ಮಂಗಳವಾರ, ಡಿಸೆಂಬರ್ 10, 2019
19 °C
ತಮ್ಮ ಜೀವವನ್ನು ಒತ್ತೆ ಇಟ್ಟು ಕರುಳ ಕುಡಿಯನ್ನು ಭುವಿಗೆ ತರುವ ಹೆಣ್ಣುಜೀವಗಳು...

‘ಮಲೆ’ಯಂಚಿನ ಗ್ರಾಮಗಳಲ್ಲಿ ಹುಟ್ಟು–ಸಾವು ಸೆಣಸಾಟ...

Published:
Updated:

ಈ ಹಳ್ಳಿಗಳಲ್ಲಿ ಹುಟ್ಟು ಎನ್ನುವುದು ಸಾವಿನೊಂದಿಗಿನ ಸೆಣಸಾಟ. ಗರ್ಭಿಣಿಯರು ಹತ್ತಾರು ಕಿಲೋಮೀಟರ್‌ ನಡೆದೇ ಆಸ್ಪತ್ರೆಗೆ ಹೋಗಬೇಕು. ನಡೆಯಲಾಗದ ಸ್ಥಿತಿಗಳಲ್ಲಿ ಊರವರೇ ಆಕೆಯನ್ನು ಡೋಲಿಯಲ್ಲಿ ಹೊತ್ತುಕೊಂಡು ಸಾಗುತ್ತಾರೆ! ಮಾರ್ಗಮಧ್ಯೆ ಹೆತ್ತಮ್ಮನೇ ವಿಧಿವಶವಾದ ವ್ಯಥೆಗಳೆಷ್ಟೊ... ಹುಟ್ಟುತ್ತಲೇ ಕಂದನ್ನ ಕಳೆದುಕೊಂಡು ಮಡಿಲು ಬರಿದಾದ ಯಾತನೆಗಳೆಷ್ಟೊ... ಎಲ್ಲಕ್ಕೂ ಸಾಕ್ಷಿಯಾದ ಮನಕಲಕುವ ಕತೆಗಳು ಹೆಜ್ಜೆಗೊಂದರಂತೆ ಸಿಗುತ್ತವಿಲ್ಲಿ...

ತನ್ನೊಡಲಲ್ಲಿ ಕುಡಿಯೊಂದು ಚಿಗುರಿದಾಗ ಅವಳ ಮುಖದಲ್ಲಿ ಆತಂಕದ ಗೆರೆಗಳೇಳುತ್ತವೆ, ಮನದಲ್ಲಿ ಅಂಜಿಕೆಯ ಎಳೆಗಳು ತೊಡಕಿಕೊಳ್ಳುತ್ತವೆ. ಅವಳಿಗಷ್ಟೆ ಅಲ್ಲ, ಮನೆಯವರಿಗೂ, ಊರವರಿಗೂ ಆ ನವಮಾಸ ಸಂಕಟದಾಯಕ. ಒಮ್ಮೆ ಹುಟ್ಟುತ್ತಲೇ ಕಂದನ ಉಸಿರು ನಿಂತು ಮಡಿಲು ಬರಿದಾದರೆ, ಇನ್ನೊಮ್ಮೆ ಜನುಮದಾತೆಯೇ ಕಣ್ಮುಚ್ಚಿ ಕಂದ ತಬ್ಬಲಿಯಾಗುತ್ತದೆ.

ಇದು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ಅರಣ್ಯದಂಚಿನ ಗ್ರಾಮಗಳ ಮನೆ–ಮನಗಳ ಮಾತು. ಇಲ್ಲಿನ ಹೆಣ್ಮಕ್ಕಳಿಗೆ ತಾಯಿಯಾಗುವುದು ಸಂತಸದ ಸಂಗತಿಯಷ್ಟೇ ಅಲ್ಲ, ಭಯ– ಆತಂಕದ ವಿಷಯವೂ ಹೌದು. ಗರ್ಭಾವಸ್ಥೆಯೊಂದಿಗೆ ಎದುರಾಗುವ ಸಾಮಾನ್ಯ ತೊಡಕುಗಳನ್ನು ಹೇಗೊ ನಿವಾರಿಸಿಕೊಳ್ಳಬಹುದು. ಕೆಲವೊಮ್ಮೆ ಗಂಭೀರ ಸಮಸ್ಯೆಗಳು ಉಂಟಾದಾಗ ಮಾತ್ರ ಊರಿಗೂರೇ ಕಂಗಾಲಾಗುತ್ತದೆ. ಕಾರಣ ಸುಲಭಕ್ಕೆ ಸಿಗದ ಆರೋಗ್ಯ ಸೇವೆ, ವಾಹನ ಸಾಗದಷ್ಟು ಕೆಟ್ಟದಾದ ದುರ್ಗಮ ರಸ್ತೆಗಳು.

ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿಗೆ ಸೇರುವ ನಾಗಮಲೆ, ಪಡಸಲನತ್ತ, ಮೆದಗನಣೆ, ಕೊಕ್ಕಬರೆ ಸೇರಿದಂತೆ ಕೆಲ ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಇಂಡಿಗನತ್ತ, ಮೆಂದರೆ, ತೊಳಸಿಕೆರೆಯಂತಹ ಊರುಗಳ ರಸ್ತೆಗಳಲ್ಲಿ ಕಲ್ಲುಗಳೇ ತುಂಬಿದ್ದು, ಗರ್ಭಿಣಿಯರು ಓಡಾಡುವುದು ಅಪಾಯಕರ. ಆದರೂ, ಇಂಥ ರಸ್ತೆಯಲ್ಲೇ ಏಳೆಂಟು ಕಿಲೋಮೀಟರ್ ದೂರ ಕಾಡುದಾರಿಯನ್ನು ಕ್ರಮಿಸಿ ಆಸ್ಪತ್ರೆಗೆ ಹೋಗಬೇಕು. ತುಂಬು ಗರ್ಭಿಣಿಯರನ್ನು ಹೊತ್ತೊಯ್ಯಲು ಡೋಲಿಗಳೇ ಆಧಾರ.

ಮನೆಯ ಮಗಳೊ, ಸೊಸೆಯೊ ಗರ್ಭಿಣಿಯಾದರೆ ಇಡೀ ಊರು ಜಾಗೃತವಾಗುತ್ತದೆ ಇಲ್ಲಿ. ಬಸಿರು ಹೊತ್ತ ಹೆಣ್ಮಗಳು ನಡೆದಾಡುವ ಕಡೆಗಳಲ್ಲೆಲ್ಲ ಗ್ರಾಮಸ್ಥರ ಕಣ್ಗಾವಲು! ಆಕೆಗೆ ನವಮಾಸ ತುಂಬುತ್ತಿದ್ದಂತೆ ಸಂಭ್ರಮದ ನಡುವೆಯೂ ಊರಲ್ಲಿ ಒಂದು ಬಗೆಯ ಆತಂಕ ಮನೆ ಮಾಡುತ್ತದೆ. ಲಭ್ಯವಿರುವ ಒಂದೆರಡು ಸೋಲಾರ್ ಸ್ವಿಚ್ಚುಗಳಲ್ಲಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಿಟ್ಟುಕೊಂಡು, ಒಂದಿಬ್ಬರು ಹಿರಿಯರು, ಯುವಕರು ಸದಾ ಸಿದ್ಧರಾಗಿರುತ್ತಾರೆ. ಯಾವಾಗಲಾದರೂ ಆಕೆಗೆ ಹೆರಿಗೆ ನೋವು ಕಾಣಿಸಿಕೊಳ್ಳಬಹುದು, ಅವಧಿಗೆ ಮುನ್ನವೇ ಕೆಲವೊಮ್ಮೆ ತೊಡಕುಗಳು ಕಾಣಿಸಿಕೊಳ್ಳಬಹುದು. ಆಗ ಕೂಡಲೇ ಆ ಹೆಣ್ಣುಮಗಳನ್ನು ಹತ್ತಾರು ಕಿಲೋಮೀಟರ್‌ ದೂರದ ಆಸ್ಪತ್ರೆಗೆ ಅಥವಾ ಸಂಚಾರಿ ಆರೋಗ್ಯ ಘಟಕದ ಆಂಬುಲೆನ್ಸ್‌ವರೆಗೆ ಹೊತ್ತೊಯ್ಯಬೇಕು!

ಕಾಡಂಚಿನ ಈ ಹಳ್ಳಿಗಳಲ್ಲಿ ಸೆಲ್ಕೊ ಪ್ರತಿಷ್ಠಾನ ಸೌರಶಕ್ತಿ ಆಧಾರಿತ ಬೆಳಕು ಕೊಟ್ಟಿದೆ. ಮನೆ–ಮನೆಗೆ ಸೋಲಾರ್‌ ದೀಪಗಳನ್ನು ಅಳವಡಿಸಿದೆ. ಪ್ರತಿಮನೆಗಳಲ್ಲಿ ಮೊಬೈಲ್‌ಗಳಿವೆ. ಆ ಸೌರಶಕ್ತಿಯಿಂದಲೇ ನಡೆಯುವ ಹಿಟ್ಟಿನ ಗಿರಣಿಗಳಿವೆ, ಹೊಲಿಗೆ ಮಷೀನುಗಳಿವೆ. ಇದೆಲ್ಲದರಿಂದ ಅಲ್ಲಿನ ಜನತೆಯ ಜೀವನ ತಕ್ಕಮಟ್ಟಿಗೆ ಸಹ್ಯವಾಗಿದ್ದೇನೊ ಸತ್ಯ. ಆದರೆ ರಸ್ತೆಗಳಿಲ್ಲದ ಕಾರಣ ಆರೋಗ್ಯ ಸೇವೆ ಮರೀಚಿಕೆಯಾಗಿಯೇ ಉಳಿದಿದೆ.

ಸೂಲಗಿತ್ತಿಯರಿಲ್ಲದ ಊರು..

ಕಾಡನ್ನೇ ನಂಬಿ, ಕಾಡುಗಳ ಒಡಲಲ್ಲೇ ಬದುಕು ಕಟ್ಟಿಕೊಂಡು, ಕಾಡುಪ್ರಾಣಿಗಳೊಂದಿಗೆ ಸಹಜೀವನ ಸಾಗಿಸುತ್ತ ಹೇಗೊ ಬದುಕನ್ನು ಸಹ್ಯವಾಗಿಸಿಕೊಂಡವರು ಈ ಜನ. ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರಗಳನ್ನೂ ಕಂಡುಕೊಂಡು ಜೀವಿಸಿದ್ದವರು. ಕಾಡಿನ ನಡುವೆ ಅವರು ಕಂಡುಕೊಂಡ ಪರಿಹಾರಗಳಲ್ಲಿ ಪ್ರಸವಕ್ಕೆ ಸೂಲಗಿತ್ತಿಯರ ಸೇವೆ ಪಡೆಯುತ್ತಿದ್ದುದೂ ಒಂದು. ಸಾವೊ–ಬದುಕೊ ಸೂಲಗಿತ್ತಿಯರನ್ನು ನಂಬಿ ನಿರಾಳರಾಗುತ್ತಿದ್ದರು. ಅವರು ತಮ್ಮ ಹಾಗೂ ತಮ್ಮ ಕಂದನ ಜೀವ ಉಳಿಸುತ್ತಾರೆ ಎನ್ನುವ ನಂಬಿಕೆಯೇ ಒಂದು ರೀತಿಯ ಸಮಾಧಾನ ತರುತ್ತಿತ್ತು. ಆದರೆ ಸೂಲಗಿತ್ತಿಯರ ಕೊನೆಯ ತಲೆಮಾರು ಈಗಿಲ್ಲ. ಇದ್ದರೂ ಅವರನ್ನು ನಂಬುವ ಸ್ಥಿತಿಯಲ್ಲಿ ಜನರಿಲ್ಲ.

‘ನಮ್ಮ ತಾಯಿ ಸುತ್ತಲಿನ ಊರುಗಳಿಗೆಲ್ಲಾ ಅಡ್ಡಾಡಿ ಹೆರಿಗಿ ಮಾಡ್ಸೋಳು. ಅವಳ ಕಯ್ಯಾಗ ಎಷ್ಟೊ ಮಕ್ಕಳು ಹುಟ್ಯಾವು... ಲೆಕ್ಕಿಲ್ಲ... ನಾನೂ ಮಾಡಿಸ್ತಿದ್ಯಾ ಹೆರಿಗಿನ, ಈಗ ಇಪ್ಪತ್ವರ್ಸ ಆಯ್ತು ಬುಟ್ಟಿನಿ. ನಂಬ್ಕಿ ಇಲ್ಲ ನನ್ನ ಮ್ಯಾಲ ಈಗಿನ ಮಕ್ಕಳಿಗಿ’ ಎಂದು ತಮ್ಮ ಅಳಲು ತೋಡಿಕೊಂಡವರು 85ರ ಆಸುಪಾಸಿನಲ್ಲಿರುವ ಅಜ್ಜಮ್ಮ.

‘ಜೀಪುಗಳು ಒಮ್ಮೊಮ್ಮೆ ಸಿಗ್ತಾವು, ಒಮ್ಮಿ ಇಲ್ಲ. ಆಗೆಲ್ಲ ಹತ್ತಾರು ಜನರ ಗುಂಪು ಮಾಡಿಕೊಂಡು, ಕಂಬಳಿಯ ಜೋಲಿಯಲ್ಲಿ ಅಥವಾ ಬಿದರಿನ ಡೋಲಿಯಲ್ಲಿ ಗರ್ಭಿಣಿಯನ್ನ ಆಸ್ಪತ್ರೆಗೆ ಒಯ್ತಿವಿ. ಆ ಕಡೆ ಸುಲವಾಡಿ ದಾವಾಖಾನಿಗಿ, ಇಲ್ಲಂದ್ರ ತಮಿಳುನಾಡಿನ ಕೊಳತೂರಿನ ದೊಡ್ಡಾಸ್ಪತ್ರೆಗೆ ಹೋಗಬೇಕು. ಒಮ್ಮೊಮ್ಮೆ ದಾರೀಲೇ ಹೆರಿಗಿ ಆಗಿ ತಾಯಿನ್ನೊ, ಕೂಸನ್ನೊ ಕಳಕೊಂಡಿದ್ದೂ ಐತೆ’ ಎನ್ನುತ್ತಾರೆ ತೊಳಸಿಕೆರೆಯ ನಿವಾಸಿ ಡುಮ್ಮಡ.

ಈ ಗ್ರಾಮಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ ಎನ್ನುತ್ತಾರೆ ಸರ್ಕಾರಿ ಅಧಿಕಾರಿಗಳು. ಅರಣ್ಯಗಳಲ್ಲಿ ಹಾಗೆಲ್ಲಾ ರಸ್ತೆ ಮಾಡಲು ಬರುವುದಿಲ್ಲ ಎನ್ನುವುದು ಅರಣ್ಯ ಇಲಾಖೆಯ ಅಂಬೋಣ. ಈ ನಡುವೆ ತಮ್ಮ ಜೀವವನ್ನು ಒತ್ತೆ ಇಟ್ಟು ಕರುಳ ಕುಡಿಯನ್ನು ಭುವಿಗೆ ತರುವ ಹರಸಾಹಸದಲ್ಲಿ ಹೆಣ್ಣುಜೀವಗಳ ಯಾತನೆ ಮುಂದುವರಿದೇ ಇದೆ.

ಆಧುನಿಕತೆಯ ಸ್ಪರ್ಶವಾದಂತೆ ಬದುಕಿನಲ್ಲಿ ಬದಲಾವಣೆಯ ಪರ್ವ ಆರಂಭವಾಯಿತೇನೊ ನಿಜ. ಅದರೊಂದಿಗೆ ಸವಾಲಿನ ಮತ್ತೊಂದು ಮುಖ ನೋಡಬೇಕಾಗಿ ಬಂದಿದೆ. ಅತ್ತ ಪೂರ್ತಿ ಅಭಿವೃದ್ಧಿಯೂ ಇಲ್ಲದೆ, ಇತ್ತ ಸಾಂಪ್ರದಾಯಿಕ ದಾರಿಗಳೂ ಮುಚ್ಚಿ ಹೋಗಿ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ ಈ ಕಾಡುಜನರ ಬಾಳು.  

ಸೌರಚಾಲಿತ ಸಂಚಾರಿ ಆರೋಗ್ಯ ಘಟಕ
ಮಹದೇಶ್ವರ ಬೆಟ್ಟದ ತಪ್ಪಲಿನ ಕುಗ್ರಾಮಗಳ ಮನೆ–ಮನೆಗೂ ತಲುಪಿ ಆರೋಗ್ಯ ಸೇವೆ ನೀಡಲು ಉದ್ಭವ್ ಸ್ವಯಂ ಸೇವಾ ಸಂಸ್ಥೆ ಹಾಗೂ ಸೆಲ್ಕೊ ಪ್ರತಿಷ್ಠಾನ ಸೌರಚಾಲಿತ ಸಂಚಾರಿ ಆರೋಗ್ಯ ಘಟಕವನ್ನು ಪರಿಚಯಿಸಲಾಗಿದೆ. ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಸುಮಾರು 19 ಹಳ್ಳಿಗಳಿಗೆ ಈ ಮೊಬೈಲ್‌ ಘಟಕ ಆರೋಗ್ಯ ಸೇವೆ ಒದಗಿಸುತ್ತಿದೆ. ಪ್ರತಿದಿನ 3–4 ಹಳ್ಳಿಗಳಿಗೆ ಭೇಟಿ ನೀಡುವ ಈ ವಾಹನದಲ್ಲಿ ಮೂವರು ಆರೋಗ್ಯ ಸಿಬ್ಬಂದಿ ಹಾಗೂ ಒಬ್ಬರು ವೈದ್ಯೆ ಇರುತ್ತಾರೆ.

‘ದಿನಕ್ಕೆ 3 ಹಳ್ಳಿಗಳಿಗೆ ಹೋಗುತ್ತೇವೆ. ತಪಾಸಣೆ ಮಾಡಿ ಔಷಧಿ–ಮಾತ್ರೆ ನೀಡುತ್ತೇವೆ. ಗರ್ಭಿಣಿಯರಿಗೆ ಪ್ರೊಟೀನ್‌ ಪೌಡರ್‌, ಕ್ಯಾಲ್ಸಿಯಂ, ವಿಟಮಿನ್‌ ಮಾತ್ರೆಗಳನ್ನು ನೀಡಲಾಗುತ್ತದೆ. ಸೆಲ್ಕೊ ಪ್ರತಿಷ್ಠಾನ ವಾಹನಕ್ಕೆ ಸೌರಶಕ್ತಿ ಸೌಲಭ್ಯ ಒದಗಿಸಿದ ಮೇಲಿಂದ ಸ್ಥಳದಲ್ಲಿಯೇ ಎಚ್‌ಪಿ, ವಿಡಿಎಲ್‌ಆರ್‌, ಎಚ್‌ಐವಿ, ಎಫ್‌ಬಿಎಸ್‌, ಪಿಪಿಬಿಎಸ್‌ ಪರೀಕ್ಷೆಗಳನ್ನು ಮಾಡಿ, ಫಲಿತಾಂಶವನ್ನು ಕೊಡುತ್ತೇವೆ. ಆದರೆ ರಸ್ತೆ ಸೌಲಭ್ಯವೂ ಇಲ್ಲದ ಕೆಲವು ಗ್ರಾಮಗಳು ಈ ಸೇವೆಯಿಂದ ಹೊರಗುಳಿದಿವೆ. ಅಂಥವರು ನಮ್ಮ ವ್ಯಾನ್‌ ತಲುಪುವ ಪ್ರದೇಶಗಳಿಗೆ ಬರಬೇಕಾಗುತ್ತದೆ’ ಎನ್ನುತ್ತಾರೆ ಸಂಚಾರಿ ಆರೋಗ್ಯ ಘಟಕದ ಡಾ. ಅಂಜಲಿ.

**

ನಮ್ಮೂರು ತೊಳಸಿಕೆರೆ. ಹೆಸರು ಲೋಕಿ. ವಯಸ್ಸು ಇಪ್ಪತ್ವರ್ಸ. ಹದ್ನಾರಕ್ಕೇ ಮದ್ವೆ ಆತು. ಕಳೆದ್ವರ್ಸ ಈ ಕೂಸು ಹುಟ್ತು. ಗೊತ್ತಲ್ಲ, ನಮ್ಮೂರಲ್ಲಿ ಕೂಸು ಹುಟ್ಟೋದು ಅಂದ್ರೆ ಅದ್ರಮ್ಮ ಸತ್ತು ಬದುಕೋದು. ಒಂದೆರಡು ವರ್ಸದ ಹಿಂದೆ ನಮ್ಮೂರ ದಾರೀಲಿ ಹೆರಿಗೆಯಾಗಿ ಕಾಳಮ್ಮ ಸತ್ತೋದ್ಲು. ನನಗೂ ದಿನ ತುಂಬ್ತಾ ಇದ್ದಂಗೆ ಭಾಳ ಹೆದರ್ಕೆ ಇತ್ತು. ತೊಳಸಿಕೆರೆಯಿಂದ ಬೆಟ್ಟಕ್ಕೆ ಆಸ್ಪತ್ರೆಗೆ ಹೋಗಬೇಕು ಅಂದ್ರೆ 5 ಕಿಲೋಮೀಟರ್‌ ನಡ್ಕಂಡು ಹೋಗ್ಬೇಕು. ಟೆಂಪೊ ಬರುತ್ವೆ, ಆ ಕುಲಕಾಟ ಸಹಿಸೋಕಾಗಲ್ಲ. ಎರಡು ತಿಂಗ್ಳು ಮೊದ್ಲೇ ಮಾರ್ಟಳ್ಳಿಲಿ ರೂಮು ಮಾಡಿದ್ವಿ. ಅಲ್ಲಿಂದ ಸುಲವಾಡಿಗೆ ರಗಡ ಬಸ್ಸದಾವೆ. ಅಲ್ಲೇ ಹೆರಿಗೆ ಆತು. ಇಬ್ರೂ ಆರಾಮಾಕಿದಿವಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು