ಮುಂಗುರಳ ಅಂಚಿನಲಿ...

7

ಮುಂಗುರಳ ಅಂಚಿನಲಿ...

Published:
Updated:
Deccan Herald

ಅಂದು ಕೆಲಸದ ನಿಮಿತ್ಯ ನಮ್ಮ ಆಫೀಸಿನ ಬೇರೊಂದು ಶಾಖೆಗೆ ನನ್ನ ಸಹೊದ್ಯೋಗಿಯೊಂದಿಗೆ ಹೋಗಿದ್ದೆ. ನನ್ನ ಭಾಗ್ಯವೇನೋ ಅಂದು ಆ ಆಫೀಸಿನಲ್ಲಿ ಜನಸಂಖ್ಯೆ ಕಡಿಮೆ ಇತ್ತು. ಅಲ್ಲಿನ ನನ್ನ ಸಹೋದ್ಯೋಗಿಗಳು ಕೂಡ ಸ್ವಲ್ಪ ಪರಿಚಿತರೇ. ಹಾಗಾಗಿ ಕೆಲಸವನ್ನು ನನ್ನ ಗೆಳೆಯನ ಮೇಲೆ ಬಿಟ್ಟು,‌ ಬ್ಯಾಂಕ್‌ಗೆ ಬಂದ ಗ್ರಾಹಕರನ್ನು ನೋಡುತ್ತ ಕಾಲಕಳೆಯತೊಡಗಿದೆ.

ಸ್ವಲ್ಪ ಹೊತ್ತಿಗೆ ಒಂದು ಇಂಪಾದ ಮೆಲು ಧ್ವನಿಯೊಂದು ನನ್ನ ಕಿವಿ ಹಿಡಿದು ಕೇಳುವಂತೆ ಮಾಡಿತು. ಆ ಧ್ವನಿ ಬಂದ ಕಡೆಗೆ ಕಣ್ಣು ಹಾಯಿಸುತ್ತಿದ್ದಾಗ, ಅಲ್ಲೊಬ್ಬಳು ಹುಡುಗಿ ಕೌಂಟರ್‌ನಲ್ಲಿ ತನ್ನ ಸಮಸ್ಯೆಯನ್ನು ಹೇಳುತ್ತಿದ್ದಳು. ಆ ಸಮಸ್ಯೆ ಆಲಿಸಲೆಂದು ನಾನು ಸ್ವಲ್ಪ ಹತ್ತಿರ ಹೋಗಿ ನೋಡುತ್ತಿದ್ದಾಗ, ನನ್ನನ್ನು ನಾನು ಮರೆತುಹೋದೆ. ಏಕೆಂದರೆ, ರಾಯಚೂರಿನ ಈ ಸೆಕೆಯಲ್ಲೂ ಒಂದು ಹೊತ್ತು ಮಡಿಕೇರಿಯ ತಂಪು ಮನಕ್ಕೆ ಆವರಿಸುವಂತಿತ್ತು, ಆಕೆಯ ಕಣ್ಣೋಟ.

ನನ್ನ ಕಣ್ಣಿನ ನೋಟ ತಾಕದಷ್ಟು ಮಂದವಾಗಿದ್ದ ಕನ್ನಡಕದ ಒಂದು ಮೂಲೆಯಿಂದ ಆಕೆಯನ್ನು ನೋಡುತ್ತ ಮೈಮರೆತೆ. ಗೆಳೆಯ ಒಂದು ಟೀ ಕೊಟ್ಟು ನನ್ನನ್ನು ವಾಸ್ತವ ಲೋಕಕ್ಕೆ ಕರೆತಂದ. ಈ ಗೊಂದಲದಲ್ಲಿ ಟೀ ಕುಡಿದೆನೋ, ಇಲ್ಲವೋ ನೆನಪಿಲ್ಲ. ಆದರೆ, ಆಕೆಯ ಧ್ವನಿಯಲ್ಲಿನ ಭಯ, ಕಣ್ಣುಗಳಲ್ಲಿನ ಮುಗ್ಧತೆ, ನಯವಾದ ಕೈ ಸನ್ನೆಗಳು, ನನಗಿಂತಲೂ ಸ್ವಲ್ಪ ಹೆಚ್ಚಿನ ಸರಳತೆಯ ವ್ಯಕ್ತಿತ್ವ ಎಲ್ಲವೂ ನನ್ನ ಮನಸ್ಸಿನಲ್ಲಿ ಕಡಲ ಅಲೆಯಂತೆ ಅಪ್ಪಳಿಸುತ್ತಿದ್ದವು. ಅದೆಷ್ಟು ಬಾರಿ ಸರಿಪಡಿಸಿಕೊಂಡರೂ ಪಟ್ಟು ಬಿಡದೇ ಮತ್ತೆ ಮತ್ತೆ ಆಕೆಯ ಮುಖವನ್ನು ಸವರುತ್ತಿದ್ದ ಮುಂಗುರುಳು ಕುಂಚವಾಗಿ ನನ್ನ ಭಾವನೆಗಳಿಗೆ ಬಣ್ಣ ಹಚ್ಚುತ್ತಿದ್ದವು. ಹಾಗೇ ನೋಡುತ್ತಿದ್ದಾಗ ನನ್ನ ಮನದ ಅಂತರಾಳದಲ್ಲಿ ಮೂಡಿದ ಸ್ವಾರ್ಥ ಭಾವ ಒಂದೇ, ‘ಈ ಹುಡುಗಿ ಏಕೆ ನನ್ನ ಮನೆಯವರಲ್ಲಿ ಒಬ್ಬಳಾಗಿ ಇರಬಾರದು?’

ಇಷ್ಟಕ್ಕೂ, ನನ್ನ ಕಾಲೇಜು ದಿನಗಳಲ್ಲಿ ಈಕೆಗಿಂತ ಸುಂದರವಾದ ಹುಡುಗಿಯರನ್ನು ನೋಡಿದ್ದೆ. ಆದರೆ, ಈ ರೀತಿ ಯಾವಾಗಲೂ ಮನಸ್ಸು ಇಷ್ಟು ತೊಳಲಾಡಿರಲಿಲ್ಲ. ಆಕೆ ಕಚೇರಿಗೆ ಬಂದು ತನ್ನ ಸಮಸ್ಯೆ ಬಗೆಹರಿಸಿಕೊಂಡಳೋ ಇಲ್ಲವೋ. ಆದರೆ ಇಲ್ಲಿಂದ ಹೋಗಿ ನನ್ನ ಮನದಲ್ಲಿ ಒಂದು ಬಗೆಹರಿಯದ ಸಮಸ್ಯೆ ಹುಟ್ಟು ಹಾಕಿದ್ದಳು !

ಆಕೆಯನ್ನು ನೋಡಿದ್ದು ಕೇವಲ ಹದಿನೈದು ನಿಮಿಷ. ಆದರೂ ಮರೆಯಲು ಕನಿಷ್ಠ ಹದಿನೈದು ವರ್ಷವಾದರೂ ಬೇಕಾಗಬಹುದೇನೋ. ಹೀಗೆ ಕೆಲ ಸಮಯ ಕಂಡ ಆಕೆ ನನ್ನ ಮನ ಬೆಳಗುತ್ತಾಳೋ ಅಥವಾ ಮರೀಚಿಕೆಯಾಗುತ್ತಾಳೋ ಆ ಆಣಿಮಲ್ಲೇಶ್ವರನೇ ಬಲ್ಲ. ಆದರೂ ಸಂಜೆ ಮನೆಗೆ ಆಫೀಸಿನಲ್ಲಿ ಕದ್ದು ಆಲಿಸಿಕೊಂಡಿದ್ದ ಅವಳ ಹೆಸರನ್ನು ಹುಡುಕಿ ಒಂದು ಫ್ರೆಂಡ್ ರಿಕ್ವೆಸ್ಟ್ ಕೂಡ ಕಳುಹಿಸಿ ಅವಳ ಪ್ರತ್ಯುತ್ತರಕ್ಕಾಗಿ ಕಾಯುತ್ತಿರುವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !