೆ ಮಣಿಯದೇ ಇರುವುದೂ ಅಷ್ಟೇ ಮುಖ್ಯ’.

‘ಸೋಲಿನಲ್ಲಿಯಂತೆಯೇ ಅವ್ಯವಸ್ಥೆಯಲ್ಲಿ ಕೂಡ ನಮ್ಮನ್ನು ಜ್ಞಾನದ ಕಡೆಗೆ, ವಿವೇಕದ ಕಡೆಗೆ ಕರೆದೊಯ್ಯುವ ಮಾಹಿತಿ ಇರುತ್ತದೆ, ಕಲೆಯಂತೆ’.

ಟೋನಿ ಮಾರಿಸನ್ ಬರೆದ ಈ ಲೇಖನವನ್ನು ಮನನ ಮಾಡುವುದು ಆ ಮಹಾನ್‌ ಕತೆಗಾರ್ತಿಗೆ ನಾವು ತೋರಿಸುವ ಗೌರವವಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT