ಮಂಗಳವಾರ, ಮೇ 11, 2021
26 °C

ಎದೆಮುಚ್ಚಲು ಬಿಡದಿದ್ದ ಸ್ತನತೆರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಾತಿ ವ್ಯವಸ್ಥೆಯ ದುಷ್ಟ ಏಣಿಶ್ರೇಣಿಯ ಇದೇ ಸಾಮಾಜಿಕ ವ್ಯವಸ್ಥೆ ತಳವರ್ಗಗಳ ಜನರು ಮೈಮುಚ್ಚುವಷ್ಟು ಬಟ್ಟೆ ತೊಡುವುದನ್ನೂ, ಹೊಸಬಟ್ಟೆ ಧರಿಸುವುದನ್ನೂ ನಿಷೇಧಿಸಿದ್ದ ಕಾಲವೊಂದಿತ್ತು. ಕೇರಳದಲ್ಲಿ ಕೆಳಜಾತಿಗಳ ಹೆಣ್ಣುಮಕ್ಕಳು ಎದೆ ಮುಚ್ಚಿಕೊಳ್ಳುವುದನ್ನು ನಿಷೇಧಿಸಿದ್ದ ವಸ್ತ್ರಸಂಹಿತೆ ನೂರಾರು ವರ್ಷ ಜಾರಿಯಲ್ಲಿತ್ತು.  ಕೆಲ ಪ್ರದೇಶಗಳಲ್ಲಿ ಎದೆ ಮುಚ್ಚಬಹುದಿತ್ತು. ಆದರೆ ಹಾಗೆ ಮಾಡಿದರೆ ದುಬಾರಿ ದರದ ‘ಸ್ತನತೆರಿಗೆ’ಯನ್ನು ತೆರಬೇಕಿದ್ದ ವಿಡಂಬನೆಯಿತ್ತು.

ಒಮ್ಮೆ ನಂಗೇಲಿ ಎಂಬ ಕೆಳಜಾತಿಯ ಹೆಣ್ಣುಮಗಳು ಎದೆಮುಚ್ಚಿಕೊಂಡೇ ಹೊರಬಿದ್ದು ಹಿಂತಿರುಗಿದ್ದು ತೆರಿಗೆ ಅಧಿಕಾರಿಗಳಿಗೆ ತಿಳಿಯಿತು. ವಸೂಲಿಗೆ ಮನೆಯ ಮುಂದೆ ನಿಂತರು. ತುಸು ಹೊತ್ತಿನ ನಂತರ ಬಾಳೆ ಎಲೆಯ ಮೇಲೆ ತನ್ನ ಸ್ತನಗಳನ್ನೇ ಕೊಯ್ದಿರಿಸಿ ತೆರಿಗೆಯಾಗಿ ತಂದು ಇರಿಸಿದಳು ನಂಗೇಲಿ. ರಕ್ತಸ್ರಾವದಿಂದ ಪ್ರಾಣಬಿಟ್ಟಳು. ಪತ್ನಿಯನ್ನು ಬಹುವಾಗಿ ಪ್ರೀತಿಸುತ್ತಿದ್ದ ಪತಿ ಆಕೆಯೊಂದಿಗೇ ಚಿತೆಯೇರಿ ಸುಟ್ಟುಹೋದ. ಬಂಡಾಯಕ್ಕೆ ಹೆದರಿದ ರಾಜ ಆ ಭಾಗದಲ್ಲಿ ಸ್ತನತೆರಿಗೆ ರದ್ದು ಮಾಡಿದ.

ಅಂದಿನ ಜಾತಿಪದ್ಧತಿಯ ನಿಯಮಗಳ ಪ್ರಕಾರ ಕೆಳಜಾತಿಯವರು ಸೊಂಟದ ಮೇಲೆ ವಸ್ತ್ರ ಧರಿಸುವುದು ನಿಷಿದ್ಧವಾಗಿತ್ತು. ಹೆಣ್ಣುಮಕ್ಕಳೂ ಈ ಮಾತಿಗೆ ಹೊರತಾಗಿರಲಿಲ್ಲ. ಅಂದಿನ ದಿನಮಾನದಲ್ಲಿ ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿದ್ದ ಕೇರಳಿಗರ ಪೈಕಿ ಕೆಳಜಾತಿಯ ಚಾನಾರುಗಳೇ ಬಹುಸಂಖ್ಯಾತರು. ಐರೋಪ್ಯ ಮಿಷನರಿಗಳ ಸಂಪರ್ಕದಿಂದ ಬದಲಾದ ಬದುಕು ಇವರಲ್ಲಿ ಹೊಸ ಆಶೋತ್ತರಗಳನ್ನು ತುಂಬಿತ್ತು. ಚಾನಾರ್ ಹೆಣ್ಣುಮಕ್ಕಳು ಮೇಲ್ಜಾತಿಗಳ ಮಹಿಳೆಯರಂತೆ ರವಿಕೆ ಧರಿಸಲು ಮುಂದಾದರು. ಜಾತಿಶ್ರೇಣಿಯಲ್ಲಿ ನಾಲ್ಕನೆಯ ಮೆಟ್ಟಿಲಾಗಿದ್ದ ನಾಯರುಗಳ ಹೆಣ್ಣುಮಕ್ಕಳು ಉಡುಗೆಯನ್ನು ಅನುಕರಿಸಿದ್ದರು. ಸಾಂಪ್ರದಾಯಿಕ ಮತ್ತು ಸಾಮಾಜಿಕ ಮೇಲುಕೀಳಿನ ವ್ಯವಸ್ಥೆಯ ಬೆಂಗಾವಲಿಗೆ ನಿಂತ ಸಮರಯೋಧರು ತಾವೆಂದು ನಂಬಿದ್ದ ನಾಯರುಗಳು ಚಾನಾರುಗಳ ವಿರುದ್ಧ ಕತ್ತಿ ಹಿರಿದು ನಿಂತರು. ಎರಡೂ ಜಾತಿಗಳ ನಡುವೆ 1822, 1828 ಹಾಗೂ 1858-59ರಲ್ಲಿ ದೊಡ್ಡ ಘರ್ಷಣೆಗಳೇ ಜರುಗಿದವು.

1822ರಲ್ಲಿ ಎದೆಮುಚ್ಚಿ ವಸ್ತ್ರ ಧರಿಸಿದ ಕ್ರೈಸ್ತ ಚಾನಾರು ಮಹಿಳೆಯರನ್ನು ಮಾರುಕಟ್ಟೆ ಮತ್ತಿತರೆ ಸಾರ್ವಜನಿಕ ಸ್ಥಳಗಳಲ್ಲಿ ಅಣಕಿಸಿ ಅವಮಾನಿಸಿದುದಲ್ಲದೆ ಅವರು ಧರಿಸಿದ ರವಿಕೆಗಳನ್ನು ಹರಿದು ಹಾಕಿದರು ಮೇಲ್ಜಾತಿಗಳ ಮಂದಿ. ಪದ್ಮನಾಭಪುರಂ ನ್ಯಾಯಾಲಯಕ್ಕೆ ದೂರುಗಳು ಸಂದವು. ನ್ಯಾಯಾಲಯ ನಾಯರುಗಳ ಪರ ನಿಂತಿತು. ಚಾನಾರು ಕ್ರೈಸ್ತರು ಸೇಂದಿ ಇಳಿಸುವ ಬಾಡಿಗೆ ಸಂದಾಯ ಮಾಡಿಲ್ಲವೆಂದೂ, ಅವರ ಮಹಿಳೆಯರು ಎದೆಮುಚ್ಚುವ ವಸ್ತ್ರ ಧರಿಸುತ್ತಿದ್ದಾರೆಂಬ ಪ್ರತಿದೂರುಗಳೂ ಸಂದವು. ದಂಡ ವಿಧಿಸುವ ತೀರ್ಮಾನ ಮತ್ತೆ ನ್ಯಾಯಾಲಯದ ಮೆಟ್ಟಿಲು ಏರಿತು. ಚಾನಾರು ಮತ್ತು ಇತರೆ ಜಾತಿಗಳಿಂದ ಕ್ರೈಸ್ತ ಮತ ಸೇರಿದ ಹೆಣ್ಣುಮಕ್ಕಳು ಇಗರ್ಜಿಗೆ ಹೋಗುವಾಗ ಎದೆಮುಚ್ಚಿಕೊಳ್ಳುವ ಘನತೆಯ ಅವಕಾಶ ನೀಡಬೇಕೆಂಬ ವಾದವನ್ನು ಆಲಿಸಿದ ನ್ಯಾಯಾಲಯ ದಂಡಶುಲ್ಕದಿಂದ ವಿನಾಯಿತಿ ನೀಡಿತು.

ಈ ಹೋರಾಟದ ಎರಡನೆಯ ಹಂತದ ಕಿಡಿ ಹಾರಿದ್ದು 1828ರ ದಿನಗಳಲ್ಲಿ. ಹಿಂದೂ ಚಾನಾರು ಮತ್ತು ಇತರೆ ಕೆಳಜಾತಿಗಳ ಹೆಣ್ಣುಮಕ್ಕಳು ಕ್ರೈಸ್ತ ಚಾನಾರು ಹೆಣ್ಣುಮಕ್ಕಳಂತೆ ರವಿಕೆ ತೊಡಲು ಆರಂಭಿಸಿದಾಗ. ಇಂತಹ ಹೆಣ್ಣುಮಕ್ಕಳನ್ನು ಸಿಕ್ಕ ಸಿಕ್ಕಲ್ಲಿ ಹಿಡಿದು ಬಡಿದ ನಾಯರುಗಳು ಜಾಕೆಟ್ಟುಗಳನ್ನು ಹರಿದು ಹಾಕಿದರು. ಶಾಲೆಗಳು, ಇಗರ್ಜಿಗಳು, ಪುಸ್ತಕಗಳಿಗೆ ಬೆಂಕಿ ಬಿತ್ತು. ದೊಂಬಿ ಹಲ್ಲೆ ಅತ್ಯಾಚಾರಗಳು ಎಗ್ಗಿಲ್ಲದೆ ಹಬ್ಬಿದ್ದವು. ಚಾನಾರುಗಳು ಮತ್ತು ಕೆಳಜಾತಿಗಳ ಹೆಣ್ಣುಮಕ್ಕಳು ಸೊಂಟದ ಮೇಲ್ಭಾಗವನ್ನು ಮುಚ್ಚಿಕೊಳ್ಳುವುದು ನಿಷಿದ್ಧ ಎಂಬುದಾಗಿ ದಕ್ಷಿಣ ತಿರುವಾಂಕೂರು ಸಂಸ್ಥಾನ ರಾಜಾಜ್ಞೆ ಹೊರಡಿಸಿತ್ತು.

ಬಂಡಾಯದ ಮೂರನೆಯ ಹಂತ ಸಿಡಿದದ್ದು 1858-59ರಲ್ಲಿ.  ಎದೆ ಮುಚ್ಚಿಕೊಳ್ಳುವ ಘನತೆಯನ್ನು ಈ ಸಲ ಬೇಡಿದ್ದವರು ನಾಡಾರು ಜಾತಿಯ ಹೆಣ್ಣುಮಕ್ಕಳು. ನಾಯರುಗಳು ಮತ್ತು ನಾಡಾರುಗಳ ನಡುವಣ ಕದನ ತಾರಕಕ್ಕೆ ಏರಿತು. ಚಾನಾರು ಹೆಣ್ಣುಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಎದೆವಸ್ತ್ರ ಧರಿಸಿ ಹೊರಬೀಳಲಾರಂಭಿಸಿದ್ದರು. ದಾಳಿ ನಡೆಸಿದ ನಾಯರುಗಳ ಮೇಲೆ ಚಾನಾರುಗಳು ಮತ್ತು ನಾಡಾರುಗಳು ತಿರುಗಿಬಿದ್ದರು. ಕ್ರೈಸ್ತ ಮಿಷನರಿಗಳು ಚಾನಾರುಗಳ ಬೆಂಬಲಕ್ಕೆ ನಿಂತವು. ಎದೆಮುಚ್ಚುವ ಅವರ ಹಕ್ಕನ್ನು ಸಮರ್ಥಿಸಿದವು ಕೂಡ.

ಕೆಳಜಾತಿಗಳ ಮೇಲಣ ತರಹೇವಾರಿ ದೌರ್ಜನ್ಯಗಳು ತಿಂಗಳುಗಟ್ಟಲೆ ಬಿಡುವಿರದೆ ಮುಂದುವರೆದವು. ದಿವಾನರಿಗೆ ದೂರು ನೀಡಲು ಮುಂದಾದ ಹಿಂದೂ ನಾಡಾರರ ಮೇಲೆ ದಿವಾನರ ಕಣ್ಣ ಮುಂದೆಯೇ ಸರ್ಕಾರಿ ಸಿಬ್ಬಂದಿ ಹಲ್ಲೆ ನಡೆಸಿತು. ಕ್ರೈಸ್ತ ನಾಡಾರುಗಳ ಪರವಾಗಿ ಮಿಷನರಿಗಳು ಮಹಾರಾಜರಿಗೆ ದೂರು ಸಲ್ಲಿಸಿದ್ದೂ, ಮಹಾರಾಜರು ಮೌನ ಧರಿಸಿದ್ದೂ 1859ರ ಫೆಬ್ರುವರಿಯಲ್ಲಿ ಅಂದಿನ The Madras Times ಪತ್ರಿಕೆಯಲ್ಲಿ ವರದಿ ಆಯಿತು. ಮದ್ರಾಸಿನ ಗೌರ್ನರ್ ಮಾಡಿಸಿದ ವಿಚಾರಣೆಯ ಪ್ರಕಾರ ಹಲವು ಕೊಲೆಗಳೂ ಸೇರಿದಂತೆ ಹಲವಾರು ಕೇಸುಗಳಲ್ಲಿ ನ್ಯಾಯ ನೀಡಿಕೆ ಆಗಿಲ್ಲವೆಂಬ ಅಂಶ ಹೊರಬಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು