ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಚರ್ಯವು ಐಹಿಕ ಮತ್ತು ಪಾರಮಾರ್ಥಿಕ

Last Updated 20 ಸೆಪ್ಟೆಂಬರ್ 2019, 19:38 IST
ಅಕ್ಷರ ಗಾತ್ರ

ಭಾರತೀಯ ಚಿಂತನೆಯಲ್ಲಿರುವ ವಿಶೇಷ ಎಂದರೆ ಪ್ರಾಪಂಚಿಕ ಸುಖ ಹಾಗೂ ಪಾರಮಾರ್ಥಿಕ ಸುಖಗಳೆರಡರ ಸಾಮರಸ್ಯ.

ಈ ಚಿಂತನೆಯನ್ನು ಕೇವಲ ಹಗಲುಗನಸಾಗಿ ಬಿಡದೇ, ಮಹರ್ಷಿಗಳು ಈ ಚಿಂತನೆಗನುಗುಣವಾದ ಜೀವನಕ್ರಮವನ್ನೇ ಸಮಾಜದಲ್ಲಿ ತಂದಿದ್ದಾರೆ. ಈ ಜೀವನ ಕ್ರಮಕ್ಕನುಗುಣವಾದ ವ್ಯವಸ್ಥೆಯೇ ಬ್ರಹ್ಮಚರ್ಯ. ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳು.

ಚರ್ಯೆ ಎಂದರೆ ನಡೆ ಅಥವಾ ನಡವಳಿಕೆ ಎಂದಾಗುತ್ತದೆ. ಬ್ರಹ್ಮಚರ್ಯೆ ಎಂದರೆ ಸೃಷ್ಟಿಮೂಲದಲ್ಲಿ ಬೆಳಗುವ ಸೃಷ್ಟಿಯ ನಿಯಮಗಳೆಲ್ಲವನ್ನೂ ತನ್ನಲ್ಲಿಟ್ಟುಕೊಂಡಿರುವ ಬ್ರಹ್ಮನ ಆಶಯಕ್ಕೆ ಅನುಗುಣವಾದ ಜೀವನಕ್ರಮ ಎಂದಾಗುತ್ತದೆ. ನಮ್ಮ ಮೂಲದಲ್ಲಿರುವ ಬ್ರಹ್ಮದ ಕಡೆ ನಮ್ಮ ಮನಸ್ಸು ಹರಿಯಬೇಕಾದರೆ ನಮ್ಮ ಶಕ್ತಿಗಳು ಇಂದ್ರಿಯಪ್ರಪಂಚದಲ್ಲಿ ಹರಿದು ಹಂಚಿಹೋಗದೇ ಇರಬೇಕಾಗಿರುವುದರಿಂದ ಪುರುಷ-ಸ್ತ್ರೀ ಸಂಭೋಗದಿಂದ ದೂರವಿರುವಿಕೆಯನ್ನೇ ಬ್ರಹ್ಮಚರ್ಯವೆಂದು ವಿಶೇಷಾರ್ಥದಲ್ಲಿ ಬಳಸುತ್ತಾರೆ. ಸಾಮಾನ್ಯ ಅರ್ಥದಲ್ಲಿ ಈ ಬ್ರಹ್ಮಚರ್ಯೆಯು ಪ್ರತಿಯೊಬ್ಬ ಮಾನವನಿಗೂ ಜೀವನ ಪೂರ್ತಿ ಬೇಕಾದ ನಡವಳಿಕೆಯಾಗಿದೆ. ಗೃಹಸ್ಥರಲ್ಲದವರು ಸ್ತ್ರೀಸಂಗದಿಂದ ದೂರವಿದ್ದು, ಗೃಹಸ್ಥರು ಸ್ವಸ್ತ್ರೀಯಲ್ಲಿ ಮಾತ್ರ ಸಂಪರ್ಕವನ್ನಿಟ್ಟುಕೊಳ್ಳುವುದನ್ನೂ ಬ್ರಹ್ಮಚರ್ಯೆಯೆನ್ನುತ್ತಾರೆ ಎಂದು ಶ್ರೀರಂಗಮಹಾಗುರುಗಳು ಸೂಕ್ಷ್ಮಾರ್ಥವನ್ನು ಬಿಡಿಸಿಕೊಟ್ಟಿದ್ದರು.

ಆದರೆ, ವಿಶೇಷಾರ್ಥದಲ್ಲಿ ಗುರುಕುಲವಾಸದಲ್ಲಿ, ಇಂದ್ರಿಯ ಸಂಯಮದಿಂದ ಕಟ್ಟುನಿಟ್ಟಿನ ನಿಯಮಗಳನ್ನೊಳಗೊಂಡು ನಡೆಸುವ ಜೀವನಕ್ಕೇ ಬ್ರಹ್ಮಚರ್ಯಾಶ್ರಮ ಎನ್ನುತ್ತಾರೆ. ಜೀವನದ ಕೊನೆಯಲ್ಲಿ ಮೋಕ್ಷವನ್ನೇ ಪಡೆಯಬೇಕಾದುದರಿಂದ, ಅದಕ್ಕವಶ್ಯಕವಾದ ಬ್ರಹ್ಮಜ್ಞಾನವನ್ನು ಬಾಲ್ಯದಲ್ಲಿಯೇ ಪಡೆಯಬೇಕಾಗುತ್ತದೆ. ಇದೇ ಬ್ರಹ್ಮಚರ್ಯಾಶ್ರಮದ ಪರಮ ಗುರಿ. ಈ ಜ್ಞಾನ ಸಂಪಾದನೆಗೆ ಕಟ್ಟುನಿಟ್ಟಿನ ಇಂದ್ರಿಯ ಸಂಯಮ ಪೋಷಕವಾಗಿರುತ್ತದೆ. ಹೀಗಾಗಿ ದೇಹಾಲಂಕಾರ ತ್ಯಾಗ, ಕನ್ನಡಿ ನೋಡಿಕೊಳ್ಳದಿರುವುದು, ಹಾಸಿಗೆಯ ಮೇಲೆ ಮಲಗಬಾರದು, ರುಚಿ ರುಚಿಯಾದ ಭಕ್ಷ್ಯಗಳಿಗೆ ಆಸೆ ಪಡದೇ ಭಿಕ್ಷಾಟನೆಯಿಂದ ದೊರೆತ ಆಹಾರದಿಂದ ತೃಪ್ತಿಯಿಂದಿರಬೇಕು ಮೊದಲಾದ ನಿಯಮಗಳೊಂದಿಗೆ ವಿದ್ಯಾಭ್ಯಾಸ ಮಾಡುತ್ತಾನೆ. ತನ್ಮೂಲಕ ಬ್ರಹ್ಮವನ್ನು ಅರಿತುಕೊಂಡು, ಅದರ ವಿಸ್ತಾರವಾದ ಪ್ರಪಂಚ ಮತ್ತು ಜೀವನವನ್ನೂ ತಿಳಿದುಕೊಂಡು, ಜ್ಞಾನಿಯಾಗುತ್ತಾನೆ. ಈ ಜ್ಞಾನದ ಬಲದಿಂದಲೇ ಮುಂದಿನ ಜೀವನದಲ್ಲಿ ಪಾರಮಾರ್ಥಿಕ ಹಾಗೂ ಐಂದ್ರಿಕ ಸುಖವನ್ನನುಭವಿಸಿ ಕೊನೆಗೆ ಜ್ಞಾನಬಲದಿಂದಲೇ ಮೋಕ್ಷವನ್ನೂ ಪಡೆಯುತ್ತಾನೆ.

ಹೀಗೆ, ಬ್ರಹ್ಮಚರ್ಯವು ಐಹಿಕ ಮತ್ತು ಪಾರಮಾರ್ಥಿಕ ಸುಖಗಳೆರಡನ್ನೂ ಒಳಗೊಂಡ ಪೂರ್ಣಜೀವನಕ್ಕೆ ಬುನಾದಿಯಾಗಿದೆ. ಇಂದು ಬ್ರಹ್ಮಚರ್ಯಾಶ್ರಮಕ್ಕೆ ಅನುಕೂಲವಾದ ಸಾಮಾಜಿಕ ವ್ಯವಸ್ಥೆಯಿಲ್ಲದಿದ್ದರೂ, ಸಾಮಾನ್ಯ ಅರ್ಥದ ಬ್ರಹ್ಮಚರ್ಯವು ಎಲ್ಲರಿಗೂ ಅವಶ್ಯಕವಾದ ಹಾಗೂ ಪಾಲಿಸಬಹುದಾದ ನಡವಳಿಕೆಯಾಗಿದೆ. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಬಾಲಕರು ಅನುಸರಿಸಬಹುದಾದ ಅನೇಕ ಆದರ್ಶಗಳನ್ನೊಳಗೊಂಡ ಕೈದೀವಿಗೆಯಾಗಿಯೂ ಇದೆ, ಮಹರ್ಷಿಗಳ ಬ್ರಹ್ಮಚರ್ಯಾಶ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT