ಗುರುವಾರ , ಜೂನ್ 4, 2020
27 °C

ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಟರು ಬಾಬಾಸಾಹೇಬರು

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ನಿಮಿತ್ತ ಅಂಬೇಡ್ಕರ್ ಕುರಿತಾದ ವಿಶೇಷ ಲೇಖನ...

ಭಾರತ ಸ್ವತಂತ್ರವಾದರಷ್ಟೇ ಸಾಲದು; ಧಾರ್ಮಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಭರತಖಂಡದಲ್ಲಿ ಜನಿಸಿದವರೆಲ್ಲ
ಸಮಾನ ಹಕ್ಕುಳ್ಳವರಾಗಬೇಕು ಎಂಬ ದೃಢಸಂಕಲ್ಪದಿಂದ ಕುರುಡನಿಗೆ ಕಣ್ಣಿನಂತೆ, ಮೂಕನಿಗೆ ದನಿಯಂತೆ ಅಬಲರಿಗೆ ಪ್ರಬಲ ಅಸ್ತ್ರದಂತೆ ಶಕ್ತಿಯಾದವರು ಭಾರತರತ್ನ ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್.

ಜನ್ಮನಾ ಜಾಯತೇ ಶೂದ್ರಃ
ಸಂಸ್ಕಾರಾತ್ ದ್ವಿಜ ಉಚ್ಯತೇ 

ಎಂಬಂತೆ ತಮ್ಮ ಅದ್ಭುತ ಪರಿಪೂರ್ಣ ಜ್ಞಾನ ಸಂಸ್ಕಾರ ವಿವೇಕದಿಂದ ತಮ್ಮ ಕಾಲಮಾನವನ್ನು ಮೆಟ್ಟಿನಿಂತು ಗೋಪುರೋಪಮವಾಗಿ
ಬೆಳೆದುನಿಂತ ಮಹಾಮಾನವರಲ್ಲಿ ಒಬ್ಬರು ಬಾಬಾಸಾಹೇಬ್ ಅಂಬೇಡ್ಕರ್ ಆಗಿದ್ದಾರೆ.

ಮಹಾದೇವಿ ಅಕ್ಕನ ವಾಣಿಯಂತೆ

‘ನೊಂದವರ ನೋವು ನೊಯ್ಯದವರೆತ್ತ ಬಲ್ಲರು?’
ನೊಂದವರ ಪ್ರತಿನಿಧಿಯಾಗಿ ನೊಂದವರಿಗೆ ನಲಿವಿನ ಭವಿಷ್ಯವನ್ನು ಹುಡುಕುತ್ತ...

ಬಡತನವನ್ನು ಸಹಿಸಬಹುದು. ಆದರೆ, ಸ್ವಾಭಿಮಾನವನ್ನೇ ಕೆಣಕುವ ಅಸ್ಪೃಶ್ಯತಾ ಪದ್ಧತಿಯನ್ನು ಸಹಿಸಲಾಗದು. ಶೋಷಿತ ವರ್ಗಗಳಲ್ಲಿ
ಅರಿವು ಹಾಗೂ ಆತ್ಮವಿಶ್ವಾಸ ಮೂಡಿಸಲು ವಿದ್ಯೆ ಹಾಗೂ ಸ್ವಾವಲಂಬನೆಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಗಾಳಿ, ಬೆಳಕು, ನೀರು,
ಅನ್ನಕ್ಕೆ ಜಾತಿ ಇಲ್ಲ. ಅಂತೆಯೇ, ಪ್ರತಿಭೆಗೂ ಜಾತಿ ಇಲ್ಲ. ಸಾಮಾಜಿಕ ತಾರತಮ್ಯ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಡಾ.
ಅಂಬೇಡ್ಕರ್‌ ಅವರ ವಾದವಾಗಿತ್ತು. ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ದೇಶದ ಸ್ವಾತಂತ್ರ್ಯ ಅರ್ಥರಹಿತ ಎಂಬ
ಮೂಲತತ್ವ ಪ್ರತಿಪಾದಿಸುತ್ತ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದ ಹಠವಾದಿ ಅವರು.

ಒಂದು ಪರಿಪಕ್ವ ದೂರದೃಷ್ಟಿಯುಳ್ಳ ಆಡಳಿತಾತ್ಮಕ ರೂಪುರೇಷೆ ಹಾಕಿಕೊಟ್ಟ ಧೀಮಂತ. ಅವರಲ್ಲಿನ ಸಾಮಾಜಿಕ ಕಳಕಳಿ, ಉದಾತ್ತ
ನಿಲುವಿನಿಂದ ಭಾರತೀಯರೆಲ್ಲರ ಮನದಲ್ಲಿ ಅವರು ಶಾಶ್ವತವಾಗಿ ನೆಲೆಯಾಗಿದ್ದಾರೆ.

'ಮನುಷ್ಯ ಜಾತಿ ತಾನೊಂದೇ ವಲಂ' ಎಂದು ಹತ್ತನೇ ಶತಮಾನದಲ್ಲಿ ಮಹಾ ಕವಿ ಪಂಪ ಹೇಳಿದ ಮಾತನ್ನು ಸಾಕಾರಗೊಳಿಸಿ ಸಮ
ಸಮಾಜ ನಿರ್ಮಿಸುವಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಭಾರತದ ಸಂವಿಧಾನವು ಯಶಸ್ಸಿನ ಹಾದಿಯಲ್ಲಿ
ಮುನ್ನಡೆಯುತ್ತಿದೆ.

ಅಂಬೇಡ್ಕರ್ ಅವರ ಆರಾಧನೆ ಮಾಡಿದರೆ ಸಾಲದು, ಅವರ ವಿಚಾರಗಳನ್ನು ಮತ್ತು ಪ್ರಸ್ತುತತೆಯನ್ನು ಜನರಿಗೆ ಮುಟ್ಟಿಸುವ ಕೆಲಸ
ಮಾಡಬೇಕಾಗಿದೆ. ನಮಗೆ ಅಗತ್ಯವಾಗಿರುವ ಜಾತ್ಯತೀತ ಮೌಲ್ಯಗಳುಳ್ಳ ಜೀವಂತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬೇಕಾದ ಚಳವಳಿಯ ಅಗತ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು